ಪಠ್ಯಪುಸ್ತಕ: ಶಾಲೆಗಳಿಗೆ ಈಗಲೇ ಶೇ.73 ರವಾನೆ
ಶಿವಮೊಗ್ಗ: ರಾಜ್ಯದ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳು ಶೈಕ್ಷಣಿಕ ವರ್ಷದ ಆರಂಭದಲ್ಲೇ ತಲುಪಿಸಬೇಕೆಂಬ ಶಿಕ್ಷಣ ಇಲಾಖೆಯ 4-5 ವರ್ಷದ ಸತತ ಪ್ರಯತ್ನ ಕೊನೆಗೂ ಈ ವರ್ಷ ಈಡೇರುವ ಹಂತ ತಲುಪಿದೆ.
ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ತಲುಪಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಪಠ್ಯಪುಸ್ತಕ ವಿತರಣಾ ವ್ಯವಸ್ಥೆಯಲ್ಲಿದ್ದ ಅನೇಕ ದೋಷ ನಿವಾರಿಸಿದ್ದರು, ವ್ಯವಸ್ಥೆ ಬದಲಾಯಿಸಿದ್ದರು. ಹಂತ- ಹಂತವಾಗಿ ಸುಧಾರಣೆಗೊಂಡ ವ್ಯವಸ್ಥೆ ಈ ಬಾರಿ ಹಳಿ ಮೇಲೆ ಬಂದಿದೆ. ಈ ಸುಧಾರಣೆಯಲ್ಲಿ ಹಾಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಪಾತ್ರವೂ ದೊಡ್ಡದಿದೆ.
ಸದ್ಯದ ಮಾಹಿತಿ: ಶಿಕ್ಷಣ ಇಲಾಖೆಯ ಮಾಹಿತಿಯಂತೆ ಶಾಲಾ ಮಕ್ಕಳಿಗೆ ವಿತರಿಸುವುದಕ್ಕಾಗಿ ಒಟ್ಟು 376 ಶಿರ್ಷಿಕೆ(ಟೈಟಲ್)ಗಳಲ್ಲಿ ಒಟ್ಟಾರೆ 6,48,17,920 ಪುಸ್ತಕ ಮುದ್ರಣವಾಗಬೇಕಾಗಿತ್ತು. ಇದಕ್ಕಾಗಿ ಆರು ತಿಂಗಳ ಹಿಂದೆಯೇ ಟೆಂಡರ್ ಪ್ರಕ್ರಿಯೆಗಳು ನಡೆದಿದ್ದವು. ಇದೀಗ ಮುದ್ರಕರು 5,80,67,138 ಪುಸ್ತಕ ಮುದ್ರಿಸಿದ್ದಾರೆ. ಅಂದರೆ ಶೇ. 90ರಷ್ಟು ಪುಸ್ತಕಗಳು ಮುದ್ರಣಗೊಂಡಿವೆ.
ಮುದ್ರಕರು ಶಿಕ್ಷಣ ಇಲಾಖೆಗೆ ಈಗಾಗಲೇ 4,70,99,483 ಪುಸ್ತಕಗಳನ್ನು ರವಾನಿಸಿಯಾಗಿದೆ. ಬಹುತೇಕ ಎಲ್ಲಾ ಜಿಲ್ಲೆಗಳ ಡಿಡಿಪಿಐ ಬಿಇಒ ಕಚೇರಿಗೆ ಪುಸ್ತಕ ತಲುಪಿಸುವ ಕಾರ್ಯ ನಡೆದಿದೆ. ಮುದ್ರಕರ ಮಾಹಿತಿಯಂತೆ ಮುದ್ರಣಗೊಂಡ ಪುಸ್ತಗಳ ಪೈಕಿ ಶೇ. 73ರಷ್ಟು ಪುಸ್ತಕ ರವಾನೆಯಾಗಿದೆ. ತಲುಪಿದ್ದರ ಸಾಕ್ಷಿ ಎಂಬಂತೆ ಶೇ. 68ರಷ್ಟು ಪುಸ್ತಕ ತಲುಪಿದೆ ಎಂದು ಡಿಡಿಪಿಐಗಳು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇನ್ನು 2014-15ನೇ ಸಾಲಿನ ಹೊಸ ಸಿಲಬಸ್ ರೂಪದಲ್ಲಿ ಹೊರಬರುತ್ತಿರುವ 3, 4, 7 ಮತ್ತು 10ನೇ ತರಗತಿ ಪಠ್ಯಗಳ ಪೈಕಿ 135 ಟೈಟಲ್‌ಗಳಾಗಲಿದ್ದು, 2,16,58,960 ಪುಸ್ತಕ ಮುದ್ರಣವಾಗಬೇಕಾಗಿದ್ದು, ಈವರೆಗೆ 1,58,51,198 ಪುಸ್ತಕ ಮುದ್ರಣವಾಗಿದೆ. ಶೇ. 73ರಷ್ಟು ಮುದ್ರಣವಾಗಿದ್ದರೆ, ಶೇ. 42ರಷ್ಟು ರವಾನೆಯಾಗಿದೆ.
ಮುಂಬರುವ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯಪುಸ್ತಕಗಳು ಶಾಲಾ ಮಕ್ಕಳ ಕೈಯಲ್ಲಿ ಇರಬೇಕು ಎಂಬ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಆಶಯದಂತೆ ಪ್ರಯತ್ನ ನಡೆಸಲಾಗಿತ್ತು. ಇದೀಗ ಅಂತಿಮ ಚರಣದಲ್ಲಿದ್ದು, ಶೈಕ್ಷಣಿಕ ವರ್ಷದ ಆರಂಭದಲ್ಲೇ ಪುಸ್ತಕಗಳು ಕೈಸೇರುವುದು ಖಚಿತ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
-ಶ್ರೀಕಾಂತ ಭಟ್