ಗ್ರಾಮ ರಾಜ್ಯಕ್ಕೆ 'ಗಾಂಧಿ ಗ್ರಾಮ ಪುರಸ್ಕಾರ'
ಮಂಗಳೂರು: ಗಾಂಧೀಜಿ ಪ್ರತಿಪಾದಿಸುತ್ತಿದ್ದ ಗ್ರಾಮ ರಾಜ್ಯ ಕಲ್ಪನೆ ಸಾಕಾರಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಈ ಬಾರಿ ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯಿತಿಗೆ 'ಗಾಂಧಿ ಗ್ರಾಮ ಪುರಸ್ಕಾರ' ನೀಡಲು ನಿರ್ಧರಿಸಿದೆ.
ರಾಜ್ಯದಲ್ಲಿ ಒಟ್ಟು 176 ಗ್ರಾಮ ಪಂಚಾಯಿತಿಗೆ ಈ ಪುರಸ್ಕಾರ ಲಭಿಸಲಿದೆ. ತಲಾ ರು. 5 ಲಕ್ಷ ಇನಾಮು ಸಿಗಲಿದೆ. ಈಗಾಗಲೇ ಗ್ರಾಮ ಪಂಚಾಯಿತಿಗಳ ತಾತ್ಕಾಲಿಕ ಆಯ್ಕೆ ನಡೆದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ಯೋಜನೆ ಕಾರ್ಯಗತಗೊಂಡ ಬಗೆಯನ್ನು ಅವಲೋಕಿಸಿದ ಬಳಿಕ ಆಯ್ಕೆಯಾದ ಪಂಚಾಯಿಗಳ ಪಟ್ಟಿ ಹೊರಬೀಳಲಿದೆ.
2 ವರ್ಷದ ಸಾಧನೆ ಲೆಕ್ಕಾಚಾರ: ಗಾಂಧಿ ಗ್ರಾಮ ಪುರಸ್ಕಾರಕ್ಕೆ 2012-13ನೇ ಸಾಲಿನ ಪ್ರಗತಿ ಹಾಗೂ 13-14 ಸಾಲಿನ ಸಾಧನೆಯನ್ನು ಅವಲೋಕಿಸಲಾಗುತ್ತದೆ.
ಉದ್ಯೋಗ ಖಾತರಿ ಯೋಜನೆ ಸಾಧನೆ, ಕುಡಿವ ನೀರಿನ ಸಂಪರ್ಕ, ವಸತಿ ಯೋಜನೆ ಅನುಷ್ಠಾನ, ವಸತಿ ರಹಿತ ಕುಟುಂಬಗಳ ಗುರುತಿಸುವಿಕೆ, ಮನೆ ಒದಗಿಸಿದ ಪ್ರಮಾಣ, ವೈಯಕ್ತಿಕ ಶೌಚಾಲಯ, 13ನೇ ಹಣಕಾಸು ಆಯೋಗ ಅನುದಾನ ವಿನಿಯೋಗ, ಶಾಸನಬದ್ಧ ಅನುದಾನ ಬಳಕೆ, ಡಿಸೆಂಬರ್ ಅಂತ್ಯಕ್ಕೆ ತೆರಿಗೆ ವಸೂಲಿ, ಘನತ್ಯಾಜ್ಯ ನಿರ್ವಹಣೆ, ಸಕಾಲ ಸೇವೆ, ಸ್ವಂತ ಸಂಪನ್ಮೂಲ ಬಳಕೆಯ ಹೆಚ್ಚಳ, ಗ್ರಾಮ ಪಂಚಾಯಿತಿ ಆಸ್ತಿ ಒತ್ತುವರಿ ತೆರವುಗೊಳಿಸಿದ್ದು, ವಿದ್ಯುತ್ ಬಿಲ್ ಪಾವತಿ ವಿವರ ಸೇರಿದಂತೆ 13 ಅಂಶ ಹಿಂದಿನ ಸಾಲಿನ ಪ್ರಗತಿ ಬಗ್ಗೆ ಇರುತ್ತದೆ.
ಈ ಸಾಲಿನಲ್ಲಿ ವಾರ್ಷಿಕ ಕ್ರಿಯಾ ಯೋಜನೆ, ಪಂಚಾಯಿತಿ ಆಸ್ತಿ ವಿವರ, ಪಂಚಾಯಿತಿ ಕಟ್ಟಡದಲ್ಲಿ ಬರೆಸಿದ ಬಗ್ಗೆ, ಆಸ್ತಿ ತೆರಿಗೆ ಪರಿಷ್ಕರಣೆ, ನಾಲ್ಕು ವರ್ಷಗಳಲ್ಲಿ ನೀರಿನ ತೆರಿಗೆ ಪರಿಷ್ಕರಿಸಿದ್ದರೆ, ಒಂದು ವರ್ಷದಲ್ಲಿ ನಡೆಸಿದ ಗ್ರಾಮ ಸಭೆಗಳ ಸಂಖ್ಯೆ, ಗ್ರಾಮ ಸಭೆಯ ವಿಡಿಯೋ ಚಿತ್ರೀಕರಣ, ನಡವಳಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿದ ಬಗ್ಗೆ, ಮಾಸಿಕ ಸಭೆ ವಿವರ, ಜಮಾಬಂಧಿ, ವಿದ್ಯುತ್ ಸಂಪರ್ಕ ವಿವರ, ವಾರ್ಷಿಕ ಲೆಕ್ಕಪತ್ರ, ಲೆಕ್ಕ ಪರಿಶೋಧನೆ ಆಕ್ಷೇಪಣೆ, ಮಾಸಿಕ ಬ್ಯಾಂಕ್ ಲೆಕ್ಕ ಮರು ಹೊಂದಾಣಿಕೆ, ಗ್ರಾಮ ಸಭೆಯಲ್ಲಿ ಭಾಗವಹಿಸಿದ ನಾಗರಿಕರ ಸಂಖ್ಯೆ ಈ 15 ಅಂಶಗಳನ್ನು ಈ ಸಾಲಿನ ಸಾಧನೆ ವಿವರದಲ್ಲಿ ಕೇಳಲಾಗಿದೆ.
ಈ ಎಲ್ಲ ಅಂಶಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕು. ಆ ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಸೂಕ್ತ ದಾಖಲೆ ರವಾನಿಸಬೇಕು. ಈ ಪ್ರಕ್ರಿಯೆ ಈಗಾಗಲೇ ಮುಗಿದಿದ್ದು, ಇನ್ನು ಅಂತಿಮ ಆಯ್ಕೆ ಹೊರಬೀಳಲು ಬಾಕಿ ಇದೆ. 'ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಭರ್ತಿ ಮಾಡಿದ ಬಳಿಕ ಇಲಾಖೆಯ ಇಬ್ಬರು ಅಧಿಕಾರಿಗಳು ಜಿಲ್ಲೆಯ ಕೊಳ್ನಾಡು, ಲೈಲ, ತೆಂಕಮಿಜಾರು, ಗೋಳಿತೊಟ್ಟು ಹಾಗೂ ಸಂಪಾಜೆ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂತಿಮ ಆಯ್ಕೆಯನ್ನು ನಂತರ ಇಲಾಖೆ ಪ್ರಕಟಿಸಲಿದೆ' ಎನ್ನುತ್ತಾರೆ ದ.ಕ.ಜಿ.ಪಂ. ಉಪಕಾರ್ಯದರ್ಶಿ ಉಮೇಶ್.
-ಆತ್ಮಭೂಷಣ್