ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಯಾರ ಮಡಿಲಿಗೆ ಕೆಮ್ಮಣ್ಣುಗುಂಡಿ ವಿಹಾರಧಾಮ?

Mainashree
Updated On : 1 May 2014, 11:11 am

ಕ.ಪ್ರ.ವಾರ್ತೆ   ಚಿಕ್ಕಮಗಳೂರು  ಮೇ 1
ಕೆಮ್ಮಣ್ಣುಗುಂಡಿಯ ಕೃಷ್ಣರಾಜೇಂದ್ರ ಗಿರಿಧಾಮ 20 ಕೋಟಿ ವೆಚ್ಚದಲ್ಲಿ ನವೀಕರಣಗೊಂಡಿದೆ. ಕಾಮಗಾರಿ ಮುಗಿದು 6 ತಿಂಗಳು ಕಳೆದಿದ್ದು, 3ನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನೆ ನಡೆಸಿದರೂ ಸಾರ್ವಜನಿಕರ ಬಳಕೆಗೆ ಇನ್ನು ಕಾಲ ಕೂಡಿ ಬಂದಿಲ್ಲ.
ಇದಕ್ಕೆ ಎರಡು ಕಾರಣ. ಒಂದು ಚುನಾವಣಾ ನೀತಿ ಸಂಹಿತೆ, ಮತ್ತೊಂದು ಇದರ ನಿರ್ವಹಣೆಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಹಾಗೂ ತೋಟಗಾರಿಕೆ ಇಲಾಖೆಯ ನಡುವಿನ ಪೈಪೋಟಿ. ಕೆಮ್ಮಣ್ಣುಗುಂಡಿಯ ಗಿರಿಧಾಮ, ಬೇಸಿಗೆ ಕಾಲದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಈ ಗಿರಿಧಾಮವನ್ನು ಕಳೆದ 3 ವರ್ಷಗಳವರೆಗೆ ತೋಟಗಾರಿಕೆ ಇಲಾಖೆ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಗಿರಿಧಾಮದ ಅಭಿವೃದ್ಧಿಗೆ 20 ಕೋಟಿ ನೀಡಿದ್ದು, 3 ವರ್ಷದ ಹಿಂದೆ ಈ ಗಿರಿಧಾಮವನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ವಹಿಸಿಕೊಡಲಾಯಿತು.
ಆಧುನಿಕ ತಂತ್ರಜ್ಞಾನ:  ಕೆಮ್ಮಣ್ಣುಗುಂಡಿ ಹಾಗೂ ಕಲ್ಲತ್ತಗಿರಿ ಬಳಿ ಇರುವ ವಸತಿ ಗೃಹಗಳ ದುರಸ್ತಿಗೆ ಆಧುನಿಕ ತಂರ್ತ್ರಜ್ಞಾನ ಬಳಸಲಾಗಿದೆ. ಅಂದರೆ, ಮಳೆ ಮತ್ತು ಚಳಿಗಾಲದಲ್ಲೂ ಇಲ್ಲಿನ ಕಾಟೇಜ್‌ನಲ್ಲಿ ತಂಗಲು ಅಲ್ಲಿನ ಪರಿಸರಕ್ಕೆ ಹೊಂದಿಕೊಂಡಂತೆ ತಂತ್ರಜ್ಞಾನವನ್ನು ಬಳಕೆ ಮಾಡಲಾಗಿದೆ.
ಇನ್ನು, ಇಡೀ ಕಾಟೇಜ್‌ನ ನೆಲ ಹಾಸು ಹಾಗೂ ಗೋಡೆಗಳಿಗೆ ವುಡ್ ಹಾಕಲಾಗಿದೆ. ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಸರ್ಕಾರದ ಅಧೀನದಲ್ಲಿರುವ ವಸತಿ ಗೃಹಗಳನ್ನು ಹೊಸ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಚಳಿಗಾಲದಲ್ಲಿ ಇಲ್ಲಿಗೆ ಬಂದರೆ, ಕಾಟೇಜ್‌ನ ಒಳ ಭಾಗದಲ್ಲಿ ಬೆಚ್ಚನೆಯ ವಾತಾವರಣ ಇರುತ್ತದೆ. ಎಷ್ಟೇ ಮಳೆ ಬಂದರೂ ಇವು ಹಾಳಾಗುವುದಿಲ್ಲ.ಇಬ್ಬರ ಕಿತ್ತಾಟ
ಈ ಗಿರಿಧಾಮವನ್ನು ತಾವು ಅಭಿವೃದ್ಧಿಪಡಿಸಿದ್ದು, ಇದರ ನಿರ್ವಹಣೆಯನ್ನೂ ತಮಗೇ ವಹಿಸುವಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಸರ್ಕಾರವನ್ನು ಕೇಳಿಕೊಂಡಿದೆ.
ಇಷ್ಟು ವರ್ಷಗಳ ಕಾಲ ಇದನ್ನು ನಿರ್ವಹಣೆ ಮಾಡುತ್ತಾ ಬಂದಿದ್ದು, ತಮಗೇ ವಹಿಸಿಕೊಡುವಂತೆ ತೋಟಗಾರಿಕೆ ಇಲಾಖೆ ಕೇಳಿಕೊಂಡಿದೆ. ಈ ಸಂಬಂಧ ಉಭಯ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯೊಂದರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇಲಾಖೆಗಳ ಈ ಕಿತ್ತಾಟದಿಂದಾಗಿ ಮುಂದಿನ ನಿರ್ವಹಣೆ ಯಾರಿಗೆ ವಹಿಸಬೇಕೆಂಬ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಹಣ ಪಾವತಿ ಬಾಕಿ
ಇಲ್ಲಿನ ಎಲ್ಲ ಕಾಮಗಾರಿಗಳು ಮುಗಿದಿದ್ದರೂ ಗುತ್ತಿಗೆದಾರರಿಗೆ ಬಾಕಿ ಹಣ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಸಂದಾಯವಾಗಿಲ್ಲ. ಇನ್ನು 5 ಕೋಟಿ ಬಿಲ್ ಪಾವತಿಯಾಗಬೇಕಾಗಿದೆ. ಇಲಾಖೆಗಳ ಆಂತರಿಕ ಕಿತ್ತಾಟದಿಂದ ಬಾಕಿ ಬಿಲ್ ಪಾವತಿಯೂ ವಿಳಂಬವಾಗಿದೆ.

ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement