ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮತಸಮರ ಎದುರಿಸಲಾಗದ ವಿಕ್ರಮಾದಿತ್ಯ

ಎಂಥಾ ಸಮರ ವನ್ನೂ ಸಮರ್ಥವಾಗೆದುರಿಸಬಲ್ಲ ಐಎನ್‌ಎಸ್ ವಿಕ್ರಮಾದಿತ್ಯ..

Vishwanath S
Updated On : 3 May 2014, 2:35 am

ಕಾರವಾರ: ವಿಮಾನ ವಾಹಕ ಬೃಹತ್ ಯುದ್ಧನೌಕೆ, ಎಂಥಾ ಸಮರ ವನ್ನೂ ಸಮರ್ಥವಾಗೆದುರಿಸಬಲ್ಲ ಐಎನ್‌ಎಸ್ ವಿಕ್ರಮಾದಿತ್ಯ ಚುನಾವಣಾ ಸಮರ ಎದುರಿಸಲಾಗದೆ ಲಂಗರು ಹಾಕಿದೆ.
ದೇಶಕ್ಕೆ ಜ. 7ಕ್ಕೆ ಆಗಮಿಸಿದ್ದರೂ ಇದುವರೆಗೂ ಅಧಿಕೃತ ಸಮಾರಂಭ ನಡೆಸಲು ಸಾಧ್ಯವಾಗಿಲ್ಲ.
ಐಎನ್‌ಎಸ್ ವಿಕ್ರಮಾದಿತ್ಯದ ಸಮಾರಂಭವೇನೂ ರಾಜಕೀಯಕ್ಕೆ ಸಂಬಂಧಪಟ್ಟಿದ್ದಲ್ಲ. ಚುನಾವಣೆ ನೀತಿ ಸಂಹಿತೆಯೂ ಅಡ್ಡಿಯಾಗದು. ಆದರೆ ಪ್ರಧಾನಿ ಆದಿಯಾಗಿ ಮುಖ್ಯಮಂತ್ರಿ ತನಕ ಎಲ್ಲರೂ ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲೆಡೆ ಚುನಾವಣೆ ಮುಗಿದಿಲ್ಲ. ಹೀಗಾಗಿ ವಿಶೇಷ ವಿಮಾನ, ಹೆಲಿಕಾಪ್ಟರ್ ಹೀಗೆ ಯಾವುದರಲ್ಲೇ ಬಂದರೂ ಒಂದು ಇಡೀ ದಿನ ಬೇಕು. ಮೇಲಾಗಿ ನೀತಿ ಸಂಹಿತೆಯ ಭಯ. ಹೀಗಾಗಿ ಐಎನ್‌ಎಸ್ ವಿಕ್ರಮಾದಿತ್ಯ ಕಾರವಾರಕ್ಕೆ ಆಗಮಿಸಿ ನಾಲ್ಕು ತಿಂಗಳಾಗಿದೆ.
ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ನವೆಂಬರ್ 2013ರಲ್ಲಿ ರಷ್ಯಾಕ್ಕೆ ಹೋಗಿ ಅಲ್ಲೇ ಯುದ್ಧ ನೌಕೆಯನ್ನು ಭಾರತಕ್ಕೆ ಹಸ್ತಾಂತರ ಮಾಡಿಕೊಂಡಿದ್ದರು. ಅದಾದ ಮೇಲೆ ಒಂದೂವರೆ ತಿಂಗಳ ಕಾಲ ಕ್ರಮಿಸಿ, ಜ.7ರಂದು ಭಾರಿ ಭದ್ರತೆಯಲ್ಲಿ ಕಾರವಾರಕ್ಕೆ ಆಗಮಿಸಿ ಲಂಗರು ಹಾಕಿತು. ಆದರೆ ನೌಕೆಯೊಂದಿಗೆ ರಷ್ಯಾದಿಂದ ತರಬೇತಿ ನೀಡಲು 100ಕ್ಕೂ ಹೆಚ್ಚು ಪರಿಣತರು ಆಗಮಿಸಿದ್ದರು. ಅರಬ್ಬಿ ಸಮುದ್ರದಲ್ಲಿ ತಿಂಗಳ ಕಾಲ ಭಾರತೀಯ ನಾವಿಕರು ಹಾಗೂ ಅಧಿಕಾರಿಗಳಿಗೆ ತರಬೇತಿಯೂ ನಡೆಯಿತು.
ಆನಂತರ ವಿಕ್ರಮಾದಿತ್ಯದಲ್ಲಿ ಚಿಕ್ಕಪುಟ್ಟ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಅದರ ದುರಸ್ತಿಯೂ ಯಶಸ್ವಿಯಾಗಿ ನಡೆಯಿತು. ಅದಾದ ಮೇಲೆ ಭಾರತೀಯ ಯುದ್ಧ ವಿಮಾನಗಳನ್ನು ನೌಕೆಗೆ ಅಳವಡಿಸಲು ಅಲ್ಪಸ್ವಲ್ಪ ಬದಲಾವಣೆ ನಡೆಸಲಾಯಿತು. ಇನ್ನೇನು ಅಧಿಕೃತ ಸಮಾರಂಭಕ್ಕೆ ಮುಹೂರ್ತ ನಿಗದಿ ಮಾಡಬೇಕೆನ್ನುವಷ್ಟರಲ್ಲಿ ಚುನಾವಣೆ ದಿನಾಂಕ ನಿಗದಿಯಾಯಿತು. ನೀತಿ ಸಂಹಿತೆಯೂ ಜಾರಿಯಾಯಿತು.
ಸಮಾರಂಭ ಎಲ್ಲಿ?
ತೇಲುವ ನಗರ ಎಂದೆ ಖ್ಯಾತಿಯಾದ ವಿಕ್ರಮಾದಿತ್ಯ ನೌಕೆ ಸಮಾರಂಭ ಎಲ್ಲಿ ಮಾಡಬೇಕೆನ್ನುವ ಬಗ್ಗೆಯೂ ರಕ್ಷಣಾ ಇಲಾಖೆ ತಲೆ ಕೆಡಿಸಿಕೊಂಡಿದೆ. ಪ್ರಧಾನಿ ಅಥವಾ ರಾಷ್ಟ್ರಪತಿ ಬರುವುದಾದರೆ ಮುಂಬಯಿಯಲ್ಲಿ ಮಾಡಿದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ಕೆಲವರದ್ದು. ಏಷ್ಯಾದಲ್ಲಿಯೇ ಅತಿ ದೊಡ್ಡ ನೌಕಾನೆಲೆ ಕಾರವಾರದ ಸೀಬರ್ಡ್ ಆಗಿದ್ದು, ವಿಕ್ರಮಾದಿತ್ಯ ಇಲ್ಲೇ ತಂಗಲಿರುವುದರಿಂದ ಇಲ್ಲೇ ಸಮಾರಂಭ ಮಾಡಬೇಕೆಂಬ ಬಗ್ಗೆ ಒಲವು ವ್ಯಕ್ತವಾಗಿದೆ. ಈ ನಡುವೆ ವಿಕ್ರಮಾದಿತ್ಯ ವಿಶಾಖಪಟ್ಟಣಕ್ಕೂ ಭೇಟಿ ನೀಡಿದೆ.


-ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement