ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬಂಗಲೆ ಶೋಕಿಗೆ ಮಂಗಳಾರತಿ

ಬಂಗಲೆ ನವೀಕರಣಕ್ಕೆ ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ...

Mainashree
Updated On : 1 May 2014, 11:32 am

ಕನ್ನಡಪ್ರಭ ವಾರ್ತೆ  ಬೆಂಗಳೂರು  ಮೇ 1
ಬಂಗಲೆ ನವೀಕರಣಕ್ಕೆ ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಕೋಟ್ಯಂತರ ರು.  ಸುರಿದಿರುವುದಕ್ಕೆ ರಾಜ್ಯಪಾಲ ಹಾಗೂ ಕೆಪಿಸಿಸಿ ಅಧ್ಯಕ್ಷರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ರಾಜ್ಯ ಪಾಲರು ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಹಾಗೂ ವಿಧಾನ ಪರಿಷತ್‌ಗೆ ನಾಮ ನಿರ್ದೇಶನ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಭವನಕ್ಕೆ ತೆರಳಿದ್ದರು.
ಈ ಸಂದರ್ಭದಲ್ಲಿ ಸಚಿವರ ದುಂದುವೆಚ್ಚ ಪ್ರಸ್ತಾಪಿಸಿದ ರಾಜ್ಯಪಾಲ, 'ಇಂಥದ್ದಕ್ಕೆ ಏಕೆ ಅವಕಾಶ ನೀಡುತ್ತೀರಿ? ನಿಮ್ಮ ಆಪ್ತರೇ ಈ ರೀತಿ ವರ್ತಿಸಿದಾಗ ಸುಮ್ಮನಿದ್ದರೆ ಜನತೆಗೆ ತಪ್ಪು ಮಾಹಿತಿ ರವಾನೆಯಾಗುತ್ತದೆ' ಎಂಬ ಕಿವಿ ಮಾತು ಹೇಳಿದರೆನ್ನಲಾಗಿದೆ.
ಅದೇ ರೀತಿ ನಾಗರಿಕ ಸೇವಾ ಮಂಡಳಿ ರಚನೆ ವಿಚಾರದಲ್ಲಿ ಐಎಎಸ್ ಅಧಿಕಾರಿಗಳು ಹಾಗೂ ಸರ್ಕಾರದ ಮಧ್ಯೆ ಭಿನ್ನಮತದ ವಿಚಾರವನ್ನೂ ಪ್ರಸ್ತಾಪಿಸಿ, ಇದರಿಂದ ಅಭಿವೃದ್ಧಿ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ. ಮುಂದೆ ಹೀಗಾಗದಂತೆ ಜಾಗ್ರತೆ ವಹಿಸಿ ಎಂದು ಸಲಹೆ ನೀಡಿದರು. ಕೆಲ ಸಚಿವರ ಕಾರ್ಯನಿರ್ವಹಣೆ ಬಗ್ಗೆಯೂ ರಾಜ್ಯಪಾಲರು ತಕರಾರು ತೆಗೆದಿದ್ದು, ಸರ್ಕಾರ ಚುನಾವಣಾ ಮನಸ್ಥಿತಿಯಿಂದ ಆಚೆಗೆ ಬರುವಂತೆ ಹೇಳಿದ್ದಾರೆ.
ಅಧಿಕೃತ ಆಕ್ಷೇಪ: ಅದೇ ರೀತಿ ಆಡಳಿತಾರೂಢ ಕಾಂಗ್ರೆಸ್‌ನಿಂದಲೂ ಈ ಬಗ್ಗೆ ಅಧಿಕೃತ ಆಕ್ಷೇಪ ವ್ಯಕ್ತವಾಗಿದೆ.   83ನೇ ವರ್ಷಕ್ಕೆ ಕಾಲಿಟ್ಟಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿವಾಸಕ್ಕೆ ತೆರಳಿ ಶುಭ ಹಾರೈಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಗುರುವಾರ ಬಂಗಲೆ ನವೀಕರಣ ಕುರಿತು ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಕಟ್ಟಡ ಬದಲಾವಣೆಯಾದ ಸಂದರ್ಭದಲ್ಲಿ ರಿಪೇರಿ ಕೆಲಸ ಸ್ವಾಭಾವಿಕ. ಆದರೆ ದುಂದುವೆಚ್ಚ ಮಾಡಬಾರದು. ಹೆಚ್ಚು ಹಣ ಖರ್ಚು ಮಾಡುವುದನ್ನು ಜನ್ನ ಒಪ್ಪುವುದಿಲ್ಲ. ಕಳೆದೆರಡು ದಿನಗಳಿಂದ ಸಾರ್ವಜನಿಕರು ನೀಡುತ್ತಿರುವ ಪ್ರತಿಕ್ರಿಯೆ ಗಮನಿಸಿದಾಗ, ಇಷ್ಟೊಂದು ಹಣ ವೆಚ್ಚ ಮಾಡುವ ಅಗತ್ಯವಿರಲಿಲ್ಲ ಎಂದೆನಿಸುತ್ತದೆ ಎಂದು ಹೇಳಿದರು.

ಬರ ಹಾಗೂ ಆಲಿಕಲ್ಲು ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಿ ಎಂದರೆ ಚುನಾವಣೆ ನೀತಿ ಸಂಹಿತೆಯಂತಹ ನೆಪ ಹೇಳಿ ಸರ್ಕಾರ ಕಾಲ ಕಳೆಯುತ್ತದೆ. ಆದರೆ ತಮ್ಮ ಐಷಾರಾಮಿ ಬದುಕಿಗಾಗಿ ಸಚಿವರು ಈ ರೀತಿಯ ದುಂದು ವೆಚ್ಚ ಮಾಡುವುದನ್ನು ನಿಯಂತ್ರಿಸಲು ಮುಖ್ಯಮಂತ್ರಿಗೆ ಆಗುತ್ತಿಲ್ಲ.
-ಜಗದೀಶ್ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ

ಸರ್ಕಾರಿ ಕಟ್ಟಡದ ನವೀಕರಣ ಅಥವಾ ಕೆಡವುದನ್ನು ವಿರೋಧಿಸಿ ಸರ್ಕಾರವೇ ವಿಧೇಯಕ ತರುತ್ತದೆ ಎಂದು ವಿಧಾನ ಪರಿಷತ್‌ನಲ್ಲಿ ಮಹದೇವಪ್ಪ ಭರವಸೆ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಹೇಗೆ ವರ್ತಿಸುತ್ತಿದೆ ಎನ್ನುವುದನ್ನು ಸಚಿವರು ತಮ್ಮ ಕಾರ್ಯವೈಖರಿ ಮೂಲಕ ಪ್ರದರ್ಶಿಸುತ್ತಿದ್ದಾರೆ.
- ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement