ದುರಂತ ಸರಣಿ: 22 ಸಾವು
ಬೆಂಗಳೂರು: ರಜಾದಿನ ಭಾನುವಾರ ಸಂಭವಿಸಿದ ಸಾಲು ಸಾಲು ಅವಘಡಗಳಲ್ಲಿ ಏಳು ಮಕ್ಕಳು ಸೇರಿ 22 ಮಂದಿ ಮೃತಪಟ್ಟಿದ್ದಾರೆ. ಗುಲ್ಬರ್ಗ ಜಿಲ್ಲೆಯೊಂದರಲ್ಲೇ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ 9 ಮಂದಿ ಮೃತಪಟ್ಟಿದ್ದಾರೆ.
4 ಅಪಘಾತ: 13 ಮಂದಿ ಬಲಿ
ರಾಜ್ಯದ 4 ಕಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ 13 ಮಂದಿ ಸಾವು. 49 ಮಂದಿ ಗಾಯಗೊಂಡಿದ್ದಾರೆ.
ಮದುವೆಯಿಂದ ಮಸಣಕ್ಕೆ
ಸೇಡಂ ತಾಲೂಕಿನಲ್ಲಿ ಗೋಪನಪಲ್ಲಿ ಕ್ರಾಸ್ ಬಳಿ ಇಂಡಿಕಾ- ಇನ್ನೋವಾ ಕಾರು ಡಿಕ್ಕಿಯಾಗಿ ಆರು ಮಂದಿ ಮೃತಪಟ್ಟಿದ್ದಾರೆ. ಕಡತಾಳ ಗ್ರಾಮದಲ್ಲಿ ಮದುವೆ ಮುಗಿಸಿ ಆಂಧ್ರಕ್ಕೆ ವಾಪಸಾಗುತ್ತಿದ್ದಾಗ ಡಿಕ್ಕಿ ಹೊಡೆದಿದೆ.
ನಿಯಂತ್ರಣ ತಪ್ಪಿದ ಲಾರಿ
ಯಾದಗಿರಿಯಲ್ಲಿ ಲಾರಿ ನಿಯಂತ್ರಣ ತಪ್ಪಿ ಬಸ್ಗೆ ಡಿಕ್ಕಿ ಹೊಡೆದು, ನಂತರ ಇತರರ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, 16 ಮಂದಿ ಗಾಯಗೊಂಡಿದ್ದಾರೆ. ಹೈದ್ರಾಬಾದ್ಗೆ ತೆರಳುತ್ತಿದ್ದ ಬಸ್ಗೆ ಶಹಾಪುರ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಬಳಿಕ ಲಾರಿ ರಸ್ತೆ ಬದಿ ನಿಂತಿದ್ದ ಕ್ರೂಸ್, ಟಂಟಂ ಮತ್ತು ಒಮಿನಿ ವ್ಯಾನ್ಗೂ ಗುದ್ದಿದೆ. ಈ ವೇಳೆ ಜ್ಯೋತಿ(16), ಸಂಗೀತಾ(6) ಸ್ಥಳದಲ್ಲೇ ಮೃತಪಟ್ಟರೆ, ಹರ್ಷಿಕಾ (10) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಬಸ್ ಹಳ್ಳಕ್ಕೆ
ಚಾಲಕನ ಅಜಾಗರೂಕತೆಯಿಂದಾಗಿ ಮಾಗಡಿಯ ವೆಂಗಳಪ್ಪನಹಳ್ಳಿ ಬಳಿ ಖಾಸಗಿ ಬಸ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಮಂಜುನಾಥ ನಾಯಕ್(33), ಲಕ್ಷ್ಮಮ್ಮ(40) ಮೃತರು. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಏಸ್- ಬೈಕ್ ಡಿಕ್ಕಿ
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಟಾಟಾಏಸ್ ಮತ್ತು ಬೈಕ್ ಡಿಕ್ಕಿಯಾಗಿ ಬಸವಂತಪ್ಪ ಶಿವಪ್ಪ ಮುಗಳಿ (65), ರತ್ನಾಂುಕ ಬಸನಾಂ್ಕು ಹೊಸೂರ (32) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕ್ವಾರಿ ಸ್ಫೋಟ: ಇಬ್ಬರು ಸಾವು
ದಕ್ಷಿಣ ಕನ್ನಡದ ಕಿನ್ನಿಗೋಳಿ ಬಳಿ ನೆಲ್ಲಿಗುಡ್ಡೆ ಕಲ್ಲಿನ ಕ್ವಾರಿಯ ಶೆಡ್ನಲ್ಲಿ ಸ್ಫೋಟ ಸಂಭವಿಸಿ ತಮಿಳುನಾಡಿನ ಎರಿಚಮ್ಮ(55) ಮತ್ತು ಮಗ ಪರಮಾನ್ ಉತ್ತಂಡಿ(25) ಮೃತಪಟ್ಟಿದ್ದಾರೆ. ಘಟನೆಯ ತೀವ್ರತೆಗೆ ಮನೆಯಲ್ಲಿದ್ದ ಎರಿಚಮ್ಮರ ದೇಹ ಸುಮಾರು 50 ಅಡಿ ಆಳದ ಕ್ವಾರಿಯಲ್ಲಿ ರುಂಡಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಬಿದ್ದಿತ್ತು.
4 ಮಕ್ಕಳು ಸೇರಿ 7 ಜನ ನೀರುಪಾಲು
ಪ್ರತ್ಯೇಕ ಘಟನೆಯಲ್ಲಿ ನಾಲ್ಕು ಮಕ್ಕಳು ಸೇರಿ ಒಟ್ಟು ಏಳು ಮಂದಿ ಭಾನುವಾರ ನೀರುಪಾಲಾಗಿದ್ದಾರೆ. ತೆರೆದ ಬಾವಿಗೆ ಬಿದ್ದು ಮುದ್ದೇಬಿಹಾಳದ ಯರಝರ್ವಿ ಗ್ರಾಮದಲ್ಲಿ ಪೂರ್ವಿಕಾ ದೊಡ್ಡಪ್ಪ ದೇಶಮುಖ(6), ಭಾಗ್ಯ ಪೂಜೇರಿ(6) ಮೃತಪಟ್ಟರು. ರಾಮನಗರದಲ್ಲಿ ಆಟವಾಡಲೆಂದು ಕೆರೆಗಿಳಿದ ಮಿಥುನ್(10), ಅಭಿ(10) ನೀರುಪಾಲಾಗಿದ್ದಾರೆ.
ನಂಜನಗೂಡಿನ ಕಪಿಲಾನದಿಯಲ್ಲಿ ಈಜುತ್ತಿದ್ದ ಶಿವಕುಮಾರ್ ಮತ್ತು ಸ್ವಾಮಿ ಹಾಗೂ ಚಾಮರಾಜನಗರದ ಪ್ರಸಿದ್ಧ ಪ್ರವಾಸಿ ಸ್ಥಳ ಮುತ್ತತ್ತಿಯಲ್ಲಿ ಮುಳುಗಿ ವಿದ್ಯಾರ್ಥಿ ಪ್ರಮೋದ್(19) ಮೃತಪಟ್ಟಿದ್ದಾರೆ.