ಶ್ರೀಸಾಮಾನ್ಯಆಗುವತ್ತ ಶ್ರೀನಿ
ಐಪಿಎಲ್ ಹಗರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ನಿಂದ ತಪರಾಕಿ ತಟ್ಟಿಸಿಕೊಂಡಿರುವ ಶ್ರೀನಿವಾಸನ್ ಬಿಸಿಸಿಐನ ಹುದ್ದೆ..
ಐಪಿಎಲ್ ಹಗರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ನಿಂದ ತಪರಾಕಿ ತಟ್ಟಿಸಿಕೊಂಡಿರುವ ಶ್ರೀನಿವಾಸನ್ ಬಿಸಿಸಿಐನ ಹುದ್ದೆ ತೊರೆಯಬೇಕಾಗಿ ಬಂದಿದ್ದು ಹಳೆ ಸುದ್ದಿ. ಇದೀಗ ಅವರು ತಮಗೆ ತಗಲಿರುವ 'ಕಳಂಕಿತ'ಪಟ್ಟದಿಂದ ದೂರವಾಗುವುದಕ್ಕೆ ಆಮ್ಆದ್ಮಿ ಪಕ್ಷ ಸೇರುವ ಬಗ್ಗೆ ಶ್ರೀನಿವಾಸನ್ ಚಿಂತಿಸಿದ್ದಾರೆ.
ಆಪ್ನ ಟೋಪಿ ಹಾಕಿಕೊಂಡು ಭಾರತದಿಂದ ಭ್ರಷ್ಟಾಚಾರವನ್ನು ಹೊಡೆದೋಡಿಸುವುದಕ್ಕೆ ಬದ್ಧರಾದರೆ ಶ್ರೀನಿ ವಿಷಯದಲ್ಲಿ ಸುಪ್ರೀಂಕೋರ್ಟ್ ಔದಾರ್ಯ ತೋರಬಹುದು ಎಂದು ಶ್ರೀನಿ ಪರ ವಕೀಲರು ಥಿಂಕಿಸಿದ್ದಾರೆ ಎನ್ನಲಾಗಿದೆ. 'ಆಮ್ಆದ್ಮಿ ಪಕ್ಷದ ಸದಸ್ಯರಾಗುವುದೆಂದರೆ ನೈತಿಕ ಮೇಲ್ಸ್ತರದ ಮೆಟ್ಟಿಲನ್ನು ಹತ್ತಿದಂತೆ. ಆದರ್ಶಗಳ ಬಗ್ಗೆ ಮಾತನಾಡುವ, ಕಟ್ಟರ್ ಆದರ್ಶವಾದಿಗಳಾಗುವ ಅರ್ಹತೆ ಆಪ್ ಟೋಪಿ ಧರಿಸಿದ ಕೂಡಲೇ ಬರುತ್ತದೆ' ಎನ್ನುತ್ತಾರೆ ಅವರ ಪರ ವಕೀಲರು.
ಅದಾಗಲೇ ಚೆನ್ನೈನಲ್ಲಿ ಆಪ್ ಅಭ್ಯರ್ಥಿಗಳ ಪರ ಪ್ರಚಾರ ಶುರುಮಾಡುವ ಮೂಲಕ ಶ್ರೀನಿವಾಸನ್ ಭ್ರಷ್ಟ ಇಮೇಜ್ನಿಂದ ಹೊರಬರುವತ್ತ ದೃಢ ಹೆಜ್ಜೆಗಳನ್ನು ಇಟ್ಟಿದ್ದಾರೆ. 'ವಾಸ್ತವದಲ್ಲಿ ಈ ದೇಶದಲ್ಲಿ ಬೇರೆಯವರನ್ನು ತಪ್ಪಿತಸ್ಥರನ್ನಾಗಿ ಮಾಡುವ ವ್ಯವಸ್ಥೆಗಳೆಲ್ಲವೂ ಅಂಬಾನಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಕೆಲವು ಪವಿತ್ರ ಹಸುಗಳನ್ನು ನಾವು ಪ್ರಶ್ನಿಸುವಂತಿಲ್ಲ. ಸುಪ್ರೀಂಕೋರ್ಟ್ ಸಹ ಈ ಪಟ್ಟಿಗೆ ಸೇರಿದ್ದು, ಅದನ್ನು ಪ್ರಶ್ನಿಸಿದರೆ ನ್ಯಾಯಾಂಗ ನಿಂದನೆ ಆಗುತ್ತದೆ' ಎಂದು ಶ್ರೀನಿ ನಾಜೂಕಾಗಿ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಪ್ರಕರಣವನ್ನು ಕಾಲಮಿತಿಯಲ್ಲಿ ಸಿಬಿಐ ವಿಚಾರಣೆ ಮಾಡುವಂತಾಗಲಿ ಎಂಬುದು ಶ್ರೀನಿ ಆಸೆ. ಆದರೆ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ದೇಶವೇ ಕಾದಿರುವುದರಿಂದ ಈ ಹಂತದಲ್ಲಿ ಸಿಬಿಐ ನಿರ್ದೇಶಕರೂ ಸೋನಿಯಾ ಅವರ ಮಾತು ಕೇಳುವುದಿಲ್ಲ ಎಂದರಿತಿರುವ ಶ್ರೀನಿ ಆ ಬಗ್ಗೆ ಒತ್ತಾಯಿಸುವುದಕ್ಕೆ ತುಸು ಹಿಂಜರಿಕೆ ತೋರಿದ್ದಾರೆ.
ಸದ್ಯಕ್ಕೆ ಆಪ್ ನೇತಾರ ಅರವಿಂದ ಕೇಜ್ರಿವಾಲರು ತಾವು ದೋಷಮುಕ್ತರೆಂಬ ಬಗ್ಗೆ ಪ್ರಮಾಣಪತ್ರ ನೀಡಿದರೆ ಸಾಕು ಎಂದು ಶ್ರೀನಿ ಕಾಯ್ದಿದ್ದಾರೆ. ಆಪ್ನ 'ಆಂತರಿಕ ಲೋಕ್ಪಾಲ್' ವ್ಯವಸ್ಥೆಯನ್ನು ಅನುಸರಿಸಿ ಈ ಹಿಂದೆ ಸೋಮನಾಥ ಭಾರ್ತಿ, ಶಾಜಿಯಾ ಇಲ್ಮಿ ಹಾಗೂ ಪ್ರಶಾಂತ್ ಭೂಷಣ್ ಅವರಿಗೆಲ್ಲ 'ಕ್ಲೀನ್ಚಿಟ್' ಕೊಟ್ಟಂತೆ ತಮಗೂ ನೀಡಿದರೆ ಒಳ್ಳೆಯದು ಎಂದವರು ಆಶಿಸಿದ್ದಾರೆ.
(ವ್ಯಂಗ್ಯಕ್ಕೆ ಮೀಸಲಾಗಿರುವ 'ಅನ್ರಿಯಲ್ ಟೈಮ್ಸ್' ಜಾಲತಾಣದಿಂದ)