ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಆಧಾರ್‌ನಿಂದ ಅಮೆರಿಕ ಕಂಪನಿಗಳಿಗೆ ಲಾಭ: ಸ್ವಾಮಿ

ಆಧಾರ್ ಯೋಜನೆಯನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ವಿಶಿಷ್ಟ ಗುರುತಿನ...

Mainashree
Updated On : 31 Mar 2014, 1:17 am

ಕ.ಪ್ರ.ವಾರ್ತೆ | ಬೆಂಗಳೂರು | ಮಾ. 30
ಆಧಾರ್ ಯೋಜನೆಯನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ವಿಶಿಷ್ಟ ಗುರುತಿನ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಉಲ್ಲಂಘನೆ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ.
ದೇಶದ 120 ಕೋಟಿ ಜನತೆಗೆ ಸಂಬಂಧಪಡುವ ಯೋಜನೆಯನ್ನು ಸಂಸತ್‌ನ ಒಪ್ಪಿಗೆಯಿಲ್ಲದೆ ಅನುಷ್ಠಾನ ಮಾಡಲಾಗಿದೆ. ಅಮೆರಿಕದಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಅಕ್ಸೆಂಚರ್‌ಗೆ ಡಾಟಾ ಸಂಗ್ರಹದ ಗುತ್ತಿಗೆ ನೀಡಲಾಗಿದೆ. ಇನ್ನು ಎಫ್‌ಬಿಐ, ಸಿಐಐ ಹಾಗೂ ಅಮೆರಿಕ ರಕ್ಷಣಾ ವಿಭಾಗದ ಮಾಜಿ ಅಧಿಕಾರಿಗಳಿರುವ ಕಂಪನಿಗಳಿಗೂ ಗುತ್ತಿಗೆ ನೀಡಲಾಗಿದೆ. ನಂದನ್ ನಿಲೇಕಣಿ ಅವರ ಪ್ರಭಾವದಿಂದ ಅಮೆರಿಕ ಕಂಪನಿಗಳು ಲಾಭ ಪಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಯೋಜನೆ ಕುರಿತಂತೆ ತನಿಖೆ ನಡೆಸಬೇಕು ಎಂದು ಗ್ರಾಹಕ್ ಶಕ್ತಿ ಹಾಗೂ ಫಿಫ್ತ್ ಎಸ್ಟೇಟ್ ವೇದಿಕೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಭಾನುವಾರ ಹೇಳಿದರು.
ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ 13(1)ರ ಪ್ರಕಾರ ದೂರಿನಲ್ಲಿ ಆರೋಪಿಯಾಗಿ 7 ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕಿರುವ ವ್ಯಕ್ತಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ 5 ವರ್ಷ ಸಂಸತ್‌ನಲ್ಲಿ ಕಳೆಯುವ ಕನಸು ಕಾಣುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕ ಇವೆಲ್ಲ ತಪ್ಪುಗಳ ಬಗ್ಗೆ ನಿಲೇಕಣಿ ಸಂಶೋಧನೆ ನಡೆಸಲಿ ಎಂದು ಸುಬ್ರಹ್ಮಣ್ಯ ಸ್ವಾಮಿ ಲೇವಡಿ ಮಾಡಿದರು.
ಭಾರತದಲ್ಲಿರುವ ಇತರ ನಕಲಿ ಗುರುತಿನ ಚೀಟಿಯನ್ನು ವಿಶಿಷ್ಟ ಗುರುತಿನ ಸಂಖ್ಯೆ ಮೂಲಕ ಕಂಡುಹಿಡಿಯಲಾಗುವುದು ಎಂದು ಸದನ ಸಮಿತಿಗೆ ನಂದನ್ ನಿಲೇಕಣಿ ತಿಳಿಸಿದ್ದರು. ಆದರೆ ಥಾಮಸ್ ಎಂಬುವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಉತ್ತರಿಸುವಾಗ ಇದು ನಮ್ಮ ಕೆಲಸವಲ್ಲ ಎಂದಿದ್ದಾರೆ. ಅಕ್ರಮ ಪಡಿತರ ಚೀಟಿಯನ್ನು ಆಧಾರ್ ಮೂಲಕ ಕಂಡುಹಿಡಿಯುತ್ತಿಲ್ಲ ಎಂದು ಕರ್ನಾಟಕ ಸರ್ಕಾರವೇ ಸ್ಪಷ್ಟಪಡಿಸಿದೆ. ಆಧಾರ್ ಸಹಾಯವಿಲ್ಲದೇ ರಾಜ್ಯದಲ್ಲಿ 48 ಲಕ್ಷ ನಕಲಿ ಚೀಟಿಗಳನ್ನು ಗುರುತಿಸಲಾಗಿದೆ. ಹಾಗಿದ್ದರೆ ಆಧಾರ್ ಯೋಜನೆಯ ಉದ್ದೇಶವೇನು? ಸದನ ಸಮಿತಿಯ ದಿಕ್ಕು ತಪ್ಪಿಸುವ ಪ್ರಯತ್ನವೇಕೆ ಎಂದು ಸ್ವಾಮಿ ಪ್ರಶ್ನಿಸಿದರು.

ಪ್ರಚಾರಕ್ಕೆ ಬಳಸಿಕೊಂಡರೆ ಉತ್ತರ ನೀಡಿ
ಆಧಾರ್ ಯೋಜನೆಯನ್ನು ಚುನಾವಣೆ ಪ್ರಚಾರಕ್ಕೆ ನಂದನ್ ನಿಲೇಕಣಿ ಅವರು ಬಳಸಿಕೊಂಡರೆ ಯೋಜನೆಯ ವಿರೋಧಿಗಳು ಕೇಳುತ್ತಿರುವ ಪ್ರಶ್ನೆಗೆ ದಾಖಲೆ ಸಹಿತ ಉತ್ತರ ನೀಡಬೇಕು. ಯೋಜನೆಗೆ ಬಳಸುತ್ತಿರುವ ಹಣದ ಬಗ್ಗೆ ಸ್ಪಷ್ಟ ಲೆಕ್ಕ ಎಲ್ಲಿದೆ? ವಿದೇಶಿ ಅಕ್ರಮ ಸಂಸ್ಥೆಗಳಿಗೆ ಗುತ್ತಿಗೆ ನೀಡಿರುವ ಒಪ್ಪಂದದ ಪತ್ರಗಳನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ? ಪ್ರಾಥಮಿಕ ಹಂತದಲ್ಲಿಯೇ 12,400 ಕೋಟಿ ಖರ್ಚು ಮಾಡುತ್ತಿರುವಾಗ ಯೋಜನಾ ವೆಚ್ಚದ ವಿಮರ್ಶೆಯನ್ನು ಏಕೆ ಮಾಡಿಲ್ಲ? ಸದನ ಸಮಿತಿ ಎತ್ತಿರುವ ಗೊಂದಲಗಳಿಗೆ ಉತ್ತರಿಸುವ ಪ್ರಯತ್ನವೇಕಿಲ್ಲ? ದೇಶದಲ್ಲಿರುವ ಅಕ್ರಮ ಗುರುತಿನ ಚೀಟಿ ಪತ್ತೆ ಹಚ್ಚುವವರೆ ಅಕ್ರಮ ಗುರುತಿನ ಸಂಖ್ಯೆ ನೀಡುತ್ತಿರುವುದು ಏಕೆ? ಎಂದು ಸುಬ್ರಹ್ಮಣ್ಯಸ್ವಾಮಿ ಪ್ರಶ್ನಿಸಿದ್ದಾರೆ.
 ಹಿಟ್ಲರ್‌ಗೂ ಸಂಖ್ಯೆ ಮೇಲೆ ಪ್ರೀತಿ!
ಯಹೂದಿಗಳನ್ನು ಕೊಲ್ಲುವ ಉದ್ದೇಶದಿಂದ ಹಿಟ್ಲರ್ ಕೂಡ ಸಂಖ್ಯೆ ಮೇಲೆ ಪ್ರೀತಿ ಬೆಳೆಸಿಕೊಂಡಿದ್ದ. ಹಾಗೆಯೇ ನಿಲೇಕಣಿ ಕೂಡ ಸಂಖ್ಯೆ ಬಗ್ಗೆ ಪ್ರೀತಿ ಬೆಳೆಸಿಕೊಂಡಿದ್ದಾರೆ. ಇದೊಂದು ಸೂಪರ್ ಐಡಿಯಾಗುತ್ತದೆ. ಎಲ್ಲ ನಕಲುಗಳನ್ನು ಕಂಡುಹಿಡಿಯುತ್ತದೆ ಎಂದೆಲ್ಲ ಪ್ರಚಾರ ಗಿಟ್ಟಿಸಿಕೊಂಡು 12 ಅಂಕಿಯನ್ನು ನೀಡಿದ್ದಾರೆ. ದೇಶದಲ್ಲಿರುವ 14ಕ್ಕೂ ಅಧಿಕ ಗುರುತಿನ ಚೀಟಿಗಳ ಸಾಲಿಗೆ ಇದೊಂದು ಹೊಸ ಸೇರ್ಪಡೆಯಷ್ಟೆ. ಆದರೆ ನಿಲೇಕಣಿಯ ಈ ಸಂಖ್ಯಾ ಪ್ರೀತಿಯು ದೇಶದ ಸುರಕ್ಷತೆ ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಿದೆ. ಈ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಸಿದ್ಧವಿಲ್ಲ. ಇದಕ್ಕೆ ಖರ್ಚು ಮಾಡುತ್ತಿರುವ 12,400 ಕೋಟಿ ಹಣವು ಜನರಿಂದ ತೆರಿಗೆ ರೂಪದಲ್ಲಿ ಪಡೆದಿರುವುದು ಎಂದು ಸುಬ್ರಹ್ಮಣ್ಯಸ್ವಾಮಿ ಹೇಳಿದರು.

 ಮತಯಂತ್ರದಲ್ಲಿಯೂ ಗೊಂದಲ
ವಿದ್ಯುನ್ಮಾನ ಮತಯಂತ್ರದಲ್ಲಿಯೂ ಗೊಂದಲವಾಗಿದೆ. 2004 ಮತ್ತು 2009ರ ಲೋಕಸಭೆ ಚುನಾವಣೆಯಲ್ಲಿ ಇದನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಇದೇ ಕಾರಣದಿಂದ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ವಿದ್ಯುನ್ಮಾನ ಮತಯಂತ್ರಗಳ ವಿಶ್ವಾಸಾರ್ಹತೆ ನಂಬುವಂತಿಲ್ಲ ಎಂಬ ಕಾರಣದಿಂದ ಪ್ರತಿ ಮತ ಚಲಾವಣೆಯ ಬಳಿಕ ರಶೀದಿ ನೀಡಿ ಮತ್ತೊಂದು ಮತ ಪೆಟ್ಟಿಗೆಯಲ್ಲಿ ಹಾಕಬೇಕು. ಇದರಿಂದ ಮತಯಂತ್ರದ ಬಗ್ಗೆ ಗೊಂದಲವಾದಾಗ ಈ ಪೆಟ್ಟಿಗೆಯ ಮೂಲಕ ಮತ ಎಣಿಕೆ ಮಾಡಬಹುದು ಎಂದು ಸುಬ್ರಹ್ಮಣ್ಯಸ್ವಾಮಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement