ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

APRIL FOOL ಅಲ್ಲ, ನೀವು 24X7 ಫೂಲ್

ನಿಮ್ಮನ್ನು ಪ್ರತಿದಿನ ಮೂರ್ಖರನ್ನಾಗಿ ಮಾಡುವ ಟಾಪ್ 10 ಸಂಗತಿಗಳು ಇಲ್ಲಿವೆ!

Lingaraj Badiger
Updated On : 5 May 2014, 3:00 am

ನಿಮ್ಮನ್ನು ಪ್ರತಿದಿನ ಮೂರ್ಖರನ್ನಾಗಿ ಮಾಡುವ ಟಾಪ್ 10 ಸಂಗತಿಗಳು ಇಲ್ಲಿವೆ!

ಕೇವಲ 'ಹಾಸ್ಯ'ಪ್ರಜ್ಞೆ ಮತ್ತು ವಿನ್ಯಾಸ ಚೆನ್ನಾಗಿರಲಿ ಎಂಬ 'ಲಾಸ್ಯ'ಪ್ರಜ್ಞೆಯಿಂದ ಈ ಲೇಖನಕ್ಕೆ ಸಂಬಂಧಪಡದಿದ್ದರೂ ಕೆಲವು ಚಿತ್ರಗಳನ್ನು ಇಲ್ಲಿ ಬಳಸಿಕೊಂಡಿದ್ದೇವೆ.
ಸದಾ ಸಂತಸದಿಂದಿರಿ.

ಮೂರ್ಖರ ಸ್ಪೆಷಾಲಿಟಿ ಏನು ಗೊತ್ತಾ?
ಅವರಿಗೆ ತಾನು ಮೂರ್ಖ ಎಂಬುದು ಕೊನೆಯವರೆಗೂ ಗೊತ್ತಾಗುವುದಿಲ್ಲ!
ಮೂರ್ಖತನಕ್ಕೊಂದು ಹಳೆಯ ಹಾಗೂ ಸರಳ ವ್ಯಾಖ್ಯಾನವಿದೆ. 'ತಾನೂ ತಿಳಿದುಕೊಳ್ಳದ, ಬೇರೆಯವರು ಹೇಳಿದ್ದನ್ನೂ ಕೇಳದ ಕಡಿಮೆ ಪ್ರಯೋಜಕ ಹಾಗೂ ಸ್ವಲ್ಪ ಅಪಾಯಕಾರಿ ವ್ಯಕ್ತಿ.'
ನಾವೇ ಮೂರ್ಖರಾಗಿದ್ದರೆ ಅದು ನಮ್ಮ ಕರ್ಮ. ಅದಕ್ಕೆ ಯಾರೂ ಹೊಣೆಯಲ್ಲ. ಹೀಗೆ ಮೂರ್ಖರಾಗುವುದೀಗ ಓಲ್ಡ್ ಫ್ಯಾಷನ್ನು. ಆದ್ದರಿಂದಲೇ ಮೂರ್ಖರಲ್ಲದವರನ್ನೂ ಮೂರ್ಖರನ್ನಾಗಿ ಮಾಡುವ ಹೊಸ ವ್ಯವಸ್ಥಿತ ಷಡ್ಯಂತ್ರ 21ನೇ ಶತಮಾನದ ಆಧುನಿಕ ಕೊಳ್ಳುಬಾಕ ಸಮಾಜದಲ್ಲಿ ನಡೆಯುತ್ತಿದೆ. ಇದು ನೈಸ್ ರೋಡಿನಷ್ಟೇ ನೈಸ್ ವ್ಯವಹಾರ. ಜಮೀನು ಕೊಟ್ಟವರಿಗೆ ತಾವು ಮೂರ್ಖರಾಗಿದ್ದೇವೆ ಎಂಬುದು ಆಮೇಲೆ ತಿಳಿಯುವಂತೆ ಇಲ್ಲೂ ಮೂರ್ಖರಾದ ಮೇಲೆಯೇ ಜನರಿಗೆ ತಾವು ಮೂರ್ಖರಾಗಿದ್ದು ತಿಳಿಯುತ್ತದೆ. ಇನ್ನೊಂದು ಮಜಾ ಏನು ಅಂದರೆ, ಇಲ್ಲಿ ಜನರು ದಿನನಿತ್ಯ ಮೂರ್ಖರಾಗುತ್ತಾರೆ. ಒಂದು ಸಲ ಇವರು ಮೂರ್ಖರಾಗುವ ಅರ್ಹತೆಯುಳ್ಳವರು ಎಂಬುದು ಹೊರಜಗತ್ತಿಗೆ ಗೊತ್ತಾದರೆ ಸಾಕು, ಆಮೇಲೆ ನಿರಂತರವಾಗಿ ಅವರಿಗೆ ಮೂರ್ಖರಾಗುವುದೊಂದೇ ಕೆಲಸ. ಇಲ್ಲಿ ಒನ್ಸ್ ಎ ಮೂರ್ಖ ಆಲ್ವೇಸ್ ಎ ಮೂರ್ಖ.

ಗಮನಾರ್ಹ ಮತ್ತು ಬಹಳ ಮುಖ್ಯವಾದ ಸಂಗತಿ ಏನೆಂದರೆ, ಹೀಗೆ ಪರ್ಮನೆಂಟಾಗಿ ಫೂಲ್ ಆಗುತ್ತಲೇ ಇರುವುದಕ್ಕಿಂತ ವರ್ಷಕ್ಕೊಂದು ಸಲ ಏಪ್ರಿಲ್ ಫೂಲ್ ಆಗುವುದು ಎಷ್ಟೋ ಸೇಫು.ಆದರೆ, ಜನರು ಏಪ್ರಿಲ್ ಫಸ್ಟ್ ದಿನ ತಮ್ಮನ್ನು ಯಾರಾದರೂ ಫೂಲ್ ಮಾಡಿಬಿಟ್ಟಾರು ಎಂದು ಭಯಂಕರಅಲರ್ಟ್ ಆಗಿರುತ್ತಾರೆ. ಆಮೇಲಿನ 364 ದಿನ ಖುಷಿಯಿಂದ ಮೂರ್ಖರಾಗುತ್ತಾರೆ.

'ಇಷ್ಟೆಲ್ಲಾ ಮೂರ್ಖ ಮೂರ್ಖ ಎಂದು ಬಡಬಡಿಸುತ್ತಿದ್ದೀರಲ್ಲ, ನಾವು ಮೂರ್ಖರಾಗುತ್ತಿದ್ದೇವೆಂದು ಯಾರು ನಿಮಗೆ ಹೇಳಿದ್ದು?' ನೀವು ವ್ಯಗ್ರರಾಗಿ ಕೇಳಬಹುದು. ಹಾಗೆ ಕೇಳುವವರಿಗೆ ನೀವು ಯಾವ್ಯಾವ ಥರ ಮೂರ್ಖರಾಗುತ್ತಿದ್ದೀರಿ ಎಂಬುದನ್ನು ತಿಳಿಸುವುದೇ ಈ ಲೇಖನದ ಉದ್ದೇಶ. ಇದನ್ನು ಓದಿದ ಮೇಲೂ ನಾವು ಮೂರ್ಖರಲ್ಲ ಎಂದು ನಿಮಗನ್ನಿಸಿದರೆ ಮತ್ತೊಮ್ಮೆ ಪ್ರಶ್ನಾರ್ಥಕ ಹಾಗೂ ಉದ್ಗಾರವಾಚಕವಿರುವ ಆರಂಭದ ಎರಡು ಸಾಲು ಓದಿಬಿಡಿ.

ನಿಮ್ಮನ್ನು ಪ್ರತಿದಿನ ಮೂರ್ಖರನ್ನಾಗಿ ಮಾಡುವ ಟಾಪ್ 10 ಸಂಗತಿಗಳು
ನ್ಯೂಸ್ ಚಾನಲ್ಲು
ವೀಕ್ಷಕರು ಫೂಲ್ ಆಗಲು ರೆಡಿಯಾಗಿ ಕುಳಿತಿದ್ದಾರೆಂಬುದು ಖಾತ್ರಿಯಾದ ಮೇಲೇ ಟೀವಿ ನ್ಯೂಸ್‌ಚಾನಲ್ ಆರಂಭಿಸುವವರು ಅದಕ್ಕೆ ಬಂಡವಾಳ ಹೂಡುತ್ತಾರೆ. ಏಕೆಂದರೆ ವೀಕ್ಷಕರು ಮೂರ್ಖರಾಗದಿದ್ದರೆ ನ್ಯೂಸ್‌ಚಾನಲ್ಲುಗಳು ಓಡುವುದಿಲ್ಲ. ಕನ್ನಡದಲ್ಲಿ ಬರುವ ಒಂದಷ್ಟು ಸುದ್ದಿ ವಾಹಿನಿಗಳನ್ನು ನೋಡಿದ ಮೇಲೂ ನಿಮಗೀ ಮಾತಿನಲ್ಲಿ ನಂಬಿಕೆ ಬರದಿದ್ದರೆ ಏನೋ ಸೀರಿಯಸ್ ಪ್ರಾಬ್ಲಂ ಇದೆ ಎಂದರ್ಥ.
ನ್ಯೂಸ್‌ಚಾನಲ್ಲುಗಳಲ್ಲಿ ಬರುವ ಕಾರ್ಯಕ್ರಮಗಳನ್ನು ನೋಡಿ ಹೆಚ್ಚಿನ ವೀಕ್ಷಕರು ರಿಮೋಟ್ ಹಿಡಿದುಕೊಂಡೇ ಹಣೆಗಂಟಿಕ್ಕಿಕೊಂಡು ಬೈಯುತ್ತಾರೆ. ತಮಾಷೆ ಏನು ಅಂದರೆ, ನಿತ್ಯಾನಂದ ಸ್ವಾಮಿಯ ಅತಿರಂಜಿತ ಪ್ರೇಮಪುರಾಣ, ತಮಗೆ ಯಾವ ದಿಕ್ಕಿನಿಂದಲೂ ಸಂಬಂಧವಿಲ್ಲದ ಇಬ್ಬರು ಹುಡುಗ ಹುಡುಗಿಯರು ಓಡಿಹೋಗಿ ಉಪದ್ವ್ಯಾಪ ಮಾಡಿಕೊಂಡ ನಂತರ ಅದೊಂದು ರಾಷ್ಟ್ರೀಯ ಸಮಸ್ಯೆಯೆಂಬಂತೆ ನಡೆಯುವ ಪ್ಯಾನಲ್ ಡಿಸ್ಕಷ್ಷನ್ನು, ಶಬರಿಮಲೆಯಲ್ಲಿ ಸಂಕ್ರಾಂತಿ ದಿನ ಕಾಣುವುದು ಒರಿಜಿನಲ್ ಮಕರಜ್ಯೋತಿಯೋ ಅಥವಾ ಕಾಡಿನಲ್ಲಿ ಹಚ್ಚಿ ಎಸೆಯುವ ಬೆಂಕಿಯೋ ಎಂಬ ಅನಾದಿ ಅನಂತ ಚರ್ಚೆ, ಒಂದೂವರೆ ಸಿನಿಮಾದಲ್ಲಿ ನಟಿಸಿದ ಕನ್ನಡದ ನಟಿಯೊಬ್ಬಳಿಗೆ ಅತೀಂದ್ರಿಯ ಜ್ಞಾನವಿದೆಯಂತೆ ಹೌದಾ ಎಂಬ ಹಸೀಸುಳ್ಳು ಕಾರ್ಯಕ್ರಮವೂ ಸೇರಿದಂತೆ ಆ ಚಾನಲ್ಲುಗಳಲ್ಲಿ ಬರುವ ಎಲ್ಲ ಕಾರ್ಯಕ್ರಮಗಳನ್ನೂ ಇವರೇ ಆಸಕ್ತಿಯಿಂದ ಕುಳಿತು ನೋಡುತ್ತಾರೆ.
ಹಾಸ್ಯಗಾರ ಗಂಗಾವತಿ ಪ್ರಾಣೇಶ್ ಒಂದು ಜೋಕು ಹೇಳುತ್ತಾರೆ. ಹೆಂಡತಿ ತನ್ನ ಗಂಡನಿಗೆ ಕೇಳುತ್ತಾಳಂತೆ. 'ಏನ್ರೀ ಆ ನ್ಯೂಸ್‌ಚಾನಲ್‌ನಲ್ಲಿ ಈಗ ಹೇಳಿದ ಸುದ್ದಿಯನ್ನೇ ಇನ್ನೊಂದು ತಾಸಿನ ನಂತರವೂ ತೋರಿಸ್ತಾರೆ. ಅದನ್ನೇ ಅದರ ಮುಂದಿನ ನ್ಯೂಸ್‌ನಲ್ಲೂ ತೋರಿಸ್ತಾರೆ. ಆದರೂ ಆಸಕ್ತಿಯಿಂದ ಕುಳಿತು ನೋಡ್ತೀರಲ್ಲ, ಏನಿದೆ ಅದರಲ್ಲಿ?' ಗಂಡ ಹೇಳುತ್ತಾನಂತೆ, 'ನ್ಯೂಸ್ ಅದೇ. ಆದ್ರೆ ಅ್ಯಂಕರ್‌ಗಳು ಬೇರೆ ಬೇರೆ ಬರ್ತಾರೆ' ನ್ಯೂಸ್‌ಚಾನಲ್ಲುಗಳು ಜನರನ್ನು ಮೂರ್ಖರನ್ನಾಗಿ ಮಾಡಲು ಕಂಡುಕೊಂಡ ಮತ್ತೊಂದು ಉಪಾಯ ಸುಂದರ ಹುಡುಗಿಯರನ್ನು ಆ್ಯಂಕರ್‌ಗಳನ್ನಾಗಿ ನೇಮಕ ಮಾಡಿಕೊಳ್ಳುವುದು. ಅಂದಹಾಗೆ, ಇವೇ ನ್ಯೂಸ್‌ಚಾನಲ್ಲುಗಳು ದಿನಕ್ಕೆ ಮೂರು ತಾಸು ತೋರಿಸುವ ಇದೇ ಗಂಗಾವತಿ ಪ್ರಾಣೇಶ್ ಮುಂತಾದವರ ಹಾಸ್ಯ ಕಾರ್ಯಕ್ರಮಗಳೂ ಜನರನ್ನು ಫೂಲ್ ಮಾಡಲು ಇರುವಂತವೇ. ಅಲ್ಲಿ ಬರುವ ಮಹಾನ್ ಹಾಸ್ಯ ಕಲಾವಿದರೆಲ್ಲ ಹೇಳಿದ್ದೇ ಜೋಕನ್ನು ನೂರು ಸಲ ಹೇಳಿದರೂ ಜನರು ಕೂತು ನೋಡುತ್ತಾರಲ್ಲ. ಕೆಲವರಿಗಂತೂ ಪ್ರಾಣೇಶ್ ಹಾಗೂ ಕೃಷ್ಣೇಗೌಡರು ಯಾವ ಜೋಕು ಹೇಳಿದ ಮೇಲೆ ಯಾವುದನ್ನು ಹೇಳುತ್ತಾರೆಂಬುದು ಕೂಡ ಕಂಠಪಾಠವಾಗಿದೆ.

ಫೇಸ್‌ಬುಕ್
ನಯಾಪೈಸೆ ಪ್ರಯೋಜನವಿಲ್ಲದೆ ದಿನದ ಐದಾರು ತಾಸನ್ನು ವ್ಯರ್ಥವಾಗಿ ಕಳೆಯಲೆಂದೇ ಕಂಡುಹಿಡಿಯಲಾದ ಅತ್ಯದ್ಭುತ ಸಾಧನ ಫೇಸ್‌ಬುಕ್. ಈಗಂತೂ ಮೊಬೈಲ್‌ನಲ್ಲೂ ಫೇಸ್‌ಬುಕ್ ಸಿಗತೊಡಗಿದ ಮೇಲೆ ದಿನಕ್ಕೆ ಏನಿಲ್ಲವೆಂದರೂ ಜನರು ಕನಿಷ್ಟ ಇಪ್ಪತ್ತೈದು ಸಲ ಅದನ್ನು ನೋಡುತ್ತಾರೆ. ಕೆಲಸಕ್ಕೆ ಬಾರದ ಸ್ಟೇಟಸ್ಸುಗಳು, ದಿಢೀರನೆ ಹುಟ್ಟಿಕೊಂಡ ಕವಿಗಳ ಅರ್ಥವಿಲ್ಲದ ಕವಿತೆಗಳು ಹಾಗೂ ಅವವೇ ಫೋಟೋಗಳನ್ನು ನೋಡಿ ಒಂದಷ್ಟು ಲೈಕ್ ಒತ್ತುತ್ತಾರೆ. ಇನ್ನೂ ಪುರುಸೊತ್ತಾಗಿದ್ದರೆ ಕಮೆಂಟ್ ಮಾಡುತ್ತಾರೆ. ಯಾರೋ ಒಬ್ಬರು ಸತ್ತುಹೋಗಿದ್ದಾರೆಂದು ಅವರ ಆಪ್ತರು ಸ್ಟೇಟಸ್ ಹಾಕಿದರೆ ಅದಕ್ಕೂ ಲೈಕ್ ಒತ್ತುವಷ್ಟು ಫೇಸ್‌ಬುಕ್ ನಮ್ಮನ್ನು ಮೂರ್ಖರನ್ನಾಗಿ ಮಾಡಿದೆ.
ಮಾರ್ಕ್ ಜುಕರ್‌ಬರ್ಗ್‌ನನ್ನು ಅತ್ಯಲ್ಪ ಅವಧಿಯಲ್ಲಿ ನೂರು ಕೋಟಿ ಡಾಲರ್ ಶ್ರೀಮಂತನನ್ನಾಗಿ ಮಾಡಿದ್ದೇ ಫೇಸ್‌ಬುಕ್ ಸಾಧನೆ. ಅಗತ್ಯವಿಲ್ಲದಿದ್ದರೂ ಇಂಟರ್ನೆಟ್ ಕನೆಕ್ಷನ್ ತೆಗೆದುಕೊಂಡು ಅದನ್ನು ಫೇಸ್‌ಬುಕ್ ಬಳಸುವ ಕೋಟ್ಯಂತರ ಜನರು ಭಾರತವೊಂದರಲ್ಲೇ ಇದ್ದಾರೆಂದರೆ ಇದೆಂಥಾ ಅಡಿಕ್ಷನ್ ಎಂಬುದು  ಅರ್ಥವಾಗುತ್ತದೆ.
ಫೇಸ್‌ಬುಕ್ ಬಂದ ಮೇಲೆ ಯಾವ್ಯಾವ ವರ್ಗದವರು ಎಷ್ಟೆಷ್ಟು ಹಾಳಾಗಿದ್ದಾರೆ ಅಥವಾ ಆಲಸಿಗಳಾಗಿದ್ದಾರೆ ಎಂಬ ಸಮೀಕ್ಷೆಯೊಂದು ನಡೆದರೆ ಚೆನ್ನಾಗಿತ್ತು. ಇವತ್ತು ಕಾಲೇಜು ಹುಡುಗರು ಪುಸ್ತಕ ಓದುವುದಕ್ಕಿಂತ ಹೆಚ್ಚು ಫೇಸ್‌ಬುಕ್ ಪುಟಗಳನ್ನು ಓದುತ್ತಾರೆ. ಆಫೀಸಿಗೆ ಹೋಗುವವರು ಕೆಲಸಕ್ಕೆ ಲಾಗಿನ್ ಮಾಡುವುದಕ್ಕಿಂತ ಮೊದಲು ಫೇಸ್‌ಬುಕ್‌ಗೆ ಲಾಗಿನ್ ಮಾಡುತ್ತಾರೆ. ಎಷ್ಟೇ ಕೆಲಸವಿದ್ದರೂ ಹತ್ತು ನಿಮಿಷಕ್ಕೊಮ್ಮೆ ಫೇಸ್‌ಬುಕ್ ನೋಡುತ್ತಾರೆ. ಗೃಹಿಣಿಯರು ಮನೆಕೆಲಸವನ್ನು ಪೆಂಡಿಂಗ್ ಇಟ್ಟಾದರೂ ಸರಿ, ಫೇಸ್‌ಬುಕ್  ಜಾಲಾಡುತ್ತಾರೆ. ಗೊತ್ತಿಲ್ಲದವರ ಜೊತೆ ಸ್ನೇಹ ಬೆಳೆಸಿ ಅವರೊಂದಿಗೆ ಓಡಿಹೋಗಿ ಹಳ್ಳಕ್ಕೆ ಬೀಳುವಷ್ಟು ಇದು ಹುಡುಗ, ಹುಡುಗಿಯರನ್ನು ಫೂಲ್ ಮಾಡಿದೆ. ಫೇಸ್‌ಬುಕ್‌ನಿಂದ ನಾನು ಉದ್ಧಾರವಾದೆ ಎಂದು ಧೈರ್ಯವಾಗಿ ಎದೆಮುಟ್ಟಿ ಹೇಳಿಕೊಳ್ಳುವ ಒಬ್ಬನೇ ಒಬ್ಬನನ್ನು ತೋರಿಸಿ ನೋಡೋಣ. ಆದರೂ ಜಗತ್ತಿನಾದ್ಯಂತ ನೂರು ಕೋಟಿಗೂ ಹೆಚ್ಚು ಜನ ಇದನ್ನು ಬಳಸುತ್ತಾರೆ.
ಇವತ್ತು ಬೋರಾಗಿದೆ, ತುಂಬಾ ಖುಷಿಯಾಗಿದೆ, ಗೋಲ್‌ಗಪ್ಪ ತಿನ್ನಬೇಕು ಅನ್ನಿಸುತ್ತಿದೆ, ಹುಡುಗಿ ಕೈಕೊಟ್ಟಳು, ಬಾಯ್‌ಫ್ರೆಂಡ್ ಫೋನ್ ಸ್ವಿಚಾಫ್ ಮಾಡಿದ್ದಾನೆ ಎಂಬಂತಹ ಸ್ಟೇಟಸ್ಸುಗಳನ್ನು ಫೇಸ್‌ಬುಕ್‌ನಲ್ಲಿ ಹಾಕುವುದರಿಂದ ಯಾರಿಗಾದರೂ ಏನಾದರೂ ಪ್ರಯೋಜನವಿದೆಯೇ? ಆದರೂ ಜನ ಸ್ಟೇಟಸ್ ಹಾಕುತ್ತಾರೆ, ಅದರ ಬಗ್ಗೆ ಕೆಲಸವಿಲ್ಲದ ಇನ್ನಷ್ಟು ಜನ ಕಮೆಂಟ್‌ಗಳಲ್ಲೇ ಗಂಭೀರ ಡಿಸ್ಕಷನ್ ಮಾಡುತ್ತಾರೆ.

ಹೆಂಡತಿ/ ಗಂಡ
ಹೆಂಡತಿ ಗಂಡನಿಂದ, ಗಂಡ ಹೆಂಡತಿಯಿಂದ ಫೂಲ್ ಆದಷ್ಟು ಜಗತ್ತಿನಲ್ಲಿ ಬೇರ್ಯಾರೂ ಇನ್ಯಾರಿಂದಲೂ ಫೂಲ್ ಆಗಿಲ್ಲ. ಜನರನ್ನು ಮೂರ್ಖರನ್ನಾಗಿ ಮಾಡಲೆಂದೇ ಹುಟ್ಟಿಕೊಂಡ ಜಗತ್ತಿನ ಅತಿ ಪುರಾತನ ವ್ಯವಸ್ಥೆ ಮದುವೆ. ಇದು ಗೊತ್ತಿದ್ದೂ ಜನರು ಮದುವೆಯಾಗುತ್ತಾರೆ ಎಂಬುದು ಬಹಳ ವಿಶೇಷ. ಮದುವೆಯಾದವರಿಗೆ 'ಮುಂಚೆ ಎಷ್ಟು ಚೆನ್ನಾಗಿದ್ದೆ, ಇದು ಬೇಕಿತ್ತಾ ನಂಗೆ'  ಎಂಬ ಹಳಹಳಿಕೆ. ಮದುವೆಯಾಗದೆ ಇರುವವರಿಗೆ 'ಏನನ್ನೋ ಕಳಕೊಂಡಿದ್ದೇವೆ. ಒಂದು ಮದುವೆ ಅಂತ ಆಗಿಬಿಟ್ಟರೆ ಎಷ್ಟು ಚೆನ್ನಾಗಿತ್ತು' ಎಂಬ ಚಿಂತೆ. ಇಬ್ಬರೂ ವೇಸ್ಟ್‌ಬಾಡಿಗಳೇ!
ಗೊತ್ತಿದ್ದೂ ಗೊತ್ತಿದ್ದೂ ಹೆಂಡತಿಯ ಕಣ್ಣೀರಿಗೆ ಗಂಡ ಫೂಲ್ ಆಗುತ್ತಾನೆ. ಗಂಡನ ನೈಸ್ ಮಾತಿಗೆ ಹೆಂಡತಿ ಫೂಲ್ ಆಗುತ್ತಾಳೆ. ಅನ್ಯೋನ್ಯ ಸಹಕಾರದಿಂದ ಉದ್ದೇಶಪೂರ್ವಕವಾಗಿ ಫೂಲ್ ಆಗುವ ವ್ಯವಸ್ಥೆಯೇ ದಾಂಪತ್ಯ. ಮದುವೆಯಾಗದವರೆಲ್ಲ ಅದ್ಭುತವಾದದ್ದನ್ನು ಸಾಧಿಸಿದ್ದಾರೆ. ಅಥವಾ ದೊಡ್ಡ ದೊಡ್ಡ ಸಾಧಕರೆಲ್ಲ ಮದುವೆಯಾಗದೆ ಉಳಿದವರು. ಉದಾಹರಣೆಗೆ ರತನ್ ಟಾಟಾ, ಅಬ್ದುಲ್ ಕಲಾಂ, ವಾಜಪೇಯಿ, ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ, ರಾಹುಲ್‌ಗಾಂಧಿ ಇತ್ಯಾದಿ. ಆದರೆ, ಮದುವೆಯಾದವರಿಗೆ ಆ ಮದುವೆಯನ್ನು ಕೊನೆತನಕ ಉಳಿಸಿಕೊಳ್ಳುವುದೇ ಮಹತ್ಸಾಧನೆ. ಹೇಗಾದರೂ ಸರಿ ನನ್ನ ಮದುವೆಯ ದೋಣಿ ಚಲಿಸುತ್ತಿರಬೇಕು ಎಂದು ಹುಟ್ಟು ಹಾಕುವುದರಲ್ಲೇ ಅವರ ಬದುಕಿನ ಶ್ರಮವೆಲ್ಲ ಸೋರಿಹೋಗುತ್ತದೆ.
ಸುಖವಾಗಿ ಬದುಕಿ ಕೊನೆಗೊಂದು ದಿನ ಖುಷಿಯಾಗಿ ಸಾಯಿ ಎಂದು ಬ್ರಹ್ಮ ನಮ್ಮನ್ನು ಹುಟ್ಟಿಸಿದ. ಮದುವೆಯಾಗುವ ತನಕ ಎಲ್ಲರೂ ಸುಖವಾಗಿಯೇ ಇರುತ್ತಾರೆ. ನಂತರ ಬದುಕಿನ ಉಳಿದ ಮುಕ್ಕಾಲು ಪಾಲನ್ನು ತನ್ನ ಸುಖ ಕಡೆಗಣಿಸಿ ಸಂಸಾರದ ಸುಖಕ್ಕಾಗಿ ಸವೆಸುತ್ತಾರೆ. ಅಷ್ಟಾದರೂ ಹೆಂಡತಿ, ಮಕ್ಕಳನ್ನು ಅವರಿಂದ ಖುಷಿಯಾಗಿಡಲು ಸಾಧ್ಯವಾ? ಇಲ್ಲವೇ ಇಲ್ಲ. ದಿನನಿತ್ಯ ಒಂದೊಂದು ಕಂಪ್ಲೇಂಟು. ಇವರಿಗೂ ಸುಖವಿಲ್ಲ, ಸಂಸಾರಕ್ಕೂ ಸುಖವಿಲ್ಲ. ಮೂಲ ಸಮಸ್ಯೆ ಅದೇ: ಮದುವೆ. ಈ ಭಾಗ್ಯಕ್ಕಾಗಿ ನಾವೆಲ್ಲ ಮದುವೆಯಾಗುತ್ತೇವಲ್ಲ, ನಮಗಿಂತ ದೊಡ್ಡ ಮೂರ್ಖರು ಯಾರಾದರೂ ಇದ್ದಾರಾ? ಒಂದು ಕ್ಷಣ ಯೋಚಿಸಿ. ಮದುವೆಯಾಗದೆ ಎಲ್ಲರೂ ಒಂಟಿಯಾಗಿಯೇ ಇದ್ದು, ಮಕ್ಕಳು ಹುಟ್ಟಿ ಬೆಳೆಯಲು ಪರ್ಯಾಯ ವ್ಯವಸ್ಥೆಯೇನಾದರೂ ಇದ್ದಿದ್ದರೆ, ಪ್ರಪಂಚ ಎಷ್ಟು ನೆಮ್ಮದಿಯಾಗಿ ಮುಂದುವರೆಯುತ್ತಿತ್ತು. ಆಗ ಎಲ್ಲರಿಗೂ ಪರಮ ಸ್ವಾತಂತ್ರ್ಯ. ತಮಗಿಷ್ಟ ಬಂದಂತೆ ಎಲ್ಲರೂ ಬದುಕಬಹುದು. ಸ್ವಾತಂತ್ರ್ಯಕ್ಕಿಂತ ಖುಷಿ ಬೇರೇನಿದೆ. ಮದುವೆಯಲ್ಲಿ ಸ್ವಾತಂತ್ರ್ಯವಿದೆ ಎಂದು ಯಾರಿಗಾದರೂ ಮನಃಪೂರ್ತಿಯಾಗಿ ಹೇಳುವ ಧೈರ್ಯವಿದೆಯೇ?

ರಾಜಕಾರಣಿಗಳು
ಮೂರ್ಖರಿಂದ ಮೂರ್ಖರಿಗಾಗಿ ಮೂರ್ಖರೇ ನಡೆಸುವುದು ರಾಜಕಾರಣ.ರಾಜಕಾರಣಿಗಳು ಜನರನ್ನು ಹೇಗೆ ಪರಿಪರಿಯಾಗಿ ಫೂಲ್ ಮಾಡುತ್ತಾರೆಂದು ಯಾರಿಗೂ ಬಿಡಿಸಿ ಹೇಳುವ ಅಗತ್ಯವಿಲ್ಲ. ಈಗಂತೂ ಚುನಾವಣೆ ಬಂದಿದೆ. ಈ ಏಪ್ರಿಲ್ ತಿಂಗಳಲ್ಲಿ ಕಡ್ಡಾಯವಾಗಿ ಮೂರ್ಖರಾಗುವವರು ಮತದಾರರು. ಏಪ್ರಿಲ್ ಫೂಲ್ ದಿನ ಮೂರ್ಖರಾದವರಿಗೆ ಸಂಜೆಯ ಹೊತ್ತಿಗಾದರೂ ತಾವು ಮೂರ್ಖರಾಗಿದ್ದು ತಿಳಿಯುತ್ತದೆ. ಆದರೆ, ರಾಜಕಾರಣಿಗಳಿಂದ ಮೂರ್ಖರಾದವರಿಗೆ ಕೊನೆಯವರೆಗೂ ತಾವು ಮೂರ್ಖರಾಗಿದ್ದು ತಿಳಿಯುವುದೇ ಇಲ್ಲ.
ಪ್ರತಿ ಬಾರಿ ಚುನಾವಣೆ ಬಂದಾಗಲೂ ನಾವು ನಿಮ್ಮನ್ನೆಲ್ಲ ಉದ್ಧಾರ ಮಾಡಲೆಂದೇ ಭುವಿಯಲ್ಲಿ ಅವತರಿಸಿದ ಪುಣ್ಯ ಪುರುಷರು ಎಂಬಂತೆ ರಾಜಕಾರಣಿಗಳು ಪೋಸು ಕೊಡುತ್ತಾರೆ. ಇದನ್ನೆಲ್ಲ ನಾವು ನಂಬುವುದಿಲ್ಲ ಎಂದು ಬಾಯಲ್ಲಿ ಹೇಳುತ್ತಲೇ ಮತದಾರರು ತಮ್ಮದೇ ಸ್ವಂತ ಕೈಯಲ್ಲಿ ಅವರಿಗೆ ಮತ ಒತ್ತುತ್ತಾರೆ. ಶಾಸಕರು, ಸಂಸದರನ್ನು ಆರಿಸಿ ಕಳಿಸುವುದು ಅಂದರೆ ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಐದು ವರ್ಷದ ಅವಧಿಗೆ ಅವರಿಗೆ ನೀವೇ ಲೈಸನ್ಸ್ ನೀಡುವುದು ಎಂದರ್ಥ. ಹೀಗೆ ಸ್ವಯಂಪ್ರೇರಣೆಯಿಂದ ಲೈಸನ್ಸ್ ನೀಡಿದ ಮೇಲೆ ಅವರು ನಿಮ್ಮನ್ನು ಫೂಲ್ ಮಾಡುತ್ತಿದ್ದಾರೆಂದು ನಿಮಗೆ ಗೊತ್ತಾದರೂ ಕಮಕ್ ಕಿಮಕ್ ಎನ್ನುವಂತಿಲ್ಲ. ಏಕೆಂದರೆ ನೀವೇಅವರಿಗೆ ಲೈಸನ್ಸ್ ಕೊಟ್ಟಿದ್ದೀರಿ. 120 ಕೋಟಿ ಜನರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ಯಃಕಶ್ಚಿತ್ 543 ಜನ ಸಂಸತ್ತಿನಲ್ಲಿ ಕುಳಿತು ತಮಗಿಷ್ಟ ಬಂದ ಹಾಗೆ ನಿರ್ಧರಿಸುವುದಿದೆಯಲ್ಲ, ಇದನ್ನು ಮೂರ್ಖರ ವ್ಯವಸ್ಥೆ ಅನ್ನುತ್ತೀರೋ ಅದ್ಭುತ ವ್ಯವಸ್ಥೆ ಅನ್ನುತ್ತೀರೋ ನಿಮಗೇ ಬಿಟ್ಟಿದ್ದು. ಹೆಸರಿಗೆ ಪ್ರಜಾಪ್ರಭುತ್ವ. ನಾವೆಲ್ಲ ಸರ್ವತಂತ್ರ ಸ್ವತಂತ್ರರು. ನಮ್ಮ ದುಡ್ಡಿನಿಂದಲೇ ಕಟ್ಟಿದ ವಿಧಾನಸೌಧಕ್ಕೆ ನಮಗೆ ಇಷ್ಟ ಬಂದಾಗ ಹೋಗಲು ಬಿಡುತ್ತಾರಾ? ಅದು ಹೋಗಲಿ, ಬೆಂಗಳೂರಿನಲ್ಲಿ ರಾತ್ರಿ ಎರಡು ಗಂಟೆಗೆ ರಸ್ತೆಯಲ್ಲಿ ಯಾರಿಗೂ ಉತ್ತರಿಸುವ ಅಗತ್ಯವಿಲ್ಲದೆ ನಡೆದು ಹೋಗುವ ಸ್ವಾತಂತ್ರ್ಯ ನಿಮಗಿದೆಯಾ? ಎಲ್ಲೋ ಕಳ್ಳತನ ಮಾಡಲು ಹೊರಟಿದ್ದೀರಿ ಎಂಬಂತೆಪೊಲೀಸರು ತಡೆದು ಹತ್ತಾರು ಪ್ರಶ್ನೆ ಹಾಕುತ್ತಾರೆ. ಇದೆಲ್ಲ ರಾಜಕಾರಣಿಗಳೇ ಮಾಡಿಟ್ಟ ವ್ಯವಸ್ಥೆ. ಆ ರಾಜಕಾರಣಿಗಳನ್ನು ಆರಿಸಿದ್ದು ನಾವೇ.
ಯಾರು ಗೆದ್ದು ಬಂದರೂ ಕಷ್ಟ ಪಡುವವರು ನಾವೇ ಎಂದು ಗೊತ್ತಿದ್ದರೂ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ ಬರುತ್ತಾರೆಂದರೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಅವರ ಭಾಷಣ ಕೇಳಲು ಹೋಗುತ್ತಾರೆ. ಅಲ್ಲಿ ಯಾವನೋ ಒಬ್ಬ ಬಾಂಬ್ ಇದೆ ಎಂದು ಕೂಗಿದರೆ ದಿಕ್ಕಾಪಾಲಾಗಿ ಓಡುತ್ತಾರೆ. ಆಗ ಹತ್ತಾರು ಜನ ಕಾಲ್ತುಳಿತಕ್ಕೆ ಸಿಕ್ಕಿ ಸಾಯುತ್ತಾರೆ. ಇದಕ್ಕಿಂತ ಮೂರ್ಖತನ ಯಾವುದಾದರೂ ಇದೆಯಾ?
ಅಸ್ಯ ಮೂರ್ಖಸ್ಯ ಯಾಗೇಸ್ಮಿನ್ ಮಹಿಷೀಶತ ದಕ್ಷಿಣಾ ೤
ತವಾಪ್ಯರ್ಧಂ ಮಮಾಪ್ಯರ್ಧಂ ವಿಘ್ನಂ ಮಾ ಕುರು ಪಂಡಿತ ॥
ಒಬ್ಬ ಪುರೋಹಿತ ಏನೇನೋ ಸುಳ್ಳು ಮಂತ್ರ ಹೇಳಿ ಶ್ರೀಮಂತನೊಬ್ಬನ ಮನೆಯಲ್ಲಿ ಹೋಮ ಮಾಡುತ್ತಿದ್ದನಂತೆ. ಅಲ್ಲಿಗೆ ಬಂದ ಇನ್ನೊಬ್ಬ ಪಂಡಿತನಿಗೆ ಇವನ ಹಿಕಮತ್ತು ತಿಳಿಯಿತಂತೆ. ಅಪಾಯ ಎದುರಾಗಿದೆ ಎಂಬುದನ್ನರಿತ ಪುರೋಹಿತ ಮಂತ್ರದ ಧಾಟಿಯಲ್ಲೇ ಸಂಸ್ಕೃತದಲ್ಲಿ ಹೇಳಿದ- 'ಈ ಮೂರ್ಖನ ಯಜ್ಞದಲ್ಲಿ ನೂರು ಎಮ್ಮೆ ದಕ್ಷಿಣೆ ಸಿಗುತ್ತದೆ. ನಿನಗೆ ಅರ್ಧ ಕೊಡುತ್ತೇನೆ, ಸುಮ್ಮನಿದ್ದುಬಿಡು.'
ಬೇರೆ ಬೇರೆ ಪಕ್ಷದ ರಾಜಕಾರಣಿಗಳೂ ಹೀಗೆಯೇ. ಒಬ್ಬರ ಗುಟ್ಟು ಒಬ್ಬರಿಗೆ ಗೊತ್ತಿರುತ್ತದೆ. ಆದರೂ ನನಗರ್ಧ, ನಿನಗರ್ಧ ಎಂದು ಒಳಗೇ ರಹಸ್ಯ ಒಪ್ಪಂದ ಮಾಡಿಕೊಂಡು ಜನರನ್ನು ಫೂಲ್ ಮಾಡುತ್ತಾರೆ.

ಬುದ್ಧಿಜೀವಿಗಳು
ತಮಗೆ ಮಾತ್ರ ಬುದ್ಧಿಯಿರುವುದು, ಜನರೆಲ್ಲ ದಡ್ಡರು ಎಂದು ಬಹಿರಂಗವಾಗಿ ಹೇಳುವಂತೆ ಹೆಸರಿಟ್ಟುಕೊಂಡ ವರ್ಗ ಬುದ್ಧಿಜೀವಿಗಳದ್ದು. ಇವರ್ಯಾಕೆ ಬುದ್ಧಿಜೀವಿಗಳು ಅಂದರೆ, ಇವರು ನಯವಾಗಿ ಮಾತನಾಡಿ ಸುಳ್ಳನ್ನೂ ಜನ ನಂಬುವಂತೆ ಮಾಡಬಲ್ಲರು. ಇವರು ಸುಳ್ಳು ಹೇಳಿದರೂ ಜನರು ಇವರನ್ನು ನಂಬುತ್ತಾರೆ ಎಂಬುದೇ ಇವರು ಗಡ್ಡ ಜೀವಿಗಳು ಹಾಗೂ ಜನರು ದಡ್ಡ ಜೀವಿಗಳು ಎಂಬುದಕ್ಕೆ ಸಾಕ್ಷಿ.
ಇಷ್ಟಕ್ಕೂ ಬುದ್ಧಿಜೀವಿಗಳು ಜನರನ್ನು ಮೂರ್ಖರನ್ನಾಗಿ ಮಾಡುವುದು ಹೇಗೆ? ಜಾತ್ಯತೀತ ಸಿದ್ಧಾಂತ ದೇಶಕ್ಕೆ ಒಳ್ಳೆಯದು, ಧರ್ಮ-ಜಾತಿಗಳನ್ನು ಸಾರ್ವಜನಿಕ ವ್ಯವಹಾರದಿಂದ ದೂರವಿಡಬೇಕು ಎಂದು ಇವರು ಕಿವಿ ತೂತಾಗುವಂತೆ ಭಾಷಣ ಮಾಡುತ್ತಾರೆ. ನಂತರ ತಮ್ಮ ಜಾತಿಯವರಿಗೆ ಕೆಲಸ ಕೊಡಿಸಲು ಒಳಗೊಳಗೇ ಮಂತ್ರಿಗಳ ಬಳಿ ವಶೀಲಿ ಮಾಡುತ್ತಾರೆ. ಜಾತಿ ಆಧರಿತ ಮೀಸಲಾತಿ ನೀಡಬೇಕು ಎಂದು ಸರ್ಕಾಕ್ಕೆ ಮನವಿ ಕೊಡುತ್ತಾರೆ. ಅಲ್ಪಸಂಖ್ಯಾತ ಧರ್ಮಗಳ ಪರ ವಕಾಲತ್ತು ವಹಿಸಿ ಮಾತನಾಡುತ್ತಾರೆ. ಹೆಸರಿಗೆ ಮಾತ್ರ ಜಾತಿ ವ್ಯವಸ್ಥೆ ಸರಿಯಿಲ್ಲ ಎನ್ನುತ್ತಾರೆಯೇ ಹೊರತು, ಮಾಡುವ ಕೆಲಸವನ್ನೆಲ್ಲ ಜಾತಿಗಳ ಬೆನ್ನಿಗೆ ಬಿದ್ದೇ ಮಾಡುತ್ತಾರೆ. ಇನ್ನೊಂದು ಉದಾಹರಣೆ, ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಬೀದಿಗಿಳಿದು ಹೋರಾಟ ಮಾಡುತ್ತಾರೆ. ಆದರೆ ತಮ್ಮ ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಕಳಿಸುತ್ತಾರೆ. ಜನರಿಗೆ ಇವರ ಹೇಳಿಕೆಗಳಷ್ಟೇ ಕೇಳಿಸುತ್ತವೆ, ಇವರು ಮಾಡುವುದು ಏನೆಂಬುದು ತಿಳಿಯುವುದಿಲ್ಲ. ಎಷ್ಟೆಂದರೂ ಬುದ್ಧಿಜೀವಿಗಳಲ್ಲವೇ, ಇವರು ನಿಜವನ್ನೇ ಹೇಳುತ್ತಾರೆಂದು ನಂಬಿ ಜನ ಬೇಸ್ತು ಬೀಳುತ್ತಾರೆ.
ನೂರು ಜನರಲ್ಲಿ 98 ಜನರು ಏನನ್ನು ನಂಬುತ್ತಾರೋ ಅದು ತಪ್ಪು ಎಂದು ಇನ್ನುಳಿದ ಇಬ್ಬರು ಬುದ್ಧಿಜೀವಿಗಳು ಏನೇನೋ ಲಾಜಿಕ್ ಹೇಳಿ ಸಾಬೀತುಪಡಿಸಬಲ್ಲರು. ಅದು ಸುಳ್ಳು ಎಂಬುದು ಜನರಿಗೆ ಗೊತ್ತಾದರೂ ತಥಾಕಥಿತ ಬುದ್ಧಿಜೀವಿಗಳನ್ನು ವಾದದಲ್ಲಿ ಸೋಲಿಸುವ ಶಕ್ತಿ ತಮಗಿಲ್ಲವಾದ್ದರಿಂದ ಸುಮ್ಮನೆ ಗೋಣು ಅಲ್ಲಾಡಿಸುತ್ತಾರೆ.
ಬುದ್ಧಿಜೀವಿಗಳಿಗೆ ಹಾವಿನಂತೆ ಎರಡು ನಾಲಿಗೆ. ಅವರು ಇಲ್ಲೊಂದು ಹೇಳಿ ಇನ್ನೊಂದು ಕಡೆ ಇನ್ನೊಂದನ್ನು ಹೇಳಿಅವೆರಡೂ ಸರಿ ಎಂದು ವಾದಿಸಬಲ್ಲರು. ಭುಸುಗುಡುವ ಹಾವಿನ ಬಳಿ ನೀನು ತಪ್ಪು ಎಂದು ಯಾರಾದರೂ ಹೇಳಲಾದೀತೇ.
ಸಣ್ಣದೊಂದು ಪ್ರಯೋಗ ಮಾಡಿ. ಒಂದು ತಾಸು ಕುಳಿತು ಕರ್ನಾಟಕದಲ್ಲಿರುವ ಬುದ್ಧಿಜೀವಿಗಳ ಪಟ್ಟಿ ತಯಾರಿಸಿ, ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಸಂಗ್ರಹಿಸಿ. ಕೊನೆಗೆ ಈಗ ಅವರೇನು ಮಾಡುತ್ತಿದ್ದಾರೆಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ನೀವು ಎಷ್ಟು ಸುಲಭವಾಗಿ ಅವರಿಂದ ಫೂಲ್ ಆಗಿದ್ದೀರೆಂಬುದುತಿಳಿಯುತ್ತದೆ.

ಕ್ರೆಡಿಟ್‌ಕಾರ್ಡ್
ಹಾಸಿಗೆಗಿಂತ ಹೊರಗೆ ಕಾಲುಚಾಚಲು ಮನುಷ್ಯನಿಗೆ ಕಲಿಸಿದ ಸಾರ್ವಕಾಲಿಕ ಶ್ರೇಷ್ಠ ಸಂಶೋಧನೆಯೆಂದರೆ ಕ್ರೆಡಿಟ್‌ಕಾರ್ಡ್. ನಿಮ್ಮ ಖರ್ಚಿಗೆ ನಾವು ಹಣ ಕೊಡುತ್ತೇವೆಂದು ಹೇಳುತ್ತಲೇ ಈ ನಯವಾದ ಪ್ಲಾಸ್ಟಿಕ್ ಕಾರ್ಡ್ ಬಳಸಿ ಬ್ಯಾಂಕುಗಳು ಜನರನ್ನು ನುಣ್ಣಗೆ ಮಾಡುತ್ತವೆ. ಕ್ರೆಡಿಟ್‌ಕಾರ್ಡ್ ಇದೆಯೆಂದು ಹೋದಲ್ಲೆಲ್ಲ ಉಜ್ಜಿ ಉಜ್ಜಿ ಕೊನೆಗೆ ಸಾಲ ತೀರಿಸಲಾಗದೆ ತಲೆ ಉಜ್ಜುತ್ತ ಕೂರುವ ದೊಡ್ಡ ವರ್ಗವೇ ನಮ್ಮಲ್ಲಿದೆ.ಅವರೆಲ್ಲ ಕ್ರೆಡಿಟ್ ಕಾರ್ಡ್ ಕೊಟ್ಟ ಬ್ಯಾಂಕಿನ ಮಾತಿಗೆ ಮರುಳಾಗಿ ಮೂರ್ಖರಾದವರು.
ಹಾಗಂತ ಕ್ರೆಡಿಟ್‌ಕಾರ್ಡ್‌ನಿಂದ ಪ್ರಯೋಜನ ಪಡೆದವರು ಇಲ್ಲವೇ ಇಲ್ಲವೆಂದಲ್ಲ. ಅವರು ಬಹಳ ಕಡಿಮೆಯಿದ್ದಾರೆ. ಮಜಾ ಏನು ಅಂದರೆ, ಕಾಲಕ್ಕೆ ಸರಿಯಾಗಿ ಕ್ರೆಡಿಟ್‌ಕಾರ್ಡ್ ಬಿಲ್ ಪಾವತಿಸುವ ಅವರನ್ನು ಕಂಡರೆ ಬ್ಯಾಂಕಿಗೆ ಭಯಂಕರ ದ್ವೇಷ. ಲಾಸ್ಟ್ ಡೇಟ್ ಒಳಗೆ ಬಿಲ್ ಕಟ್ಟದೆ ಆಮೇಲೆ ಪೆನಾಲ್ಟಿ ಕಟ್ಟುವವರಿಂದಲೇ ಕ್ರೆಡಿಟ್ ಕಾರ್ಡ್ ಕಂಪನಿಗಳು ಬೆಳೆಯುತ್ತಿರುವುದು. ಜನರು ಕಟ್ಟುವ ತಪ್ಪುಕಾಣಿಕೆಯೇ ಈ ಕಂಪನಿಗಳ ಏಕೈಕ ಆದಾಯದ ಮೂಲ. ಜನರು ಡೀಫಾಲ್ಟರ್ ಆದಷ್ಟೂ ಅವುಗಳಿಗೆ ಖುಷಿ. 'ಕೈಲಿ ದುಡ್ಡಿಲ್ಲದೆ ಮಜಾ ಮಾಡಿ, ಆಮೇಲೆ ದಂಡ ಕಟ್ಟಿ ನಮ್ಮನ್ನು ಬೆಳೆಸಿ' ಎಂಬ ಸರಳ ಹಾಗೂ ದುಷ್ಟ ಸಿದ್ಧಾಂತದೊಂದಿಗೆ ಕ್ರೆಡಿಟ್‌ಕಾರ್ಡ್ ಹುಟ್ಟಿಕೊಂಡಿದೆ. ಇದು ಗೊತ್ತಿಲ್ಲದೆ ಜನರು ಅದನ್ನು ತೆಗೆದುಕೊಂಡು ದೊಡ್ಡ ಸಂಖ್ಯೆಯಲ್ಲಿ ಫೂಲ್ ಆಗುತ್ತಿದ್ದಾರೆ.
ಕ್ರೆಡಿಟ್ ಕಾರ್ಡ್‌ಗಳಲ್ಲಿರುವಷ್ಟು ಮೋಸ ಎಲ್ಲೂ ಇಲ್ಲ. ಹಿಡನ್ ಚಾರ್ಜ್‌ಗಳು ಅದರಲ್ಲಿ ವಿಪರೀತ. ಆದರೂ ಜನರಿಗೆ ಅದನ್ನು ಇಟ್ಟುಕೊಳ್ಳುವುದೆಂದರೆ ಅದೇನೋ ಪ್ರತಿಷ್ಠೆ. ಖಾತೆಯಲ್ಲಿ ದುಡ್ಡಿಲ್ಲದಿದ್ದರೂ ಖರ್ಚು ಮಾಡಲು ಹಣ ಸಿಗುತ್ತದೆ ಎಂಬುದು ಒಳ್ಳೆಯದೇ ಇರಬಹುದು, ಆದರೆ ಅದಕ್ಕೆ ಅನ್ವಯವಾಗುವ ಷರತ್ತುಗಳು ಬಹಳ ದುಬಾರಿ. ಹೀಗೆ ಕ್ರೆಡಿಟ್ ಕಾರ್ಡ್‌ನಿಂದ ವಂಚನೆಗೊಳಗಾಗಿ ಸಂಘ ಕಟ್ಟಿಕೊಂಡು ಹೋರಾಡುತ್ತಿರುವವರ ದೊಡ್ಡ ಪಡೆಯೇ ನಮ್ಮ ರಾಜ್ಯದಲ್ಲಿದೆ.ಅವರು ಕ್ರೆಡಿಟ್‌ಕಾರ್ಡ್ ತೆಗೆದುಕೊಳ್ಳಬೇಡಿ ಎಂದು ಜನರಿಗೆ ಬೇಕಾದಷ್ಟು ಉಪದೇಶ ಮಾಡಿದ್ದಾರೆ. ಆದರೂ 'ನಿಮಗೆ ಕ್ರೆಡಿಟ್ ಕಾರ್ಡ್ ಕೊಡುತ್ತೇವೆ'  ಎಂದು ಫೋನ್ ಮಾಡುವ ಸುಂದರವಾದ ಹೆಣ್ಣು ಧ್ವನಿಗೆ ಜನ ಮರುಳಾಗುತ್ತಲೇ ಇದ್ದಾರೆ.

ಶಾಪಿಂಗ್ ಮಾಲ್
ಬೇಕಾದ್ದು ಬೇಡವಾದ್ದು ಎಲ್ಲವನ್ನೂ ಕೊಳ್ಳಲೇಬೇಕೆಂಬ ಒತ್ತಡದ ಗುದುಮುರಿಗೆಯನ್ನು ಹೊಟ್ಟೆಯೊಳಗಿಂದ ಹುಟ್ಟಿಸುವ ಶಾಪಿಂಗ್ ಮಾಲ್‌ಗಳಿಗೆ ಜನರನ್ನು ಹೇಗೆ ಮಂಗ ಮಾಡಬೇಕೆಂಬುದು ಚೆನ್ನಾಗಿ ಗೊತ್ತು. ಕರ್ಚೀಫು ತರೋಣವೆಂದು ಶಾಪಿಂಗ್ ಮಾಲ್‌ಗೆ ಹೋಗುವವರು ಪ್ಯಾಂಟು, ಶರ್ಟು, ಸೀರೆ, ಚೂಡಿದಾರ್ ಸಮೇತ ಮನೆಗೆ ಮರಳುತ್ತಾರೆ. ನಾಲ್ಕೂವರೆ ಸಾವಿರ ರೂಪಾಯಿಯ ಮೊಬೈಲ್ ತರಬೇಕೆಂದು ಹೋದವರು ಹದಿನೈದು ಸಾವಿರ ರೂ. ಕೊಟ್ಟು ಬೋಳಿಸಿಕೊಂಡು ಬರುತ್ತಾರೆ. ಕೊನೆಗೆ ಆ ಮೊಬೈಲ್ ಆಪರೇಟ್ ಮಾಡುವುದು ಹೇಗೆಂದುತಿಳಿಯದೆ ಅದಕ್ಕೆ ಒಂದು ತಿಂಗಳು ಕಾಲಹರಣ ಮಾಡುತ್ತಾರೆ.
ಪೋರ್ಟಬಲ್ ಟೀವಿ ಬೇಕಾದವನಿಗೆ 40 ಇಂಚಿನ ಎಲ್‌ಸಿಡಿ ಟೀವಿ ಕೊಟ್ಟು ಕಳಿಸಬೇಕೆಂಬುದು ಶಾಪಿಂಗ್ ಮಾಲ್‌ಗಳ ಮೂಲ ಸಿದ್ಧಾಂತ. ಹೀಗೆ ಮೂರ್ಖರಾಗುವ ಗುಣ ಜನರ ಮನಸ್ಸಿನಲ್ಲೇ ಇದೆ. ಇವರಿಗೆ ಚಂದ ಕಂಡಿದ್ದೆಲ್ಲವೂ ಬೇಕು. ಕೊನೆಗೆ ಅದನ್ನು ಒಂದು ದಿನವೂ ಬಳಸದೆ ಮೂಲೆಗೆಸೆದರೂ ಸರಿ. ದುಬಾರಿ ದುಡ್ಡು ಕೊಟ್ಟು ಅದನ್ನು ಎಲ್ಲರೆದುರು ಖರೀದಿಸುವುದೇಅವರಿಗೇನೋ ಖುಷಿ. ಶಾಪಿಂಗ್ ಮಾಲ್‌ಗಳು ಈ ಮನಃಸ್ಥಿತಿಯನ್ನು ಚೆನ್ನಾಗಿ ಎನ್‌ಕ್ಯಾಶ್ ಮಾಡಿ ಕೊಳ್ಳುತ್ತವೆ.
ಒಂದು ಉದಾಹರಣೆ ನೋಡಿ. ಹುಡುಗಿಯೊಬ್ಬಳಿಗೆ ಚಪ್ಪಲಿ ಖರೀದಿಸಬೇಕಿರುತ್ತದೆ. ಚಪ್ಪಲಿ ಅಂಗಡಿಗೆ ಹೋದರೆ ಅದೊಂದನ್ನೇ ತೆಗೆದುಕೊಂಡು ಮನೆಗೆ ಬರುತ್ತಾಳೆ. ಆದರೆ ಅಂಗಡಿಯ ಬದಲು ಶಾಪಿಂಗ್ ಮಾಲ್‌ಗೆ ಹೋದಳು ಅಂತಿಟ್ಟುಕೊಳ್ಳಿ. ಮೊದಲು ಚಪ್ಪಲಿ ಕೊಳ್ಳುತ್ತಾಳೆ. ನಂತರ ಅಲ್ಲಿಂದ ಹೊರಬರುವಾಗ ಪಕ್ಕದಲ್ಲೇ ಆ ಚಪ್ಪಲಿಗೆ ಮ್ಯಾಚ್ ಆಗುವ ಜೀನ್ಸ್ ಕಾಣುತ್ತದೆ. ಅದನ್ನು ಕೊಳ್ಳುತ್ತಾಳೆ. ನಂತರ ಅದಕ್ಕೊಪ್ಪುವ ಟೀಶರ್ಟ್. ನಂತರ ಅದಕ್ಕೆ ಮ್ಯಾಚಿಂಗ್ ಇಯರಿಂಗ್, ಬಳೆ, ನೇಲ್‌ಪಾಲಿಶ್ ಕೊಳ್ಳದಿದ್ದರೆ ಹೇಗೆ ಕೊನೆಗೆ ಮನೆಗೆ ಬಂದು ನೋಡಿದರೆ ಅವಳಿಗೇ ತಲೆ ತಿರುಗುತ್ತದೆ. ಮುನ್ನೂರು ರೂಪಾಯಿಯ ಚಪ್ಪಲಿಗೆ ಅವಳು ಒಂದೂಮುಕ್ಕಾಲು ಸಾವಿರ ರೂ. ಖರ್ಚು ಮಾಡಿರುತ್ತಾಳೆ.
ಶಾಪಿಂಗ್ ಮಾಲ್‌ಗೆ ಹೋದವರು ಮೂರ್ಖರಾಗುವುದೇ ಹೀಗೆ. ಹೆಂಡತಿ, ಮಕ್ಕಳನ್ನು ಕರೆದುಕೊಂಡು ಹೋದರಂತೂ ಮುಗಿಯಿತು. ಗರ್ಲ್‌ಫ್ರೆಂಡ್‌ನ ಕರೆದುಕೊಂಡು ಹೋದರೆ ಇನ್ನೂ ಅಪಾಯ. ಮಾಲ್‌ಗೆ ಹೋದರೆ ಒಂದಕ್ಕೆ ಮೂರು ಕೊಳ್ಳಲು ಸಾಧ್ಯವಾಗುತ್ತದೆ ಎಂದೇ ಒಂದು ಕೇಜಿ ಅಕ್ಕಿ ಬೇಕೆಂದರೂ ಮಾಲ್‌ಗೆ ಹೋಗೋಣ ಎಂದು ಗಂಡನನ್ನು ಪುಸಲಾಯಿಸುವವರಿದ್ದಾರೆ. ಇದಕ್ಕೆ ತಕ್ಕಂತೆ ಮಾಲ್‌ಗಳಲ್ಲಿ ಒಂದು ಕೊಂಡರೆ ಒಂದು ಫ್ರೀ ಎಂಬ ಆಮಿಷಗಳಿರುತ್ತವೆ. ಮರ್ಕಟಸ್ಯ ಸುರಾಪಾನಂ, ಮಧ್ಯೇ ವೃಶ್ಚಿಕ ದಂಶನಂ!

ಕಾಲೇಜಿಗೆ ಹೋಗುವ ಮಕ್ಕಳು
ಯಾಕೆ ಇಷ್ಟು ಲೇಟು?
ಕಾಲೇಜಲ್ಲಿ ಸ್ಪೆಷಲ್‌ಕ್ಲಾಸ್ ಇತ್ತು.
ಯಾವ ಕ್ಲಾಸೂ ಇರಲಿಲ್ಲ. ಇವನು ಗರ್ಲ್‌ಫ್ರೆಂಡ್ ಜೊತೆ ಪಾರ್ಕ್‌ನಲ್ಲಿ ಕೂತಿದ್ದ.
ಇವತ್ತು ರಾತ್ರಿ ಮನೆಗೆ ಬರೋಲ್ಲ ಅಂತಿದ್ಯಲ್ಲ, ಯಾಕೆ?
ಫ್ರೆಂಡ್‌ಮನೆಯಲ್ಲಿ ಕಂಬೈನ್ಡ್ ಸ್ಟಡಿ ಮಾಡ್ಬೇಕು.
ವಯಸ್ಸಿಗೆ ಬಂದ ಮಕ್ಕಳು ರಾತ್ರಿ ಮನೆಗೆ ಬರೋದಿಲ್ಲ ಅಂದರೆ ಫ್ರೆಂಡ್ಸ್ ಜೊತೆ ಪಾರ್ಟಿಗೆ ಹೋಗಿದ್ದಾರೆ ಅಥವಾ ಇನ್ನೇನೋ ಅಂತಹದ್ದೇ ಮೋಜಿಗೆ ಬಿದ್ದಿದ್ದಾರೆ ಎಂಬ ಏಕೈಕ ಅರ್ಥವಲ್ಲದೆ ಇನ್ನೇನೂ ಇಲ್ಲ.
ಇಡೀ ದಿನ ಮೊಬೈಲಲ್ಲಿ ಅದೇನ್ ಮಾಡ್ತೀಯಾ?
ಅಮ್ಮಾ ಅದರಲ್ಲಿ ಇಂಟರ್ನೆಟ್ ಇದೆ. ಈಗ ಸ್ಟಡಿ ಮಟೀರಿಯಲ್ಲೆಲ್ಲ ನೆಟ್ನಲ್ಲೇ ಸಿಗುತ್ತೆ. ಜೆರಾಕ್ಸ್ ದುಡ್ಡು ಉಳಿಸಿದ್ದೀನಿ, ಖುಷಿಪಡು.
ಆಂಡ್ರಾಯ್ಡ್ ಮೊಬೈಲ್ನಲ್ಲಿ ಸ್ಟಡಿ ಮಟೀರಿಯಲ್ ಡೌನ್‌ಲೋಡ್ ಮಾಡುವಷ್ಟು ಒಳ್ಳೆಯ ಹುಡುಗರು ಭಾರತದಲ್ಲಿ ಹುಲಿಗಳಷ್ಟೇ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಕಾಲೇಜು ಹುಡುಗರು ಮೊಬೈಲಲ್ಲಿದ್ದಾರೆ ಅಂದರೆ ಫೇಸ್‌ಬುಕ್ ಅಥವಾ ವಾಟ್ಸ್‌ಅಪ್‌ನಲ್ಲಿರುತ್ತಾರೆ.
ಪಿಂಕ್ ಡ್ರೆಸ್ನಲ್ಲಿ ತುಂಬಾ ಚೆನ್ನಾಗಿ ಕಾಣ್ತೀಯಾ ಅಂತ ಎಸ್ಸೆಂಎಸ್ ಕಳ್ಸಿದಾನಲ್ಲ, ಯಾರೇ ಅವನು?
ಅವನು ಅಲ್ಲಮ್ಮಾ, ಅವಳು. ಹೆಸರು ನೋಡಿಲ್ವಾ ರಜನಿ ಅಂತಿದೆ.
ಅಮ್ಮ ಕರೆಕ್ಟಾಗೇ ಗೆಸ್ ಮಾಡಿದ್ದಳು. ರಜನಿ ಅಂದರೆ ರಂಜಿತ್, ರಜತ್ ಅಥವಾ ಅಂಥಾದ್ದೇ ಇನ್ಯಾವುದೋ ಹುಡುಗರ ಹೆಸರಾಗಿರುತ್ತದೆ. ಹುಡುಗಿಯರು ಹುಡುಗರ ಹೆಸರನ್ನು ಸೇವ್ ಮಾಡಿಕೊಳ್ಳೋದೇ ಹೀಗೆ.
ಕಾಲೇಜ್ ಡೇಗೆ ಮೂರು ಸಾವಿರ ಯಾಕಂತೆ? ಅಷ್ಟೊಂದು ಹಣ ತಗೊಂಡು ಏನ್ಮಾಡ್ತಾರೆ?
ನಮ್ದು ರೆಪ್ಯುಟೆಡ್ ಕಾಲೇಜು ಪಪ್ಪಾ. ಎಲ್ಲವನ್ನೂ ಗ್ರ್ಯಾಂಡ್ ಆಗಿ ಮಾಡ್ತಾರೆ.
ಪಾಪ ಪಪ್ಪ. ಕಾಲೇಜ್ ಡೇಗೆ ಒಂದೇ ಸಾವಿರ, ಇನ್ನುಳಿದಿದ್ದು ಮಗನ/ಮಗಳ ಖರ್ಚಿಗೆ ಎಂಬುದು ಅವರಿಗೆ ಗೊತ್ತಾಗಲಿಲ್ಲ.
ಇಂತಹ ಸಾವಿರ ಟೋಪಿಗಳು ಕಾಲೇಜಿಗೆ ಹೋಗುವ ಮಕ್ಕಳಿರುವ ಮನೆಯಲ್ಲಿ ಅಪ್ಪ ಅಮ್ಮನಿಗೆ ಮೇಲಿಂದ ಮೇಲೆ ಬೀಳುತ್ತಿರುತ್ತವೆ. ಮಕ್ಕಳ ಮೇಲಿನ ಪ್ರೀತಿಯಿಂದಅವರು ಮೂರ್ಖರಾಗುತ್ತಲೇ ಇರುತ್ತಾರೆ.

ಪುಕ್ಕಟೆ ಜ್ಯೋತಿಷಿಗಳು
ಮೂವತ್ತು ವರ್ಷದಿಂದ ನೆಲೆಸಿರುವ ಕೊಳ್ಳೇಗಾಲದ ಸುಪ್ರಸಿದ್ಧ ಜ್ಯೋತಿಷಿ, ಕೇರಳದಲ್ಲಿ ವಶೀಕರಣ ಕಲಿತ ಖ್ಯಾತ ಜ್ಯೋತಿಷಿ ಎಂಬ ಬೋರ್ಡ್‌ಗಳಿಗೆ ಈಗ ಜನ ಹೆಚ್ಚು ಮರುಳಾಗುವುದಿಲ್ಲ. ಹೀಗೆ ಬೋರ್ಡ್‌ಹಾಕಿಕೊಂಡು ರಸ್ತೆ ಪಕ್ಕ ಕುಳಿತವರಿಗೆ ಬಿಸಿನೆಸ್ ತುಂಬಾ ಕಡಿಮೆಯಾಗಿದೆ. ಅದೇನು, ಜನರು ಅಷ್ಟೊಂದು ಬುದ್ಧಿವಂತರಾಗಿಬಿಟ್ಟರಾ ಎಂದು ಕೇಳುವಂತಿಲ್ಲ. ಇವರ ಬಳಿ ಜ್ಯೋತಿಷ್ಯ ಕೇಳಲು ಬರುತ್ತಿದ್ದವರೆಲ್ಲ ಈಗ ಟೀವಿ ಚಾನಲ್ ಮುಂದೆ ಕೂತು ಅಲ್ಲಿ ಬರುವ ಫಟಾಫಟ್ ಜ್ಯೋತಿಷಿ ಬಳಿ ಪುಕ್ಕಟೆಯಾಗಿ ಭವಿಷ್ಯ ಕೇಳುತ್ತಿದ್ದಾರೆ. ಮತ್ತು ಮನೆಯಿಂದ ಹೊರಗೆ ಹೋಗದೆ, ಫೋನ್‌ಕಾಲ್‌ಗೆ ಒಂದೋ ಎರಡೋ ರೂಪಾಯಿ ಖರ್ಚು ಮಾಡಿ ಸುಲಭವಾಗಿ ಮೂರ್ಖರಾಗುತ್ತಿದ್ದಾರೆ.
ಟೀವಿಯಲ್ಲಿ ಭವಿಷ್ಯ ಹೇಳುವ ಜ್ಯೋತಿಷಿಗಳ ಎದುರು ಒಂದು ಲ್ಯಾಪ್ಟಾಪ್ ಇರುತ್ತದೆ. ಅದರಲ್ಲಿ ಕುಂಡಲಿ ಅಥವಾ ಅಂಥಾದ್ದೇ ಹೆಸರಿನಲ್ಲಿ ಸಿಗುವ ನೂರಾರು ಸಾಫ್ಟ್‌ವೇರುಗಳಲ್ಲಿ ಯಾವುದಾದರೊಂದು ಸಾಫ್ಟ್‌ವೇರ್ ಇರುತ್ತದೆ. ಅದು ಇಂಟರ್ನೆಟ್‌ನಲ್ಲಿ ಪುಕ್ಕಟೆಯಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಸಿಗುತ್ತದೆ. ನಿಮ್ಮ ನಕ್ಷತ್ರ, ಹುಟ್ಟಿದ ದಿನಾಂಕ ಇತ್ಯಾದಿಯನ್ನು ಅದರಲ್ಲಿ ಹಾಕಿದರೆ ಅದರಲ್ಲಿ ಮೊದಲೇ ಲೋಡ್ ಮಾಡಿಟ್ಟಿದ್ದ ನಿಮ್ಮ ಭವಿಷ್ಯ ಅರ್ಧ ಸೆಕೆಂಡ್‌ನಲ್ಲಿ ಕಾಣಿಸುತ್ತದೆ. ಸಂತೆ ಅಥವಾ ಜಾತ್ರೆಪೇಟೆಯಲ್ಲಿರುವ ಕಂಪ್ಯೂಟರ್ ಭವಿಷ್ಯ ಹೇಳುವ ಮಷೀನ್ಗೂ ಇದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಈ ಸಾಫ್ಟ್‌ವೇರನ್ನು ನೀವೇ ನಿಮ್ಮನೆಯ ಕಂಪ್ಯೂಟರ್‌ನಲ್ಲಿ ಹಾಕಿಕೊಂಡರೆ ನಿಮ್ಮ ಭವಿಷ್ಯ ನಿಮ್ಮ ಕೈಲೇ ಸಿಗುತ್ತದೆ.
ವಾಸ್ತವವಾಗಿ ಜ್ಯೋತಿಷ್ಯ ಸುಳ್ಳಲ್ಲ. ಆದರೆ, ಅಗ್ಗದ ಲ್ಯಾಪ್‌ಟಾಪ್ ಜ್ಯೋತಿಷಿಗಳು ಅದನ್ನು ಸುಳ್ಳಾಗಿಸಿದ್ದಾರೆ. ಇವತ್ತೂ ಜಾತಕ, ಹಸ್ತ ಇತ್ಯಾದಿ ನೋಡಿ ಕರಾರುವಾಕ್ಕಾಗಿ ಭವಿಷ್ಯ ಹೇಳುವವರಿದ್ದಾರೆ. ಆದರೆಅವರು ಪುಕ್ಕಟೆ ಪ್ರಚಾರಕ್ಕಾಗಿ ಟೀವಿ ಚಾನಲ್ಲುಗಳಿಗೆ ಎಡತಾಕುವುದಿಲ್ಲ. ತಮ್ಮ ಪಾಡಿಗೆ ತಾವು ಯಾವುದೋ ಹಳ್ಳಿಮೂಲೆಯಲ್ಲಿರುತ್ತಾರೆ. ಜನರೇ ಅವರನ್ನು ಹುಡುಕಿಕೊಂಡು ಹೋಗುತ್ತಾರೆ.
ಟೀವಿ ಚಾನಲ್ಲುಗಳಲ್ಲಿ ಒಂದು ಫೋನ್‌ಕಾಲ್‌ಗೆ ಜ್ಯೋತಿಷಿಗಳು ಪುಕ್ಕಟೆಯಾಗಿ ಸಿಗುತ್ತಾರೆಂಬ ಕಾರಣಕ್ಕೆ ಮಾತುಮಾತಿಗೂ ಭವಿಷ್ಯ ಕೇಳುವ ಜನರು ಹುಟ್ಟಿಕೊಂಡಿದ್ದಾರೆ. ಭವಿಷ್ಯ ಕೇಳಲು ಇವರು ಖರ್ಚು ಮಾಡುವುದು ಬಹಳ ಕಡಿಮೆ. ಆದರೆ, ಆ ಜ್ಯೋತಿಷಿ ಹೇಳಿದ್ದನ್ನು ಮಾಡಿಸಲು ಸಾವಿರಾರು ಅಥವಾ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಒಂದು ಪಕ್ಷ ಹಣ ಖರ್ಚು ಮಾಡದಿದ್ದರೂ ಜ್ಯೋತಿಷಿ ಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ಕೊರಗಿ ಕೊರಗಿ ಫೂಲ್ ಆಗುತ್ತಾರೆ.

ಟೀವಿ ಸೀರಿಯಲ್ಲುಗಳು
'ಅಮ್ಮ ಒಬ್ಬಳೇ ಯಾಕೆ ದೇವಸ್ಥಾನಕ್ಕೆ ಹೋಗಿದ್ದಾಳೆ?' ಒಂದು ಸಾಮಾನ್ಯ ಡೈಲಾಗ್.
ಏಕ್‌ದಂ ಗುಡ್ಡ ಕುಸಿದಂತಹ ಮ್ಯೂಸಿಕ್. ಇಪ್ಪತ್ತು ಸೆಕೆಂಡ್ ನಂತರ ಆ ಡೈಲಾಗ್ ಕೇಳಿಸಿಕೊಂಡವಳ ಮುಖಕ್ಕೊಂದು ಕ್ಲೋಸಪ್. ಅದಾದ ತಕ್ಷಣ ಆ ಡೈಲಾಗ್ ಹೇಳಿದವನ ಮುಖಕ್ಕೆ ಕ್ಲೋಸಪ್. ಮತ್ತೆ ಗುಡ್ಡ ಕುಸಿದ ಮ್ಯೂಸಿಕ್. ನಂತರ ಅಪ್ಪನ ಮುಖಕ್ಕೆ ಕ್ಲೋಸಪ್. ಹೀಗೆ ಅಲ್ಲಿದ್ದವರ ಮುಖಕ್ಕೆಲ್ಲ ಕ್ಲೋಸಪ್ ಆದಮೇಲೆ ಇಬ್ಬಿಬ್ಬರ ಮುಖಕ್ಕೆ ಒಟ್ಟಿಗೆ ಕ್ಲೋಸಪ್. ನಂತರ ಒಂದು ಲಾಂಗ್ ಶಾಟ್. ಇಷ್ಟು ಮುಗಿಯುವ ಹೊತ್ತಿಗೆ ಜಾಹೀರಾತು.
ಎಲ್ಲಾ ಧಾರಾವಾಹಿಗಳ ಕತೆಯೂ ಇಷ್ಟೇ. ದಿನಕ್ಕೆ ಮೂರು ಟೀವಿ ಸೀರಿಯಲ್ ನೋಡುವವರು ಈಗಿನ ಸೀರಿಯಲ್‌ಗಳನ್ನು ಸುಲಭವಾಗಿ ಡೈರೆಕ್ಟ್ ಮಾಡುವಷ್ಟು ಎಕ್ಸ್‌ಪರ್ಟ್ ಆಗಿದ್ದಾರೆ. ಅಥವಾ ಅವರೇ ಬೇಕಾದರೂ ಡೈಲಾಗ್, ಸ್ಕ್ರಿಪ್ಟ್ ಬರೆಯುತ್ತಾರೆ. ಏಕೆಂದರೆ ಎಲ್ಲಾ ಸೀರಿಯಲ್ಲುಗಳಲ್ಲೂ ಪಾತ್ರ ಬೇರೆ, ಕತೆ ಕೊಂಚ ಬೇರೆ, ಆದರೆ ತಿರುಳು ಒಂದೇ. ಮುಂದೆ ಹೀಗೇ ಆಗುತ್ತದೆ ಎಂದು ಗೊತ್ತಿದ್ದರೂ ಜನ ಸೀರಿಯಲ್ ನೋಡುತ್ತಾರೆ. ಅದರಲ್ಲೂ ಹೆಂಗಸರು ದಿನಕ್ಕೆ ಮಿನಿಮಮ್ ಎರಡು ಸೀರಿಯಲ್ ನೋಡದೆ ಮಲಗುವುದಿಲ್ಲ. ಪ್ರಯೋಜನ ಸೀರಿಯಲ್ಲಿನ ಟಿಆರ್‌ಪಿ ಜಾಸ್ತಿಯಾಗುತ್ತದೆ. ಅದರಲ್ಲಿ ನಟಿಸಿದವರ ಸಂಭಾವನೆಹೆಚ್ಚುತ್ತದೆ. ಟೀವಿ ಚಾನಲ್ಲು ಉದ್ಧಾರವಾಗುತ್ತದೆ. ಆದರೆ, ಕತ್ತು ಉದ್ದ ಮಾಡಿಕೊಂಡು ಅದನ್ನು ನೋಡಿದವರು ಮತ್ತು ಮರುದಿನ ಬೆಳಗ್ಗೆ ಪಕ್ಕದ ಮನೆಯವರ ಜೊತೆ ಅದನ್ನು ಚರ್ಚಿಸಿದವರ ಜೀವನದಲ್ಲಿಅಮೂಲ್ಯವಾದ ಒಂದಷ್ಟು ಸಮಯ ಹಾಳಾಗಿರುತ್ತದೆ. ಮನೆಗೆ ಕರೆಂಟ್ ಬಿಲ್ ಜಾಸ್ತಿ ಬಂದಿರುತ್ತದೆ. ಕೆಲಸಗಳು ಬಾಕಿ ಬಿದ್ದಿರುತ್ತವೆ.
ಇಬ್ಬರು ಒಳ್ಳೆಯ ಹೆಂಗಸರು, ಇಬ್ಬರು ಕೆಟ್ಟ ಹೆಂಗಸರು ಮತ್ತು ಮೂವರು ಗಾಂಧಿಯಂತಹ ಗಂಡಸರು ಇಷ್ಟಿದ್ದರೆ ಒಂದು ಸೀರಿಯಲ್ ಕತೆ ರೆಡಿ. ಈ ಏಳು ಜನರು ಹಾಗೂ ಅವರ ನಡುವೆ ನಡೆಯುವ ತೀರಾ ಸಾಮಾನ್ಯ ಘಟನೆಗಳನ್ನು, ಅವರಿಗೆ ಬರುವ ಕೆಟ್ಟ ಕೆಟ್ಟ ಹಾಗೂ ತಲೆಬುಡವಿಲ್ಲದ ಯೋಚನೆಗಳನ್ನು ಮೂರು ಕೋಟಿ ಜನ ಕೂತು ನೋಡುತ್ತಾರೆಂಬುದೇ ಜಗತ್ತಿನ ಅದ್ಭುತಗಳಲ್ಲೊಂದು. ಜನರ ಬೋಳೇತನವನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಬಾಚುವ ಈ ಸೀರಿಯಲ್ಲುಗಳ ಹಿಂದಿನ ಉದ್ದೇಶ ಯಾರಿಗೂ ತಿಳಿಯುವುದೇ ಇಲ್ಲ. ಹಾಗಾಗಿ ಪ್ರತಿದಿನ ಸಂಜೆ ಒಂದೂವರೆ ತಾಸು ಕಂಪಲ್ಸರಿಯಾಗಿ ಫೂಲ್ ಆಗುತ್ತಾರೆ. ಹಾಗೆ ಫೂಲ್ ಆಗಿದ್ದನ್ನು ಆವತ್ತೇ ಫೋನ್‌ನಲ್ಲಿ ಖುಷಿಯಿಂದ ನೆಂಟರ ಜೊತೆ ಹಂಚಿಕೊಳ್ಳುತ್ತಾರೆ ಅಥವಾ ಮರುದಿನ ಪಕ್ಕದ ಮನೆಯವರ ಜೊತೆ ತೌಡು ಕುಟ್ಟುತ್ತಾರೆ.

-ರೇಖಾ ಭಟ್
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/
46107 ಗೆ ಭೇಟಿನೀಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement