ಸಿನಿಮಾ ಒಕ್ಕೂಟದವರಿಗೆ ಮನೆ ಭಾಗ್ಯ
ಕಾರ್ಮಿಕರ ದಿನದ ಬಹುಮಾನ ಎಂಬಂತೆ ಕರ್ನಾಟಕ ಚಲನಚಿತ್ರ ಕಾರ್ಮಿಕರ...
ಕ.ಪ್ರ. ವಾರ್ತೆ | ಬೆಂಗಳೂರು | ಮೇ 1
ಕಾರ್ಮಿಕರ ದಿನದ ಬಹುಮಾನ ಎಂಬಂತೆ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಸದಸ್ಯರಿಗೆ ವಸತಿ ದೊರೆಯುವ ಕಾಲ ಸನ್ನಿಹವಾಗುತ್ತಿದೆ.
ಗುರುವಾರ ಕಾರ್ಮಿಕರ ಒಕ್ಕೂಟ ಆಯೋಜಿಸಿದ್ದ ಮೇ ದಿನಾಚರಣೆಯಲ್ಲಿ ವಸತಿ ಸಚಿವರೂ ಆದ ಹಿರಿಯ ನಟ ಅಂಬರೀಷ್ ಅವರು ಈ ವಸತಿ ಯೋಜನೆ ಘೋಷಿಸಿದ್ದಾರೆ. ರಾಜ್ಯ ಸರ್ಕಾರದ ವಸತಿ ಇಲಾಖೆಯಲ್ಲಿ ಸಿದ್ಧಗೊಳ್ಳುತ್ತಿರುವ ಯೋಜನೆ ಇದಾಗಿದೆ. ಚಲನಚಿತ್ರ ಕಾರ್ಮಿಕರ ಒಕ್ಕೂಟದಲ್ಲಿ ಸದಸ್ಯತ್ವ ಪಡೆದಿರುವವರು ಇದರ ಫಲಾನುಭವಿಗಳಾಗಲಿದ್ದಾರೆ.
ಕೆಂಗೇರಿ ಈಗಲ್‌ಟನ್ ರೆಸಾರ್ಟ್ ಬಳಿ ಚಲನಚಿತ್ರ ಕಾರ್ಮಿಕರಿಗಾಗಿಯೇ ಈ ಯೋಜನೆ ರೂಪುಗೊಳ್ಳುತ್ತಿದೆ ಎಂದು ಸಚಿವ ಅಂಬರೀಷ್ ತಿಳಿಸಿದ್ದಾರೆ. ಒಟ್ಟು ರು. 78 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸೇವೆ ಮತ್ತು ಹಿರಿತನದ ಆಧಾರದ ಮೇಲೆ ಚಲನಚಿತ್ರ ಕಾರ್ಮಿಕರಿಗೆ ಕಡಿಮೆ ವೆಚ್ಚದಲ್ಲಿ ಫ್ಲ್ಯಾಟ್ ನಿರ್ಮಾಣ ಮಾಡಿ ಕೊಡಲು ನಿರ್ಧರಿಸಲಾಗಿದೆ.
ಕರ್ನಾಟಕ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಪ್ಯಾಪ್ತಿಯಲ್ಲಿ ಒಟ್ಟು 22 ವಿಭಾಗಗಳಿವೆ. ಎಲ್ಲ ವಿಭಾಗಗಳು ಸೇರಿದರೆ ಒಟ್ಟು 5 ಸಾವಿರ ಸದಸ್ಯರು ಒಕ್ಕೂಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಯೋಜನೆ ಒಕ್ಕೂಟದ 22 ಸಂಘಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರಿಗೆ ಅನ್ವಯಿಸಲಿದೆ. 'ಚಿತ್ರೋದ್ಯಮದಲ್ಲಿ ದುಡಿಯುತ್ತಿರುವ ಹಾಗೂ ಒಕ್ಕೂಟದ ಸದಸ್ಯತ್ವ ಪಡೆದುಕೊಂಡು ಸ್ವಂತ ನಿವೇಶನ ಇಲ್ಲದ ಕಾರ್ಮಿಕರಿಗೆ, ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಈ ಯೋಜನೆಯಡಿ ಫ್ಲ್ಯಾಟ್ ಪಡೆಯಲು ಅರ್ಹರಾಗಿರುತ್ತಾರೆ' ಎಂದು ಚಲನಚಿತ್ರ ಕಾರ್ಮಿಕರ ಒಕ್ಕೂಟ ತಿಳಿಸಿದೆ.
ಒಂದರಿಂದ ಮೂರು ಬೆಡ್‌ರೂಮ್‌ಗಳ ಫ್ಲಾಟ್‌ಗಳನ್ನು ನಿರ್ಮಾಣ ಮಾಡಲು ನಿರ್ಧರಿಸಿದ್ದು, ಒಂದು ಕೊಠಡಿ ಮನೆಗೆ ರು. 6 ಲಕ್ಷ, ಎರಡು ಕೊಠಡಿ ಮನೆಗೆ ರು. 8 ಲಕ್ಷ ಹಾಗೂ ಮೂರು ಕೊಠಡಿ ಮನೆಗೆ ರು. 12 ಲಕ್ಷ ದರ ನಿಗದಿ ಮಾಡಲಾಗಿದೆ. ವಸತಿ ರಹಿತ ಸದಸ್ಯರು ಕಂತಿನ ಲೆಕ್ಕದಲ್ಲಿ ಹಣ ನೀಡುವ ಮೂಲಕ ಫ್ಲ್ಯಾಟ್ ಪಡೆಯಬಹುದು.