ಬಯಲಲ್ಲಿ ಕುಳಿತರೆ ಇನ್ನು ತಮಟೆ ಸದ್ದು
ಕೊಪ್ಪಳ: ಸೀಟಿ ಊದಿದ್ದಾಯ್ತು, ಇನ್ನು ತಮಟೆ ಬಾರಿಸುವುದು!
ಹೌದು. ಕೊಪ್ಪಳವನ್ನು ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪಣತೊಟ್ಟಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಟಿ. ಜನಾರ್ದನ, ಜನರಲ್ಲಿ ಅರಿವು ಮೂಡಿಸಲು ಕಂಡುಕೊಂಡಿರುವ ಹೊಸ ಉಪಾಯ ಎಂದರೆ ಯಾರಾದರೂ ಬಯಲಲ್ಲಿ ಬಹಿರ್ದೆಸೆಗೆ ಕುಳಿತರೆ ತಮಟೆ ಬಾರಿಸುವುದು! ಈ ಹಿಂದೆ ಬಯಲು ಬಹಿರ್ದೆಸೆ ಮಾಡುವಲ್ಲಿಯೇ ಹೋಗಿ ವಿಜಿಲ್ ಹಾಕುವ ಮೂಲಕ ಅಚ್ಚರಿ ಮೂಡಿಸಿದ್ದರು ಜನಾರ್ದನ. ನಂತರ ಅಧಿಕಾರಿಗಳೂ ಈ ಆಂದೋಲನದಲ್ಲಿ ತೊಡಗಿಕೊಂಡಿದ್ದರು. ಈಗ ಬಯಲು ಬಹಿರ್ದೆಸೆಗೆ ಯಾರಾದರೂ ಹೋದರೆ ಅಲ್ಲಿ ತಮಟೆ ಬಾರಿಸುವ ಕಾರ್ಯಕ್ರಮ. ಆ ಮೂಲಕ 'ಶೌಚಾಲಯ ಕಟ್ಟಿಸಿಕೊಳ್ಳದೆ ವಿಧಿಯಿಲ್ಲ' ಎನ್ನುವ ವಾತಾವರಣವನ್ನು ಜಿಲ್ಲೆಯಲ್ಲಿ ನಿರ್ಮಿಸುವುದು ಅವರ ಆಶಯ.
ಶೌಚಾಲಯ ನಿರ್ಮಾಣ ಅಭಿಯಾನದ ಭಾಗವಾಗಿ ಈಗ ನಡೆದಿರುವ ವಿಜಿಲ್ ಊದುವ ಕಾರ್ಯಕ್ರಮವನ್ನು ಅಧಿಕಾರಿಗಳ ಮೂಲಕ ಇನ್ನಷ್ಟು ತೀವ್ರಗೊಳಿಸಲಾಗುವುದು. ನಂತರ ಅಭಿಯಾನವನ್ನು ಇನ್ನಷ್ಟು ಪರಿಣಆಮಕಾರಿಯಾಗಿಸಲು ತಮಟೆ ಬಾರಿಸುವುದನ್ನು ಪ್ರಾರಂಭಿಸಲಾಗುವುದು. ಹಲಗೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಲಭ್ಯವಾಗುವ ವಾದ್ಯಗಳನ್ನು ತೆಗೆದುಕೊಂಡು ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲಿ ಬಯಲು ಬರ್ಹಿದೆಸೆಗೆ ಹೋಗುತ್ತಾರೆ ಅಲ್ಲಿ ಜೋರಾಗಿ ಬಾರಿಸುವುದು. ಮುಜುಗರದಿಂದ ಪಾರಾಗಲು ಮಂದಿ ಶೌಚಾಲಯ ನಿರ್ಮಿಸಿಕೊಳ್ಳಲು ಮಾಂದಾಗುತ್ತಾರೆ ಎನ್ನುತ್ತಾರೆ ಜಿಪಂ ಅಧ್ಯಕ್ಷ ಜನಾರ್ದನ.
ಲಕ್ಷದತ್ತ ಲಕ್ಷ್ಯ
60 ವರ್ಷಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ನಿರ್ಮಾಣವಾದದ್ದು ಕೇವಲ 43 ಸಾವಿರ ಶೌಚಾಲಯ. ಆದರೆ ಕಳದ ಒಂದೇ ವರ್ಷದಲ್ಲಿ ನಿರ್ಮಾಣವಾದದ್ದು 54 ಸಾವಿರ ಶೌಚಾಲಯ! ಶೌಚಾಲಯ ನಿರ್ಮಾಣದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದರೂ ಜಿ.ಪಂ ಅಧ್ಯಕ್ಷರಿಗೆ ಆ ಕುರಿತು ತೃಪ್ತಿ ಇಲ್ಲ. 'ನಮ್ಮ ಗುರಿ ಒಂದು ಲಕ್ಷ ಇತ್ತು. ಶೌಚಾಲಯ ನಿರ್ಮಾಣ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಿದರೆ ಗುರು ತಲುಪುವುದು, ಇಡೀ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡುವುದು ಕಷ್ಟವಲ್ಲ' ಎನ್ನುತ್ತಾರೆ ಅವರು.
ಅಭಿಯಾನ ನಿಲ್ಲದು
ನನ್ನ ಅಧಿಕಾರಾವಧಿ ಮೇ 30ಕ್ಕೆ ಕೊನೆಗೊಳ್ಳುತ್ತದೆ ಎನ್ನುವುದು ನನಗೂ ಗೊತ್ತಿದೆ. ಶೌಚಾಲಯ ನಿರ್ಮಾಣ ಅಭಿಯಾನ ಮುಂದುವರಿಸಿಕೊಂಡು ಹೋಗಲು ಹೊಸ ಅಧ್ಯಕ್ಷರ ಮನವೊಲಿಸುತ್ತೇವೆ. ಹೊಸ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿಯೂ ಶೌಚಾಲಯ ಜಾಗೃತಿ ಗಂಭೀರವಾಗಿ ಪರಿಗಣಿಸುವವರನ್ನೇ ಆಯ್ಕೆ ಮಾಡುವುದಕ್ಕೆ ಯತ್ನಿಸಲಾಗುವುದು.
- ಟಿ.ಜನಾರ್ದನ, ಅಧ್ಯಕ್ಷರು ಕೊಪ್ಪಳ ಜಿ.ಪಂ.
-ಸೋಮರಡ್ಡಿ ಅಳವಂಡಿ