ಉ.ಕರ್ನಾಟಕ, ದ.ಕ.ದಲ್ಲಿ ಭಾರಿ ಗಾಳಿ- ಮಳೆ, ಹಲವೆಡೆ ಹಾನಿ
ಮಂಗಳೂರು/ಹುಬ್ಬಳ್ಳಿ: ಉತ್ತರ ಕನ್ನಡ, ಹಾವೇರಿ, ಗದಗ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮಂಗಳವಾರವೂ ಮಿಂಚು-ಗುಡುಗು ಸಹಿತ ಮಳೆ ಆರ್ಭಟ ಮುಂದುವರಿದಿದೆ. ಮರಗಳು, ವಿದ್ಯುತ್ ಕಂಬ ಉರುಳಿ ಬಿದ್ದು ಹಾನಿಯಾಗಿದೆ.
ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸಂಜೆ ಸುಮಾರು ಒಂದು ಗಂಟೆ ಕಾಲ ಗುಡುಗು, ಸಿಡಿಲು ಗಾಳಿ ಸಹಿತ ಭಾರಿ ಮಳೆಯಾಗಿದೆ. ಮನೆ ಸಹಿತ ಆಸ್ತಿ ಹಾನಿಯಾಗಿದ್ದು, ವಿದ್ಯುತ್, ದೂರವಾಣಿ ಸಂಪರ್ಕ ವ್ಯತ್ಯಯಗೊಂಡು ಜನಜೀವನ ಅಸ್ತವ್ಯಸ್ತಗೊಳ್ಳುವಂತಾಯಿತು. ತಾಲೂಕಿನ ಹಲವೆಡೆ ಮನೆಗಳಿಗೆ ಹಾನಿಯಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಬೀಸಿದ ಸುಂಟರಗಾಳಿಯಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ. ಹಲವೆಡೆ ವದ್ಯುತ್ ವ್ಯತ್ಯಯ ಉಂಟಾಗಿದೆ.
ಇನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಮುಂಡಗೋಡ, ಸಿದ್ದಾಪುರ, ಯಲ್ಲಾಪುರಗಳಲ್ಲಿ ಮಿಂಚು-ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ಶಿರಸಿ, ಹಳಿಯಾಳ, ಜೋಯಿಡಾಗಳಲ್ಲಿ ತುಂತುರು ಮಳೆಯಾಗಿದೆ. ಕಾರವಾರದಲ್ಲಿ ಮಳೆ ಕಡಿಮೆಯಿದ್ದರೂ ಬಿರುಗಾಳಿ ಜೋರಾಗಿತ್ತು. ಹಲವು ಮರಗಳು, 3-4 ವಿದ್ಯುತ್ ಕಂಬಗಳು ಧರೆಗುರುಳಿದ್ದು, ನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದ ಹಲವು ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು ಕೊಚ್ಚಿಕೊಂಡು ಹೋಗಿವೆ.
ಭಾರಿ ಮಳೆ, ಗಾಳಿಗೆ ಬ್ಯಾಡಗಿ ತಾಲೂಕಿನ ಚಿಕ್ಕಣಜಿ ಗ್ರಾಮದಲ್ಲಿ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ಸುಮಾರು 3 ತಾಸಿಗೂ ಹೆಚ್ಚು ಕಾಲ ಶಿರಸಿ-ದಾವಣಗೆರೆ ಮಾರ್ಗ ಸ್ಥಗಿತಗೊಂಡಿತ್ತು.