ಚಾಮುಂಡಿ ಸನ್ನಿಧಿಯಲ್ಲಿ ರಜನಿ ಲಿಂಗಾಧಾರಣೆ
ಸೂಪರ್ ಸ್ಟಾರ್ ರಜನೀಕಾಂತ್ ಅಭಿ...
ಕನ್ನಡಪ್ರಭ ವಾರ್ತೆ , ಮೈಸೂರು , ಮೇ 2
ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಲಿಂಗಾ ಚಲನಚಿತ್ರದ ಮುಹೂರ್ತ ನಗರದ ಚಾಮುಂಡಿ ಬೆಟ್ಟದಲ್ಲಿ ಶುಕ್ರವಾರ ಮುಂಜಾನೆ 4.30ಕ್ಕೆ ನೆರವೇರಿತು.
ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಎದುರಿನ ಮಂಟಪದಲ್ಲಿ ಪೂಜೆ ಸಲ್ಲಿಸಲಾಯಿತು. ಮಾಧ್ಯಮದವರ ಕ್ಯಾಮರಾ ಕಣ್ಣು ತಪ್ಪಿಸಲು ಮಂಟಪಕ್ಕೆ ತೆರೆಬಿಟ್ಟು ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ಒಳ ಆವರಣದಲ್ಲಿನ ಗಣೇಶ ಗುಡಿಯ ಬಳಿ ಕ್ಲಾಪ್ ಮಾಡಲಾಯಿತು. ಅಲ್ಲಿಗೂ ಮಾಧ್ಯಮದವರಿಗೆ ಪ್ರವೇಶ ನಿಷೇಧಿಸಲಾಗಿತ್ತು.
ರೇಷ್ಮೆಯ ಶರ್ಟ್, ಬಾರ್ಡರ್ ಇರುವ ಬಿಳಿಯ ಪಂಚೆ, ಕೊರಳಿಗೆ ಶಲ್ಯ ಹಾಕಿಕೊಂಡಿದ್ದ ರಜನೀಕಾಂತ್ ಅವರ ಗಂಧದ ತಿಲಕ ಮತ್ತು ಅದರ ಮಧ್ಯೆ ಕುಂಕುಮ ಇಟ್ಟುಕೊಂಡು ಕಂಗೊಳಿಸಿದರು. ರಜನೀಕಾಂತ್ಗೆ ಅಂಬರೀಶ್ ಜೊತೆಯಾಗಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ ಲಿಂಗಾ ಚಲನಚಿತ್ರವನ್ನು ಪಡೆಯಪ್ಪ ಖ್ಯಾತಿಯ ರವಿಕುಮಾರ್ ನಿರ್ದೇಶಿಸುತ್ತಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಮೇ 3 ರಿಂದ 11 ರವರೆಗೆ ಮಂಡ್ಯ, ಮೇಲುಕೋಟೆ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಒಟ್ಟು 150 ಮಂದಿ ಚಿತ್ರೀಕರಣದಲ್ಲಿದ್ದಾರೆ. ವಿದೇಶದಲ್ಲಿಯೂ ಚಿತ್ರೀಕರಣ ನಡೆಸುವ ಉದ್ದೇಶ ಇದೆ. ಖಳನಾಯಕನ ಆಯ್ಕೆ ಇನ್ನೂ ಆಗಿಲ್ಲ. ಆ ಪಾತ್ರಕ್ಕೆ ಸುದೀಪ್ ಹೆಸರು ಕೇಳಿಬರುತ್ತಿದೆ. ಆದರೆ ಅಂತಿಮವಾಗಿಲ್ಲ ಎಂದರು.
ವಸತಿ ಸಚಿವ ಹಾಗೂ ನಟ ಅಂಬರೀಶ್ ಮಾತನಾಡಿ, ರಜನೀಕಾಂತ್ ಕರ್ನಾಟಕಕ್ಕೆ ಬಂದು ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಯಶಸ್ಸು ಲಭಿಸಲಿ ಎಂದ ಅವರು, ನಾನು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ನಟಿ ಸುಮಲತಾ, ನಿರ್ಮಾಪಕರಾದ ಮುನಿರತ್ನ, ಸೂರಪ್ಪ ಬಾಬು ಇದ್ದರು.