ಮುದ್ದಿನ ಬಸವನಿಗೆ ಮೊದಲ ಬರ್ತ್ ಡೇ!
ರೋಣ: ಮನೆ ಮತ್ತು ಓಣಿ ತುಂಬ ಸಡಗರ, ಸಂಭ್ರಮ. ಕುಟುಂಬ ಸದಸ್ಯರೆಲ್ಲ ಹೊಸ ಬಟ್ಟೆ ಧರಿಸಿ ಚುರುಕಾಗಿ ಓಡಾಡುತ್ತಿದ್ದರು. ಧ್ವನಿವರ್ಧಕ ಈ ಸಂಭ್ರಮವನ್ನೆಲ್ಲ ಊರಿಗೆ ಸಾರಿ ಹೇಳುತ್ತಿತ್ತು. 'ನಮ್ಮ ಬಸವನ ಬರ್ತ್ ಡೇ ಇದೆ, ಎಲ್ಲರೂ ಬನ್ನಿ' ಎಂದು ಮನೆಯವರೆಲ್ಲ ಓಣಿಯ ಜನರನ್ನು ಕರೆದರು. ವಿಶೇಷ ಖಾದ್ಯಗಳೂ ಸಿದ್ಧಗೊಂಡವು.
ಮಕ್ಕಳ ಜನ್ಮದಿನವನ್ನು ಎಲ್ಲರೂ ಆಚರಿಸುತ್ತಾರಲ್ಲ, ಇದರಲ್ಲೇನು ವಿಶೇಷ ಎನ್ನದಿರಿ. ತಮ್ಮ ಮನೆಯಲ್ಲಿ ಹುಟ್ಟಿದ ಹೋರಿ ಕರು 'ಬಸವರಾಜ'ನ ಮೊದಲ ಜನ್ಮದಿನವನ್ನು ರೋಣದ ಸಾಂಬವರ ಚಾಳದ ಮಲ್ಲಪ್ಪ ಆದಿ ಕುಟುಂಬದವರು ಆಚರಿಸಿದ್ದು ಹೀಗೆ. ಕಳೆದ ವರ್ಷ ಬಸವ ಜಯಂತಿಯಂದೇ ಈ ಕರು ಹುಟ್ಟಿದ್ದು ಇನ್ನೊಂದು ವಿಶೇಷ. ರೈತ ಮಲ್ಲಪ್ಪ ಆದಿ ಪ್ರಾಣಿ ಪ್ರಿಯರು. ತಮ್ಮ ಮನೆಯ ಆಕಳು ಗೌರಿ ಕಳೆದ ವರ್ಷ ಬಸವ ಜಯಂತಿ ದಿನವೇ ಕರು ಹಾಕಿತು. ಈ ಹೋರಿ ಕರುವಿಗೆ ಬಸವರಾಜ ಎಂದು ಮನೆಯವರೆಲ್ಲ ಮುದ್ದಿನಿಂದ ಹೆಸರಿಟ್ಟು ಕರೆದರು. ನಾಮಕರಣವನ್ನೂ ಅದ್ಧೂರಿಯಾಗಿ ಮಾಡಿದರು. ಈಗ ಜನ್ಮದಿನಕ್ಕೂ ತಮ್ಮ ಬಳಗವನ್ನೆಲ್ಲ ಕರೆದು, ಸಂಭ್ರಮದಿಂದ ಆಚರಿಸಿದರು. ಆದರೆ, ಈ ಸಡಗರಕ್ಕೆ ಸಾಕ್ಷಿಯಾಗಲು ಬಸವರಾಜನ ತಾಯಿ ಗೌರಿ ಇಲ್ಲ. ಗೌರಿ ತೀರಿಕೊಂಡು 11 ತಿಂಗಳಾಯಿತು. ಆಗ ಬಸವರಾಜ್ ಎರಡು ತಿಂಗಳ ಕಾಲ ಸರಿಯಾಗಿ ಆಹಾರವನ್ನೇ ತಿಂದಿರಲಿಲ್ಲ. ಇದನ್ನರಿತ ಮನೆಯವರು ಈ ಕರುವನ್ನು ಮುದ್ದಿನಿಂದ ಸಾಕತೊಡಗಿದರು. ಮನೆಯಲ್ಲಿ ಮಾಡಿದ ಅಡುಗೆಯ ರುಚಿಯನ್ನು ಮೊದಲು ನೋಡುವುದು ಈ ಬಸವರಾಜನೇ! ಮೊದಲ ಪೂಜೆಯೂ ಈತನಿಗೇ!
ಹಬ್ಬದಂತಿತ್ತು: ಬಸವರಾಜನ ಹುಟ್ಟುಹಬ್ಬಕ್ಕೆ ಆದಿ ಕುಟುಂಬದ ಬಂಧು, ಬಳಗ, ನೆಂಟರಿಷ್ಟರೆಲ್ಲರೂ ಬಂದಿದ್ದರು. ಹೊಸ ಬಟ್ಟೆ, ಹೂವಿನ ಮಾಲೆ ತೊಟ್ಟು ಶೃಂಗಾರಗೊಂಡ ಬಸವನಿಗೆ ಓಣಿಯ ಮಹಿಳೆಯರೆಲ್ಲ ಆರತಿ ಬೆಳಗಿದರು. ತಂದಿದ್ದ ಆಹಾರ, ದವಸ-ಧಾನ್ಯ ತಿನ್ನಿಸಿ, ಹರಸಿದರು.
-ಪಿ.ಎಸ್. ಪಾಟೀಲ