ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೇಡಿಕೆ ಕಳೆದುಕೊಂಡ ಬೇಸಿಗೆ ಬತ್ತ

Vishwanath S
Updated On : 5 May 2014, 12:26 pm

ಕೊಪ್ಪಳ: ಮಾರುಕಟ್ಟೆಯಲ್ಲಿ ಅಕ್ಕಿ ದರ ದಿನೇ ದಿನೆ ಏರುತ್ತಿದ್ದರೂ ಬತ್ತಕ್ಕೆ ಮಾತ್ರ ಬೆಲೆ ಇಲ್ಲ, ರೈತರ ಯಾತನೆಗೆ ಕೊನ ಇಲ್ಲ.
ರಾಶಿ ಮಾಡಿ, ಚೀಲ ಮಾಡಿದರೂ ಬತ್ತ ಕೇಳುವವರೇ ಇಲ್ಲ. ಖರೀದಿ ಕೇಂದ್ರ ತೆರೆದು ನಮ್ಮ ಬತ್ತ ಖರೀದಿ ಮಾಡಿ ಎಂದು ರೈತರು ಅಂಗಲಾಚುತ್ತಿದ್ದರೂ ಸರ್ಕಾರ ಕಿವಿ, ಬಾಯಿ ಎರಡನ್ನೂ ಮುಚ್ಚಿಕೊಂಡಿರುವಂತೆ ಕಾಣುತ್ತಿದೆ. ಬೇಸಿಗೆ ಬತ್ತ ಬಂದಾಗೆಲ್ಲ ಪ್ರತಿ ವರ್ಷ ಇದೇ ಸಮಸ್ಯೆ. ಕಾರಣ, ನೀರಿನ ಕೊರತೆ ಹಾಗೂ ಅತಿಯಾದ ಬಿಸಿಲಿನಿಂದ ಬತ್ತ ಬಾಯಿಲ್ಡ್ ಆಗಿರುತ್ತದೆ. ಈ ಬತ್ತವನ್ನು ಮಿಲ್ಲಿಂಗ್ ಮಾಡಿದರೆ ಹೆಚ್ಚಾಗಿ ನುಚ್ಚು ಬರುವುದರಿಂದ ಖರೀದಿದಾರರು ಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಾರೆ. ಆದರೆ, ರೈತರು ಮಾಡುವ ಖರ್ಚಿಗೇನೂ ಕಡಿಮೆ ಇಲ್ಲ. ದರ ಮಾತ್ರ ಸಿಗುವುದಿಲ್ಲ. ಖರೀದಿದಾರರಿಲ್ಲದ ಕಾರಣ ಬೇಸತ್ತಿರುವ ರೈತರು ಕಟಾವು ಮಾಡಿ, ರಾಶಿ ಹಾಕಿ ಹೊಲದಲ್ಲಿಯೇ ಬಿಟ್ಟಿದ್ದಾರೆ. ಇಂದಲ್ಲ ನಾಳೆ ದರ ಬಂದಿತು, ಖರೀದಿದಾರರು ಬರುತ್ತಾರೆ ಎನ್ನುವ ವಿಶ್ವಾಸದಿಂದ. ಆದರೆ, ಒಂದು ತಿಂಗಳಿಂದ ರಾಶಿ ಹಾಕಿದ್ದರೂ ಯಾರೂ ಬಂದಿಲ್ಲ ಎನ್ನುತ್ತಾರೆ ಹಿಟ್ನಾಳ ಗ್ರಾಮದ ಉಮೇಶ.
ಸಾವಿರ ರುಪಾಯಿಗೂ ಕೇಳುವವರಿಲ್ಲ
75 ಕೆಜಿ ಬತ್ತಕ್ಕೆ ರು. 1000, 1100ಕ್ಕೆ ಕೇಳುತ್ತಿದ್ದಾರೆ. ವಾಸ್ತವವಾಗಿ ಈ ಬೆಲೆಯಿಂದ ರೈತರಿಗೆ ಮಾಡಿದ ಖರ್ಚು ದಕ್ಕುವುದಿಲ್ಲ. ರು. 1300-1400 ದರದಲ್ಲಿ ಮಾರಾಟ ಮಾಡಿದರೆ ಮಾತ್ರ ಕನಿಷ್ಠ ಲಾಭವಾಗುತ್ತದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅತ್ಯುತ್ತಮ ಬೆಲೆ ಇತ್ತು. ಈ ಸಾರಿ ಮಾತ್ರ ತೀರಾ ಕಡಿಮೆಯಾಗಿದೆ. ಅಷ್ಟು ದರ ಹೇಳಿದರೂ ಖರೀದಿ ಮಾಡುವವರೇ ಇಲ್ಲದಂತಾಗಿದ್ದು, ದಲ್ಲಾಳಿ, ಮಿಲ್ಲಿನವರ ಮುಂದೆ ಅಂಗಲಾಚುವಂತೆ ಆಗಿದೆ.
ರಫ್ತಿಗೆ ಅನುಮತಿ
ಈಗ ಕೆಲವೇ ತಳಿಗಳ ಅಕ್ಕಿ ರಫ್ತು ಮಾಡುವುದಕ್ಕೆ ಅನುಮತಿ ಇದೆ. ಎಲ್ಲ ತಳಿಗಳ ಅಕ್ಕಿಗೂ ಈ ಸೌಲಭ್ಯ ವಿಸ್ತರಿಸಬೇಕು ಎಂಬುದು ವ್ಯಾಪಾರಸ್ಥರು ಹಾಗೂ ರೈತರ ಒತ್ತಾಯ. ವಿದೇಶದಲ್ಲಿ ಬೇಸಿಗೆ ತಳಿಯ ಬತ್ತಕ್ಕೂ ಭಾರಿ ಬೇಡಿಕೆ ಇರುವುದರಿಂದ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಇಲ್ಲದಿದ್ದರೆ ಕೋಟ್ಯಂತರ ಕ್ವಿಂಟಲ್ ಬೇಸಿಗೆ ಅಕ್ಕಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗದೆ ರೈತರು ತೀವ್ರ ಸಂಕಷ್ಟ ಎದುರಿಸುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವತ್ರಿಕ ಒತ್ತಾಯ.
ರೈತರ ನೆರವಿಗೆ ಧಾವಿಸಿ
ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆದು ಬೇಸಿಗೆ ಬತ್ತ ಖರೀದಿಗೆ ಆದೇಶಿಸಬೇಕು. ಆಗ ಮಾತ್ರ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ನಿರಾಳರಾಗುತ್ತಾರೆ. ಇಲ್ಲದೇ ಹೋದರೆ ನಾನಾ ಸಮಸ್ಯೆಯನ್ನು ರೈತರು ಎದುರಿಸುವಂತಾಗುತ್ತದೆ.
- ಉಮೇಶ ಹಿಟ್ನಾಳ, ರೈತ
ದಪ್ಪಕ್ಕಿಯೂ ರಫ್ತಾಗಲಿ
ಬೇಸಿಗೆಯಲ್ಲಿ ಬರುವ ಬತ್ತ ಬಾಯಿಲ್ಡ್ ಆಗಿರುವುದರಿಂದ ಅಕ್ಕಿ ಮಾಡುವುದಕ್ಕೆ ಸಮಸ್ಯೆಯಾಗುತ್ತದೆ. ಮಾಡಿದರೂ ತುಂಡಾಗುವುದರಿಂದ ಮಾರುಕಟ್ಟೆಯಲ್ಲಿ ಅದಕ್ಕೆ ದರ ಇಲ್ಲ. ನಮ್ಮ ಭಾಗದಲ್ಲಿ ಅಂಥ ಅಕ್ಕಿಯನ್ನು ಬಳಕೆ ಮಾಡುವುದಿಲ್ಲ. ರಫ್ತಿನ ವಿಚಾರಕ್ಕೆ ಬಂದರೆ ಉತ್ತರ ಭಾರತದಲ್ಲಿ ಬೆಳೆದಿರುವ ದಪ್ಪಕ್ಕಿ ಮಾತ್ರ ರಫ್ತು ಮಾಡಲಾಗುತ್ತದೆ. ಎಲ್ಲ ಅಕ್ಕಿಯನ್ನು ರಫ್ತು ಮಾಡುವಂತಾಗಬೇಕು. ಆಗ ತಾನಾಗಿ ಬೆಲೆ ಬರುತ್ತದೆ.
- ಕೆ. ಕಾಳಪ್ಪ, ಅಕ್ಕಿ ಉದ್ಯಮಿ


-ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement