ಪಟಾಫಟ್ ಸುದ್ದಿ
ಚಿನ್ನ, ಬೆಳ್ಳಿ ಆಮದು ಸುಂಕ ಕಡಿತ
ಸುಂಕ ಕಡಿತಕ್ಕೆ ಅಬಕಾರಿ ಮತ್ತು ಸೀಮಾ ಕೇಂದ್ರೀಯ ಮಂಡಳಿ ಅಧಿಸೂಚನೆ ಹೊರಡಿಸಿದೆ. ಪೆಟ್ರೋಲಿಯಂ ಬಳಿಕ ಭಾರತವು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ವಸ್ತುವೆಂದರೆ ಚಿನ್ನ. ಆಯಾತ ನಿರ್ಯಾತ ಅಂತರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿನ್ನದ ಆಮದು ತಗ್ಗಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿತ್ತು.
ಕಪ್ಪುಹಣ: ಎಸ್‌ಐಟಿ ಪು ನಾರಚನೆ
ನವದೆಹಲಿ: ಕಪ್ಪು ಹಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ನಡೆಸುತ್ತಿರುವ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಸ್‌ಐಟಿ ಸಮಿತಿಯನ್ನು ಸುಪ್ರೀಂಕೋರ್ಟ್ ಗುರುವಾರ ಪುನಾರಚಿಸಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಬಿ. ಶಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದರೆ, ಮತ್ತೊಬ್ಬ ನ್ಯಾಯಮೂರ್ತಿ ಅರಿಜಿತ್ ಪಸಾಯತ್‌ರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ನ್ಯಾ. ಶಾ ಈ ಹಿಂದೆ ಸಮಿತಿಯ ಉಪಾಧ್ಯಕ್ಷರಾಗಿದ್ದರು. ಆದರೆ, ಸಮಿತಿ ಅಧ್ಯಕ್ಷತೆ ವಹಿಸಬೇಕಿದ್ದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಪಿ. ಜೀವನ್ ರೆಡ್ಡಿ ವೈಯಕ್ತಿಕ ಕಾರಣ ನೀಡಿ ಸಮಿತಿಯಿಂದ ಹೊರ ನಡೆದಿದ್ದರು.
ಪತ್ನಿ ರುಂಡ ಹಿಡಿದು ಊರು ಸುತ್ತಿದ!
ಬ್ಯಾಡಗಿ: ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವೃದ್ಧನೊಬ್ಬ ಪತ್ನಿಯ ರುಂಡವನ್ನೇ ಮಚ್ಚಿನಿಂದ ಕತ್ತರಿಸಿ ಗ್ರಾಮದಲ್ಲಿ ಪ್ರದರ್ಶನ ಮಾಡಿದ ಅಮಾನವೀಯ ಕೃತ್ಯ ತಾಲೂಕಿನ ಹಳೇ ಶಿಡೇನೂರು ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಆರೋಪಿಯನ್ನು ಶಿಡೇನೂರು ಗ್ರಾಮದ ಮಹ್ಮದ್ ಹನೀಫ್ ಎಂದು ಗುರುತಿಸಲಾಗಿದ್ದು, ಪತ್ನಿ ಜಹೀರಾಬಿ (55) ಮಲಗಿದ್ದ ವೇಳೆ ಆಕೆಯ ರುಂಡ ಕತ್ತರಿಸಿದ್ದಾನೆ. ಈ ದಂಪತಿಗೆ ನಾಲ್ವರು ಮಕ್ಕಳಿದ್ದು, ಹನೀಫ್ ಇತ್ತೀಚೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದ.
ರಾಹುಲ್‌ಗಿಂತ ಪ್ರಿಯಾಂಕಾ ವಾಸಿ
ಬಿಜಾಪುರ: ಪ್ರಿಯಾಂಕಾ ವಾದ್ರಾ ಬಳಿ ನಾಯಕತ್ವದ ಗುಣಗಳಿವೆ. ನರೇಂದ್ರ ಮೋದಿ ಆರೋಪಗಳಿಗೆ ಪ್ರಿಯಾಂಕಾ ಪರಿಣಾಮಕಾರಿ ಪ್ರತ್ಯುತ್ತರ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಅವರನ್ನು ಮಂಚೂಣಿ ನಾಯಕಿಯನ್ನಾಗಿಸಿದ್ದರೆ ಮೋದಿ ಹೆಸರೇ ಇರುತ್ತಿರಲಿಲ್ಲ ಎಂದು ಮಾಜಿ ಸಿಎಂ ಧರ್ಮಸಿಂಗ್ ವಿಶ್ಲೇಷಿಸಿದ್ದಾರೆ. ಗುರುವಾರ ಬಿಜಾಪುರದಲ್ಲಿ ಕಾಂಗ್ರೆಸ್ ಮುಖಂಡ ಪ್ರಕಾಶ ರಾಠೋಡ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಿಯಾಂಕಾ ಅವರು ಮೋದಿ ಆರೋಪಗಳಿಗೆ ಪ್ರಬಲವಾಗಿ ಉತ್ತರ ನೀಡಿದ್ದಾರೆ. ಇದರಿಂದಾಗಿ ಮೋದಿ ಪ್ರಭಾವ ಕಡಿಮೆಯಾಗಿದೆ ಎಂದಿದ್ದಾರೆ.