ಬಸ್ ಪ್ರಯಾಣ ಇಂದಿನಿಂದ ತುಟ್ಟಿ
ರಾಜ್ಯ ಸರ್ಕಾರ ಬಿಎಂಟಿಸಿ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ಮುಟ್ಟಿಸಿದ್ದಾಯ್ತು. ಈಗ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಏರಿಕೆ ಮಾಡಲು ಸಿದ್ಧವಾಗಿದೆ...
ಬೆಂಗಳೂರು: ರಾಜ್ಯ ಸರ್ಕಾರ ಬಿಎಂಟಿಸಿ ಪ್ರಯಾಣಿಕರಿಗೆ ದರ ಏರಿಕೆ ಬಿಸಿ ಮುಟ್ಟಿಸಿದ್ದಾಯ್ತು. ಈಗ ಕೆಎಸ್‌ಆರ್‌ಟಿಸಿ ಪ್ರಯಾಣ ದರ ಏರಿಕೆ ಮಾಡಲು ಸಿದ್ಧವಾಗಿದೆ.
ರಜೆ ಸಮಯವಾಗಿರುವುದರಿಂದ ಈಗಾಗಲೇ ಶೇ.10-20ರಷ್ಟು ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ಜತೆಗೆ ದರ ಏರಿಕೆ ಅನ್ವಯವಾಗಲಿದೆ. ಸರ್ಕಾರದ ಉನ್ನತ ಮೂಲಗಳ ಪ್ರಕಾರ ಕೆಎಸ್‌ಆರ್‌ಟಿಸಿ ಸೇರಿದಂತೆ ಎಲ್ಲ ಮೂರೂ ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಶೇ.8ರಷ್ಟು ಏರಿಸಲು ತೀರ್ಮಾನಿಸಲಾಗಿದೆ. ದರ ಪರಿಷ್ಕರಣೆ ಶನಿವಾರ ಪ್ರಕಟಗೊಳ್ಳುವ ಸಾಧ್ಯತೆಯಿದ್ದು, ಹೊಸ ದರ ಮಧ್ಯರಾತ್ರಿಯಿಂದಲೇ ಜಾರಿಗೊಳ್ಳುವ ಸಂಭವವಿದೆ.
ಎಲ್ಲ ಸಾರಿಗೆ ನಿಗಮಗಳ ಬಸ್ ದರವನ್ನು ಶೇ.5 ರಿಂದ 16ರವರೆಗೂ ಹೆಚ್ಚಿಸಬೇಕೆಂಬ ಪ್ರಸ್ತಾಪ ಮೂರು ತಿಂಗಳ ಹಿಂದೆಯೇ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಅದನ್ನು ಪಕ್ಕಕ್ಕೆ ಇಡಲಾಗಿತ್ತು. ಇದೀಗ ದರ ಪರಿಷ್ಕರಣೆ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗಿದೆ. ಎಲ್ಲ ಸಂಸ್ಥೆಗಳಿಗೂ ಏಕಕಾಲದಲ್ಲೇ ದರ ಪರಿಷ್ಕರಣೆ ಮಾಡಿದ್ದರೆ ಕೆಎಸ್‌ಆರ್‌ಟಿಸಿ ದರ ಕೂಡ ಶೇ.10 ರಿಂದ ಶೇ.13 ವರೆಗೂ ಏರಿಕೆಯಾಗಬೇಕಿತ್ತು. ಆದರೆ ಬಿಎಂಟಿಸಿ ದರ ಏರಿಕೆಗೆ ವ್ಯಕ್ತವಾದ ಆಕ್ಷೇಪಗಳಿಂದ ಎಚ್ಚೆತ್ತ ಸರ್ಕಾರ ಕೆಎಸ್‌ಆರ್‌ಟಿಸಿ ದರವನ್ನು ಕೇವಲ ಶೇ.8ಕ್ಕೆ ಸೀಮಿತಗೊಳಿಸಲು ತೀರ್ಮಾನಿಸಿದೆ. ರಾಜ್ಯದಲ್ಲಿ ಬಿಎಂಟಿಸಿ ಮಾತ್ರವಲ್ಲ. ಕೆಎಸ್‌ಆರ್‌ಟಿಸಿ ಕೂಡ ನಷ್ಟದಲ್ಲಿದೆ. ಆದರೆ ಇಲ್ಲಿ ನಷ್ಟದ ಪ್ರಮಾಣ ಕಡಿಮೆ ಇದೆ. ಹೀಗಾಗಿ ದರ ಏರಿಕೆಯನ್ನೂ ಕಡಿಮೆ ಪ್ರಮಾಣದಲ್ಲಿ ಮಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಹೇಳಿದ್ದಾರೆ.
ಬಸ್ ಪ್ರಯಾಣ ಇಂದಿನಿಂದ ತುಟ್ಟಿ
8% ಕೆಎಸ್‌ಆರ್‌ಟಿಸಿ ಪ್ರಯಾಣ ದರ ಏರಿಕೆ ಸಂಭವ
10-20% ರಜೆ ಹಿನ್ನೆಲೆಯಲ್ಲಿ ಈಗಾಗಲೇ ಹೆಚ್ಚಿನ ದರ ವಸೂಲಿ
5-16% ಹೆಚ್ಚಳಕ್ಕೆ ಸಾರಿಗೆ ನಿಗಮಗಳ ಪ್ರಸ್ತಾಪ
ಇಂದು ದರ ಪರಿಷ್ಕರಣೆ ಪ್ರಕಟಗೊಳ್ಳುವ ಸಾಧ್ಯತೆ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿ
ದರ ಏರಿಕೆ ಸಿದ್ಧತೆ ಮುಗಿದಿದ್ದು, ಶೀಘ್ರ ಪ್ರಕಟಿಸಲಾಗುವುದು. ಬಿಎಂಟಿಸಿ ಪ್ರಯಾಣ ದರವನ್ನು ಶೇ.15 ಏರಿಕೆ ಮಾಡಲಾಗಿತ್ತು. ಈ ಬಗ್ಗೆ ಆಕ್ಷೇಪ ಬಂದಿದ್ದರಿಂದ ಅದರ ಅರ್ಧದಷ್ಟು ಏರಿಕೆ ಮಾಡಲಾಗುತ್ತದೆ. ಪ್ರತಿ ಬಾರಿ ಏರಿಕೆಯನ್ನು ಮಧ್ಯರಾತ್ರಿ ಪ್ರಕಟಿಸಿ ಟೀಕೆಗೆ ಗುರಿಯಾಗುತ್ತಿದ್ದೇವೆ. ಆದ್ದರಿಂದ ಈ ಬಾರಿ ಹಗಲಲ್ಲೇ ಪ್ರಕಟಿಸುತ್ತೇವೆ.
- ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವ
ತುರ್ತು ಬಾಗಿಲು
ರಾಜ್ಯದಲ್ಲಿ ತುರ್ತು ಬಾಗಿಲು ಅಳವಡಿಸದ ಬಸ್ಸುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಬಸ್ ದುರಂತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎಲ್ಲ ಬಸ್ಸುಗಳು ತುರ್ತು ಬಾಗಿಲು ಅಳವಡಿಸುವಂತೆ ನೀಡಿದ್ದ ಗಡುವು ಏಪ್ರಿಲ್ 30ಕ್ಕೆ ಮುಗಿದಿದೆ. ಈಗಾಗಲೇ 100ಕ್ಕೂ ಹೆಚ್ಚು ಬಸ್ಸುಗಳನ್ನು ಹಿಡಿದು ಬಾಗಿಲು ಹಾಕಿಸುವಂತೆ ವರ್ಕ್‌ಶಾಪ್‌ಗಳಿಗೆ ಕಳುಹಿಸಲಾಗುತ್ತಿದೆ. ಇದಲ್ಲದೆ ಸರ್ಕಾರಿ ಸಂಸ್ಥೆಗಳಿಗೇ ಸೇರಿದ ಅನೇಕ ಬಸ್ಸುಗಳು ತುರ್ತು ಬಾಗಿಲು ಅಳವಡಿಸಿಲ್ಲ. ಅವುಗಳನ್ನು ಕೂಡ ಪ್ರಯಾಣಕ್ಕೆ ಬಿಡಲಾಗುತ್ತಿಲ್ಲ ಎಂದರು.