ಶಿಲ್ಪ ಗುರುಗಳ ಹೊಟ್ಟೆ ಮೇಲೆ ಚಪ್ಪಡಿ
ಬೆಂಗಳೂರು: ಬೆಂಗಳೂರು ವಿವಿ ಆವರಣದ ಹಿಂಭಾಗದಲ್ಲಿನ ಸುವರ್ಣ ಕರ್ನಾಟಕ ಕಲಾಗ್ರಾಮದಲ್ಲಿನ ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರ ಶಿಕ್ಷಕರು ನಾಲ್ಕು ವರ್ಷದಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ. ಪರಿಣಾಮ ರಾಜ್ಯಾದ್ಯಂತ ಶಿಲ್ಪ ಗುರುಕುಲಗಳೇ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
ರಾಜ್ಯಾದ್ಯಂತ 22 ಶಿಲ್ಪ ಗುರುಕುಲಗಳು ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದವು. 246 ವಿದ್ಯಾರ್ಥಿಗಳಿದ್ದರು. ಈಗ 10 ಗುರುಕುಲಗಳು ಮಾತ್ರ ಉಳಿದಿದ್ದು, 49 ವಿದ್ಯಾರ್ಥಿಗಳಿದ್ದಾರೆ. ವರ್ಷದಿಂದ ವರ್ಷಕ್ಕೆ ಶಿಕ್ಷಕರ ಆಸಕ್ತಿ ಕಡಿಮೆಯಾಗಲು, ವಿದ್ಯಾರ್ಥಿಗಳು ಬಾರದೆ ಇರಲು ವೇತನ ನೀಡದೆ ಇರುವುದೇ ಕಾರಣ.
ಪ್ರತಿ ಗುರುಕುಲ ಶಿಕ್ಷಕರಿಗೆ ಒಬ್ಬ ವಿದ್ಯಾರ್ಥಿಗೆ 1500ರಂತೆ ಒಂದು ವರ್ಷದಲ್ಲಿ 10 ತಿಂಗಳಿಗೆ ಮಾತ್ರ ವೇತನ ನೀಡುವುದಾಗಿ ಸರ್ಕಾರ ಭರವಸೆ ಕೊಟ್ಟಿತ್ತು. ಆದರೆ ಈಗ ನಾಲ್ಕು ವರ್ಷವಾದರೂ ಯಾವ ಗುರುಕುಲ ಶಿಕ್ಷಕರಿಗೂ ಬಿಡಿಗಾಸನ್ನೂ ನೀಡಿಲ್ಲ.
ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ, ಪ್ರತಿ ವಿದ್ಯಾರ್ಥಿಗೂ ಮಾಸಿಕ ರು. 2000 ವಿದ್ಯಾರ್ಥಿ ವೇತನ ಒಂದು ವರ್ಷದಲ್ಲಿ 10 ತಿಂಗಳಿಗೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಅವರಿಗೂ ಒಂದು ರುಪಾಯಿ ಸಹ ನೀಡಿಲ್ಲ. ಇದರಿಂದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ.
ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರವು ಬಿಎಫ್ಎ (ಪ್ರತಿಮಾ ಶಿಲ್ಪ), ಎಂಎಫ್ಎ (ಪ್ರತಿಮಾ ಶಿಲ್ಪ), ಬಿಎಫ್ಎ (ದೇವಾಲಯ ನಿರ್ಮಾಣ ಶಿಲ್ಪ) ಪದವಿ ಕೋರ್ಸ್ಗಳನ್ನು ನಾಲ್ಕು ವರ್ಷದಿಂದ ನಡೆಸುತ್ತಾ ಬಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿರುವ ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರದ 2013-14ರ ವಿದ್ಯಾರ್ಥಿಗಳ ಮಾಹಿತಿ ಪುಸ್ತಕ (ಪ್ರಾಸ್ಪೆಕ್ಟಸ್)ದಲ್ಲಿ ಅಂತಿಮವಾಗಿ ಉಳಿದಿರುವ ಅತಿಥಿ ಬೋಧಕರ ಹೆಸರು ಪ್ರಟಿಸಲಾಗಿದೆ. ಹೊಸಪೇಟೆ ಸಿದ್ಧಿವಿನಾಯಕ ಶಿಲ್ಪಕಲೆಯ ಬಿ. ಕೊಟ್ರೇಶ ಆಚಾರ್ಯ, ಹೂವಿನಹಡಗಲಿಯ ಭುವನೇಶ್ವರಿ ಶಿಲ್ಪಕಲಾನಿಕೇತನದ ಜಿ.ಬಿ. ಹಂಸಾನಂದಾಚಾರ್ಯ, ಚಿತ್ರದುರ್ಗದ ಸಿ. ಮಂಜುನಾಥ ಆಚಾರ್ಯ, ಉಡುಪಿಯ ಪಾಂಚಜನ್ಯ ಶಿಲ್ಪಕಲಾನಿಕೇತನದ ನಿತ್ಯಾನಂದ ಎಸ್. ಆಚಾರ್ಯ, ಬಸ್ರೂರು ಹೊಯ್ಸಳ ಶಿಲ್ಪಕಲಾದ ಬಿ. ವಿಜಯ ಆಚಾರ್ಯ, ಕೋಟೆಕಾರಿನ ಪಂಚಾರ್ಷೇಯ ಶಿಲ್ಪಕಲಾದ ಎಂ. ಚಿದಾನಂದ, ಮಂಡ್ಯದ ಹನಿಯಂಬಾಡಿಯ ಎಚ್.ಎ. ಅಣ್ಣಯ್ಯ ಆಚಾರ್ಯ, ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಪಿ. ರಾಜಶೇಖರ ಆಚಾರ್ಯ, ರಾಮನಗರ ಜಿಲ್ಲೆ ಬಿಡದಿಯ ವಿ. ಸೋಮಶೇಖರ್, ಕಾಮಾಕ್ಷಿಪಾಳ್ಯದ ಟಿ. ಮೋಹನ್ರಾವ್-ಈ ಹತ್ತು ಗುರುಕುಲ ಶಿಕ್ಷಕರೇ ವೇತನವಿಲ್ಲದೆ ಸೇವೆ ಸಲ್ಲಿಸುತ್ತಿದ್ದಾರೆ. 'ನಮ್ಮ ಕೆಲಸಕ್ಕೂ ತೊಂದರೆ ಮಾಡಿಕೊಂಡು ಪಾಠ ಹೇಳಿದ್ದೇವೆ. ಅತ್ತ ನಮ್ಮ ದುಡಿಮೆಯ ಹಣವೂ ಇಲ್ಲ, ಇತ್ತ ವೇತನವೂ ಇಲ್ಲ. ಹೀಗಾದರೆ ನಮ್ಮ ಕುಟುಂಬ ಉಪವಾಸ ಇರಬೇಕಷ್ಟೇ. ಇಷ್ಟೇ ಅಲ್ಲದೆ ಆಸಕ ಬಡ ವಿದ್ಯಾರ್ಥಿಗಳ ಪ್ರವೇಶ ಮತ್ತು ಪರೀಕ್ಷೆ ಶುಲ್ಕ ಕಟ್ಟಿದ್ದೇವೆ. ಈ ಹಣ ಹೋಗಲಿ, ವೇತನ ಕೊಟ್ಟರೆ ಸಾಕು' ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ಶಿಲ್ಪ ಗುರುಕುಲ ಪದ್ಧತಿ ರಾಜ್ಯದಲ್ಲಿ ಮೊದಲಿಗೆ ಜಾರಿಗೆ ಬಂದಿದ್ದು, ಡಾ. ಜಿ. ಜ್ಞಾನಾನಂದರು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದಾಗ. ಈಗ ಅವರ ಜಾಗಕ್ಕೆ ಚಿತ್ತಾಪುರದ ಮಹದೇವಪ್ಪ ಬಂದಿದ್ದಾರೆ. ಆದರೆ ಈಗ ಇವೆರಡೂ ಪ್ರತ್ಯೇಕಗೊಂಡಿವೆ. ಜ್ಞಾನಾನಂದರು ಈಗ ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರದ ಡೀನ್ ಆಗಿದ್ದಾರೆ. ಎರಡಕ್ಕೂ ರಿಜಿಸ್ಟ್ರಾರ್ ಇಂದಿರಮ್ಮ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ನಿರ್ದೇಶಕ ಕೆ.ಎ. ದಯಾನಂದ್ ಅವರಿಗೆ ಈ ಬಗ್ಗೆ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.
ಆತಂಕ ಬೇಡ: ಡೀನ್ ಜಿ. ಜ್ಞಾನಾನಂದ
ನಾಲ್ಕು ವರ್ಷದಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ವೇತನ ಕೊಟ್ಟಿಲ್ಲ ಎಂಬುದು ನಿಜ. 2010ನೇ ಸಾಲಿಗೆ ಹಣ ಬಂದಿಲ್ಲ. ಆದರೆ 2011, 12, 14ನೇ ಸಾಲಿಗೆ ರು. 1.5 ಕೋಟಿ ಹಣ ಬಂದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದರು ಈಗಾಗಲೇ ಸಭೆ ನಡೆಸಿದ್ದಾರೆ. ವಿಳಂಬ ಆಗಿರುವುದಕ್ಕೆ ಆಡಳಿತ ತೊಡಕುಗಳೇ ಕಾರಣ. ನಮ್ಮಿಂದ ತರಬೇತಿ ಪಡೆದ ಗುರುಕುಲ ಶಿಕ್ಷಕರು ತಮ್ಮ ಕೆಲಸಕ್ಕೆ ತೊಂದರೆ ಮಾಡಿಕೊಂಡು ಪಾಠ ಹೇಳಿ ಎಂದು ನಾವು ತಿಳಿಸಿಲ್ಲ. ಶಾಸ್ತ್ರೀಯ ಶಿಲ್ಪಕಲೆ ನಮ್ಮಲ್ಲಿ ಉಳಿಯಬೇಕೆಂಬ ಉದ್ದೇಶದಿಂದ ಮಾಡುವ ಸೇವಾಭಾವನೆಯಿದು. ನಮ್ಮಲ್ಲಿ ಇರುವಂಥ ಆಸಕ್ತ ವಿದ್ಯಾರ್ಥಿಗಳು ತೆಲುಗು, ತಮಿಳುನಾಡಿನಲ್ಲೂ ಇಲ್ಲ. ಮೇ 9 ರಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಹಂತಹಂತವಾಗಿ ಚೆಕ್ ವಿತರಿಸುವ ಪ್ರಕ್ರಿಯೆ ಶುರುವಾಗಲಿದೆ. ಆತಂಕ ಬೇಡ ಅಂತಾರೆ ಸಾಂಪ್ರದಾಯಿಕ ಶಿಲ್ಪಗುರುಕುಲಗಳ ಕೇಂದ್ರದ ಪ್ರಧಾನ ಗುರು ಡಾ.ಜಿ. ಜ್ಞಾನಾನಂದರು.
ಶಿಕ್ಷಕರ ಹಾಡುಪಾಡು
ನಮ್ಮ ಸಾಂಪ್ರದಾಯಿಕ ಶಿಲ್ಪ ಗುರುಕುಲಗಳ ಕೇಂದ್ರದ ಪ್ರಧಾನ ಗುರು ಡಾ.ಜಿ. ಜ್ಞಾನಾನಂದರು ಹಣ ಬರುತ್ತದೆ ಅಂತಾರೆ. ಅವರ ಮೇಲೆ ನಂಬಿಕೆಯಿದೆ. ಗುರುಕುಲ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಒಂದು ವೇಳೆ ಸರ್ಕಾರದಿಂದ ವೇತನ ಬರದಿದ್ದರೆ ಗುರುಕುಲ ಮುಚ್ಚುವುದು ಖಚಿತ.
- ಬಿ. ಕೊಟ್ರೇಶ ಆಚಾರ್ಯ, ಹೊಸಪೇಟೆ
ನನ್ನ ಬಳಿ ಮೊದಲ ವರ್ಷ 5 ವಿದ್ಯಾರ್ಥಿಗಳು ಇದ್ದರು. ಹಣ ಬರಲೇ ಇಲ್ಲ. ನಮ್ಮ ಕೆಲಸಕ್ಕೇ ಟೈಮಿಲ್ಲ. ಇನ್ನು ಗುರುಕುಲ ಶಿಕ್ಷಣ ಹೇಗೆ ನೀಡಲಿ ಎಂದು 2ನೇ ವರ್ಷವೇ ನಿಲ್ಲಿಸಿಬಿಟ್ಟೆ. ಗುರುಗಳು ಈಗಲೂ ಕರೆಯುತ್ತಾರೆ. ದುಡ್ಡೂ ಬಾರದೇ ಅದಕ್ಕೆ ಸಮಯ ನೀಡಲು ನನ್ನಿಂದ ಸಾಧ್ಯವಿಲ್ಲ.
- ಸಿ. ಮಂಜುನಾಥ ಆಚಾರ್ಯ, ಚಿತ್ರದುರ್ಗ
ನಮ್ಮ ವೇತನ ಇರಲಿ, ವಿದ್ಯಾರ್ಥಿ ವೇತನವನ್ನೂ ನೀಡುತ್ತಿಲ್ಲ. ಆಡಳಿತದ ಅಧಿಕಾರಿಗಳು ನಾಲ್ಕು ವರ್ಷದಿಂದ ಹಣ ನೀಡದೆ ತೊಂದರೆ ಮಾಡಿದ್ದಾರೆ. ನಾವು ಎಷ್ಟು ಅಂತ ಕೈಯಿಂದ ಖರ್ಚು ಮಾಡಲು ಸಾಧ್ಯ?
- ನಿತ್ಯಾನಂದ ಎಸ್. ಆಚಾರ್ಯ, ಉಡುಪಿ
ವೇತನಕ್ಕೆ ಈಗ ಆಗ ಅಂತ ಹೇಳುತ್ತಲೇ ನಾಲ್ಕು ವರ್ಷವಾಯಿತು. ನಾನು ಕಾಮಾಕ್ಷಿಪಾಳ್ಯದಲ್ಲಿ ನಡೆಸುತ್ತಿರುವ ಗುರುಕುಲ ಮುಚ್ಚುವ ಸ್ಥಿತಿಗೆ ಬಂದಿದ್ದೇನೆ. ಆರ್ಥಿಕವಾಗಿ ತುಂಬಾ ಕಷ್ಟಕ್ಕೆ ಸಿಲುಕಿದ್ದೇನೆ. ಹಣ ಕೊಟ್ಟರೆ ಮುಂದುವರಿಸುವೆ. ಇಲ್ಲದಿದ್ದರೆ ನನ್ನ ಕುಟುಂಬ ಬೀದಿಪಾಲಾದೀತು ಎಂಬ ಭಯ ಕಾಡುತ್ತಿದೆ. ಮೂರ್ನಾಲ್ಕು ಲಕ್ಷ ಹಣ ಬರಬೇಕು. ಸರ್ಕಾರಿ ಅಧಿಕಾರಿಗಳಿಗೆ ಈ ಮೂಲಕವಾದರೂ ನಮ್ಮ ಕೂಗು ಕೇಳುತ್ತದೆ ಎಂದು ನಂಬಿದ್ದೇನೆ.
- ಟಿ. ಮೋಹನ್ರಾವ್, ಬೆಂಗಳೂರು
-ಕಗ್ಗೆರೆ ಪ್ರಕಾಶ್