ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಘಟ್ಟ, ಕಾಫಿ ಸೀಮೆಗೆ ಕೂಲಿ ಕಾರ್ಮಿಕರ ಗುಳೆ

Vishwanath S
Updated On : 5 May 2014, 1:56 am

ದಾವಣಗೆರೆ: ಕಳೆದೊಂದು ಶತಮಾನದಲ್ಲಿ ಭೀಕರ ಬರವನ್ನೇ ಹೆಚ್ಚಾಗಿ ಕಂಡಿರುವ ರಾಜ್ಯದ ಅತೀ ಹಿಂದುಳಿದ ಅವಳಿ ತಾಲೂಕುಗಳಾದ ಜಗಳೂರು, ಹರಪನಹಳ್ಳಿ ತಾಲೂಕಿನ ಸಾವಿರಾರು ಶ್ರಮಿಕರು, ಕೂಲಿ ಕಾರ್ಮಿಕರು ಉದ್ಯೋಗ, ಅನ್ನ ಅರಸಿ ಕಾಫಿ ಸೀಮೆಗೆ, ಘಟ್ಟ ಪ್ರದೇಶ, ಮಹಾ ನಗರಕ್ಕೆ ಕುಟುಂಬ ಸಮೇತ ಮತ್ತೆ ಗುಳೆ ಹೋಗಿದ್ದಾರೆ...
ಬರದ ಛಾಯೆಯಿಂದ ತತ್ತರಿಸಿರುವ, ಕುಡಿಯುವ ನೀರಿಗೂ ಸಂಚಕಾರ ಬಂದಿರುವ, ಅಂತರ್ಜಲ ಬರಿದಾಗುತ್ತಿರುವ ಜಗಳೂರು, ಹರಪನಹಳ್ಳಿ ತಾಲೂಕಿನ ಸಾವಿರಾರು ಕೃಷಿ ಕೂಲಿ ಕಾರ್ಮಿಕ ಕುಟುಂಬ ಪ್ರತಿ ವರ್ಷದಂತೆ ಕೆಲಸವನ್ನು ಅರಸಿಕೊಂಡು ಕಾಫಿ ಸೀಮೆ, ಘಟ್ಟ ಪ್ರದೇಶಕ್ಕೆ ದುಡಿಯುವ ಶಕ್ತಿ ಹೊಂದಿರುವ ಮನೆಯ ಮಕ್ಕಳ ಸಮೇತ ಗುಳೇ ಹೋಗಿದ್ದು, ಆಯಾ ಗ್ರಾಮ, ತಾಂಡಾಗಳು, ಮನೆಗಳು ಜನರಿಲ್ಲದೇ ಬಿಕೋ ಎನ್ನುತ್ತಿವೆ.
ಗುಳೇ ತಪ್ಪಲಿಲ್ಲ: ಜಗಳೂರು, ಹರಪನಹಳ್ಳಿ ತಾಲೂಕಿನ ಸಾವಿರಾರು ಬಡ, ಕೃಷಿ, ಕೂಲಿ ಕಾರ್ಮಿಕ ಕುಟುಂಬ ಕೈಗೆ ಕೆಲಸವಿಲ್ಲದ್ದರಿಂದ ತುತ್ತು ಅನ್ನ ಅರಸಿ ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಕೊಪ್ಪ, ತೀರ್ಥಹಳ್ಳಿ, ಸಿದ್ದನಮಠ, ಬೆಂಗಳೂರು, ಗೋವಾ ಸೇರಿದಂ ತೆ ವಿವಿಧೆಡೆ ಕಾಫಿ ಸೀಮೆ, ಘಟ್ಟ ಪ್ರದೇಶದಲ್ಲಿ ಕೈತುಂಬಾ ಸಿಗುವ ಕೂಲಿ ಹಣ ನಂಬಿ ಗುಳೇ ಹೋಗುವುದು ಈ ವರ್ಷವೂ ಮುಂದುವರಿದಿದೆ. ಮತ್ತೊಮ್ಮೆ ಈ ತಾಲೂಕುಗಳಲ್ಲಿ ಗುಳೇ ಪರ್ವ ಮುಂದುವರಿದಿದೆ.
 ಕಳೆದೊಂದು ಶತಮಾನದಲ್ಲಿ 35 ವರ್ಷ ಭೀಕರ ಬರ, ಉಳಿದ ಅವಧಿಯಲ್ಲಿ ಬರಕ್ಕೆ ತುತ್ತಾದ ಜಗಳೂರು ತಾಲೂಕಲ್ಲಿ ಮಳೆಯೇ ರೈತರಿಗೆ ಆಸರೆ. ಆದರೆ, ಅರ್ಧ ಗುಂಟೆ, ಒಂದು ಎಕರೆ ಹೀಗೆ ಅಲ್ಪ ಜಮೀನು ಹೊಂದಿರುವ ಬಡ ರೈತರು, ಕೃಷಿ ಕೂಲಿ ಕಾರ್ಮಿಕರು ತಮ್ಮ ಜೀವನಕ್ಕಾಗಿ ಗುಳೇ ಹೋಗುವುದು ಹಿಂದಿನಿಂದಲೂ ಇದೆ. ದಸರಾ ಹಬ್ಬದ ವೇಳೆ ಗುಳೇ ಹೋಗುವ ಜನರು ಮತ್ತೆ ದೀಪಾವಳಿಗೆ ಬರುವುದು ವಾಡಿಕೆ. ದೀಪಾವಳಿಗೆ ಬಂದು, ತಮ್ಮ ಹೊಲದಲ್ಲಿ ಉತ್ತುವ, ಬಿತ್ತುವುದನ್ನು ಮುಗಿಸಿ ಗುಳೇ ಹೋಗುತ್ತಾರೆ.  
ಕಾಫಿ ಸೀಮೆಗೆ ಗುಳೆ: ಜಗಳೂರು ತಾ. ಉಚ್ಚಂಗಿಪುರ, ಚದುರಗೊಳ್ಳ, ಮುಚ್ಚನೂರು, ಜಗಳೂರು ಗೊಲ್ಲರ ಹಟ್ಟಿ, ಉಜ್ಜಪ್ಪರ ಒಡೆಯ ರಹಳ್ಳಿ ಸೇರಿದಂತೆ ಅನೇಕ ಗ್ರಾಮ, ಹರಪನಹಳ್ಳಿ ತಾ. ಹಾರಕನಾಳು ತಾಂಡಾ, ಹಾರಕ ನಾಳು ಸಣ್ಣ ತಾಂಡಾ, ಹಾರಕನಾಳು ದೊಡ್ಡ ತಾಂಡಾ, ಚನ್ನೇಹಳ್ಳಿ ತಾಂಡಾ, ಉದ್ಧ ಘಟ್ಟ ದೊಡ್ಡ ತಾಂಡಾ, ಸಣ್ಣ ತಾಂಡಾ, ಕಂಡಿಕೇರಿ ತಾಂಡಾ, ಕಣವಿ ತಾಂಡಾ ಸೇರಿದಂತೆ ಹಲವಾರು ಗ್ರಾಮಗಳ ಸಾವಿರಾರು ಜನರ ಕಾಫಿ ಸೀಮೆ, ಘಟ್ಟ ಪ್ರದೇಶಕ್ಕೆ ಗುಳೇ ಹೋಗಿ ತಿಂಗಳುಗಳೇ ಕಳೆಯುತ್ತಿವೆ.
ಕಾಫಿ ತೋಟ, ಅಡಕೆ ತೋಟ, ಬಾಳೆ ಗಿಡ ಸೇರಿದಂತೆ ವಿವಿಧ ತೋಟಗಳಿಗೆ ಮಣ್ಣು ಹಾಕಲು, ಗೊಬ್ಬರ, ಔಷಧಿ ಸಿಂಪಡಿಸಲು ಸೇರಿದಂತೆ ಅನೇಕ ಕೆಲಸ ಮಾಡಲು ಅಲ್ಲಿಗೆ ಇಲ್ಲಿನ ಕೂಲಿ ಕಾರ್ಮಿಕರು ಹೋಗುತ್ತಾರೆ. ಘಟ್ಟದಲ್ಲಿ ಜೆಸಿಬಿ ಸಾಗದ ಕಡೆ ಕೂಲಿ ಕಾರ್ಮಿಕರು ಮಣ್ಣು ಸಮತಟ್ಟು ಮಾಡುವ, ಗುಂಡಿ ತೆಗೆಯುವ ಕೆಲಸ ಮಾಡುತ್ತಾರೆ. ಗಿಡಕ್ಕೆ 50 ರು. ಕೂಲಿ ಸಿಗುವುದು, ದಿನಪೂರ್ತಿ ದುಡಿದರೆ 250- 300 ರು. ಕೂಲಿ ಕಾಫಿ ಸೀಮೆ, ಘಟ್ಟ ಪ್ರದೇಶದಲ್ಲಿ ಸಿಗುತ್ತದೆ. ಬೆಂಗಳೂರಿನಂತಹ ದೊಡ್ಡ ಊರುಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಹೋದರೂ ಕೈತುಂಬಾ ಸಂಬಳ ಸಿಗುತ್ತಿರುವುದೇ ಗುಳೆ ಹೋಗಲು ಮತ್ತೊಂದು ಕಾರಣ.
ಖಾತರಿ ಕೈ ಹಿಡಿಯಲಿಲ್ಲ: ಗುಳೇ ತಡೆಯಲು, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಬದುಕನ್ನು ಹಸನಾಗಿಸಲು ಜಾರಿಗೊಂಡ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಸಿಗುವ ಕೂಲಿ ಹಣವು ಕಾಫಿ ಸೀಮೆ, ಘಟ್ಟ ಪ್ರದೇಶ, ದೊಡ್ಡ ನಗರದಲ್ಲಿ ಸಿಗುವ ಕೂಲಿ ಹಣಕ್ಕೆ ಹೋಲಿಸಿದರೆ ಅಲ್ಪ. ಅಲ್ಲದೇ, ಖಾತರಿ ಯೋಜನೆ ಯಾವ ಪರಿ ಹಳ್ಳ ಹಿಡಿದಿದೆ ಎಂಬುದೂ ಎಲ್ಲರಿಗೂ ಗೊತ್ತು. ಗುಳೇ ಹೋದ ಕಡೆ ದಿನಕ್ಕೆ, ವಾರಕ್ಕೆ ಕೂಲಿ ಸಿಗುತ್ತದೆ. ಆದರೆ, ಖಾತರಿ ಕೂಲಿ ಹಣ ಪಡೆಯಲು ತಿಂಗಳಿಂದ ಐದಾರು ತಿಂಗಳವರೆಗೂ ಕಾಯಬೇಕು. ಅದು ಬಡ ಕೂಲಿ ಕಾರ್ಮಿಕರ ಜೀವನ ನಿರ್ವಹಣೆಗೆ ಮತ್ತಷ್ಟು ಹೊರೆಯಾಗಲಿದೆ.
ಮೇಸ್ತ್ರಿಗಳ ಹಾವಳಿ: ರಾತ್ರೋರಾತ್ರಿ ಲಾರಿ, ಮತ್ತಿತರ ವಾಹನಗಳಲ್ಲಿ ಆಯಾ ಗ್ರಾಮ, ತಾಂಡಾ, ಹಟ್ಟಿಗಳಿಂದ ಕೂಲಿ ಕಾರ್ಮಿಕರನ್ನು ತುಂಬಿಕೊಂಡು ಹೋಗುವ ಮೇಸ್ತ್ರಿಗಳ ಸಂಖ್ಯೆಯೂ ಕಡಿಮೆಯೇನಿಲ್ಲ. ವರ್ಷದಲ್ಲಿ ಕನಿಷ್ಠ 5- 6 ತಿಂಗಳು ಇಂತಹ ಕುಟುಂಬಗಳು ಗುಳೇ ಹೋಗುವುದು ಇಲ್ಲಿ ವಾಡಿಕೆ. ಗ್ರಾಮಗಳಲ್ಲಿ ಸರಿಯಾಗಿ ನೀರು ಇಲ್ಲದಿರುವುದು, ಜೀವನಕ್ಕೆ ಕೆಲಸವಿಲ್ಲದಿರುವುದು, ಅಂತರ್ಜಲ ಕುಸಿದಿದ್ದರಿಂದ ಹೊಲದಲ್ಲೂ ಬೆಳೆ ಬೆಳೆಯಲಾಗದ ಅಸಹಾಯಕ ಸ್ಥಿತಿಯಲ್ಲಿ ಹೀಗೆ ಗುಳೇ ಹೋಗುವುದು ತಮಗೆ ಅನಿವಾರ್ಯ ಎನ್ನುತ್ತಾರೆ ಗ್ರಾಮದ ಕೆಲವರು ಹಿರಿಯರು.


-ನಾಗರಾಜ ಎಸ್. ಬಡದಾಳ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement