ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮಲ್ಲಿಕಾರ್ಜುನ ಜಾತ್ರೆಯಲ್ಲಿ ಮಕ್ಕಳದೇ ಪಾರುಪತ್ಯ

Mainashree
Updated On : 1 May 2014, 11:45 am

ಹೊನ್ನಪ್ಪ ಲಕ್ಕಮ್ಮನವರ
ಕ.ಪ್ರ. ವಾರ್ತೆ |ಧಾರವಾಡ |ಮೇ 1

ಹೆಬ್ಬಳ್ಳಿ ಮಲ್ಲಿಕಾರ್ಜುನ ದೇವರ ಜಾತ್ರೆ ಮತ್ತು ರಥೋತ್ಸವದಲ್ಲಿ ಚಿಣ್ಣರದ್ದೇ ಪಾರುಪತ್ಯ. ಹಿರಿಯರು ಇಲ್ಲಿ ಪ್ರೇಕ್ಷಕರು ಮಾತ್ರ.
ವಿಶಿಷ್ಟ ಆಧ್ಮಾತ್ಮಿಕ ಪರಂಪರೆ ಹೊಂದಿರುವ ಧಾರವಾಡ ತಾಲೂಕಿನ ಹೆಬ್ಬಳ್ಳಿ 101 ದೇವಸ್ಥಾನ ಮತ್ತು ಅಷ್ಟೇ ಸಂಖ್ಯೆಯ ಬಾವಿಗಳನ್ನು ಹೊಂದಿದೆ. ಬಸವ ಜಯಂತಿಯಂದು ಇಲ್ಲಿನ ಎಲ್ಲ ದೇವಸ್ಥಾನಗಳಲ್ಲಿ ಹಲವು ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಮಲ್ಲಿಕಾರ್ಜುನ ದೇವರ ಜಾತ್ರೆ ಹಾಗೂ ರಥೋತ್ಸವದಲ್ಲಿ ಅಭಿಷೇಕದಿಂದ ಹಿಡಿದು ತೇರೆಳೆಯುವವರೆಗೆ ಎಲ್ಲವೂ ಮಕ್ಕಳದ್ದೇ.
ಐದಡಿ ಎತ್ತರದ ರಥ: ಬಸವ ಜಯಂತಿ ನಿಮಿತ್ತ ಸಿದ್ಧಪಡಿಸುವ 5 ಅಡಿ ಎತ್ತರದ ರಥವನ್ನು ಮಕ್ಕಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಎಳೆಯುತ್ತಾರೆ. ಜಾತ್ರೆಗೆ ಪೆಂಡಾಲ್ ಹಾಕುವುದು, ವಾದ್ಯ ಮೇಳದವರನ್ನು ಆಹ್ವಾನಿಸುವುದೂ ಮಕ್ಕಳೇ. ಈ ಬಾರಿ ಜಾತ್ರೆಯಲ್ಲಿ ಐದು ಕೋಲಾಟ ತಂಡಗಳು, ಹೆಜ್ಜೆ ಮೇಳ ಹಾಗೂ ಭಜನಾ ಸಂಘಗಳು ಭಾಗವಹಿಸುತ್ತಿವೆ.
ತೇರೆಳೆಯುವ ಸಂಭ್ರಮ: ಬಸವ ಜಯಂತಿಯ ದಿನ ಬೆಳಗ್ಗೆ ದೇವರ ಪೂಜೆಯಲ್ಲಿ ಚಿಣ್ಣರು ಭಾಗಿಯಾಗಿ, ಮಧ್ಯಾಹ್ನ ಪ್ರಸಾದ ವಿತರಣೆ ಮಾಡುತ್ತಾರೆ. ಸಂಜೆ 4ಕ್ಕೆ ತೇರೆಳೆಯುತ್ತಾರೆ. ಗ್ರಾಮದ ಹಿರಿಯರು ಈ ಸಂಭ್ರಮಕ್ಕೆ ಸಾಕ್ಷಿಯಾಗುತ್ತಾರೆ. ಆದರೆ, ಚಿಣ್ಣರ ಹಬ್ಬದಲ್ಲಿ ಅವರು ಮೂಗು ತೂರಿಸುವುದಿಲ್ಲ ಎಂಬುದು ಇನ್ನೊಂದು ವಿಶೇಷ.
15 ದಿನದ ಸಿದ್ಧತೆ: ಬಸವ ಜಯಂತಿ ಬಂತೆಂದರೆ ಹೆಬ್ಬಳ್ಳಿಯ ಚಿಣ್ಣರಲ್ಲಿ ಹಬ್ಬದ ಕಳೆಗಟ್ಟಲು ಶುರುವಾಗುತ್ತದೆ. 15 ದಿನಗಳಿಗೆ ಮೊದಲೇ ಗ್ರಾಮದ ಮಕ್ಕಳೆಲ್ಲ ಸಭೆ ಸೇರಿ ಜಾತ್ರಾ ಮಹೋತ್ಸವ ಸಮಿತಿ ಮಾಡಿಕೊಳ್ಳುತ್ತಾರೆ. ತಂಡವಾಗಿ ವಿಭಜಿಸಿಕೊಂಡು ಮನೆ ಮನೆಗೆ ತೆರಳಿ ಚಂದಾ ಎತ್ತುತ್ತಾರೆ. ಆ ಹಣದಿಂದ ಜಾತ್ರೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ರಥ ಶೃಂಗರಿಸುತ್ತಾರೆ. ಜಾತ್ರೆ ಮುಗಿದ ಮೇಲೆ ಎಲ್ಲ ವಸ್ತುಗಳನ್ನೂ ಹರಾಜು ಹಾಕುತ್ತಾರೆ. ಬಂದ ಹಣವನ್ನು ಮುಂದಿನ ವರ್ಷದ ಜಾತ್ರೆಗೆಂದು ಕಾಪಿಡುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement