ವೈದ್ಯ ಅಕಾಡೆಮಿ ಕನಸು ನನಸಾಗುತ್ತಾ?
ಶಿವಮೊಗ್ಗ: ನಾಡಿನ ವಿವಿಧ ಕ್ಷೇತ್ರ, ಭಾಷಿಗರು, ಸಾಹಿತ್ಯ ಪ್ರಭೇದಗಳನ್ನು ಪ್ರತಿನಿಧಿಸುವ ಅಕಾಡೆಮಿಗಳು ಸರ್ಕಾರದ ನೆರಳಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಪಟ್ಟಿಗೆ ಮತ್ತೊಂದು ಅಕಾಡೆಮಿ ಸೇರ್ಪಡೆಯಾಗುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಅದುವೇ ರಾಜ್ಯದ ಸಮಸ್ತ ವೈದ್ಯರನ್ನು ಪ್ರತಿನಿಧಿಸುವ ವೈದ್ಯ ಅಕಾಡೆಮಿ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ವೈದ್ಯ ಸಮುದಾಯದ ಆಶಯಕ್ಕೆ ಪೂರಕವಾಗಿ ಮಾತನಾಡಿದ್ದು, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಅಕಾಡೆಮಿ ಕುರಿತಂತೆ ಪ್ರಕ್ರಿಯೆಗಳು ಆರಂಭವಾಗುವ ಸಾಧ್ಯತೆ ಇದೆ.
ವೈದ್ಯ ಅಕಾಡೆಮಿಯ ಪ್ರಸ್ತಾವನೆ ಹುಟ್ಟಿದ್ದು ಶಿವಮೊಗ್ಗದಲ್ಲಿ. ಮನೋವೈದ್ಯ ಅಶೋಕ್ ಪೈ ನೇತೃತ್ವದ ವೈದ್ಯರ ತಂಡ ಸರ್ಕಾರದ ಮಟ್ಟದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದೆ. ಅದಕ್ಕಿಂತ ಮುಖ್ಯವಾಗಿ ವೈದ್ಯ ಅಕಾಡೆಮಿ ಧ್ಯೇಯೋದ್ದೇಶ, ನಿರೀಕ್ಷೆಗಳ ಬಗ್ಗೆ ಹಲವು ಸುತ್ತು ಆಲೋಚಿಸಿ ಹೆಜ್ಜೆ ಇಟ್ಟಿದೆ. ಆರೋಗ್ಯ ಸಚಿವರಿಗೆ ಅಕಾಡೆಮಿಯ ಅವಶ್ಯಕತೆಯನ್ನೂ ಮನವರಿಕೆ ಮಾಡಿಕೊಟ್ಟಿದೆ.
ಏಕೆ ಬೇಕು ವೈದ್ಯ ಅಕಾಡೆಮಿ: ವೈದ್ಯಕೀಯ ಸೇವೆ ಕುರಿತಂತೆ ಎಷ್ಟೇ ಟೀಕೆ ಟಿಪ್ಪಣಿ ಬಂದರೂ, ಅದೊಂದು ಸಮಾಜಮುಖಿ ಕಾರ್ಯ. ನಾಡಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೈದ್ಯರಿದ್ದಾರೆ. ಆದರೆ, ಸರ್ಕಾರದ ಮಟ್ಟದಲ್ಲಿ ವೈದ್ಯರನ್ನು ಪ್ರತಿನಿಧಿಸುವ ವ್ಯವಸ್ಥೆಗಳು ಈವರೆಗೆ ಆಗಿಲ್ಲ. ರಾಜ್ಯೋತ್ಸವ ಪ್ರಶಸ್ತಿ ವೇಳೆ ವೈದ್ಯರಿಬ್ಬರಿಗೆ ಪ್ರಶಸ್ತಿ ನೀಡಿ ಕೈತೊಳೆದುಕೊಳ್ಳುವ ಸಂಪ್ರದಾಯ ಬಂದಿದೆ. ವೈದ್ಯರ ಮೇಲೆ ಹಲ್ಲೆ ನಡೆಯಕೂಡದು ಎಂದು ಕಾನೂನು ತಂದಿದ್ದರ ಹೊರತಾಗಿ ವೈದ್ಯರ ಪ್ರತಿನಿಧಿತ್ವ ಅಥವಾ ಧ್ವನಿ ಸರ್ಕಾರದ ಮಟ್ಟದಲ್ಲಿಲ್ಲ. ಈ ಕಾರಣಕ್ಕೆ ವೈದ್ಯ ಅಕಾಡೆಮಿ ಬೇಕು ಎಂದು ಹೇಳುತ್ತಾರೆ ಡಾ. ಅಶೋಕ್ ಪೈ.
ಅಕಾಡೆಮಿ ಕಲ್ಪನೆ
* ಕರ್ನಾಟಕದಲ್ಲಿರುವ ಸಮಸ್ತ ವೈದ್ಯರ ಹಿತಾಸಕ್ತಿ ಕಾಪಾಡುವುದು ಹಾಗೂ ಸರ್ಕಾರದ ಮಟ್ಟದಲ್ಲಿ ವೈದ್ಯರ ಧ್ವನಿಯಾಗಿರುವುದು
* ವೈದ್ಯಕೀಯ ಜ್ಞಾನ ಶಾಖೆಯಲ್ಲಿ ಮೂಡಿಬರುತ್ತಿರುವ ಹೊಸ ಹೊಸ ಸಂಶೋಧನೆಗಳು, ಆವಿಷ್ಕಾರಗಳನ್ನು ಜನರಿಗೆ ತಲುಪಿಸುವುದು
* ಪಂಡಿತರಿಂದ ಪಾಮರರಿಗೆ ಎಂಬಂತೆ ಪ್ರಜೆಗಳಿಗೆ ವೈದ್ಯಕೀಯ ಸಾಕ್ಷರತೆಗೆ ಒತ್ತು ನೀಡುವುದು
* ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟ ಕೃತಿಗಳನ್ನು ಹೊರತರವುದು
* ವೈದ್ಯಕೀಯ ಕಾರ್ಯಾಗಾರ ವಿಚಾರ ಸಂಕಿರಣ ಕಮ್ಮಟ ನಡೆಸಿ, ವೈದ್ಯರ ಜ್ಞಾನಾರ್ಜನೆಗೆ ಅವಕಾಶ ಮಾಡಿಕೊಡುವುದು
* ರೋಗಿಗಳ ಹಿತಾಸಕ್ತಿಯನ್ನು ವೈದ್ಯರ ಮೂಲಕ ಕಾಪಾಡುವ ಪ್ರಯತ್ನ
* ನಾಡಿನ ಸಮಾಜಮುಖಿ ಹಿರಿಯ ವೈದ್ಯರನ್ನು ಗುರುತಿಸಿ ಗೌರವಿಸುವುದು
ಪ್ರಯತ್ನಗಳೇನೇನು: ಆರೋಗ್ಯ ಸಚಿವ ಯು.ಟಿ.ಖಾದರ್ ಮೂಲಕವೇ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಡಲಾಗಿದೆ. ಮುಂದಿನ ಹಂತದಲ್ಲಿ ಅಧಿಕೃತವಾಗಿ ಐಎಂಎ ರಾಜ್ಯ ಘಟಕದ ನೇತೃತ್ವದಲ್ಲಿ ಪ್ರಯತ್ನಗಳು ನಡೆಯುತ್ತವೆ ಎಂಬುದು ಡಾ. ಅಶೋಕ್ ಪೈ ವಿವರಣೆ.
ಶಿವಮೊಗ್ಗ ಐಎಂಎ ಹುಟ್ಟುಹಾಕಿದ ವೈದ್ಯ ಅಕಾಡೆಮಿ ಪ್ರಸ್ತಾಪವು ಖಂಡಿತವಾಗಿ ಗಟ್ಟಿಗೊಂಡು ನಾಡಿನ ಸಮಸ್ತ ವೈದ್ಯ ಸಮುದಾಯವನ್ನು ಪ್ರತಿನಿಧಿಸುವುದರಲ್ಲಿ ಅನು ಮಾನವಿಲ್ಲ ಎಂದು ಅವರು ತಿಳಿಸಿದರು.
ಮೇ ಅಂತ್ಯದ ವೇಳೆ ಐಎಂಎ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಾಗುತ್ತದೆ. ಅಕಾಡೆಮಿಯ ಕುರಿತು ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಅಧಿಕೃತ ಪ್ರಯತ್ನ ನಡೆಸಲಾಗುತ್ತದೆ. ಸರ್ಕಾರ ವೈದ್ಯ ಸಮುದಾಯದ ಆಶಯವನ್ನು ಒಪ್ಪಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಕನ್ನಡಪ್ರಭ ಕಾಳಜಿ
ಸರ್ಕಾರದ ಅನುದಾನದಲ್ಲಿ ಸುಮಾರು 40ಕ್ಕೂ ಹೆಚ್ಚು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಬೆರಳೆಣಿಕೆಯಷ್ಟು ಅಕಾಡೆಮಿಗಳು ಮಾತ್ರ ತಮ್ಮ ವ್ಯಾಪ್ತಿಯೊಳಗೆ, ಸಿಕ್ಕ ಅನುದಾನದಲ್ಲಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿವೆ. ಉಳಿದ ಅಕಾಡೆಮಿಗಳು ವರ್ಷಕ್ಕೆ ಒಮ್ಮೆ ಪ್ರಶಸ್ತಿ ನೀಡುವುದು, ಸಭೆ ನಡೆಸುವುದು, ಅಧ್ಯಕ್ಷರ ಕಾರು ಓಡಾಟಕ್ಕಷ್ಟೇ ಸೀಮಿತ ಎಂಬಂತಾಗಿದೆ. ಅನುದಾನ ಸಾಕಷ್ಟು ಸಿಗುವುದಿಲ್ಲ ಎಂದು ಅಕಾಡೆಮಿಗಳ ಅಧ್ಯಕ್ಷರು ಹೇಳಿಕೊಂಡು ಗಂಜಿಕೇಂದ್ರ- ಲೆಟರ್‌ಹೆಡ್ಡಾಗಿ ಅಕಾಡೆಮಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಸಾಲಿಗೆ ವೈದ್ಯ ಅಕಾಡೆಮಿ ಸೇರಬಾರದು ಎಂಬುದು 'ಕನ್ನಡಪ್ರಭ'ದ ಆಶಯ.
-ಶ್ರೀಕಾಂತ ಭಟ್