ಮೋದಿಯೇ ಉಗ್ರರ ಟಾರ್ಗೆಟ್, ಪಟನಾ, ಚೆನ್ನೈ ಸ್ಫೋಟದ ಹೋಲಿಕೆ, ಬೆಂಗ್ಳೂರಲ್ಲೇ ಬಾಂಬ್ ಫಿಕ್ಸ್
ಬೆಂಗಳೂರು- ಗುವಾಹಟಿ ಎಕ್ಸ್ಪ್ರೆಸ್ ರೈಲು ಸ್ಫೋಟದ ಗುರಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೇ ಆಗಿದ್ದರು ಎನ್ನುವುದಕ್ಕೆ ಸುಳಿವು ಸಿಕ್ಕಿದೆ...
ಚೆನ್ನೈ: ಬೆಂಗಳೂರು- ಗುವಾಹಟಿ ಎಕ್ಸ್ಪ್ರೆಸ್ ರೈಲು ಸ್ಫೋಟದ ಗುರಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೇ ಆಗಿದ್ದರು ಎನ್ನುವುದಕ್ಕೆ ಸುಳಿವು ಸಿಕ್ಕಿದೆ. ಮೋದಿ ಅವರ ಪಟನಾ ರ್ಯಾಲಿಯಲ್ಲಿ ನಡೆದ ಸ್ಫೋಟಕ್ಕೂ ಚೆನ್ನೈ ಅವಳಿ ಸ್ಫೋಟಕ್ಕೂ ಸಾಮ್ಯತೆಗಳಿವೆ ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ನೊಡುವೆ, ಚೆನ್ನೈ ಸ್ಫೋಟಕ್ಕೂ ಬೆಂಗಳೂರಿಗೂ ನೇರ ನಂಟೂ ಬಯಲಾಗಿದೆ. ರೈಲಿಗೆ ಬೆಂಗಳೂರಲ್ಲೇ ಬಾಂಬ್ ಅಳವಡಿಸಲಾಗಿತ್ತು. ಇದಕ್ಕೆ ಬೆಂಗಳೂರಿನ ಉಗ್ರರೇ ನೆರವು ನೀಡಿದ ಅನುಮಾನವೂ ಇದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಸಿಬಿ- ಸಿಐಡಿ ಪೊಲೀಸರ ತಂಡ ಶುಕ್ರವಾರ ಬೆಂಗಳೂರಿಗೆ ದೌಡಾಯಿಸಿದೆ. ಸೆಂಟ್ರಲ್ ರೇಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ.
ಗಾಯಾಳುಗಳು ಚೇತರಿಕೆ
ಅವಳಿ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ 14 ಮಂದಿ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. ಗಾಯಾಳುಗಳಲ್ಲಿ ಕೆಲವರು ಕನ್ನಡಿಗರೂ ಇದ್ದಾರೆ.
ಬಾಂಬ್ ಬೆದರಿಕೆ ಕರೆ
ಚೆನ್ನೈ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಪೊಲೀಸರಿಗೆ ಬಾಂಬ್ ಬೆದರಿಕೆ ಹುಸಿ ಕರೆಗಳ ಕಾಟ ಶುರುವಾಗಿದೆ. ನಗರದ ಪ್ರಮುಖ ಶಾಪಿಂಗ್ ಮಾಲ್, ಶಿಕ್ಷಣ ಸಂಸ್ಥೆ ಮತ್ತು ಉಪನಗರದ ರೇಲ್ವೆ ನಿಲ್ದಾಣಕ್ಕೆ ಹುಸಿ ಬೆದರಿಕೆ ಕರೆಗಳು ಬಂದಿವೆ. ಇದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ದ.ಭಾರತದಲ್ಲಿ ನೆಟ್ವರ್ಕ್ ಸಂಚು
ಕಳೆದ ವಾರವಷ್ಟೇ ಚೆನ್ನೈ ಪೊಲೀಸರ ಬಲೆಗೆ ಬಿದ್ದ ಶಂಕಿತ ಐಎಸ್ಐ ಏಜೆಂಟ್ ಮೊಹಮ್ಮದ್ ಝಾಹೀರ್ ಹುಸೇನ್ ದಕ್ಷಿಣ ಭಾರತದಾದ್ಯಂತ ನೆಟ್ವರ್ಕ್ ಸ್ಥಾಪಿಸಲು ಬಯಸಿದ್ದ. ಈ ಮೂಲಕ ನಕಲಿ ಕರೆನ್ಸಿ ಚಲಾವಣೆ ಸೇರಿದಂತೆ ಮತ್ತಿತರ ಅಕ್ರಮ ಚಟುವಟಿಕೆ ನಡೆಸಲುದ್ದೇಶಿಸಿದ್ದ. ಇದಕ್ಕಾಗಿ ಕಮಿಷನ್ ಆಸೆ ನೀಡಿ ಯುವಕರನ್ನು ನೇಮಕಮಾಡಿಕೊಳ್ಳುತ್ತಿದ್ದ ಎನ್ನುವ ವಿಚಾರವನ್ನು ವಿಚಾರಣೆ ವೇಳೆ ಹುಸೇನ್ ಬಹಿರಂಗಪಡಿಸಿದ್ದಾನೆ. ಈತ ನೀಡಿದ ಮಾಹಿತಿಯಂತೆ ಮೊಹಮ್ಮದ್ ಸಲೀಂ ಮತ್ತು ಶಿವಬಾಲನ್(ಶ್ರೀಲಂಕಾ ಪ್ರಜೆ)ನನ್ನು ಗುರುವಾರ ರಾತ್ರಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಇಬ್ಬರನ್ನೂ ಶುಕ್ರವಾರ ರಾತ್ರಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಚೆನ್ನೈಗೆ ತೆರಳಲಿದೆ ಎನ್ಐಎ
ಬೆಂಗಳೂರು- ಗುವಾಹಟಿ ರೈಲು ಸ್ಫೋಟ ಹಿನ್ನೆಲೆಯಲ್ಲಿ ಎನ್ಐಎ ಅನ್ನು ಚೆನ್ನೈಗೆ ಕಳುಹಿಸಿ ಕೊಡುವುದಾಗಿ ಕೇಂದ್ರ ಸರ್ಕಾರ ಖಚಿತಪಡಿಸಿದೆ. ತಮಿಳುನಾಡು ಸರ್ಕಾರಕ್ಕೆ ನೀಡಿದ ಭರವಸೆಯಂತೆ ಎನ್ಐಎ ತಂಡ ಸ್ಫೋಟಕ್ಕೆ ಸಂಬಂಧಿಸಿ ಮಾದರಿಯನ್ನಷ್ಟೇ ಸಂಗ್ರಹಿಸಲಿದೆ. ತಮಿಳುನಾಡು ಸರ್ಕಾರ ಒಪ್ಪಿಗೆ ಸಿಕ್ಕಬಳಿಕವಷ್ಟೇ ತನಿಖೆಗೆ ಕೈಹಾಕಲಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ ಸ್ಪಷ್ಟಪಡಿಸಿದ್ದಾರೆ.
ಮೋದಿ ರ್ಯಾಲಿ ಸ್ಥಳದಲ್ಲಿ ಅನುಮಾನಾಸ್ಪದ ವಾಹನ
ಉತ್ತರಪ್ರದೇಶದ ಖಾಲಿಲಾಬಾದ್ನ ನರೇಂದ್ರ ಮೋದಿ ರ್ಯಾಲಿ ಸ್ಥಳದ ಸಮೀಪ ಶಂಕಾಸ್ಪದ ವಾಹನವೊಂದು ಪತ್ತೆಯಾಗಿದೆ. ಇದರಿಂದ ಮೋದಿ ಭದ್ರತೆ ಕುರಿತು ಹೆಚ್ಚಿನ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿಗೆ ನೀಡಲಾಗುತ್ತಿರುವ ಭದ್ರತೆಯನ್ನು ಹೆಚ್ಚಿಸುವಂತೆ ಬಿಜೆಪಿ ಆಗ್ರಹಿಸಿದೆ.
ಎನ್ಎಸ್ಜಿ ತಂಡ ಸ್ಥಳಕ್ಕೆ ಆಗಮನ
ತಮಿಳುನಾಡು ಸರ್ಕಾರದ ವಿರೋಧದ ಹೊರತಾಗಿಯೂ ಆರು ಮಂದಿಯಿರುವ ಕೇಂದ್ರದ ಎನ್ಎಸ್ಜಿ ತಂಡ ಶುಕ್ರವಾರ ಚೆನ್ನೈಗೆ ಆಗಮಿಸಿ ತಮಿಳುನಾಡು ಪೊಲೀಸರ ಜತೆಗೆ ಮಾತುಕತೆ ನಡೆಸಿದೆ. ಎನ್ಎಸ್ಜಿ ಕಮಾಂಡೋಗಳು ಬಾಂಬ್ ಸ್ಫೋಟಗೊಂಡ ಕೋಚ್ಗಳನ್ನು ಪರಿಶೀಲಿಸಿದ್ದು, ಕೆಲ ಸ್ಯಾಂಪಲ್ಗಳನ್ನು ಸಂಗ್ರಹಿಸಿದೆ.