ಕ್ರೇಜಿಗೆ ಅವಮಾನ, ಅಭಿಮಾನಿಗಳ ಕಿಚ್ಚು
ಕಿಚ್ಚ ಸುದೀಪ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಚಿತ್ರ ಎಂದೇ...
ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಚಿತ್ರ ಎಂದೇ ಅಬ್ಬರ ಉಂಟು ಮಾಡಿದ್ದ “ಮಾಣಿಕ್ಯ’ ಚಿತ್ರ ಭರ್ಜರಿ ಒಪನಿಂಗ್ ಪಡೆದುಕೊಂಡಿದ್ದರೂ, ಬೆಂಗಳೂರಿನ ಸಂತೋಷ್ ಚಿತ್ರಮಂದಿರದ ಮುಂದೆ ನಿಲ್ಲಿಸಲಾಗಿದ್ದ ಸ್ಟಾರ್ ನಟರ ಕಟೌಟ್ಗಳನ್ನು ಹೂವಿನ ಹಾರಗಳಿಂದ ಸಿಂಗರಿಸುವ ನಿಟ್ಟಿನಲ್ಲಿ ಆದ ಪ್ರಮಾದದಿಂದ ಸುದೀಪ್ ಮತ್ತು ರವಿಚಂದ್ರನ್ ಅಭಿಮಾನಿಗಳ ನಡುವೆ ಮನಸ್ತಾಪ ಉಂಟಾಗಿದೆ.
ರವಿಚಂದ್ರನ್ ಮತ್ತು ಸುದೀಪ್ರ ಕಟೌಟ್ಗಳಲ್ಲಿ ಸುದೀಪ್ರ ಕಟೌಟ್ ಭರ್ಜರಿ ಹೂವಿನ ಹಾರಗಳೊಂದಿಗೆ ಕಂಗೊಳಿಸುತ್ತಿದ್ದರೆ, ಪಕ್ಕದಲ್ಲೇ ಇದ್ದ ಕ್ರೇಜಿಸ್ಟಾರ್ ರವಿಚಂದ್ರನ್ರ ಕಟೌಟ್ಗೆ ಒಂದು ಹಾರದ ಭಾಗ್ಯವೂ ಇರಲಿಲ್ಲ ಎಂಬುದು ರವಿಚಂದ್ರನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅದಲ್ಲದೆ ಸುದೀಪ್ ಮತ್ತು ರವಿಚಂದ್ರನ್ ಇಬ್ಬರೂ ಇದ್ದ ಕಟೌಟ್ನಲ್ಲೂ ಕೇವಲ ಸುದೀಪ್ರ ಕುತ್ತಿಗೆಗೆ ಬೀಳುವಂತೆ ಹಾರ ಹಾಕಿ, ಅದರ ಒಂದು ಭಾಗ ರವಿಚಂದ್ರನ್ರ ಮುಖ ಮುಚ್ಚುವಂತೆ ಮಾಡಿತ್ತು.
ಈ ಬಗ್ಗೆ ಚಿತ್ರ ವೀಕ್ಷಿಸಲು ಬಂದಿದ್ದ ರವಿಚಂದ್ರನ್ ಅಭಿಮಾನಿಯೊಬ್ಬರು ಹೇಳಿದ್ದು ಹೀಗೆ 'ನಾವು ಮಾಣಿಕ್ಯ ಚಿತ್ರ ನೋಡಲು ಬಂದಿದ್ದು, ಇದು ರವಿಚಂದ್ರನ್ ಚಿತ್ರ ಎಂಬ ಕಾರಣಕ್ಕಾಗಿಯೇ ಹೊರತು ಇದು ಸುದೀಪ್ ಸಿನಿಮಾ ಎಂಬ ಕಾರಣಕ್ಕಲ್ಲ. ಆದರೆ ಸುದೀಪ್ರ ಕಟೌಟ್ಗೆ ಅಷ್ಟೊಂದು ಹಾರ ಹಾಕಿ, ನಮ್ಮ ನೆಚ್ಚಿನ ನಾಯಕ ರವಿಚಂದ್ರನ್ರ ಕಟೌಟ್ಗೆ ಒಂದೂ ಹಾರ ಹಾಕದೆ ಅವಮಾನ ಮಾಡಲಾಗಿದೆ. ರವಿಚಂದ್ರನ್ ಚಿತ್ರರಂಗದ ಹಿರಿಯ ನಟ. ಅವರಿಗೆ ಸುದೀಪ್ ಅವರಿಗಿಂತ ಹೆಚ್ಚಿನ ಗೌರವ ಸಿಗಬೇಕಿತ್ತು' ತೆಲುಗಿನ ಮಿರ್ಚಿ ಚಿತ್ರದ ರಿಮೇಕ್ ಆಗಿರುವ ಮಾಣಿಕ್ಯ ಚಿತ್ರದ ನಿರ್ದೇಶಕರೂ ಆಗಿರುವ ಸುದೀಪ್ ಚಿತ್ರದ ನಿರೂಪಣೆಯಲ್ಲಿ ಮೂಲ ಚಿತ್ರಕ್ಕೆ ಸಂಪೂರ್ಣ ಬದ್ಧರಾಗಿದ್ದಾರೆ ಎಂಬುದು ಚಿತ್ರ ನೋಡಿದವರ ಅನಿಸಿಕೆ ಆಗಿತ್ತು. ಆದರೆ ಇದೇ ವಿಷಯವನ್ನು ತಮ್ಮ ಆಕ್ರೋಶ ಹೊರಹಾಕಲು ಬಳಸಿಕೊಂಡ ರವಿಚಂದ್ರನ್ ಅಭಿಮಾನಿಗಳು 'ಬಹುಶಃ ತೆಲುಗು 'ಮಿರ್ಚಿ' ಚಿತ್ರ ಬಿಡುಗಡೆಯಾದಾಗ ನಾಯಕ ಪ್ರಭಾಸ್ ಕಟೌಟ್ಗೆ ಮಾತ್ರ ಹೂವಿನ ಹಾರ ಹಾಕಲಾಗಿತ್ತೋ ಏನೋ, ಅದೇ ಕಾರಣಕ್ಕೆ ಸಿನಿಮಾವನ್ನು ಯಥಾವತ್ ಭಟ್ಟಿ ಇಳಿಸಿರುವ ಸುದೀಪ್, ಕಟೌಟ್ ವಿಷಯದಲ್ಲೂ ಅದನ್ನೇ ಕಾಪಿ ಮಾಡಿದ್ದಾರೆ' ಎಂದು ಕುಹಕವಾಡುವ ಮಟ್ಟಕ್ಕೆ ಕ್ರೇಜಿಸ್ಟಾರ್ ಅಭಿಮಾನಿಗಳ ಅತೃಪ್ತಿ ವ್ಯಕ್ತವಾಗುತ್ತಿತ್ತು.
ಅಂದಹಾಗೆ, ಹಿಂದೆ 'ಒಡಹುಟ್ಟಿದವರು' ಚಿತ್ರ ಬಿಡುಗಡೆಯಾಗುವ ಹೊತ್ತಿನಲ್ಲಿ ಡಾ.ರಾಜ್ಕುಮಾರ್ ಅವರು 'ಅಂಬರೀಶ್ರ ಕಟೌಟ್ ನನ್ನ ಕಟೌಟ್ಗಿಂತ ಒಂದು ಇಂಚೂ ಕೂಡ ಕಡಿಮೆ ಇರಬಾರದು' ಎಂದು ತಾಕೀತು ಮಾಡಿ ತಮ್ಮ ದೊಡ್ಡತನ ಮೆರೆದಿದ್ದರು. ಆದರೆ ತಮಗಿಂತ ಹಿರಿಯ ನಟರ ಬಗೆಗಿನ ಸುದೀಪ್ರ ಈ ವರ್ತನೆಯಲ್ಲಿ ಅಂಥ ದೊಡ್ಡತನ ಕಾಣಲು ಸಾಧ್ಯವೇ ಎಂಬುದು ಅಭಿಮಾನಿಗಳ ಪ್ರಶ್ನೆ. ಹೀಗೆ ಅವಮಾನ ಮಾಡುವುದಾಗಿದ್ದರೆ ಅವರನ್ನು ಸಿನಿಮಾಕ್ಕೆ ಯಾಕೆ ಹಾಕಿಕೊಳ್ಳಬೇಕಿತ್ತು? ಎಂದೂ ಕೆಲವರು ಪ್ರಶ್ನಿಸಿದ್ದಾರೆ.