ಕಬ್ಬು ದರ ಬಿಕ್ಕಟ್ಟು: ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಾಳೆ
ಬೆಳಗಾವಿ: ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ರು. 2500 ದರ ನಿಗದಿ ಮಾಡಿದ್ದರೂ ಸಕ್ಕರೆ ಕಾರ್ಖಾನೆಗಳು ಈ ದರ ಒಪ್ಪದೇ ಇರುವ ಹಿನ್ನೆಲೆಯಲ್ಲಿ ಮೇ 5ರಂದು ಮಧ್ಯಾಹ್ನ 2 ಗಂಟೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ ಕರೆಯಲಾಗಿದೆ ಎಂದು ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಈ ಸಭೆ ಕರೆಯಲಾಗಿದೆ. ಸರ್ಕಾರ ನಿಗದಿಪಡಿಸಿದ ದರ ಕೊಡುವಂತೆ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಕೋರಲಾಗುವುದು. ಸಭೆಯಲ್ಲಿ ನಾನು, ಕಾನೂನು ಸಚಿವರು ಹಾಗೂ ಸಹಕಾರಿ ಸಚಿವರು ಪಾಲ್ಗೊಳ್ಳಲಿದ್ದೇವೆ' ಎಂದರು.
ರೈತರ ಹಾಗೂ ಕಾರ್ಖಾನೆಗಳ ಹಿತ ಕಾಪಾಡಿಕೊಂಡೇ ಸರ್ಕಾರ ಕಬ್ಬಿಗೆ ದರ ನಿಗದಿ ಮಾಡಿದೆ. ಇದೇ ದರ ಕೊಡಿಸಲೂ ಬದ್ಧವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಸಕ್ಕರೆಗೆ ಉತ್ತಮ ದರವಿದ್ದು, ಕಾರ್ಖಾನೆಗಳಿಗೆ ರು. 2500 ದರ ನೀಡಲು ತೊಂದರೆಯಾಗುವುದಿಲ್ಲ. ಕಳೆದ ವರ್ಷ ಸಕ್ಕರೆಗೆ 30 ರುಪಾಯಿ ದರವಿದ್ದಾಗಲೂ 2500 ದರ ನೀಡಿದ ಉದಾಹರಣೆ ಇದೆ. ಅಲ್ಲದೆ, ನೆರೆಯ ಮಹಾರಾಷ್ಟ್ರದಲ್ಲಿ ಪ್ರತಿ ಟನ್ ಕಬ್ಬಿಗೆ ರು. 2500 ದರ ನೀಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ನಿಗದಿಪಡಿಸಿದ ಕಬ್ಬಿನ ದರ ಪ್ರಶ್ನಿಸಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಸರ್ಕಾರ ನಿಗದಿಪಡಿಸಿದ ಕಬ್ಬಿನ ದರವನ್ನೇ ನೀಡಬೇಕು ಎಂದು ತೀರ್ಪು ನೀಡಿರುವ ಹೈಕೋರ್ಟ್, ಸರ್ಕಾರಿ ಆದೇಶ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದೂ ಹೇಳಿದೆ. ಆದರೆ, ನ್ಯಾಯಾಲಯದ ಆದೇಶ ಪ್ರತಿ ಇನ್ನೂ ನಮಗೆ ದೊರೆತಿಲ್ಲ ಎಂದು ಹೇಳಿದರು.
ಸಭೆ ನಡಾವಳಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಸರ್ಕಾರದ ತೀರ್ಮಾನಕ್ಕೆ ಬದ್ಧವಾಗದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಅವರು ಹೇಳಿದರು.
2 ಟಿಎಂಸಿ ನೀರಿಗೆ ಮನವಿ
ಚಿಕ್ಕೋಡಿ ಉಪವಿಭಾಗದಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ತೊಂದರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ 2 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಬಿಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸಚಿವ ಪ್ರಕಾಶ ಹುಕ್ಕೇರಿ ಹೇಳಿದರು.