ಸ್ಪೈಸ್ ಪಾರ್ಕ್ಗೆ ಕೃಷಿಭೂಮಿ ಮೇಲೆ ಕಣ್ಣು
ಹಾವೇರಿ: ಅನ್ನದಾತನ ಸಮ್ಮತಿ ಇಲ್ಲದಿದ್ದರೂ ಫಲವತ್ತಾದ ಭೂಮಿ ಕಸಿದುಕೊಳ್ಳುವ ಸರ್ಕಾರದ ಕಾರ್ಯ ಮುಂದುವರಿದಿದೆ. ಭೂಸ್ವಾಧೀನ ಮಾಡಿಕೊಳ್ಳಲು ಸರ್ಕಾರ ರೈತರಿಗೆ ನೋಟಿಸ್ ಜಾರಿ ಮಾಡಿರುವ ಪರಿಣಾಮ ರೈತರು ನಾಲ್ಕು ವರ್ಷಗಳಿಂದ ಭೂಮಿ ಅಭಿವೃದ್ಧಿ ಮಾಡಲಾಗದೆ, ಮಾರಾಟ ಮಾಡಲೂ ಆಗದೆ ಪರಿತಪಿಸುವಂತಾಗಿದೆ.
ಜಿಲ್ಲೆಯ ಬ್ಯಾಡಗಿ ತಾಲೂಕಿನ ರೈತರು ಸರ್ಕಾರದ ಭೂಮಿ ಕಸಿದುಕೊಳ್ಳುವ ಆಟಕ್ಕೆ ಬುಗುರಿಯಂತಾಗಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ಬ್ಯಾಡಗಿ ಮೆಣಸಿನಕಾಯಿಗೆ ಇನ್ನಷ್ಟು ಉತ್ತೇಜನ ನೀಡುವುದಕ್ಕಾಗಿ ರಾಜ್ಯ ಬಿಜೆಪಿ ಸರ್ಕಾರ ಬ್ಯಾಡಗಿಯಲ್ಲಿ ಸ್ಪೈಸ್ ಪಾರ್ಕ್ ಸ್ಥಾಪನೆ ಘೋಷಣೆ ಮಾಡಿತ್ತು. ಅದಕ್ಕಾಗಿ 120 ಎಕರೆ ಕೃಷಿ ಭೂಮಿಯನ್ನು ಗುರುತಿಸಿತ್ತು. ಆರಂಭಿಕವಾಗಿ ಪಾರ್ಕ್ ಸ್ಥಾಪನೆಗೆ ರು. 10 ಕೋಟಿಗಳನ್ನು ಬಜೆಟ್ನಲ್ಲಿ ಮೀಸಲಿಟ್ಟಿತ್ತು. ಗುರುತಿಸಲಾದ ಈ ಭೂಮಿಯನ್ನು ಎಷ್ಟು ದರಕ್ಕೆ ಖರೀದಿಸಬೇಕು ಎಂಬುದು ಇನ್ನೂ ಗೊಂದಲದಲ್ಲಿರುವಾಗಲೇ ಕೆಐಎಡಿಬಿ ಮೂಲಕ ಜಮೀನಿನ ಮಾಲೀಕರಿಗೆ ನೋಟಿಸ್ ಹೊರಡಿಸಲಾಗಿದೆ. ಸರ್ಕಾರಕ್ಕೆ ಭೂಸ್ವಾಧೀನ ಆಟವಾದರೆ, ರೈತರಿಗೆ ಪ್ರಾಣ ಸಂಕಟವಾಗಿ ಪರಿಣಮಿಸಿದೆ.
ಸಂಕಷ್ಟದಲ್ಲಿ ರೈತರು: ಕೆಐಎಡಿಬಿಯ ಈ ನೋಟಿಸ್ ಪ್ರಕಾರ ಸ್ಪೈಸ್ ಪಾರ್ಕ್ಗೆ ಗುರುತಿಸಟಿಜ್ಟ ಜಾಗೆಯ ಮಾಲೀಕರು ಆ ಜಮೀನನ್ನು ಬೇರೆಯವರಿಗೆ ಮಾರುವಂತಿಲ್ಲ. ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡುವಂತಿಲ್ಲ. ಸಾಲ ಮಾಡಿ ಕೃಷಿ ಮಾಡೋಣ ಎಂದರೆ ಕೃಷಿ ಸಾಲವೂ ದೊರಕುತ್ತಿಲ್ಲ. ಇಂಥ ಸಂಕಷ್ಟದ ಸುಳಿಯಲ್ಲಿ ಬ್ಯಾಡಗಿಯ 22 ರೈತರು ಸಿಲುಕಿದ್ದಾರೆ. ಸರ್ಕಾರ ಈ ಅವೈಜ್ಞಾನಿಕ ನಿರ್ಧಾರದಿಂದಾಗಿ ರೈತರಿಗೆ ಈಗ ಕೃಷಿ ಸಾಲ ಸಿಗುತ್ತಿಲ್ಲ. ಸರ್ಕಾರದ ಯಾವುದೇ ಕೃಷಿ ಸೌಲಭ್ಯಗಳು ಈ ರೈತರಿಗೆ ದೊರಕುತ್ತಿಲ್ಲ. ಇದರಿಂದಾಗಿ ಅಲ್ಲಿನ ರೈತರು ಆತಂಕಕ್ಕೋಳಗಾಗಿದ್ದಾರೆ.
ರೈತರಿಗೆ ನೋಟಿಸ್: ಸ್ಪೈಸ್ ಪಾರ್ಕ್ ಸ್ಥಾಪನೆಗೆ ಅಗತ್ಯವಿರುವ 120 ಎಕರೆ ಜಮೀನನ್ನು ರೈತರಿಂದ ಸ್ವಾಧೀನ ಪಡಿಸಿಕೊಳ್ಳುವಂತೆ ಸೂಚನೆಯನ್ನೂ ಸರ್ಕಾರ ನೀಡಿತು. ಅದರಂತೆ ಬ್ಯಾಡಗಿಯಲ್ಲಿ 120 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕಾಗಿ 2008ರ ಡಿಸೆಂಬರ್ನಲ್ಲಿ ಕೆಐಎಡಿಬಿಯಿಂದ ರೈತರಿಗೆ ನೋಟಿಸ್ ನೀಡಲಾಯಿತು. ದರ ಕುರಿತಂತೆ ಮೂರು ಬಾರಿ ಸಭೆಗಳನ್ನು ನಡೆಸಲಾಯಿತು.
ಕೊನೆಗೆ ಅನೇಕ ರೈತರ ಅಸಮ್ಮತಿಯ ನಡುವೆಯೂ ಪ್ರತಿ ಎಕರೆಗೆ ರು. 12 ಲಕ್ಷ ನಿಗದಿಪಡಿಸಿ ಜಿಲ್ಲಾಡಳಿತ ಕೆಐಎಡಿಬಿಗೆ ಕಳುಹಿಸಿರುವುದು ಈಗ ಇತಿಹಾಸ. ಸ್ಪೈಸ್ ಪಾರ್ಕ್ ನಿರ್ಮಿಸಲು ಉದ್ದೇಶಿಸಿರುವ ಜಾಗೆಯ ಸರ್ವೇ ನಂಬರ್ಗಳನ್ನು ನಮೂದಿಸಿ, ಇಲ್ಲಿ ಮಾಲೀಕರು ಕೆಐಎಡಿಬಿ ಅನುಮತಿಯಿಲ್ಲದೆ ಬೇರೆ ಯಾರಿಗೂ ಮಾರಾಟ ಮಾಡುವಂತಿಲ್ಲ. ಭೂಮಿಯಲ್ಲಿ ಯಾವುದೇ ಅಭಿವೃದ್ಧಿಯನ್ನೂ ಮಾಡುವಂತಿಲ್ಲ ಎಂದು ಕೆಐಎಡಿಬಿ ಸೂಚನೆ ನೀಡಿದೆ.
ಈ ಕಾರಣದಿಂದಾಗಿ ಮೂರು ವರ್ಷಗಳಿಂದ ಸ್ಪೈಸ್ ಪಾರ್ಕ್ಗಾಗಿ ಗುರುತಿಸಲಾದ ಭೂಮಿಯ 22 ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ. ಇತ್ತ ಕೃಷಿ ಮಾಡಲು ಸಾಲ ಸಿಗುತ್ತಿಲ್ಲ. ಮಾರಾಟ ಮಾಡಲು ನಿರ್ಧರಿಸಿರುವ ದರದ ಬಗ್ಗೆಯೂ ಸಮ್ಮತಿಯಿಲ್ಲ. ಹೀಗಾಗಿ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ಭೂಮಿ ಕೊಡಲು ವಿರೋಧ
ಜಮೀನು ಮಾರಾಟ ದರದ ಬಗ್ಗೆ ರೈತರು ಸಂಪೂರ್ಣ ಸಮ್ಮತಿ ನೀಡಿಲ್ಲ. ಮಾರಾಟ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ. ಹೀಗಿರುವಾಗ ರೈತರ ಜಮೀನಿನ ಸರ್ವೇ ಕ್ರಮಾಂಕ ನಮೂದಿಸಿ ಕೆಐಎಡಿಬಿಯವರು ನೋಟಿಸ್ ಹೊರಡಿಸಿರುವುದು ರೈತರು ತೊಂದರೆಗೊಳಗಾಗುವಂತೆ ಮಾಡಿದೆ. ಇಲ್ಲಿನ ಜಮೀನುಗಳಿಗೆ ಪ್ರತಿ ಎಕರೆಗೆ ಕೇವಲ ರು. 12 ಲಕ್ಷ ನಿಗದಿಪಡಿಸಲಾಗಿದೆ. ಇದು ಅವೈಜ್ಞಾನಿಕ. ಊರಿಗೆ ಸಮೀಪವಿರುವ ಫಲವತ್ತಾದ ಕೃಷಿ ಭೂಮಿ. ಎಕರೆಗೆ ಕನಿಷ್ಠ ರು. 30 ಲಕ್ಷ ಬೆಲೆ ಬಾಳುತ್ತದೆ. ಅದನ್ನು ತಾವು ಸ್ಪೈಸ್ ಪಾರ್ಕ್ಗೆ ನೀಡುವುದಿಲ್ಲ ಎಂಬುದು ರೈತರ ಒಕ್ಕೊರಲ ಅಭಿಪ್ರಾಯ.
ಬೇರೆ ಕಡೆ ಮಾಡಿಕೊಳ್ಳಲಿ
ನಾವು ನಮ್ಮ ಭೂಮಿ ಬಿಟ್ಟುಕೊಡುವುದಿಲ್ಲ. ಬ್ಯಾಡಗಿಯಲ್ಲಿ ಸರ್ಕಾರಿ ಜಮೀನು ಸಾಕಷ್ಟಿದ್ದು, ಅಲ್ಲಿ ಬೇಕಾದರೆ ಸ್ಪೈಸ್ ಪಾರ್ಕ್ ನಿರ್ಮಿಸಲಿ. ಜಮೀನು ಮಾಲೀಕರಿಗೆ ನೋಟಿಸ್ ನೀಡಿರುವುದು ಕೃಷಿ ಜೀವನಕ್ಕೇ ಕೊಡಲಿ ಏಟು ನೀಡಿದಂತಾಗಿದೆ. ಕೃಷಿ ಸಾಲ ಕೇಳಲು ಹೋದರೆ ನೋಂದಣಿ ಕಾರ್ಯಾಲಯದಿಂದ ಭೋಜಾ ಹಾಕಿಕೊಂಡು ಬರುವಂತೆ ಬ್ಯಾಂಕ್ನವರು ಹೇಳುತ್ತಾರೆ. ನೋಂದಣಾಧಿಕಾರಿಗಳು ನಿಮ್ಮ ಭೂಮಿ ಸ್ಪೈಸ್ ಪಾರ್ಕ್ಗೆ ಗುರುತಿಸಿದ್ದರಿಂದ ಭೋಜಾ ಹಾಕಲು ಬರುವುದಿಲ್ಲ ಎನ್ನುತ್ತಾರೆ. ನಾಲ್ಕು ವರ್ಷಗಳಿಂದ ಸಾಲವೇ ಸಿಗದೆ ತೊಂದರೆಯಾಗಿದೆ ಎನ್ನುತ್ತಾರೆ ರೈತ ಗಂಗಣ್ಣ ಎಲಿ.
-ನಾರಾಯಣ ಹೆಗಡೆ