ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜಕೀಯ ಸಾಹಿತಿಗಳ ಮೇಲಾಟ

ವಿಧಾನ ಪರಿಷತ್‌ಗೆ ಗಣ್ಯರ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ ದೊರೆಯುತ್ತಿದ್ದಂತೆ...

Mainashree
Updated On : 1 May 2014, 11:24 am

ಬೆಂಗಳೂರು: ವಿಧಾನ ಪರಿಷತ್‌ಗೆ ಗಣ್ಯರ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ ದೊರೆಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ 'ನಿಲಯದ ಕಲಾವಿದ'ರಲ್ಲೇ ಭಿನ್ನಮತ ಸ್ಫೋಟಗೊಂಡಿದೆ.
ಮುಖ್ಯಮಂತ್ರಿಯನ್ನು ಬೆಂಬಲಿಸುವ ನಾಡಿನ 'ಬುದ್ಧಿಜೀವಿ'ಗಳಿಗೆ ರಾಜ ಕೀಯ ವಲಯದಲ್ಲಿ 'ನಿಲಯ ಕಲಾವಿದರು' ಎಂಬ ಹೆಸರಿದೆ. ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ, ಚುನಾವಣೆ ಸಂದರ್ಭದಲ್ಲಿ ಹಾಗೂ ಸಿದ್ದು ಮುಖ್ಯಮಂತ್ರಿಯಾದ ನಂತರ ಅವರ ಸಲಹಾ ಕೇಂದ್ರ ಎಂದೇ ಬಿಂಬಿಸಿಕೊಂಡಿರುವ ಈ ಬುದ್ಧಿಜೀವಿಗಳ ದಂಡಿನಲ್ಲೇ ಈಗ ಮೇಲ್ಮನೆ ಸದಸ್ಯತ್ವ ಗಿಟ್ಟಿಸಿಕೊಳ್ಳುವುದಕ್ಕಾಗಿ ಪೈಪೋಟಿ.
ಜ್ಞಾನಪೀಠ ಪುರಸ್ಕೃತ ಪ್ರೊ.ಯು.ಆರ್.ಅನಂತಮೂರ್ತಿ, ಮರುಳಸಿದ್ದಪ್ಪ, ಪ್ರೊ,ಎಚ್.ಜಿ.ಸಿದ್ದರಾಮಯ್ಯ ನಡುವೆ ಈಗ ಮೇಲಾಟ ಆರಂಭವಾಗಿದೆ. ಒಬ್ಬರಿಗೊಬ್ಬರು ಅವಕಾಶ ತಪ್ಪಿಸುವುದಕ್ಕೆ ಮತ್ತು ಸ್ಥಾನ ಗಿಟ್ಟಿಸುವುದಕ್ಕೆ ತಮ್ಮದೇ ಆದ ಶೈಲಿಯಲ್ಲಿ ಆಟ ಆರಂಭಿಸಿದ್ದಾರೆ.          

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಈ ಬುದ್ದಿಜೀವಿಗಳ ಗುಂಪು ಆಗ ಹೇಳಿಕೊಂಡಿದ್ದರೂ, ಈಗ ಋಣ ಸಂದಾಯ ಪಡೆಯಲು ಹವಣಿಸುತ್ತಿದ್ದಾರೆ. ಸಾಲದಕ್ಕೆ ಸಿಎಂ ಸಹ ಈ ಬಳಗದಲ್ಲಿ ಯಾರಾದರೊಬ್ಬರನ್ನು ನಾಮನಿರ್ದೇಶನ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ.
ಸಾಹಿತಿಗಳ ಕೋಟಾದಲ್ಲಿ ಒಬ್ಬರಿಗೆ ಮಾತ್ರ ಈ ಅವಕಾಶ ನೀಡಲು ಸಾಧ್ಯ. ಆದರೆ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಅನಾರೋಗ್ಯದ ಮಧ್ಯೆಯೂ ಒಮ್ಮೆ ವಿಧಾನ ಪರಿಷತ್‌ಗೂ ಹೋಗಿ ಬರೋಣ ಎಂಬ ಆಸೆ ಹಿರಿಯರಾದ ಅನಂತಮೂರ್ತಿಯವರಲ್ಲೂ ಮೂಡಿದೆ. ಆದರೆ ಈ ಆಸೆಗೆ ಎಚ್.ಜಿ.ಸಿದ್ದರಾಮಯ್ಯ ಹಾಗೂ ಮರುಳಸಿದ್ದಪ್ಪ ಅವರೇ ತಣ್ಣೀರೆರಚುವ ಸಾಧ್ಯತೆ ಇದೆ. ಅನಂತಮೂರ್ತಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ಅವಕಾಶ ಬೇಡ ಎಂದು ಪರ್ಯಾಯ ಮಾರ್ಗದ ಮೂಲಕ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಒಬ್ಬರ ಕಾಲಿಗೆ ಇನ್ನೊಬ್ಬರು 'ಕೋಲು' ಅಡ್ಡ ಹಾಕಿ ಬೀಳಿಸುವ ಪ್ರಯತ್ನ ನಡೆಸಿದ್ದಾರೆ.
ಬೇರೆ ಕಡೆ: ಜತೆಗೆ ಚಿತ್ರರಂಗದಿಂದ ಬಂದು ಕಾಂಗ್ರೆಸ್ ಬೆಂಬಲಿಸುತ್ತಿರುವವರಲ್ಲೂ ಪೈಪೋಟಿ ಆರಂಭವಾಗಿದೆ. ಈ ಪಟ್ಟಿಯಲ್ಲಿ ಜಯಮಾಲಾ, ಭಾವನಾ ಹಾಗೂ ಭವ್ಯಾ ಇದ್ದಾರೆ. ಹಲವು ವರ್ಷಗಳಿಂದ ಕಾಂಗ್ರೆಸ್ ಜತೆ ಗುರುತಿಸಿಕೊಂಡಿರುವ ಜಯಮಾಲಾ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಾಲ್ಕು ಸ್ಥಾನಗಳು ಲಭಿಸಲಿದ್ದು, ಜಾತಿ, ಪ್ರದೇಶ, ಹೈಕಮಾಂಡ್ ಸೂಚನೆ ಆಧಾರದ ಮೇಲೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. 100ಕ್ಕೂ ಹೆಚ್ಚು ಆಕಾಂಕ್ಷಿಗಳು ಕೆಪಿಸಿಸಿಗೆ ಈಗಾಗಲೇ ಅರ್ಜಿ ಗುಜರಾಯಿಸಿದ್ದಾರೆ.
ಸಾಧ್ಯತೆ
-    ಚಿತ್ರರಂಗ: ಜಯಮಾಲಾ
-    ಶಿಕ್ಷಣ ಕ್ಷೇತ್ರ: ದಾವಣಗೆರೆಯ ಜಬ್ಬಾರ್
-    ವಿಧಾನಸಭೆ ಕೋಟ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ
-    ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ

ರೇಸಿನಲ್ಲಿ
ತಾರಾದೇವಿ ಸಿದ್ಧಾರ್ಥ, ಎಸ್.ಎಂ. ಆನಂದ, ಸಿ.ಎಂ. ಲಿಂಗಪ್ಪ, ಕೆ.ಪಿ. ಚಂದ್ರಕಲಾ, ಜೆ. ಅಲೆಗ್ಸಾಂಡರ್, ವೆಂಕಟರಾವ್ ಘೋರ್ಪಡೆ, ಇಕ್ಬಾಲ್ ಅಹ್ಮದ್ ಸರಡಗಿ, ಎಚ್.ಎಂ. ರೇವಣ್ಣ, ರಾಮಚಂದ್ರಪ್ಪ, ರಾಣಿ ಸತೀಶ್, ಎನ್.ಎಸ್. ರತ್ನಪ್ರಭಾ, ಡಾ.ಎಲ್. ಹನುಮಂತಯ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement