ತಪ್ಪಿದ ಉಗ್ರರ ಗುರಿ, ಮಾರ್ಗದಲ್ಲೇ ಸ್ಫೋಟಿಸಿದ ಬಾಂಬ್, ಬೆಂಗಳೂರು - ಗುವಾಹಟಿ ರೈಲಿನಲ್ಲಿ ಘಟಿಸಿದ ದುರಂತ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಂಧ್ರದ ರ್ಯಾಲಿಯನ್ನು...
ಚೆನ್ನೈ/ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಂಧ್ರದ ರ್ಯಾಲಿಯನ್ನು ಗುರಿಯಾಗಿರಿಸಿಕೊಂಡು ಉಗ್ರರು ಬೆಂಗಳೂರು- ಗುವಾಹಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಟ್ಟಿದ್ದ ಬಾಂಬ್ ಗುರುವಾರ ಚೆನ್ನೈನಲ್ಲಿ ಸ್ಫೋಟಿಸಿದೆ. ಚೆನ್ನೈನ ಸೆಂಟ್ರಲ್ ರೇಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಬೆಂಗಳೂರಿನ ಟಿಸಿಎಸ್ ಕಂಪನಿ ಉದ್ಯೋಗಿ, ಆಂಧ್ರದ ಸ್ವಾತಿ(22) ಮೃತಪಟ್ಟಿದ್ದಾಳೆ. ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದು, ಸ್ಥಳೀಯ ರಾಜೀವ್‌ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನಿಂದ ಚೆನ್ನೈ ಮಾರ್ಗವಾಗಿ ಆಂಧ್ರಕ್ಕೆ ತೆರಳುತ್ತಿದ್ದ ಈ ರೈಲಿನ ಎಸ್4 ಮತ್ತು ಎಸ್5ನೇ ಬೋಗಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆ ಕಡಿಮೆ ಇದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ತಮಿಳುನಾಡು ಸರ್ಕಾರ ಸಿಬಿ- ಸಿಐಡಿ ಪೊಲೀಸರ ತನಿಖೆಗೆ ಆದೇಶಿಸಿದೆ. ಪೊಲೀಸರ ತೀವ್ರ ತಪಾಸಣೆ ಬಳಿಕ ರೈಲು ಮೂರು ಗಂಟೆ ತಡವಾಗಿ ಗುವಾಹಟಿಯತ್ತ ಪ್ರಯಾಣ ಮುಂದುವರಿಸಿದೆ.
ಎನ್‌ಐಎ ತಂಡ ರವಾನೆ: ಸ್ಫೋಟದ ತನಿಖೆಗೆ ಸಂಬಂಧಿಸಿ ತಮಿಳುನಾಡು ಪೊಲೀಸರಿಗೆ ನೆರವು ನೀಡಲು ಕೇಂದ್ರ ಗೃಹ ಸಚಿವಾಲಯ ಎನ್‌ಐಎನ ಎರಡು ತಂಡಗಳನ್ನು ಚೆನ್ನೈಗೆ ಕಳುಹಿಸಿಕೊಟ್ಟಿದೆ. ಆರಂಭದಲ್ಲಿ ಎನ್‌ಐಟ ತಂಡಕ್ಕೆ ಒಂದು ತಂಡ ದೆಹಲಿಯಿಂದ ಮತ್ತೊಂದು ತಂಡ ಹೈದರಾಬಾದ್‌ನಿಂದ ಚೆನ್ನೈಗೆ ರವಾನೆಯಾಗಿದೆ. ಪ್ರಕರಣದ ತನಿಖೆಯಲ್ಲಿ ಕೇಂದ್ರೀಯ ಭಯೋತ್ಪಾದನಾ ನಿಗ್ರಹ ದಳದ ಮಧ್ಯಪ್ರವೇಶಕ್ಕೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕೇಂದ್ರವು ಎನ್‌ಐಎ, ಎನ್‌ಎಸ್‌ಜಿ ಮತ್ತು ವಿಧಿವಿಜ್ಞಾನ ತಜ್ಞರನ್ನು ಚೆನ್ನೈಗೆ ಕಳುಹಿಸುವ ನಿರ್ಧಾರವನ್ನು ತಡೆಹಿಡಿದಿತ್ತು.
ಭದ್ರತೆ ಹೆಚ್ಚಳ: ಸ್ಫೋಟದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಆಂಧ್ರ ಸೇರಿದಂತೆ ದೇಶಾದ್ಯಂತ ಭದ್ರತೆ ಬಿಗಿಗೊಳಿಸಲಾಗಿದೆ.
ಸೀಮಾಂಧ್ರ ಗುರಿಯೇ?
ಸೀಮಾಂಧ್ರ ಹೊರತುಪಡಿಸಿ ದಕ್ಷಿಣದ ಉಳಿ ದೆಡೆ ಚುನಾವಣೆ ಮುಗಿದಿದೆ. ಈ ರೈಲೂ ಸೀಮಾಂಧ್ರ ಮೂಲಕ ಸಂಚರಿಸಬೇಕಿತ್ತು. ಹಾಗಾಗಿ ಸ್ಫೋಟದ ಗುರಿ ಸೀಮಾಂಧ್ರ ಆಗಿರಬಹುದೇ ಎನ್ನುವ ಅನುಮಾನವೂ ಕೇಂದ್ರ ಗೃಹ ಸಚಿವಾಲಯವನ್ನು ಕಾಡುತ್ತಿದೆ. ಸೀಮಾಂಧ್ರದಲ್ಲಿ ಮೇ 7ಕ್ಕೆ ಚುನಾವಣೆ ನಡೆಯಲಿದೆ. ಸ್ಫೋಟಕ ಇಡಲಾಗಿದ್ದ ರೈಲು ಚೆನ್ನೈ ಸೆಂಟ್ರಲ್ ಬಳಿಕ ಒಂಗೋಲ್‌ನಲ್ಲಿ ನಿಲುಗಡೆ ಆಗಬೇಕಿತ್ತು. ರೈಲು ಕೂಡ ವಿಳಂಬವಾಗಿ ಚೆನ್ನೈ ನಿಲ್ದಾಣ ತಲುಪಿತ್ತು.
1 ಲಕ್ಷ ಪರಿಹಾರ
ಸ್ಫೋಟದಲ್ಲಿ ಮೃತಪಟ್ಟ ಸ್ವಾತಿ ಕುಟುಂಬಕ್ಕೆ 1 ಲಕ್ಷ, ಗಂಭೀರ ಗಾಯಗೊಂಡವರಿಗೆ 25 ಸಾವಿರ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 5 ಸಾವಿರ ಪರಿಹಾರ ವಿತರಿಸಲಾಗುವುದು ಎಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾಹಿತಿ ನೀಡಿದ್ದಾರೆ.
2 ತಿಂಗಳಲ್ಲಿ ಹಸೆಮಣೆ ಏರಬೇಕಿತ್ತು!
ಸ್ಫೋಟದಲ್ಲಿ ಮೃತಪಟ್ಟ ಸ್ವಾತಿ ಎರಡು ತಿಂಗಳ ಬಳಿಕ ಮದುವೆ ದಿನಾಂಕ ನಿಶ್ಚಯವಾಗಿತ್ತು. ದುರದೃಷ್ಟವಶಾತ್ ಹಸೆಮಣೆ ಏರಬೇಕಿದ್ದವಳು ಸ್ಫೋಟಕ್ಕೆ ಬಲಿಯಾದಳು. ಹೈದರಾಬಾದ್‌ನಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಸ್ವಾತಿ ನಾಲ್ಕು ತಿಂಗಳ ಹಿಂದಷ್ಟೇ ಬೆಂಗಳೂರಿನ ಟಿಸಿಎಸ್ ಸಾಫ್ಟ್‌ವೇರ್ ಕಂಪನಿಯಲ್ಲಿ ನೌಕರಿಗಿಟ್ಟಿಸಿದ್ದರು. ರಜೆಯ ಹಿನ್ನೆಲೆಯಲ್ಲಿ ಗೆಳೆಯರೊಬ್ಬರ ಜತೆಗೆ ಊರಿಗೆ ವಾಪಸಾಗುತ್ತಿದ್ದರು.
ಐಎಸ್‌ಐ ಲಿಂಕ್
ಸ್ಫೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಮಂಗಳವಾರವಷ್ಟೇ ಶಂಕಿತ ಐಎಸ್‌ಐ ಏಜೆಂಟ್, ಶ್ರೀಲಂಕಾದ ಮಹಮ್ಮದ್ ಜಾಹೀರ್ ಹುಸೇನ್‌ನನ್ನು ತಮಿಳುನಾಡಿನಲ್ಲಿ ಬಂಧಿಸಿದ್ದರು. ಈತ ಇತ್ತೀಚೆಗೆ ಅನೇಕ ಬಾರಿ ತಮಿಳುನಾಡಿಗೆ ಭೇಟಿ ಕೊಟ್ಟಿದ್ದ. ಒಂದು ಬಾರಿ ನಕಲಿ ಪಾಸ್‌ಪೋರ್ಟ್ ಬಳಸಿದ್ದ. ಹೀಗಾಗಿ ಅನುಮಾನ ವ್ಯಕ್ತವಾಗಿದೆ.
ಮೋದಿ ರ್ಯಾಲಿ ಗುರಿ!
ರೈಲು 1 ಗಂಟೆ 25 ನಿಮಿಷ ತಡವಾಗಿ ಚೆನ್ನೈ ನಿಲ್ದಾಣಕ್ಕೆ ಆಗಮಿಸಿತ್ತು. ಸರಿಯಾದ ಸಮಯಕ್ಕೆ ಸಂಚರಿಸುತ್ತಿದ್ದರೆ ಆಂಧ್ರದ ನೆಲ್ಲೂರು ಸಮೀಪ ಈ ಸ್ಫೋಟ ಸಂಭವಿಸಬೇಕಿತ್ತು. ಅಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ರ್ಯಾಲಿ ಆಯೋಜನೆಯಾಗಿತ್ತ್ತು. ಹೀಗಾಗಿ ಸ್ಫೋಟದ ಹಿಂದಿರುವವರ ಗುರಿ ಚೆನ್ನೈ ರೇಲ್ವೆ ನಿಲ್ದಾಣ ಅಲ್ಲ. ಬದಲಾಗಿ ಮೋದಿ ರ್ಯಾಲಿಯೇ ಆಗಿತ್ತು ಎನ್ನುವ ಅನುಮಾನ ವ್ಯಕ್ತವಾಗಿದೆ. ಸ್ಫೋಟದ ಹಿನ್ನೆಲೆಯಲ್ಲಿ ಮೋದಿ ಭದ್ರತೆ ಕುರಿತು ಬಿಜೆಪಿ ಆತಂಕ ವ್ಯಕ್ತಪಡಿಸಿದೆ. ಹೆಚ್ಚಿನ ಭದ್ರತೆ ಒದಗಿಸುವಂತೆ ಒತ್ತಾಯಿಸಿದೆ. ಆದರೆ ಕಾಂಗ್ರೆಸ್ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದಿದೆ.