ಆಲಮಟ್ಟಿ 5 ಮೀಟರ್ ಹೆಚ್ಚಳಕ್ಕೆ ಬೇಕು 12 ಸಾವಿರ ಕೋಟಿ!
ಬಾಗಲಕೋಟೆ: ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್ನಿಂದ 524.256ಕ್ಕೆ ಅಂದರೆ 5 ಮೀಟರ್ ಹೆಚ್ಚಿಸುವ ನಿಟ್ಟಿನಲ್ಲಿ ಈಗಾಗಲೇ ಚಿಂತನೆ ನಡೆದಿದೆ. ಆದರೆ, ಇದಕ್ಕೆ ಖರ್ಚು ಎಷ್ಟಾಗುತ್ತೆ ಗೊತ್ತಾ? ಬರೋಬ್ಬರಿ 12 ಸಾವಿರ ಕೋಟಿ!
ಹೌದು. ಇದು ಬರೀ ಅಂದಾಜು ಮೊತ್ತ ಅಷ್ಟೆ. ಈ ಎಲ್ಲ ಹೊರೆ ರಾಜ್ಯ ಸರ್ಕಾರಕ್ಕೆ ಬೀಳಲಿದೆ. ಆದರೆ ವೆಚ್ಚದ ಬಗ್ಗೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಇನ್ನೂ ಸ್ಪಷ್ಟ ಲೆಕ್ಕ ಸಿಕ್ಕಿಲ್ಲವಾದರೂ, ಕಚ್ಚಾ ಲೆಕ್ಕದಲ್ಲಿ ಇಷ್ಟು ಪಕ್ಕಾ ಆಗಿದೆ.
ಆಲಮಟ್ಟಿ ಜಲಾಶಯದಲ್ಲಿ ಪೂರ್ಣ ನೀರು ಸಂಗ್ರಹಿಸಿದರೆ (524.256 ಮೀ.) ಬಾಗಲಕೋಟೆ ನಗರದ ಹಾಲಿ 10 ವಾರ್ಡ್ಗಳು, ಗ್ರಾಮೀಣ ಪ್ರದೇಶದ 22 ಹಳ್ಳಿಗಳು ಮುಳುಗಡೆಯಾಗುತ್ತವೆ. ಮೂರನೇ ಹಂತದಲ್ಲಿ ಮುಳುಗಡೆಯಾಗುವ ಪ್ರದೇಶದಲ್ಲಿ ಈಗಾಗಲೇ ಸೋಶಿಯೋ ಎಕನಾಮಿಕ್ ಸಂಸ್ಥೆ ಸರ್ವೆ ನಡೆಸಿದೆ. ಸಮೀಕ್ಷೆ ಪ್ರಕಾರ ನಗರ ಪ್ರದೇಶದ 2186 ಕುಟುಂಬ ಹಾಗೂ ಗ್ರಾಮೀಣ ಪ್ರದೇಶದ 20037 ಕುಟುಂಬವನ್ನು ಕಡ್ಡಾಯವಾಗಿ ಸ್ಥಳಾಂತರಿಸಬೇಕಿದೆ. ಒಟ್ಟು 22,223 ಕುಟುಂಬದ 86,538 ಜನರಿಗೆ ಪುನರ್ವಸತಿ ಕಲ್ಪಿಸಬೇಕಾದ ಅನಿವಾರ್ಯತೆಯೂ ಇಲ್ಲಿದೆ.
123697 ಎಕರೆ ಭೂ ಸ್ವಾಧೀನ: ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಒಟ್ಟಾರೆ 1,23,697 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ. 20 ಗ್ರಾಮಗಳಿಂದ 94640 ಎಕರೆ ಜಮೀನು ಮುಳುಗಡೆಯಾಗಲಿದೆ. ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ 4372 ಎಕರೆ ಭೂಮಿ ಬೇಕು. ಇದಲ್ಲದೇ ಕಾಲುವೆ ನಿರ್ಮಾಣಕ್ಕೆ 24685 ಎಕರೆ ಭೂಮಿ ಅಗತ್ಯವಿದೆ. ಈ ಹಿಂದೆ ಯುಕೆಪಿಯ ಮೊದಲ ಹಾಗೂ ಎರಡನೇ ಹಂತದ ಕಾಮಗಾರಿಗಳಿಗೆ 1992ರಲ್ಲಿ ಭೂ ಸ್ವಾಧೀನವಾದಾಗ ಎಕರೆಗೆ 2ರಿಂದ 5 ಸಾವಿರ ನೀಡಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ.
ಕೇಂದ್ರ ಸರ್ಕಾರ ಇತ್ತೀಚೆಗೆ ರೂಪಿಸಿದ ನ್ಯಾಯಬದ್ಧ ಪುನರ್ವಸತಿ, ಪುನರ್ ನಿರ್ಮಾಣ ಹಾಗೂ ಭೂ ಸ್ವಾಧೀನ ಕಾಯ್ದೆ 2013ರ ಅನ್ವಯ ಒತ್ತಾಯವಾಗಿ ಭೂ ಸ್ವಾಧೀನ ಮಾಡಿಕೊಳ್ಳುವಂತಿಲ್ಲ. ರೈತರ ಮನವೊಲಿಸಿ ಮಾರುಕಟ್ಟೆ ಮೌಲ್ಯದ ನಾಲ್ಕರಷ್ಟು ನೀಡಿ ಕೊಳ್ಳಬೇಕಾಗಿದೆ.
100 ಟಿಎಂಸಿ ಹೆಚ್ಚುವರಿ
ಹಾಲಿ ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್ ಎತ್ತರಕ್ಕೆ 123 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಜಲಾಶಯವನ್ನು 524.256 ಮೀಟರ್ಗೆ ಹೆಚ್ಚಿಸಿದ್ದಲ್ಲಿ ಹೆಚ್ಚುವರಿಯಾಗಿ 100 ಟಿಎಂಸಿ ಸಂಗ್ರಹವಾಗುತ್ತದೆ. ಅಲ್ಲಿಗೆ ಆಲಮಟ್ಟಿಯ ಒಟ್ಟಾರೆ ಸಂಗ್ರಹದ ಸಾಮರ್ಥ್ಯ 223 ಟಿಎಂಸಿಯಾಗುತ್ತದೆ. 100 ಟಿಎಂಸಿ ನೀರಿಗೆ 12 ಸಾವಿರ ಕೋಟಿ ವ್ಯಯ ಮಾಡಿದಂತಾಗುತ್ತದೆ.
-ಚಿಕ್ಕಪ್ಪನಹಳ್ಳಿ ಷಣ್ಮುಖ