ವಿಮಾನ ನಿಲ್ದಾಣಗಳೇ ಉಗ್ರರ ಗುರಿ
ಬೆಂಗಳೂರು/ಚೆನ್ನೈ: 'ಎಚ್ಚರಿಕೆ...! ದಕ್ಷಿಣ ಭಾರತದಲ್ಲಿರುವ ಪ್ರಮುಖ ವಿಮಾನ ನಿಲ್ದಾಣಗಳನ್ನು ಭಯೋತ್ಪಾದಕರು ಗುರಿಯಾಗಿರಿಸಿ ದಾಳಿ ನಡೆಸಬಹುದು. ವಿಮಾನ ನಿಲ್ದಾಣಗಳ ಅಧಿಕಾರಿ ವರ್ಗ ಮತ್ತು ಪ್ರಯಾಣಿಕರು ಎಚ್ಚರದಿಂದ ಇರಬೇಕು. ದಾಳಿಗೆ ಐಎಸ್ಐ ಬೆಂಬಲವೂ ಇದೆ.'
- ಹೀಗೆಂದು ಸೂಚನೆ ನೀಡಿದ್ದು ವಿಮಾನ ಯಾನ ಭದ್ರತಾ ಸಂಸ್ಥೆ (ಬಿಸಿಎಸ್). ಮಂಗಳವಾರ ಸಂಸ್ಥೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ಹೈದರಾಬಾದ್, ಕೊಚ್ಚಿ, ಚೆನ್ನೈ ಮತ್ತು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸ್ಥಳೀಯ ಪೊಲೀಸರ ಜತೆಗೆ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಯಾವ ರೀತಿಯ ದಾಳಿ?
ಗುಪ್ತಚರ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಉಗ್ರಗಾಮಿಗಳು ಕಾರ್ ಬಾಂಬ್ ದಾಳಿ, ಆತ್ಮಹತ್ಯಾ ದಾಳಿ ಎಸಗಬಹುದು.
ಗರಿಷ್ಠ ಭದ್ರತೆ
ಬಿಸಿಎಸ್ ಪತ್ರದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಪ್ರಮುಖ ವಿಮಾನ ನಿಲ್ದಾಣಗಳೂ ಸೇರಿದಂತೆ ದೇಶದ ಪ್ರಮುಖ 59 ವಿಮಾನ ನಿಲ್ದಾಣಗಳಲ್ಲಿ ಕೇಂದ್ರೀಯ ಕೈಗಾರಿಕಾ ಪಡೆ (ಸಿಐಎಸ್ಎಫ್) ಸಿಬ್ಬಂದಿಯನ್ನು ರಕ್ಷಣೆಗಾಗಿ ನಿಯೋಜಿಸಲಾಗಿದೆ. ಪ್ರಯಾಣಿಕರು ಮತ್ತು ಅವರ ಜತೆಗೆ ಇರುವವರ ಮೇಲೂ ಕಣ್ಗಾವಲು ಇಡಲಾಗಿದೆ.
ಗೊತ್ತಾದದ್ದು ಹೇಗೆ?
ಚೆನ್ನೈ ಪೊಲೀಸರಿಂದ ಬಂಧಿತಶ್ರೀಲಂಕಾ ನಾಗರಿಕನ ವಿಚಾರಣೆ ವೇಳೆ ಈ ಮಾಹಿತಿ ಬಹಿರಂಗವಾಗಿದೆ. ಪಾಕಿಸ್ತಾನದ ಐಎಸ್ಐ ಈ ದಾಳಿಗೆ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಆತ ತಿಳಿಸಿದ್ದಾನೆ. ಪ್ರಮುಖ ಸಾರ್ವಜನಿಕ ಸ್ಥಳಗಳು, ಪ್ರಮುಖ ಸಂಸ್ಥೆಗಳ ಮೇಲೂ ದಾಳಿ ಸಂಚು ನಡೆದಿದೆ ಎಂದು ಆತ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಗುಪ್ತಚರ ಸಂಸ್ಥೆ ಅಧಿಕಾರಿಗಳ ಪ್ರಕಾರ ಪಾಕಿಸ್ತಾನದ ಐಎಸ್ಐ ಬೆಂಬಲಿತ ಉಗ್ರರು ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ನುಸುಳಲು ಯತ್ನಿಸುತ್ತಿದ್ದಾರೆ.