ಹೊಸ ಪಡಿತರ ಚೀಟಿಗೆ ಸಿಬ್ಬಂದಿ ಕಾಟ
ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ಅರ್ಜಿ ಸಲ್ಲಿಸಿದವರು ಪಡಿತರ ಕಾರ್ಡ್ ಪಡೆಯಲು ಇನ್ನೂ ಐದಾರು ತಿಂಗಳು ಕಾಯಬೇಕಿದೆ. ಕಡಿಮೆ ದರಕ್ಕೆ ರೇಷನ್ ನೀಡುವ ಸರ್ಕಾರ, ಕಾರ್ಡ್ ನೀಡಲು ಮಾತ್ರ ನಿರುತ್ಸಾಹ ತೋರುತ್ತಿದೆ.
ಅರ್ಜಿಗಳನ್ನು ಪರಿಶೀಲಿಸಲು ಮತ್ತು ಮನೆಗಳಿಗೆ ತೆರಳಿ ಅರ್ಹತೆ ದೃಢೀಕರಿಸಲು ಆಹಾರ ಇಲಾಖೆಯಲ್ಲಿ ಜನರೇ ಇಲ್ಲ. ಶೇ.40ರಷ್ಟು ಹುದ್ದೆಗಳು ಖಾಲಿಯಾಗಿದ್ದು, ದೈನಂದಿನ ಕಾರ್ಯ ನಡೆಸುವುದೂ ಕಷ್ಟವಾಗಿದೆ.
ರಾಜ್ಯಾದ್ಯಂತ ಸುಮಾರು 35ಲಕ್ಷ ಮಂದಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬಹುತೇಕರು ಬಿಪಿಎಲ್ ಕಾರ್ಡ್ ಪಡೆಯಲು ಉತ್ಸುಕರಾಗಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ 1ಕ್ಕೆ ಕೆಜಿ ಅಕ್ಕಿ ಸಿಗುತ್ತಿರುವುದರಿಂದ ಇವರು ಕಾರ್ಡ್ ಬರುವುದನ್ನೇ ಕಾಯುತ್ತಿದ್ದಾರೆ. ಆದರೆ ಆಹಾರ ಇಲಾಖೆ ಸ್ವೀಕರಿಸಿದ 35ಲಕ್ಷ ಅರ್ಜಿ ಪೈಕಿ ಪರಿಶೀಲನೆ ಆಗಿರುವುದು ಕೇವಲ 9ಲಕ್ಷ ಮಾತ್ರ. ಇದೂ ಚುನಾವಣೆ ಘೋಷಣೆಗೂ ಮುನ್ನ ಕಂದಾಯ ಇಲಾಖೆ ಸಹಕಾರದೊಂದಿಗೆ ಆಹಾರ ಇಲಾಖೆ ಸಾಧಿಸಿದ ಪ್ರಗತಿಯಷ್ಟೆ.
ಅಂದರೆ ಇನ್ನೂ 26ಲಕ್ಷ ಅರ್ಜಿ ಪರಿಶೀಲನೆ ಆಗಿಲ್ಲ. 9ಲಕ್ಷ ಅರ್ಜಿಗಳಲ್ಲಿ ಅರ್ಹರನ್ನು ಗುರುತಿಸಿ ಕಾರ್ಡ್ಗಳನ್ನು ಸಿದ್ಧಪಡಿಸಬೇಕಿದೆ. ಆನಂತರವಷ್ಟೇ ಹಂಚಿಕೆ ಕಾರ್ಯ ಶುರು.
10ಸಾವಿರ ಅರ್ಜಿ ತಿರಸ್ಕಾರ?: ಅನ್ನಭಾಗ್ಯ ಆರಂಭವಾದ ನಂತರ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವವರು ಹೆಚ್ಚಾದರು. ಅದರಲ್ಲೂ ಎಪಿಎಲ್ ಕಾರ್ಡ್ ಇದ್ದವರೂ ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಗುಮಾನಿಯಿದೆ.
ಇಲಾಖೆ ಪ್ರಾಥಮಿಕ ಲೆಕ್ಕಾಚಾರದ ಪ್ರಕಾರ 35ಲಕ್ಷ ಅರ್ಜಿ ಪೈಕಿ 10ಲಕ್ಷಕ್ಕೂ ಹೆಚ್ಚು ತಾಂತ್ರಿಕ ಕಾರಣಗಳಿಂದ ತಿರಸ್ಕಾರವಾಗುತ್ತವೆ. ಉಳಿದವು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹ ಎಂಬ ಕಾರಣಕ್ಕೆ ತಿರಸ್ಕಾರವಾಗುತ್ತವೆ. ಹೀಗಾಗಿ ಇಲಾಖೆ ಈಗ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಯಾರು ಅರ್ಹರು ಎಂದು ಪತ್ತೆ ಹಚ್ಚಬೇಕಿದೆ.
ನಿವೃತ್ತಿ ಅಂಚಿನಲ್ಲಿರುವವರೂ ಹೆಚ್ಚು: ಕಾಲಕಾಲಕ್ಕೆ ಕಾರ್ಡ್ದಾರರ ಪರಿಶೀಲನೆ ಹಾಗೂ ಆಹಾರ ಧಾನ್ಯ ಸಾಗಣೆ ಮತ್ತು ಹಂಚಿಕೆ ಮೇಲೆ ನಿಗಾ ವಹಿಸಲು ಹೋಬಳಿ ಮಟ್ಟದಲ್ಲಿ ಒಬ್ಬ ಇನ್ಸ್ಪೆಕ್ಟರ್ ಬೇಕಿದೆ.
ಈ ಇನ್ಸ್ಪೆಕ್ಟರ್ಗಳೇ ಹೊಸ ಅರ್ಜಿದಾರ ಮನೆಗೆ ಭೇಟಿ ನೀಡಿ ಅರ್ಹತೆ ದೃಢೀಕರಿಸಬೇಕು. ಇದಕ್ಕಾಗಿ ಇಲಾಖೆಗೆ ಸುಮಾರು 800 ಇನ್ಸ್ಪೆಕ್ಟರ್ಗಳು ಅಗತ್ಯ. ಈಗಿರುವುದು ಕೇವಲ 400 ಇನ್ಸ್ಪೆಕ್ಟರ್ಗಳು ಮಾತ್ರ. ಇವರಲ್ಲಿ ಕಾಲು ಭಾಗ ನಿವೃತ್ತಿ ಅಂಚಿನಲ್ಲಿದ್ದಾರೆ. ಇನ್ನು 4ವರ್ಷಗಳಲ್ಲಿ 200 ಮಂದಿ ನಿವೃತ್ತಿಯಾಗಲಿದ್ದಾರೆ.
ಇದೇರೀತಿ ಪ್ರತಿ ಉಪ ವಿಭಾಗಕ್ಕೆ ಒಬ್ಬರಂತೆ 65 ಸಹಾಯಕ ನಿರ್ದೇಶಕರು ಬೇಕಾಗುತ್ತದೆ. ಸುಮಾರು 160ಕ್ಕೂ ಅಧಿಕ ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗಳು ಖಾಲಿ ಇವೆ. ಹೀಗಾಗಿ ಕಚೇರಿ ದೈನಂದಿನ ಕೆಲಸಗಳು ನಿರೀಕ್ಷಿತ ರೀತಿಯಲ್ಲಿ ಮುಂದೆ ಸಾಗುತ್ತಿಲ್ಲ. ಇನ್ನು ತಾಲೂಕಿಗೆ ಒಬ್ಬ ಶಿರಸ್ತೆದಾರರಂತೆ 200 ಮಂದಿ ಬೇಕಿದ್ದು, ಸದ್ಯ 70 ಮಂದಿ ಮಾತ್ರ ಇದ್ದಾರೆ.
ಎಲ್ಲಾ ಸೇರಿ ಸುಮಾರು 850ಕ್ಕೂ ಹೆಚ್ಚು ಹುದ್ದೆಗಳ ಕೊರತೆಯಲ್ಲಿ ಇಲಾಖೆ ಒದ್ದಾಡುತ್ತಿದೆ. ಆದರೆ ಈ ಬಗ್ಗೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರಿಂದ ಜನಪ್ರಿಯ ಯೋಜನೆಯಾದ ಅನ್ನಭಾಗ್ಯವನ್ನು ಕೂಡ ಪರಿಪೂರ್ಣವಾಗಿ ಜಾರಿಗೊಳಿಸಲು ಆಗುತ್ತಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ. ಖಾಲಿ ಹುದ್ದೆಗಳು ಭರ್ತಿಗಳನ್ನು ತ್ವರಿತವಾಗಿ ಮಾಡಬೇಕಿದೆ. ಅಲ್ಲಿ ವರೆಗೂ ಇರುವ ಸಿಬ್ಬಂದಿಯಿಂದಲೇ ಅರ್ಜಿ ಪರಿಶೀಲನೆ ನಡೆಸಿ ಅರ್ಹರಿಗೆ ಕಾರ್ಡ್ ನೀಡುತ್ತೇವೆ. ಆದರೆ ಅದು ತಡವಾಗುತ್ತದೆ.
- ಹರ್ಷಗುಪ್ತಾ, ಆಹಾರ ಇಲಾಖೆ ಆಯುಕ್ತ
-ಶಿವಕುಮಾರ್ ಬೆಳ್ಳಿತಟ್ಟೆ