ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೇಹುಗೆ ರಾಹು

ಲೋಕಸಭೆ ಚುನಾವಣಾ ಫಲಿತಾಂಶ ಎದುರು ನೋಡುತ್ತಿರುವಾಗಲೇ ಗುಜರಾತ್...

Vishwanath S
Updated On : 5 May 2014, 3:57 am

ನವದೆಹಲಿ: ಲೋಕಸಭೆ ಚುನಾವಣಾ ಫಲಿತಾಂಶ ಎದುರು ನೋಡುತ್ತಿರುವಾಗಲೇ ಗುಜರಾತ್ ಬೇಹುಗಾರಿಕೆ ವಿಚಾರದಲ್ಲಿ ಕಾಂಗ್ರೆಸ್‌ಗೆ ಇಬ್ಬದಿಯ ಹೊಡೆತ ಬಿದ್ದಿದೆ. ಯುಪಿಎ ಮಿತ್ರಪಕ್ಷಗಳಾದ ಎನ್‌ಸಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ಗಳು ತನಿಖಾ ಆಯೋಗಕ್ಕೆ ಅಪಸ್ವರ ಎತ್ತಿವೆ.
ಇದಷ್ಟೇ ಅಲ್ಲ, ಹೊರಗಿನ ಮಿತ್ರ ಸಮಾಜವಾದಿ ಪಕ್ಷ ಕೂಡ ವಿರೋಧಿಸಿದೆ, ಈ ಬೆಳವಣಿಗೆ ನಡುವೆಯೂ  ಕಾಂಗ್ರೆಸ್ ಮಾತ್ರ ಪಟ್ಟುಬಿಡದೆ 'ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ' ಎಂದಿದೆ. ಫಲಿತಾಂಶಕ್ಕೆ ಮುನ್ನವೇ ತನಿಖಾ ಆಯೋಗದ ಮುಖ್ಯಸ್ಥರನ್ನು ನೇಮಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿಕೆ ನೀಡಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.
'ಮತ ಎಣಿಕೆಗೆ ಕೆಲವೇ ದಿನ ಬಾಕಿ ಇರುವಾಗ ಆಯೋಗಕ್ಕೆ ಆತುರವೇಕೆ' ಎನ್ನುವುದು ಮಿತ್ರರ ಪ್ರಶ್ನೆ. 'ಇದು ಆ ಪಕ್ಷಗಳ ಮಹಿಳಾ ವಿರೋಧಿ ನಿಲುವು' ಎನ್ನುವುದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ,  ಪಕ್ಷದ ವಕ್ತಾರೆ ಶೋಭಾ ಓಝಾ ತಿರುಗೇಟು.
ಫಲಿತಾಂಶಕ್ಕೆ ಎರಡು ವಾರವಷ್ಟೇ ಇರುವಾಗ ಇಂಥ ತನಿಖೆ ಅಗತ್ಯವಾದರೂ ಏನಿದೆ ಎಂದು ಎನ್‌ಸಿಪಿ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಪ್ರಶ್ನಿಸಿದ್ದಾರೆ. ಎನ್‌ಸಿಪಿ ನಿಲುವನ್ನು ವರಿಷ್ಠ ಶರದ್ ಪವಾರ್, ಪ್ರಧಾನಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆಂದೂ ಹೇಳಿದ್ದಾರೆ.
ಇದೇ ಧಾಟಿಯಲ್ಲಿ ಮಾತನಾಡಿರುವ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಹಾಗೂ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ತನಿಖಾ ಆಯೋಗವನ್ನು ಡಿಸೆಂಬರ್‌ನಲ್ಲಿಯೇ ರಚಿಸಬೇಕಿತ್ತು. ಐದು ತಿಂಗಳು ಕಳೆದ ಬಳಿಕ, ಅದರಲ್ಲೂ ಯುಪಿಎ-2 'ಕೊನೆಯ ಕ್ಷಣ'ಗಳಲ್ಲಿ ಅವಸರ ತಪ್ಪು  ಎಂದು ಹೇಳಿದ್ದಾರೆ.
ಶೆರ್ಪಾಗಳು ಸಂವಹನದಲ್ಲಿ ಸೋತರು
ಮಿತ್ರಪಕ್ಷಗಳ ಜತೆ ಪರಿಣಾಮಕಾರಿ ಸಂವಹನದಲ್ಲಿ ನಾಯಕರು ವಿಫಲರಾಗಿದ್ದಾರೆಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ರಾಜಕಾರಣದಲ್ಲಿ ಸಂಪರ್ಕ ಮತ್ತು ಸಂವಹನಗಳೇ ಮುಖ್ಯ. ಈ ವಿಚಾರದಲ್ಲಿ ಕಾಂಗ್ರೆಸ್ 'ಶೆರ್ಪಾ'ಗಳು ಎಡವಿದ್ದಾರೆ. ಹಾಗೆಯೇ ದಶಕದ ಯುಪಿಎ ಆಡಳಿತವನ್ನು ಭ್ರಷ್ಟಾಚಾರದ ಅವಧಿ ಎಂದು ಬಿಂಬಿಸುತ್ತಿರುವ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡುವಲ್ಲಿಯೂ ಪಕ್ಷ ಸೋತಿದೆ ಎಂದು ಹೈದರಾಬಾದ್‌ನಲ್ಲಿ ಹೇಳಿದರು.
2ಜಿ, ಕಾಮನ್‌ವೆಲ್ತ್ ಮತ್ತಿತರ ಹಗರಣಗಳಿಂದ ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬಂದಿರುವುದು ನಿಜ ಎಂದು ಒಪ್ಪಿಕೊಂಡ ಅವರು, ಮಿತ್ರಪಕ್ಷವಾಗಿದ್ದ ಡಿಎಂಕೆಯ ಅವಾಂತರಗಳೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು.
ಸತ್ಯ ಏನೆನ್ನುವುದು ಕಾಂಗ್ರೆಸ್ ಮಿತ್ರಪಕ್ಷಗಳಿಗೆ ಅರಿವಾಗಿದೆ. ಸುಳ್ಳುಗಳ ಸರಮಾಲೆ ಮತ್ತು ವೈಯಕ್ತಿಕ ದ್ವೇಷದ ರಾಜಕಾರಣ ಕಾಂಗ್ರೆಸ್ ಚಾಳಿ. ಅದರಲ್ಲಿ ಭಾಗಿಯಾಗಲು ಬೇರೆ ಪಕ್ಷಗಳು ಬಯಸುವುದಿಲ್ಲ.
-  ಎಂ.ಜೆ.ಅಕ್ಬರ್, ಬಿಜೆಪಿ ವಕ್ತಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement