ಯಾರಿಗೂ ಸಿಹಿ ತರದ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ
ಬೆಳಗಾವಿ: ಇಡೀ ರಾಜ್ಯದ ಸಕ್ಕರೆ ಉದ್ಯಮ ಹಾಗೂ ಕಬ್ಬು ಬೆಳೆಗಾರರ ಪಾಲಿಗೆ ಒಂದು ವಿಶ್ವವಿದ್ಯಾಲಯದಂತೆ ಕೆಲಸ ಮಾಡಬೇಕಿದ್ದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಶೋಧನೆ ಸಂಸ್ಥೆ, ಕಳೆದ 11 ವರ್ಷಗಳಿಂದ ವಿಜ್ಞಾನಿಗಳ ಮತ್ತು ಸಿಬ್ಬಂದಿಯ ಕೊರತೆಯಿಂದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಇಡೀ ರಾಜ್ಯದಲ್ಲಿ ಮಾದರಿ ಸಂಶೋಧನೆ ಕೇಂದ್ರವಾಗಬೇಕಿದ್ದ ಸಕ್ಕರೆ ಸಂಸ್ಥೆಗೆ 6 ಕೋಟಿ ರುಪಾಯಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದರೂ, ಅಲ್ಲಿ ಅಗತ್ಯ ವಿಜ್ಞಾನಿಗಳ ನೇಮಕವಾಗದ ಕಾರಣ ವಿಚಾರ ಸಂಕಿರಣಗಳಿಗೆ ಮಾತ್ರ ಸೀಮಿತವಾಗಿದೆ.
ಸ್ಥಾಪನೆಯ ಉದ್ದೇಶ: ಸಕ್ಕರೆ ಜಿಲ್ಲೆ ಎಂದೇ ಖ್ಯಾತಿಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ವಸಂತ ದಾದಾ ಸಕ್ಕರೆ ಸಂಸ್ಥೆಯ ಮಾದರಿಯ ಅತ್ಯಾಧುನಿಕ ಸಕ್ಕರೆ ಸಂಸ್ಥೆಯ ಅವಶ್ಯಕತೆಯನ್ನು ಮನಗಂಡಿದ್ದ ಹಿಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, 2003ರಲ್ಲಿ ಸಕ್ಕರೆ ಸಂಸ್ಥೆ ಸ್ಥಾಪನೆ ಮಾಡಿದರು. 2010ರಲ್ಲಿ ಆ ಸಂಸ್ಥೆಯನ್ನು ಎಸ್.ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಸಂಸ್ಥೆ ಎಂದು ಮರುನಾಮಕರಣ ಗೊಂಡಿತು. ಕಬ್ಬಿನ ಬೆಳೆಗೆ ಸಂಬಂಧಿಸಿದಂತೆ ಸಮಗ್ರ ಪೋಷಕಾಂಶಗಳ ಬಳಕೆ, ರಾಸಾಯನಿಕ ಗೊಬ್ಬರದ ಬದಲು ಜೈವಿಕ ಗೊಬ್ಬರ ಬಳಕೆ, ಹೆಚ್ಚು ಸಕ್ಕರೆ ಅಂಶ ನೀಡುವ ಎಲ್ಲ ರೀತಿಯ ಹವಾಮಾನಕ್ಕೆ ಹೊಂದಿಕೊಳ್ಳುವ ಕಬ್ಬಿನ ತಳಿಗಳ ಸಂಶೋಧನೆ, ಸಕ್ಕರೆ ಉತ್ಪಾದನೆ ಜತೆಗೆ ಅತ್ಯಾಧುನಿಕ ಪದ್ಧತಿಯಲ್ಲಿ ಮದ್ಯಸಾರದ ಉತ್ಪಾದನೆ ಹೊಸ ಆವಿಷ್ಕಾರ, ವಿದ್ಯುತ್ ಉಳಿತಾಯ, ಮುಂತಾದವುಗಳ ಬಗ್ಗೆ ಸಕ್ಕರೆ ಉದ್ಯಮಗಳಿಗೆ ಪರಿಚಯಿಸುವುದೇ ಸಂಸ್ಥೆಯ ಉದ್ದೇಶವಾಗಿತ್ತು ಆದರೆ ಸಿಬ್ಬಂದಿ ಕೊರತೆ ಮತ್ತು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಕಟ್ಟಡ ಸ್ಥಳಾಂತರ ಅವೈಜ್ಞಾನಿಕಆಡಳಿತ ಕಟ್ಟಡ, 3 ಪ್ರಯೋಗ ಶಾಲೆ, 2 ತರಬೇತಿ ಕೊಠಡಿ ಮತ್ತು 1ಸಭಾಂಗಣವುಳ್ಳ ಸುಜ್ಜಿತ ಕಟ್ಟಡವನ್ನು 5.95 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ ಇನ್ನ್ನೂ ಉದ್ಘಾಟನೆಯ ಭಾಗ್ಯವಿಲ್ಲ. ಪೀಠೋಪಕರಣಗಳಿಲ್ಲ. ಪ್ರಯೋಗ ಶಾಲೆಯಿದೆ ಆದರೆ ಯಂತ್ರೋಪಕರಣಗಳಿಲ್ಲ. ಬೆಳಗಾವಿ ಸಕ್ಕರೆ ಸಂಸ್ಥೆಯನ್ನ್ನು ತೋಟದ ಪ್ರದೇಶದಿಂದ ನಗರದ ಹೃದಯಭಾಗಕ್ಕೆ ಸ್ಥಳಾಂತರಿಸಿರುವುದು ಅವೈಜ್ಞಾನಿಕವಾಗಿದೆ.
ತಜ್ಞರ ನೇಮಕ ನನೆಗುದಿಗೆ: ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯನ್ನು ಬಲಪಡಿಸುವುದಕ್ಕಾಗಿ 2004ರಿಂದ ಇಲ್ಲಿಯವರೆಗೆ 4 ಬಾರಿ, ಸಕ್ಕರೆ ಸಂಸ್ಥೆಯ ವಿಜ್ಞಾನಿಗಳ ನೇಮಕಕ್ಕೆ ಶಿಫಾರಸು ಮಾಡಲಾಗಿದೆ. ತುರ್ತಾಗಿ 26 ಜನರನ್ನು ನೇಮಕ ಮಾಡಿಕೊಳ್ಳಲು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶರು ಸರ್ಕಾರದ ಅನುಮತಿಗಾಗಿ ಮನವಿ ಮಾಡಿಕೊಂಡರೂ ನೇಮಕ ಇನ್ನೂ ಪೂರ್ಣಗೊಂಡಿಲ್ಲ.
143ಟಿ ಎಕರೆ ಕೃಷಿ ಭೂಮಿ
ಹೊಸ ಹೊಸ ಕಬ್ಬಿನ ತಳಿಗಳ ಸಂಶೋಧನೆ ಸೇರಿದಂತೆ ನಾನಾ ವೈಜ್ಞಾನಿಕ ಆವಿಷ್ಕಾರಕ್ಕಾಗಿ ರಾಜ್ಯ ಸರ್ಕಾರ 143.31 ಎಕರೆ ಭೂಮಿ ನೀಡಿದೆ. ಬೆಳಗಾವಿ ತಾಲೂಕಿನ ಝಾಡಶಹಾಪುರದಲ್ಲಿ 27.07 ಎಕರೆ, ಬೆಳಗುಂದಿಯಲ್ಲಿ 28.36 ಎಕರೆ, ಬೆನಕನಹಳ್ಳಿಯಲ್ಲಿ 40.28 ಎಕರೆ ಹಾಗೂ ಯರಗಟ್ಟಿಯಲ್ಲಿ 50 ಎಕರೆ ಸೇರಿ ಒಟ್ಟು 143 ಎಕರೆ ಭೂಮಿ ಸಕ್ಕರೆ ಸಂಸ್ಥೆಯ ಅಧೀನದಲ್ಲಿದೆ. ರಾಜ್ಯ ಸರ್ಕಾರ ಪ್ರತಿ ವರ್ಷ ಸರಾಸರಿ 1.50ಕೋಟಿ ಸಂಸ್ಥೆಗೆ ಖರ್ಚು ಮಾಡುತ್ತಿದೆ.
-ರಾಯಣ್ಣ ಆರ್.ಸಿ.