ಚುನಾವಣಾ ವೇಳೆ ಸರ್ಕಾರ ಬಚ್ಚಿಟ್ಟ ಬಾಂಬ್ ಸ್ಫೋಟ, ಇನ್ನು ಕಗ್ಗತ್ತಲ ಕಾಂಡ
ರಾಜ್ಯ ಸರ್ಕಾರ ಟೈಮರ್ ಅಳವಡಿಸಿ ಇಟ್ಟಿದ್ದ ಬಾಂಬ್ಗಳು ಇದೀಗ..
ಕನ್ನಡಪ್ರಭವಾರ್ತೆ , ಬೆಂಗಳೂರು , ಮೇ 5
ರಾಜ್ಯ ಸರ್ಕಾರ ಟೈಮರ್ ಅಳವಡಿಸಿ ಇಟ್ಟಿದ್ದ ಬಾಂಬ್ಗಳು ಇದೀಗ ಒಂದೊಂದಾಗಿ ಸ್ಫೋಟಿಸುತ್ತಿವೆ. ಬಸ್ ಪ್ರಯಾಣ ದರ ಏರಿಸಿ ಸಾರ್ವಜನಿಕರಿಗೆ ಶಾಕ್ ನೀಡಿದ್ದ ರಾಜ್ಯ ಸರ್ಕಾರ ಈಗ ಲೋಡ್ ಶೆಡ್ಡಿಂಗ್ ಮೂಲಕ ಇನ್ನೊಂದು ಆಘಾತ ಕೊಡಲು ಮುಂದಾಗಿದೆ.
ವಿದ್ಯುತ್ ಉತ್ಪಾದನೆಯಲ್ಲಿ ದಿಢೀರ್ ಕುಸಿತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 2 ರಿಂದ 6 ಗಂಟೆಗಳ ತನಕ ಲೋಡ್ ಶೆಡ್ಡಿಂಗ್ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಈ ವಿಷಯ ತಿಳಿಸಿದ್ದು, 'ಸುಮಾರು 1650 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ. ಈ ಬಾರಿ ವಿದ್ಯುತ್ ವ್ಯತ್ಯಯ ಇಲ್ಲ ಎಂದು ನಾನೇ ನೀಡಿದ್ದ ಭರವಸೆ ಮುರಿಯಬೇಕಾಗಿದೆ' ಎಂದು ವಿಷಾದಿಸಿದರು.
ರಾಜ್ಯದಲ್ಲಿ ಸುಮಾರು 8522 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ ಆರ್ಟಿಪಿಎಸ್, ಉಡುಪಿ ಯುಪಿಸಿಎಲ್ ಘಟಕ ಸೇರಿ ಸುಮಾರು 1000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಕುಂಠಿತಗೊಂಡಿದೆ. ಇದೇ ಕಾಲಕ್ಕೆ ಬಳಕೆಯಲ್ಲೂ ಕೊಂಚ ಇಳಿಕೆಯಾಗಿದ್ದರಿಂದ ಉಸಿರಾಡುವಂತಾಗಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಲಾಖೆಯ ಸೆಕ್ಷನ್ 11ರ ಅನ್ವಯ ದತ್ತ ಅಧಿಕಾರ ಚಲಾಯಿಸಿ ತಮಿಳುನಾಡು, ಕೇರಳಕ್ಕೆ ಖಾಸಗಿಯವರು ಪೂರೈಕೆ ಮಾಡುತ್ತಿದ್ದ 650 ಮೆಗಾ ವ್ಯಾಟ್ ವಿದ್ಯುತ್ ರಾಜ್ಯದ ಬಳಕೆಗಾಗಿ ತಡೆ ಹಿಡಿಯಲಾಗಿತ್ತು. ಆದರೆ ಸಂಬಂಧಪಟ್ಟ ರಾಜ್ಯಗಳು ಹೈಕೋರ್ಟ್ನಲ್ಲಿ ಮನವಿ ಸಲ್ಲಿಸಿ ಇದಕ್ಕೆ ತಡೆ ತಂದಿವೆ ಎಂದು ಹೇಳಿದರು.
ಬೆಂಗಳೂರು ಸೇರಿ ನಗರ ಪ್ರದೇಶಗಳಲ್ಲಿ 2 ಗಂಟೆ ಲೋಡ್ ಶೆಡ್ಡಿಂಗ್ ಅನಿವಾರ್ಯ. ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ಹಾಗೂ ಕೃಷಿ ಬೇಡಿಕೆ ಗಮನಿಸಿ 6 ಗಂಟೆ ವಿದ್ಯುತ್ ಕಡಿತ ಸಾಧ್ಯತೆ ಇದೆ. ಸಂಬಂಧಪಟ್ಟ ವಿದ್ಯುತ್ ವಿತರಣಾ ಕಂಪನಿಗಳು ಈ ಅವಧಿ ನಿಗದಿ ಮಾಡುತ್ತವೆ ಎಂದರು.
ಕಾನೂನು ಕ್ರಮ: ರಾಜ್ಯ ಕೆಲವು ಹಂತದಲ್ಲಿ ಖಾಸಗಿಯವರಿಂದ ವಿದ್ಯುತ್ ಖರೀದಿ ಮಾಡುತ್ತಿದೆ. ಅವರು ಕಲ್ಲಿದ್ದಲು ಪೂರೈಕೆ ನೆಪದಲ್ಲಿ ಈ ರೀತಿ ಖೋತಾ ಸೃಷ್ಟಿ ಮಾಡಿರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುತ್ತದೆ. ಆದರೆ ಸರ್ಕಾರ ಇಂಥ ಬ್ಲಾಕ್ಮೇಲ್ ತಂತ್ರಕ್ಕೆ ಬಗ್ಗುವುದಿಲ್ಲ ಎಂದರು.
ದಾಮೋದರ್ ವ್ಯಾಲಿಯಿಂದ ಸರ್ಕಾರ 842 ಮೆಗಾ ವ್ಯಾಟ್ ವಿದ್ಯುತ್ ಖರೀದಿಸಿದೆ. ಆದರೆ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಏಕೆಂದರೆ ಹಿಂದೆ ಮಹಾರಾಷ್ಟ್ರದಿಂದ ವಿದ್ಯುತ್ ಖರೀದಿಸುವ ಮಾತುಕತೆ ನಡೆದಿತ್ತು. ಆದರೆ ದರದಲ್ಲಿ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಹೀಗಾಗಿ ಗುಜರಾತ್ನಿಂದ ಖರೀದಿಸಲಾಯಿತು. ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ 5 ಕಿಮೀ ಪ್ರದೇಶದಲ್ಲಿ ತಾಂತ್ರಿಕ ಸಮಸ್ಯೆ ನೆವ ನೀಡುತ್ತಿರುವುದರಿಂದ ವಿಳಂಬವಾಗುತ್ತಿದೆ ಎಂದು ಹೇಳಿದರು.
ಮುಂದಿನ ತಿಂಗಳಿಂದ ಹೊಸ ಸೋಲಾರ್ ನೀತಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಲು ಮಧ್ಯಪ್ರದೇಶ, ರಾಜಸ್ಥಾನ ಹಾಗೂ ನಾಗ್ಪುರಕ್ಕೆ ಎರಡು ದಿನ ಅಧ್ಯಯನ ಪ್ರವಾಸಕ್ಕೆ ಇಂದಿನಿಂದಲೇ ತೆರಳುತ್ತಿರುವುದಾಗಿ ಹೇಳಿದರು.
ಕಂಪನಿಗಳಿಗೆ ನೋಟಿಸ್
ವಿದ್ಯುತ್ ಉತ್ಪಾದನೆಗೆ ಸರ್ಕಾರದಿಂದ ಅನುಮತಿ ಪಡೆದು ಇನ್ನೂ ಕಾರ್ಯ ನಿರ್ವಹಣೆ ಆರಂಭಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಪವನಶಕ್ತಿ, ಜಲ ವಿದ್ಯುತ್, ಕೊ-ಜನರೇಷನ್ ಸೇರಿ ಸುಮಾರು 15944 ಮೆಗಾ ವ್ಯಾಟ್ ಉತ್ಪಾದಿಸುವುದಕ್ಕೆ ನಾನಾ ಕಂಪನಿಗಳು ಅನುಮತಿ ಪಡೆದಿದ್ದವು. ಆದರೆ 4460 ಮೆಗಾ ವ್ಯಾಟ್ ಉತ್ಪಾದನೆ ಆರಂಭವಾಗಿದೆ. 2788 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡದ ಕೆಲವು ಸಂಸ್ಥೆಗಳ ಪರವಾನಗಿ ರದ್ದು ಮಾಡಿದ್ದೇವೆ. ಉಳಿದ ಸಂಸ್ಥೆಗಳಿಗೆ ನೋಟಿಸ್ ನೀಡಿದ್ದೇವೆ ಎಂದು ಹೇಳಿದರು.
ಲೋಡ್ ಶೆಡ್ಡಿಂಗ್
2 ಗಂಟೆ ನಗರ ಪ್ರದೇಶ
6 ಗಂಟೆ ಗ್ರಾಮೀಣ ಪ್ರದೇಶ
1650 ಮೆಗಾ ವ್ಯಾಟ್ ವಿದ್ಯುತ್ ಕೊರತೆ
8522 ಮೆಗಾ ವ್ಯಾಟ್ ರಾಜ್ಯದ ಒಟ್ಟು ಉತ್ಪಾದನೆ
ಇಂದಿನಿಂದಲೇ ಲೋಡ್ ಶೆಡ್ಡಿಂಗ್ ಜಾರಿ