ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಏಕರೂಪ ಭಾಷಾ ಮಾಧ್ಯಮ ನೀತಿ ರೂಪಿತವಾಗಲಿ: ಚಂದ್ರು

Vishwanath S
Updated On : 7 May 2014, 12:39 pm

ಕನ್ನಡಪ್ರಭ ವಾರ್ತೆ ,  ಬೆಂಗಳೂರು ,  ಮೇ 6
ಭಾಷಾ ಮಾಧ್ಯಮದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ರಾಜ್ಯಕ್ಕೆ ಹಿನ್ನಡೆಯಾಗಿದ್ದು, ಎಲ್ಲ ರಾಜ್ಯಗಳನ್ನು ಸಂಪರ್ಕಿಸಿ ಒಗ್ಗಟ್ಟಿನಿಂದ ರಾಷ್ಟ್ರಮಟ್ಟದಲ್ಲಿ ಏಕರೂಪ ಭಾಷಾ ಮಾಧ್ಯಮ ನೀತಿ ರೂಪಿಸಲು ಮುಂದಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕಡ್ಡಾಯ ಶಿಕ್ಷಣ ನೀತಿ ಜಾರಿ ಇರುವ ಸಂದರ್ಭದಲ್ಲಿ ಅದರ ಮೂಲಕ ಮಾತೃಭಾಷೆಯಲ್ಲೂ ಕಲಿಸಬೇಕು ಎಂದು ಹೇಳಲಾಗಿದೆ. ಆದರೆ, ಭಾಷಾ ಮಾಧ್ಯಮದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವ್ಯತಿರಿಕ್ತವಾಗಿದೆ. ಇದು ಕನ್ನಡದ್ರೋಹಿಗಳಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿದೆ ಎಂದು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.
ರಾಜ್ಯ ಸರ್ಕಾರ ಅತ್ಯಂತ ಜರೂರಾಗಿ ಕಾರ್ಯಪ್ರವೃತ್ತರಾಗಬೇಕಿದ್ದು, ನೆರೆಯ ಎಲ್ಲ ರಾಜ್ಯಗಳಿಗೂ ಈ ವಿಷಯ ಪ್ರಾಮುಖ್ಯ ತಿಳಿಸಿ ರಾಷ್ಟ್ರೀಯ ಭಾಷಾಮಾಧ್ಯಮ ನೀತಿ ಜಾರಿಗೆ ತರಲು ಕೇಂದ್ರಕ್ಕೆ ಒತ್ತಡ ಹಾಕಬೇಕು. ಅಲ್ಲದೆ, ಹೊಸದಾಗಿ ಆಯ್ಕೆಯಾಗುವ ನಮ್ಮ ಸಂಸದರೂ ಈ ಬಗ್ಗೆ ಆಸಕ್ತಿವಹಿಸಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ವಿಷಯವಾಗಿ ಮಾತನಾಡಿದಾಗ, ಅವರೂ ಭಾಷಾ ಮಾಧ್ಯಮದ ಬಗ್ಗೆ ಒಲವು ಹೊಂದಿದ್ದಾರೆ. ಆದರೆ ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡಬೇಕಾಗಿರುವುದರಿಂದ ಕಾನೂನು ತಜ್ಞರು, ಶಿಕ್ಷಣ ತಜ್ಞರು, ಸಾಹಿತಿಗಳೆಲ್ಲರೊಂದಿಗೆ ಚರ್ಚಿಸಿ ಸಂವಿಧಾನ ತಿದ್ದುಪಡಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವಾಗಿ ಎಲ್ಲ ಪಕ್ಷಗಳ ಮುಖಂಡರನ್ನೂ ಚರ್ಚೆಗೆ ಆಹ್ವಾನಿಸಬೇಕು. ಸಾಧ್ಯವಾದರೆ ಕಡಿಮೆ ಅವಧಿಯ ವಿಧಾನಮಂಡಲ ಅಧಿವೇಶನ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
9ಕ್ಕೆ ಕನ್ನಡ ಸಭೆ
ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಭಾಷಾ ನೀತಿ ಬಗ್ಗೆ ಚರ್ಚಿಸಲು ಸಾಹಿತಿಗಳು, ಹಿಂದಿನ ಶಿಕ್ಷಣ ಸಚಿವರು ಸೇರಿದಂತೆ ಗಣ್ಯರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 9ರಂದು ಮಹತ್ವದ ಸಭೆ ಕರೆದಿದ್ದಾರೆ. ಮಧ್ಯಾಹ್ನ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಈ ಸಭೆ ನಡೆಯಲಿದ್ದು, ರಾಜ್ಯ ಸರ್ಕಾರದ ಮುಂದಿನ ನಡೆ ಬಗ್ಗೆ ಚರ್ಚೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement