ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಆಇಈ ಮುಂದೆ ಗೆದ್ದ ABCD

Vishwanath S
Updated On : 7 May 2014, 1:05 am

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಮೇ 6
ಎರಡೂವರೆ ದಶಕಗಳ ಕಾನೂನು ಹೋರಾಟ ಕನ್ನಡಿಗರಿಗೆ ಕಹಿಯೊಂದಿಗೆ ಅಂತ್ಯವಾಗಿದೆ.
1989ರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿದ ದಿನದಿಂದ ಖಾಸಗಿ ಶಾಲೆಗಳು ಕಾನೂನು ಹೋರಾಟ ಆರಂಭಿಸಿದವು. ಹಿಂಬಾಗಿಲಿನಿಂದ ಕಾನೂನು ಹೋರಾಟಕ್ಕೆ ಪ್ರವೇಶ ನೀಡಿದ ಖಾಸಗಿ ಶಾಲೆಗಳು, ಪಾಲಕರ ವೇದಿಕೆಗಳ ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದವು.
1ರಿಂದ 4ನೇ ತರಗತಿವರೆಗೆ ಕಲಿಕಾ ಮಾಧ್ಯಮ ಕನ್ನಡವಾಗಿರಬೇಕು ಎಂದು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿತ್ತು. ಆ ಸಂದರ್ಭದಲ್ಲೂ ಕಲಿಕಾ ಮಾಧ್ಯಮ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಂದು ಮುಖ್ಯನ್ಯಾಯಮೂರ್ತಿಯಾಗಿದ್ದ ಕನ್ನಡಿಗ ನ್ಯಾ. ಎಂ.ಎನ್. ವೆಂಕಟಾಚಲಯ್ಯ ಅವರು ಸರ್ಕಾರದ ಆದೇಶ ಎತ್ತಿಹಿಡಿದಿದ್ದರು.
ಉತ್ತಮ ಭವಿಷ್ಯಕ್ಕಾಗಿ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು ಎಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ 1993ರಲ್ಲಿ ಹೇಳಿತ್ತು. ಇದರ ಬೆನ್ನಲ್ಲೇ 1994ರಲ್ಲಿ ಮತ್ತೊಂದು ಸುತ್ತೋಲೆ ಹೊರಡಿಸಿ ರಾಜ್ಯ ಸರ್ಕಾರದ ಮಾನ್ಯತೆ ಪಡೆದ ಶಾಲೆಗಳಲ್ಲಿ 1ರಿಂದ 4ನೇ ತರಗತಿವರೆಗೆ ಕನ್ನಡ ಕಡ್ಡಾಯವಾಗಿ ಕಲಿಕಾ ಮಾಧ್ಯಮವನ್ನಾಗಿ ಸ್ವೀಕರಿಸಬೇಕು ಎಂದು ಸೂಚಿಸಲಾಯಿತು.
ಈ ಆದೇಶ ವಿರೋಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಖಾಸಗಿ ಶಾಲೆಗಳು ಹಾಗೂ ಪಾಲಕರ ಸಂಘಗಳು ಸುಮಾರು 14 ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದವು. ಅಂತಿಮವಾಗಿ 2008ರ ಜು.2ರಂದು ಮುಖ್ಯನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್, ನ್ಯಾ. ಮಂಜುಳಾ ಚೆಲ್ಲೂರ್ ಹಾಗೂ ನ್ಯಾ.ಎನ್. ಕುಮಾರ್ ಅವರ ಪೂರ್ಣ ಪೀಠ ಸುತ್ತೋಲೆ ರದ್ದುಗೊಳಿಸಿ ಮಹತ್ವದ ಆದೇಶ ನೀಡಿತು. ಕಲಿಕಾ ಮಾಧ್ಯಮ ವಿದ್ಯಾರ್ಥಿ ಅಥವಾ ಪಾಲಕರ ಆಯ್ಕೆ ಎಂದು ಹೈಕೋರ್ಟ್ ಸಾರಿತು.
ಆರಂಭದಲ್ಲಿ ಕನ್ನಡ ಸಾಹಿತಿಗಳು ಹಾಗೂ ಸಾಹಿತ್ಯ ಪರಿಷತ್‌ನಿಂದ ವ್ಯಾಪಕ ವಿರೋಧವ್ಯಕ್ತವಾಯಿತು. ಅಂದಿನ ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಪರಿಶೀಲನಾ ಅರ್ಜಿ ಸಲ್ಲಿಸಿ ವಿಫಲವಾಯಿತು. ಆ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ರಾಜ್ಯ ಸರ್ಕಾರ ಮತ್ತೊಂದು ಹಂತದ ಕಾನೂನು ಸಮರಕ್ಕೆ ಮುಂದಾಯಿತು. ಆಗ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೆಲ ಸಾಹಿತಿಗಳು ಕೂಡ ಸರ್ಕಾರದ ಕಾನೂನು ಹೊರಾಟಕ್ಕೆ ಕೈಜೋಡಿಸಿದರು. ಕಳೆದ 2013ರ ಜು.5ರಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠವು 5 ಪ್ರಶ್ನೆಗಳನ್ನು ಎತ್ತಿ ಸಂವಿಧಾನ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು.
ಸುತ್ತೋಲೆ ವಿವಾದ
ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗ3ಳು 1ರಿಂದ 4ರವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಬೇಕು ಎಂದು 1994 ಏ. 29ರಂದು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಸುತ್ತೋಲೆಯನ್ನು ಖಾಸಗಿ ಶಾಲೆಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು. ಹೈಕೋರ್ಟ್‌ನ ಪೂರ್ಣ ಪೀಠ 2008ರ ಜು.2 ರಂದು ತೀರ್ಪು ನೀಡಿ, ಭಾಷಾ ಮಾಧ್ಯಮ ನೀತಿಯನ್ನು ಖಾಸಗಿ ಶಾಲೆಗಳ ಮೇಲೆ ಹೇರಲು ಬರುವುದಿಲ್ಲ ಎಂದು ಹೇಳಿತ್ತು.
ಕರ್ನಾಟಕ ಸರ್ಕಾರ ಹೈಕೋರ್ಟ್ ಆದೇಶ ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿತ್ತು. ಐವರು ಜ್ಞಾನಪೀಠ ಪ್ರಶಸ್ತಿ ವಿಜೇತರು ಸೇರಿದಂತೆ ಏಳು ಮಂದಿ ಸಾಹಿತಿಗಳು ರಾಜ್ಯಸರ್ಕಾರದ ಆದೇಶ ಬೆಂಬಲಿಸಿ ಅರ್ಜಿ ಸಲ್ಲಿಸಿದ್ದರು.
ಭಾಷಾ ಮಾಧ್ಯಮ ವಿವಾದ ಅತ್ಯಂತ ಗಂಭೀರವಾದದ್ದು. ಹಲವು ಸಾಂವಿಧಾನಿಕ ಅಂಶಗಳನ್ನು ಈ ವಿವಾದ ಒಳಗೊಂಡಿದೆ. ಹೀಗಾಗಿ ಸಂವಿಧಾನ ಪೀಠವೇ ವಿಚಾರಣೆ ನಡೆಸಿ ತೀರ್ಪು ನೀಡಬೇಕು ಎಂದು 2013 ಜು.5 ರಂದು ಕರ್ನಾಟಕದ ಮೇಲ್ಮನವಿ ಹಾಗೂ ಖಾಸಗಿ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಸದಾಶಿವಂ ಮತ್ತು ರಂಜನ್ ಗೊಗೊಯ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತ್ತು.
ಜತೆಗೆ ಮಾತೃಭಾಷೆ ಎಂದರೇನು? ಅದನ್ನು ನಿರ್ಧರಿಸುವವರು ಯಾರು? ಪ್ರಾಥಮಿಕ ಹಂತದಲ್ಲಿ ಇಂತಹ ಮಾಧ್ಯಮದಲ್ಲಿ ಶಿಕ್ಷಣ ಬೇಕು ಎಂದು ಆಯ್ಕೆ ಮಾಡಿಕೊಳ್ಳುವ ಹಕ್ಕು ನಾಗರಿಕರಿಗೆ ಇದೆಯೇ? ಮಾತೃಭಾಷೆ ಹೇರುವುದು ಸಂವಿಧಾನದ 14, 19, 29 ಹಾಗೂ 30 ಕಲಂಗಳ ಪ್ರಕಾರ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತದೆಯೇ ಎಂಬುದು ಸೇರಿದಂತೆ ಐದು ಪ್ರಶ್ನೆಗಳನ್ನು ಕೇಳಿ ಉತ್ತರಿಸುವಂತೆ ಕೋರಿತ್ತು.
ವಿಭಾಗೀಯ ಪೀಠದ ಪ್ರಶ್ನೆ,
ಅದಕ್ಕೆ ಸಂವಿಧಾನ ಪೀಠದ ಉತ್ತರ
ಮಾತೃಭಾಷೆ ಎಂದರೇನು? ಅದನ್ನು ನಿರ್ಧರಿಸುವವರು ಯಾರು?
- ತಂದೆ- ತಾಯಿ(ಪೋಷಕರು) ಮನೆಯಲ್ಲಿ ಮಕ್ಕಳಿಗೆ ಕಲಿಸುವ ಭಾಷೆಯೇ ಮಾತೃಭಾಷೆ. ಮಾತೃಭಾಷೆ ಯಾವುದಿರಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಆಯಾ ಮಕ್ಕಳ ಪೋಷಕರಿಗೆ ಸೇರಿದ್ದು. ರಾಜ್ಯ ಸರ್ಕಾರಕ್ಕೆ ಇದರಲ್ಲಿ ಯಾವ ಹಕ್ಕು ಇಲ್ಲ, ಪಾತ್ರವೂ ಇಲ್ಲ.
ಪ್ರಾಥಮಿಕ ಹಂತದಲ್ಲಿ ಇಂತಹ ಮಾಧ್ಯಮದಲ್ಲೇ ಶಿಕ್ಷಣ ಬೇಕು ಎಂದು ಆಯ್ಕೆ ಮಾಡಿಕೊಳ್ಳುವ ಹಕ್ಕು ನಾಗರಿಕರಿಗೆ ಇದೆಯೇ?
-ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಮಾಧ್ಯಮವನ್ನು ನಿರ್ಧರಿಸುವ ಅಥವಾ ಆಯ್ಕೆ ಮಾಡಿಕೊಳ್ಳುವ ಹಕ್ಕು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಸೇರಿದ್ದು.
ಮಾತೃಭಾಷೆ ಹೇರುವುದು ಸಂವಿಧಾನದ 14, 19, 29 ಹಾಗೂ 30 ಕಲಂಗಳ ಪ್ರಕಾರ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತದೆಯೇ?
-ಮಾತೃಭಾಷೆ ಆಯ್ಕೆ ಮಾಡಿಕೊಳ್ಳುವ ಹಕ್ಕು ಪೋಷಕರು ಮತ್ತು ವಿದ್ಯಾರ್ಥಿಗಳದ್ದಾದರಿಂದ ಸರ್ಕಾರ ಶಿಕ್ಷಣದಲ್ಲಿ ಮಾತೃಭಾಷೆ ಹೇರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಪ್ರಾಥಮಿಕ ಶಿಕ್ಷಣ ಕನ್ನಡ ಭಾಷಾಮಾಧ್ಯಮದಲ್ಲೇ ನೀಡಬೇಕು ಎಂಬ ಸರ್ಕಾರದ ಆದೇಶ ಸಂವಿಧಾನದ 19 (1)(ಎ)ಯ ಸ್ಪಷ್ಟ ಉಲ್ಲಂಘನೆ.
ಮಾನ್ಯತೆ ಪಡೆದ ಶಾಲೆಗಳಲ್ಲಿ ಅನುದಾನಿತ ಶಾಲೆಗಳು ಮತ್ತು ಖಾಸಗಿ, ಅನುದಾನಿತ ರಹಿತ ಶಾಲೆಗಳು ಸೇರಿವೆಯೇ?
- ಹೌದು.
ಸಂವಿಧಾನದ 350ಎ ವಿಧಿಯಡಿ ಅಧಿಕಾರ ಬಳಿಸಿ ರಾಜ್ಯ ಸರ್ಕಾರ ಭಾಷಾ ಅಲ್ಪಸಂಖ್ಯಾತರು ಪ್ರಾಥಮಿಕ ಶಾಲೆಗಳಲ್ಲಿ ತಮ್ಮದೇ ಮಾತೃಭಾಷೆಯನ್ನು ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಳ್ಳಲು ಒತ್ತಡ ಹೇರಬಹುದೇ?
- ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯದ ಮಾತೃಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಹೇರುವುದು ಸರಿಯಲ್ಲ. 350ಎ ವಿಧಿಯಡಿ ರಾಜ್ಯಕ್ಕೆ ಆ ಅಧಿಕಾರ ದಕ್ಕಿದರೂ ಈ ಅಧಿಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದರಿಂದ ರಾಜ್ಯ ಸರ್ಕಾರ ಭಾಷಾ ಅಲ್ಪಸಂಖ್ಯಾತರ ಮೇಲೆ ಭಾಷಾ ಮಾಧ್ಯಮವನ್ನು ಹೇರುವಂತಿಲ್ಲ.

 ಭಾಷಾ ಮಾಧ್ಯಮ ನಿರ್ಧರಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಈ ಹಕ್ಕಿನಿಂದಾಗಿಯೇ ಕರ್ನಾಟಕ ಸರ್ಕಾರ 1 ರಿಂದ 4ನೇ ತರಗತಿ ವರೆಗೆ ಎಲ್ಲ ಶಾಲೆಗಳು ಮಾತೃಭಾಷೆಯಲ್ಲೇ ಶಿಕ್ಷಣ ನೀಡುವಂತೆ ಸುತ್ತೋಲೆ ಹೊರಡಿಸಿದೆ. ಮಾತೃಭಾಷೆಯಲ್ಲಿ ಕಲಿಯುವುದರಿಂದ ಮಕ್ಕಳು ವಿಷಯ ಗ್ರಹಿಸುವುದು ಸುಲಭವಾಗುತ್ತದೆ.
- ಪ್ರೊ.ರವಿವರ್ಮ ಕುಮಾರ್, ಕರ್ನಾಟಕ ಸರ್ಕಾರದ ವಕೀಲ

ಮಕ್ಕಳ ಮತ್ತು ಪೋಷಕರ ಶ್ರೇಯೋಭಿವೃದ್ಧಿಗಾಗಿ ಭಾಷಾ ಮಾಧ್ಯಮ ಯಾವುದಿರಬೇಕೆಂದು ಸೂಚಿಸುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಆ ಹಕ್ಕಿನಿಂದಾಗಿಯೇ ಸುತ್ತೋಲೆ ಹೊರಡಿಸಿದೆ.
- ಕೆ.ಎನ್.ಭಟ್, ಐವರು ಜ್ಞಾನಪೀಠ ಪುರಸ್ಕೃತರು ಸೇರಿ ಏಳು ಸಾಹಿತಿಗಳ ಪರ ವಕೀಲ

ಸಂವಿಧಾನದ ಕಲಂ 29ರಲ್ಲಿ ಮಾತೃಭಾಷೆ ಯಾವುದು ಎಂಬುದನ್ನು ನಿರ್ಧರಿಸಲು ಪೋಷಕರಿಗೆ ಹಕ್ಕು ಇದೆ. ರಾಜ್ಯ ಸರ್ಕಾರ ಮಾತೃಭಾಷೆ ಯಾವುದು ಎಂಬುದನ್ನು ವ್ಯಾಖ್ಯಾನಿಸಬಹುದು. ಆದರೆ, ಮಾತೃಭಾಷೆ ಯಾವುದು ಎಂದು ಅಂತಿಮವಾಗಿ ಪೋಷಕರೇ ನಿರ್ಧರಿಸಬೇಕು.
- ಮೋಹನ್ ಕಾತರಕಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ವಕೀಲ

ಇದು ಅತ್ಯಂತ ದುರ್ದೈವದ ಸಂಗತಿ. ಸರ್ಕಾರ ತನ್ನ ಹಕ್ಕಿನ  ಪ್ರಕಾರವೇ ಅಂತಹದೊಂದು ಕಾಯ್ದೆಯನ್ನು ಜಾರಿಗೊಳಿಸಿತ್ತು. ಆದರೆ ನ್ಯಾಯಾಲಯ ಈ ರೀತಿ ತೀರ್ಪು ನೀಡಿದ್ದು ದುರ್ದೈವ. ದೇಶದಲ್ಲಿ 1400 ಮಾತೃಭಾಷೆಗಳಿವೆ. ಎಲ್ಲ ಕಡೆ ಈ ರೀತಿ ಹಕ್ಕು ಚಲಾಯಿಸಿದರೆ, ಮುಂದೇನು ಎನ್ನುವ ಕಲ್ಪನೆ ಇದೆಯಾ?   
- ಡಾ.ಚಂದ್ರಶೇಖರ ಕಂಬಾರ, ಜ್ಞಾನಪೀಠ ಪುರಸ್ಕೃತ ಸಾಹಿತಿ

ಸುಪ್ರೀಂಕೋರ್ಟ್ ಈ ತೀರ್ಪಿನಿಂದ ಎಲ್ಲ ಮಾತೃಭಾಷೆಗಳಿಗೂ ರಾಜ್ಯ ಭಾಷೆಗಳಿಗೂ ತೀವ್ರ ಹಿನ್ನೆಡೆಯಾಗಿದೆ. ಭಾಷಾವಾರು ಪ್ರಾಂತ್ಯ ರಚನೆ ಮತ್ತು ಒಕ್ಕೂಟ ವ್ಯವಸ್ಥೆಯ ಆದರ್ಶಕ್ಕೆ ಕೊಡಲಿಯೇಟು ಹಾಕಿದಂತಾಗಿದೆ. ವ್ಯಕ್ತಿಯ ಹಕ್ಕಿನ ಕಾರಣ ನೀಡಿದ ರಾಜ್ಯದ ಶೈಕ್ಷಣಿಕ ಹಕ್ಕಿಗೆ ಧಕ್ಕೆ ತರಲಾಗಿದೆ. ಸಂವಿಧಾನದ ತಿದ್ದುಪಡಿಗಾಗಿ ಹೋರಾಟ ಕಟ್ಟುವುದೊಂದೇ ಉಳಿದಿರುವ ದಾರಿ ಎನ್ನಿಸುತ್ತಿದೆ.
- ಬರಗೂರು ರಾಮಚಂದ್ರಪ್ಪ, ಸಾಹಿತಿ

ಸರ್ಕಾರ ಅಥವಾ ಕನ್ನಡಿಗರ ಹಿನ್ನೆಡೆ ಮಾತ್ರವಲ್ಲ, ಇಡೀ ದೇಶದ ಎಲ್ಲ ರಾಜ್ಯಗಳ ಪ್ರಾದೇಶಿಕ ಭಾಷೆಗಳ ಹಿನ್ನೆಡೆ ಆಗಿದೆ. ಇದಕ್ಕೆ ದೃತಿಗೇಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲ ರಾಜ್ಯಗಳ ಒಕ್ಕೂಟದೊಂದಿಗೆ ಆಯಾ ರಾಜ್ಯಗಳಲ್ಲಿನ ಭಾಷೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವಂತೆ  ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಡ ತರಬೇಕಿದೆ.
-  ಪುಂಡಲೀಕ ಹಾಲಂಬಿ, ಕಸಾಪ ಅಧ್ಯಕ್ಷರು

ತೀರ್ಪು ಅತ್ಯಂತ ಆತಂಕ ತಂದಿದೆ. ಇಂತಹ ತೀರ್ಪುಗಳ ಹಿನ್ನೆಲೆಯಲ್ಲಿ  ಪ್ರಾದೇಶಿಕ ಭಾಷೆಗಳೇ ನಾಶವಾಗುವ ಅಪಾಯವಿದೆ. ಇದರಿಂದಲೇ ಇವತ್ತು ಮಾತೃ ಭಾಷೆ ಎನ್ನುವುದಕ್ಕಿಂತ ಪ್ರಾದೇಶಿಕ ಅಥವಾ ರಾಜ್ಯ ಭಾಷೆಗಳ ಅಳಿವು-ಉಳಿವು ಕುರಿತು ರಾಷ್ತ್ರೀಯ ಚರ್ಚೆ ಶುರುವಾಗಬೇಕಿದೆ.
- ಕೆ.ಮರುಳಸಿದ್ದಪ್ಪ, ಸಾಹಿತಿ

ಕನ್ನಡ ಉಳಿವಿಗೆ ಅತ್ಯಂತ ಮಾರಕವಾದ ತೀರ್ಪು ಇದು. ಬಹುಮುಖ್ಯವಾಗಿ ಭಾಷಾವಾರು ಪ್ರಾಂತ್ಯಗಳ ಆಶಯ, ಅದರ ಉದ್ದೇಶಕ್ಕೆ  ತೀವ್ರ ಹೊಡೆತ ನೀಡಿದೆ. ಜೊತೆಗೆ ಜಾಗತೀಕರಣದ ಈ ಹೊತ್ತಲ್ಲಿ ಅದಕ್ಕೆ ಪೂರಕವಾಗಿ ಬಂದ ತೀರ್ಪಿನ ಹಾಗಿದೆ. ಅಷ್ಟೇ ಅಲ್ಲ, ಗ್ರಾಮೀಣ, ನಗರ ಪ್ರದೇಶದ ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಲಿದೆ.
- ಡಾ.ಬಂಜಗೆರೆ ಜಯಪ್ರಕಾಶ್, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ

ಒಂದು ಪ್ರದೇಶದ ಬಹು ಜನರ ಭಾಷೆಯಾಗಿರುವ ಭಾಷೆಯನ್ನೇ ಮಾತೃ ಭಾಷೆಯಾಗ ಬೇಕೆನ್ನುವುದು ಶಿಕ್ಷಣ ತಜ್ಞರ ಅಭಿಮತವಾಗಿದೆ. ಸಂವಿಧಾನದ ಹಲವು ವಿಧಿಗಳಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಇನ್ನೂ ಉದಾಸೀನ ಮುಂದುವರಿಸಿದರೆ ಸಂಸ್ಕೃತ ಭಾಷೆಯಂತೆ ಕನ್ನಡವೂ ಸಹ ಮೃತ ಭಾಷೆಗಳ ಪಟ್ಟಿಗೆ ಸೇರಲಿದೆ.
- ಸು.ತ.ರಾಮೇಗೌಡ, ಸಾಹಿತಿ

ಕೋರ್ಟ್ ನಿರ್ಣಯ ಭಾಷೆಗೆ ಮಾರಕವಾಗಿದ್ದು, ಕನ್ನಡ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಇದು ನಿಜವಾಗಿಯೂ ಕನ್ನಡಿಗರಿಗೆ ಆಘಾತಕಾರಿ. ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು.
- ಬಸವರಾಜ ಶಾಸ್ತ್ರಿ, ಸಾಹಿತಿ

ಸರ್ಕಾರಗಳು 1994ನೇ ಇಸವಿಯಲ್ಲಿ ಮೂಲಭೂತವಾಗಿ ಕ್ರಮ ಕೈಗೊಂಡಿದ್ದರೆ ಅಥವಾ ಕಾನೂನು ರಚಿಸಿದ್ದರೆ ಇಷ್ಟೊಂದು ಪರಿಣಾಮ ಎದುರಿಸುವ ಅಗತ್ಯ ಬರುತ್ತಿರಲಿಲ್ಲ. ಇದು ಸರ್ಕಾರ, ರಾಜಕಾರಣಿಗಳಿಂದ ಆಗಿರುವ ತಪ್ಪು.
- ಲಿಂಗಣ್ಣ ಬಂಧೂಕಾರ್, ಸಾಹಿತಿ

ಭಾಷಾ ಮಾಧ್ಯಮಕ್ಕೆ ಸಂಬಧಿಸಿದಂತೆ ಸ್ಥಳೀಯ ಭಾಷೆ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬರುವುದಾಗಿ ವಿಶ್ವಾಸವಿತ್ತು. ತೀರ್ಪಿನಿಂದ ತಲ್ಲಣಗೊಂಡಿದ್ದೇನೆ. ಕನ್ನಡದ ಪ್ರಗತಿಗೆ ಧಕ್ಕೆಯಾಗಿದೆ.
- ಹಂಪನಾಗರಾಜಯ್ಯ, ಸಾಹಿತಿ

ತೀರ್ಪಿನಿಂದ ಒಕ್ಕೂಟ ವ್ಯವಸ್ಥೆಗೆ ಆತಂಕ ಉಂಟಾಗಿದೆ. ಭಾಷಾವಾರು ಪ್ರಾಂತ್ಯದ ಧ್ಯೇಯದ ಕಡೆಗಣನೆ, ಗಾಂಧೀಜಿ ಅವರ ಅಭಿಪ್ರಾಯಕ್ಕೂ ವ್ಯತಿರಿಕ್ತ ತೀರ್ಪಾಗಿದ್ದು, ರಾಜ್ಯ ಸರ್ಕಾರ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಬೇಕು.
- ಡಾ. ಸಿದ್ದಲಿಂಗಯ್ಯ, ಸಾಹಿತಿ

ಸುಪ್ರೀಂಕೋರ್ಟ್ ತೀರ್ಪಿನಿಂದ ಕನ್ನಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಸಂವಿಧಾನ ತಿದ್ದುಪಡಿಯಾಗದೆ ಇಂಥ ಸಮಸ್ಯೆಗಳು ಆಗಾಗ ಕಾಡುತ್ತವೆ. ಸಂವಿಧಾನ ತಿದ್ದುಪಡಿಯಾಗದ ಹೊರತು ಭಾಷಾವಾರು ವಿಂಗಡಣೆ ಪ್ರಕ್ರಿಯೆಯೂ ತಪ್ಪೆನಿಸುತ್ತದೆ.
- ಕುಂ. ವೀರಭದ್ರಪ್ಪ, ಖ್ಯಾತ ಕಥೆಗಾರ

ಈ ತೀರ್ಪು ಕನ್ನಡ ಸೇರಿದಂತೆ ಹಲವು ರಾಜ್ಯಗಳ ಮಾತೃ ಭಾಷೆಗಳ ಮೇಲೆ ಹೊಡೆತ ನೀಡಲಿದೆ. ಈ ಕುರಿತು ರಾಜ್ಯ ಸರ್ಕಾರ ಸೂಕ್ತ ಕಾನೂನು ಸಮರ ಮಾಡಬೇಕಿತ್ತು.
- ಡಾ.ಗಿರಡ್ಡಿ ಗೋವಿಂದರಾಜ,  ಸಾಹಿತಿ

ಸರ್ಕಾರ ಬಿಗಿ ನಿಲುವು ಹೊಂದದೆ ದುರ್ಬಲವಾಗಿರುವುದೇ ಇಂತಹ ಸಮಸ್ಯೆಗೆ ಕಾರಣ. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕು ಎಂಬುದು ತರ್ಕಬದ್ಧ. ಪೋಷಕರಾಗಲಿ, ಶಿಕ್ಷಣ ಸಂಸ್ಥೆಗಳಾಗಲಿ ಶೈಕ್ಷಣಿಕ ನೀತಿ ಉಲ್ಲಂಘಿಸುವುದು ಸರಿಯಲ್ಲ.
- ಡಾ. ಸಿಪಿಕೆ, ಸಾಹಿತಿ, ಮೈಸೂರು

ಸುಪ್ರೀಂ ಆದೇಶದಿಂದ ಈಗಾಗಲೇ ಬಡವಾಗಿರುವ ಕನ್ನಡ ಭಾಷೆ ಮತ್ತಷ್ಟು ಬಡವಾಗುವ ಅಪಾಯವಿದೆ. ಈ ತೀರ್ಪು ಅಪಾಯಕಾರಿ ಬೆಳವಣಿಗೆ. ಜನರು ನಿರ್ಧಾರ ಮಾಡಬೇಕಾದನ್ನು ಕೋರ್ಟ್ ನಿರ್ಧರಿಸುವುದಾದರೆ ಜನ ಇರುವುದೇಕೆ.
- ನಾ. ಡಿ'ಸೋಜ, ಸಾಹಿತಿ

ಈ ತೀರ್ಪಿನಿಂದ ಸಾಮಾಜಿಕ ಅಸಮಾನತೆ ಹೆಚ್ಚಾಗಲಿದೆ. ಶಿಕ್ಷಣ ಖಾಸಗೀಕರಣದ ಕರಾಳೆತೆಯನ್ನು ನ್ಯಾಯಾಲಯ ಬೇರುಮಟ್ಟಕ್ಕೆ ಇಳಿದು ಅರ್ಥ ಮಾಡಿಕೊಳ್ಳಬೇಕಿತ್ತು.
- ರೂಪಾ ಹಾಸನ, ಸಾಹಿತಿ

ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಲ್ಲವೆಂಬ ಸುಪ್ರಿಂಕೋರ್ಟ್ ತೀರ್ಪು ಅವೈಜ್ಞಾನಿಕ. ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಬೇಕೆಂಬ ಕಾನೂನು ರಚನೆಯಾಗಬೇಕು. ಇಲ್ಲದಿದ್ದರೆ ಈ ತೀರ್ಪು ಕನ್ನಡದ ಜತೆಗೆ ಇತರ ಭಾಷೆಗಳಿಗೂ ಮರಣ ಶಾಸನದಂತಾಗುತ್ತದೆ. ಸಿಎಂ ಸಿದ್ದರಾಮಯ್ಯ ತಕ್ಷಣ ಎಲ್ಲ ರಾಜ್ಯಗಳ ಸಿಎಂಗಳ ಸಭೆ ಕರೆದು ಮಾತೃಭಾಷೆಯಲ್ಲಿ ಶಿಕ್ಷಣ ಕಡ್ಡಾಯದ ಕಾನೂನು ರಚಿಸುವ ಕುರಿತು ಚರ್ಚಿಸಬೇಕು.
- ಪಾಟೀಲ ಪುಟ್ಟಪ್ಪ, ಸಾಹಿತಿ

ಭಾಷಾವಾರು ಪ್ರಾಂತ್ಯ ರಚನೆಯ ಉದ್ದೇಶ ಅರಿಯದೆ ಮಾತೃಭಾಷೆಯ ಕುರಿತು ಗೊಂದಲ ಸೃಷ್ಟಿಸುವುದು ಸರಿಯಲ್ಲ. ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಭಾಷಾವಾರು ಶಿಕ್ಷಣ ಜಾರಿ ಅತ್ಯಗತ್ಯ.
- ಡಾ. ಚಂದ್ರಶೇಖರ ನಂಗಲಿ, ಸಾಹಿತಿ

ಸುಪ್ರೀಂ ಕೋರ್ಟ್ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮ ಐಚ್ಛಿಕ ವಿಷಯ ಎಂದು ತೀರ್ಪು ನೀಡಿದರೂ ಜನರು ಸ್ವತಂತ್ರವಾಗಿ ಆಲೋಚಿಸಿ ಮಾತೃ ಭಾಷೆ ಕನ್ನಡವನ್ನು ಗೌರವಿಸಬೇಕು.  - ಪ್ರೊ.ಅಮೃತ ಸೋಮೇಶ್ವರ, ಸಾಹಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement