ಬೆಂಗಳೂರಲ್ಲೂ ರಕ್ತದೋಕುಳಿ, ಪಾಪಿಸ್ತಾನ ಸಂಚು! ಇಸ್ರೇಲ್, ಅಮೆರಿಕ ರಾಯಭಾರ ಕಚೇರಿ ಸ್ಫೋಟಿಸಲು ಭಟ್ಕಳ್ ಹುನ್ನಾರ
ಉದ್ಯಾನನಗರಿಯಲ್ಲಿ ಉಗ್ರ ಕೃತ್ಯವೆಸಗುವ, ಇಲ್ಲಿ ರಕ್ತದೋಕುಳಿ ಹರಿಸುವ 'ಪಾಪಿ'ಸ್ತಾನದ ಮತ್ತೊಂದು ಸಂಚು ಬಯಲಾಗಿದೆ.
ನವದೆಹಲಿ/ಚೆನ್ನೈ: ಉದ್ಯಾನನಗರಿಯಲ್ಲಿ ಉಗ್ರ ಕೃತ್ಯವೆಸಗುವ, ಇಲ್ಲಿ ರಕ್ತದೋಕುಳಿ ಹರಿಸುವ 'ಪಾಪಿ'ಸ್ತಾನದ ಮತ್ತೊಂದು ಸಂಚು ಬಯಲಾಗಿದೆ. ಐಎಸ್ಐ ನಡೆಸಲು ಉದ್ದೇಶಿಸಿದ್ದ ದಾಳಿ ಗುರಿ ಬೆಂಗಳೂರಿನಲ್ಲಿರುವ ಇಸ್ರೇಲ್ ಹಾಗೂ ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್. ಚೆನ್ನೈನಲ್ಲಿ ಇತ್ತೀಚೆಗೆ ಸೆರೆಸಿಕ್ಕ ಶ್ರೀಲಂಕಾ ಪ್ರಜೆ ಈ ವಿಚಾರ ಬಾಯಿಬಿಟ್ಟಿದ್ದಾನೆ.
ಕೊಲಂಬೋದಲ್ಲಿ ನೇಮಕ
ಕೊಲಂಬೋದಲ್ಲಿನ ಪಾಕ್ ಹೈಕಮಿಷನ್ನ ಅಧಿಕಾರಿಯೊಬ್ಬರು ತನ್ನನ್ನು ಉಗ್ರ ಕೃತ್ಯಕ್ಕೆ ನೇಮಿಸಿಕೊಂಡಿರುವುದಾಗಿ ಚೆನ್ನೈನಲ್ಲಿ ಇತ್ತೀಚೆಗೆ ಸೆರೆಸಿಕ್ಕ ಶ್ರೀಲಂಕಾ ಪ್ರಜೆ, ಶಂಕಿತ ಉಗ್ರ ಸಾಕಿರ್ ಹುಸೇನ್ ವಿಚಾರಣೆ ವೇಳೆ ತಿಳಿಸಿದ್ದಾನೆ.
ಜತೆಗೆ, ಪಾಕ್ ಐಎಸ್ಐ ಇಬ್ಬರು ಮಾಲ್ಡೀವ್ಸ್ ಪ್ರಜೆಗಳನ್ನು ಚೆನ್ನೈಗೆ ಕಳುಹಿಸಲು ಯೋಜನೆ ರೂಪಿಸಿದ್ದು, ಅವರಿಗೆ ಪ್ರಯಾಣ ದಾಖಲೆಗಳು ಹಾಗೂ ಅಡಗುತಾಣಗಳನ್ನು ವ್ಯವಸ್ಥೆ ಮಾಡುವ ಹೊಣೆಯನ್ನೂ ತನಗೆ ವಹಿಸಲಾಗಿತ್ತು ಎಂದಿದ್ದಾನೆ ಹುಸೇನ್.
ಮಾಹಿತಿ ಕಲೆ ಹಾಕಿದ್ದ
ಬೆಂಗಳೂರಿನ ಇಸ್ರೇಲ್ ಕಾನ್ಸುಲೇಟ್, ಚೆನ್ನೈನ ಅಮೆರಿಕನ್ ಕಾನ್ಸುಲೇಟ್ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿ ಕಳುಹಿಸಿದ್ದಾಗಿ ಹುಸೇನ್ ತಿಳಿಸಿದ್ದಾನೆ. ಎರಡೂ ಕಚೇರಿಯ ವಿವಿಧ ಗೇಟ್ಗಳು, ಸುತ್ತಲ ರಸ್ತೆಗಳ ಫೋಟೋ ತೆಗೆದು ಕೊಲಂಬೋದ ಪಾಕ್ ಹೈಕಮಿಷನ್ ಕಚೇರಿಗೆ ಇ-ಮೇಲ್ ಮೂಲಕ ಕಳುಹಿಸಿದ್ದಾಗಿ ಹೇಳಿದ್ದಾನೆ. ಕಾನ್ಸುಲೇಟ್ಗೆ ಸಂಪರ್ಕಿಸುವ ಎಲ್ಲ ರಸ್ತೆಗಳ ನಕ್ಷೆಯನ್ನು ಪಿಡಿಎಫ್ ಫಾರ್ಮ್ಯಾಟ್ನಲ್ಲಿ Ú ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂದಿದ್ದಾನೆ.
ಎಸ್ಪಿ ನಾಯಕ ಅಜ್ಮಿಗೆ ಐಎಂ ನಂಟು!
ಸಮಾಜವಾದಿ ಪಕ್ಷದ ಮುಂಬೈ ನಾಯಕ ಅಬು ಅಜ್ಮಿ, ಇಂಡಿಯನ್ ಮುಜಾಹಿದೀನ್ ಉಗ್ರ ಸುಲ್ತಾನ್ ಅಹ್ಮದ್ ಫೈಜಾನ್ ಜತೆಗಿನ ಸಂಪರ್ಕ ದೃಢಪಟ್ಟಿದೆ. ಇದು ಜನಪ್ರತಿನಿಧಿಗಳ ಮೇಲೆಯೇ ಅನುಮಾನದ ದೃಷ್ಟಿ ಬೀರುವಂತೆ ಮಾಡಿದೆ. ಶುಕ್ರವಾರವಷ್ಟೇ ಶಾರ್ಜಾದಿಂದ ಗಡಿಪಾರಾದ ಫೈಜಾನ್, ಅಜ್ಮಿ ಜತೆ ಕೆಲಸ ಮಾಡುತ್ತಿದ್ದ. 1980ರ ದಶಕದಲ್ಲಿ ಸೌದಿ ಅರೇಬಿಯಾಕ್ಕೆ ನೌಕರರನ್ನು ಕಳುಹಿಸುವ ನೇಮಕಾತಿ ಸಂಸ್ಥೆಯೊಂದರಲ್ಲಿ ಇಬ್ಬರೂ ಒಟ್ಟಿಗೇ ಕಾರ್ಯನಿರ್ವಹಿಸುತ್ತಿದ್ದರು. ಈ ವಿಚಾರವನ್ನು ಸ್ವತಃ ಫೈಜಾನ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ಆದರೆ, ಐಎಂ ಸೇರಿದ ಬಳಿಕ ಆತ ಅಜ್ಮಿ ಜತೆ ಸಂಪರ್ಕ ಹೊಂದಿದ್ದನೇ ಎಂಬುದು ಗೊತ್ತಾಗಿಲ್ಲ. ಈ ಹಿಂದೆಯೂ ಎಸ್ಪಿ ನಾಯಕರೊಬ್ಬರಿಗೆ ಉಗ್ರರ ಜತೆ ಸಂಪರ್ಕವಿದ್ದ ವಿಚಾರ ಬಯಲಾಗಿತ್ತು.
ಸಕ್ರಿಯನಾಗಿದ್ದ ಭಟ್ಕಳ್
ಇಂಡಿಯನ್ ಮುಜಾಹಿದೀನ್ ಸಹಸ್ಥಾಪಕ ಯಾಸೀನ್ ಭಟ್ಕಳ್ ಬೆಂಗಳೂರಿನಲ್ಲೂ ಸಕ್ರಿಯನಾಗಿದ್ದ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ. ಭಟ್ಕಳ್ ಮತ್ತು ಅಖ್ತರ್ ಸೆರೆಸಿಗುವ ಮುನ್ನ ಇಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದರು. ಅನೇಕ ಅಡಗುತಾಣ ಹೊಂದಿದ್ದರು. ಚೆನ್ನೈ ಸ್ಫೋಟದ ತನಿಖಾ ಮೂಲಗಳಿಂದ ಈ ವಿಚಾರ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಭಟ್ಕಳ್ ಹಾಗೂ ಅಖ್ತರ್ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನನಗೆ ಫೈಜಾನ್ ಚೆನ್ನಾಗಿ ಗೊತ್ತು ನಿಜ. ನಾನು ಅವನೊಂದಿಗೆ ಕೆಲಸ ಮಾಡಿದ್ದು 80ರ ದಶಕದಲ್ಲಿ. ಬಳಿಕ ಆತ ಸ್ವಂತ ಏಜೆನ್ಸಿ ಮಾಡಿಕೊಂಡು, ದುಬೈಗೆ ತೆರಳಿದ. ಆತನ ಇತ್ತೀಚೆಗಿನ ಚಟುವಟಿಕೆಗಳ ಬಗ್ಗೆ ನನಗೇನೂ ತಿಳಿಯದು.
- ಅಬು ಅಜ್ಮಿ, ಸಮಾಜವಾದಿ ಪಕ್ಷದ ನಾಯಕ