ಜೈಲು ರೋಗಿಗಳಿಗೆ ಟೆಲಿಮೆಡಿಸಿನ್
ಮೈಸೂರು: ರಾಜ್ಯದ ಕಾರಾಗೃಹಗಳಲ್ಲಿನ ರೋಗಿಗಳ ಅನುಕೂಲಕ್ಕಾಗಿ ಟೆಲಿಮೆಡಿಸಿನ್ ವ್ಯವಸ್ಥೆ ಕಲ್ಪಿಸಲು ಒಳಾಡಳಿತ ಇಲಾಖೆಯು ಮುಂದಾಗಿದೆ.
ಮೊದಲ ಹಂತವಾಗಿ ಬೆಂಗಳೂರು ಮತ್ತು ಬೆಳಗಾವಿ ಕೇಂದ್ರ ಕಾರಾಗೃಹಗಳಲ್ಲಿ ಯೋಜನೆಯನ್ನು 1.31 ಕೋಟಿ ವೆಚ್ಚದಲ್ಲಿ ಕಿಯೋನಿಕ್ಸ್ ಮೂಲಕ ಅನುಷ್ಠಾನಗೊಳಿಸಲು ನಿರ್ಧರಿಸಲಾಗದೆ. ಇದಕ್ಕೆ ಸರ್ಕಾರದ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿಯನ್ನೂ ನೀಡಲಾಗಿದೆ.
ಕಿಯೋನಿಕ್ಸ್ ಸಂಸ್ಥೆ ಮತ್ತು ಕಾರಾಗೃಹ ಇಲಾಖೆ ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕು. ಜತೆಗೆ ಕಾರಾಗೃಹ ಇಲಾಖೆ ಮತ್ತು ಕರ್ನಾಟಕ ಟೆಲಿಮೆಡಿಸಿನ್ ಟ್ರಸ್ಟ್ (ಕೆಟಿಟಿ) ಅಡಿಯಲ್ಲಿ ಸೇವೆ ಒದಗಿಸುತ್ತಿರುವ ಸ್ಪೆಷಾಲಿಟಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಏರ್ಪಡಬೇಕು ಎಂದು ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಡಿ.ಎಸ್. ಜೋಗೋಜೆ ಆದೇಶ ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಡಿ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಾರಿಗೊಳಿಸಿರುವ ಟೆಲಿಮೆಡಿಸಿನ್ ಟ್ರಸ್ಟ್ ಅಡಿಯಲ್ಲಿ ಟೆಲಿಮೆಡಿಸಿನ್ ವ್ಯವಸ್ಥೆಯನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಕಿಯೋನಿಕ್ಸ್ ಮುಖಾಂತರ ಜಾರಿಗೊಳಿಸುತ್ತಿದೆ. ಕಾರಾಗೃಹಗಳಲ್ಲೂ ಈ ವ್ಯವಸ್ಥೆ ಗಾರಿಗೆ ಬಂದರೆ ಕೈದಿಗಳಿಗೆ ಯಾವುದೇ ಸಂದರ್ಭದಲ್ಲೂ ಕಾರಾಗೃಹದಲ್ಲಿಯೇ ಚಿಕಿತ್ಸೆ ನೀಡಬಹುದಾಗಿದೆ. ಈ ವ್ಯವಸ್ಥೆಯಿಂದ ಶೇ.75ರಷ್ಟು ಕೈದಿಗಳಿಗೆ ಹೊರ ಆಸ್ಪತ್ರೆಗಳಿಗೆ ಕಳುಹಿಸುವ ಹಾಗೂ ಚಿಕಿತ್ಸಾ ವೆಚ್ಚ ಉಳಿಯುತ್ತದೆ ಎಂಬುದು ಕಾರಾಗೃಹ ಇಲಾಖೆ ಅಧಿಕಾರಿಗಳ ಲೆಕ್ಕಾಚಾರ.
ಈ ಸಂಬಂಧ ಮೊದಲ ಹಂತವಾಗಿ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಟೆಲಿಮೆಡಿಸಿನ್ ವ್ಯವಸ್ಥೆಗಾಗಿ 78 ಲಕ್ಷ ಹಾಗೂ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ 53.50 ಲಕ್ಷ ಸೇರಿ ಒಟ್ಟು 1,31,50,000 ಮಂಜೂರಾತಿ ನೀಡುವಂತೆ ಕಾರಾಗೃಹ ಮಹಾ ನಿರೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರೂ ಒಪ್ಪಿಗೆ ಸೂಚಿಸಿದ್ದಾರೆ.
ಹೈಕೋರ್ಟ್ ಆಕ್ಷೇಪ
ರಾಜ್ಯದ ಕಾರಾಗೃಹಗಳಲ್ಲಿ ಸುಮಾರು 13 ಸಾವಿರ ಕೈದಿಗಳಿದ್ದು, ಅವರಲ್ಲಿ ಶೇ.10 ಕೈದಿಗಳು ವಿವಿಧ ಕಾಯಿಲೆಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ರೋಗಿಗಳಿಗೂ ಕಾರಾಗೃಹ ಆಸ್ಪತ್ರೆಯಲ್ಲಿ ಹೊರ ಆಸ್ಪತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗುತ್ತಿದೆ. ಇಂಥ ರೋಗಿಗಳಿಗೆ ಬೆಂಗಾವಲು ಮತ್ತು ಇನ್ನಿತರ ಸಮಸ್ಯೆಗಳಿಂದ ನಿಗದಿತ ದಿನಾಂಕದಂದು ಕಳುಹಿಸಲು ಕಷ್ಟವಾಗುತ್ತಿದೆ. ತೀವ್ರತರವಾದ ರೋಗದಿಂದ ಬಳಲುತ್ತಿರುವವರನ್ನು ತುರ್ತು ಚಿಕಿತ್ಸೆಗಾಗಿ ತಕ್ಷಣ ಆಸ್ಪತ್ರೆಗಳಿಗೆ ಸೂಕ್ತ ವ್ಯವಸ್ಥೆಯೊಂದಿಗೆ ಕಳುಹಿಸಲು ವಿಳಂಬವಾಗುತ್ತಿದ್ದು, ಅಂಥ ಸಂದರ್ಭದಲ್ಲಿ ಮೃತಪಡುವ ಪ್ರಸಂಗ ಉದ್ಭವಿಸುತ್ತದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗಗಳು ಮತ್ತು ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿವೆ.
* ಎಲ್ಲೆಲ್ಲಿ ವಿಸ್ತರಣೆ?
ಬೆಳಗಾವಿ ವಿಭಾಗದ ಬಾಗಲಕೋಟೆ, ಬಿಜಾಪುರ, ಧಾರವಾಡ, ಗದಗ, ಹಾವೇರಿ ಮತ್ತು ಕಾರವಾರ ಜಿಲ್ಲಾಸ್ಪತ್ರೆ, ಗುಲ್ಬರ್ಗ ವಿಭಾಗದ ಬಳ್ಳಾರಿ ಮಹಿಳೆಯರು ಮತ್ತು ಮಕ್ಕಳ ಆಸ್ಪತ್ರೆ, ಬೀದರ್, ಗುಲ್ಬರ್ಗ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲಾಸ್ಪತ್ರೆ, ಹೊಸಪೇಟೆ ಮತ್ತು ಲಿಂಗಸ್ಗೂರು ಸಾರ್ವಜಿನಕ ಆಸ್ಪತ್ರೆ.
ಮೈಸೂರು ವಿಭಾಗದ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಡಿಕೇರಿ, ಉಡುಪಿ ಜಿಲ್ಲಾಸ್ಪತ್ರೆ, ಮದ್ದೂರು ಸಾರ್ವಜನಿಕ ಆಸ್ಪತ್ರೆ, ಮಂಗಳೂರು ವೆನ್ಲಾಕ್ ಆಸ್ಪತ್ರೆ. ಬೆಂಗಳೂರು ವಿಭಾಗದ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲಾಸ್ಪತ್ರೆ, ದಾವಣಗೆರೆಯ ಚಿಟಗೇರಿ ಸಾರ್ವಜನಿಕ ಆಸ್ಪತ್ರೆ, ಕೋಲಾರದ ನರಸಿಂಹರಾಜ ಒಡೆಯರ್ ಜಿಲ್ಲಾಸ್ಪತ್ರೆ, ಸಾಗರ ಮತ್ತು ಶಿಕಾರಿಪುರದ ಸಾರ್ವಜನಿಕ ಆಸ್ಪತ್ರೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಾದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಸೆಂಟ್ ಜಾನ್ಸ್ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ನಿಮ್ಹಾನ್ಸ್, ನಾರಾಯಣ ಹೃದ್ರೋಗ ಆಸ್ಪತ್ರೆ, ನೆಪ್ರೋ ಯುರಾಲಜಿ ಸಂಸ್ಥೆ, ಕರ್ನಾಟಕ ಡಯಾಬಿಟಾಲಜಿ ಸಂಸ್ಥೆ, ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಹಾಗೂ ಕೆ.ಆರ್. ಆಸ್ಪತ್ರೆಗಳಿಂದ ಕಾರಾಗೃಹ ಆಸ್ಪತ್ರೆಗಳಿಗೆ ಟೆಲಿಮೆಡಿಸಿನ್ ವ್ಯವಸ್ಥೆ ವಿಸ್ತರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
-ಬಿ. ಶೇಖರ್ ಗೋಪಿನಾಥಂ