ಬೆಳಗಾವಿಯಲ್ಲಿ ಒಂದೇ ದಿನ 250 ಕೋಟಿ ಮೌಲ್ಯದ ಚಿನ್ನ ಮಾರಾಟ!
ಬೆಳಗಾವಿ: ಅಕ್ಷಯ ತೃತೀಯ ದಿನವಾದ ಶುಕ್ರವಾರ ಒಂದೇ ದಿನ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು 250 ಕೋಟಿ ಮೌಲ್ಯದ ಚಿನ್ನಾಭರಣ ವ್ಯಾಪಾರ ಆಗಿದೆ.
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಚಿನ್ನಾಭರಣ ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿನಿತ್ಯದ ವ್ಯವಹಾರಕ್ಕಿಂತ ಶುಕ್ರವಾರ ಐದರಿಂದ ಹತ್ತು ಪಟ್ಟು ವ್ಯವಹಾರವಾಗಿದೆ ಎಂದು ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಮಾಲೀಕ ಕೆ.ಪಿ. ನಂಜುಂಡಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ನಗರದ ವಿವಿಧ ಚಿನ್ನದ ಅಂಗಡಿಗಳು ಗ್ರಾಹಕರಿಂದ ತುಂಬಿತುಳುಕುತ್ತಿದ್ದವು. ಎಲ್ಲರೂ ಮುಗಿಬಿದ್ದು ಚಿನ್ನಾಭರಣಗಳನ್ನು ಖರೀದಿ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಚಿನ್ನದ ಆಭರಣಗಳಿಗೆ ಹೆಸರುವಾಸಿಯಾದ ಶಹಾಪುರ, ಖಡೇಬಜಾರ, ಪಾಂಗುಳ ಗಲ್ಲಿ, ಗಣಪತಿ ಗಲ್ಲಿ ಮತ್ತಿತರ ಪ್ರದೇಶಗಳಲ್ಲಿರುವ ಚಿನ್ನದ ಅಂಗಡಿಗಳಲ್ಲಿ ಚಿನ್ನದ ಖರೀದಿ ಭರಾಟೆ ಜೋರಾಗಿತ್ತು. ಗಂಟೆಗಟ್ಟಲೇ ಕಾಯ್ದು ಗ್ರಾಹಕರು ಚಿನ್ನ ಖರೀದಿಸಿದರು. ಗಂಟೆಗಟ್ಟಲೇ ನಿಂತು ನಿಂತು ಸುಸ್ತಾಗಿದ್ದರೂ ದೃತಿಗೆಡದೇ ಸರದಿಯ ಸಾಲಿನಲ್ಲಿ ನಿಂತು ತಮಗಿಷ್ಟವಾದ ಚಿನ್ನಾಭರಣ ಖರೀದಿಸಿದರು. ಚಿನ್ನಾಭರಣ ಖರೀದಿಯ ನಂತರ ದ್ವಿಚಕ್ರ ವಾಹನಗಳ ಖರೀದಿ ಭರಾಟೆಯೂ ಕೂಡ ಭರ್ಜರಿಯಾಗಿಯೇ ನಡೆದಿದೆ.