ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಎಡ- ಬಲವಿಲ್ಲ, ಕನ್ನಡಕ್ಕೆ ಒಂದೇ ಬಲ

ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕಲಿಕಾ ಮಾಧ್ಯಮವಾಗಿ ಮಾತೃಭಾಷೆಯನ್ನು ಹೇರಬಾರದು ಎಂಬ ಸುಪ್ರೀಂಕೋರ್ಟ್...

Rashmi Kasaragodu
Updated On : 8 May 2014, 12:45 pm

ಕ.ಪ್ರ. ವಾರ್ತೆ  ಮೈಸೂರು  ಮೇ 7
ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕಲಿಕಾ ಮಾಧ್ಯಮವಾಗಿ ಮಾತೃಭಾಷೆಯನ್ನು ಹೇರಬಾರದು ಎಂಬ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಸಾಹಿತಿಗಳು ಧಿಕ್ಕಾರ ಮೊಳಗಿಸಿದ್ದು ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲು ಮೈಸೂರಿನಲ್ಲಿ ಬೆಂಬಲ ವ್ಯಕ್ತವಾಗಿದೆ.
ಇಷ್ಟು ದಿನ ಕನ್ನಡ ನಾಡು, ನುಡಿ, ನೆಲ, ಜಲದ ವಿಚಾರ ಬಂದಾಗ ಸೀಮಿತ ಸಾಹಿತಿಗಳು, ಕನ್ನಡ ಚಳವಳಿಗಾರರು ಹಾಗೂ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು ಸಾಮಾನ್ಯವಾಗಿತ್ತು. ಆದರೆ, ಬುಧವಾರ ಮೈಸೂರಿನಲ್ಲಿ ಕನ್ನಡ ಕ್ರಿಯಾ ಸಮಿತಿ ಏರ್ಪಡಿಸಿದ್ದ ಸಭೆಯಲ್ಲಿ ಎಡಪಂಥೀಯ ಹಾಗೂ ಬಲಪಂಥೀಯ ಸಾಹಿತಿಗಳು ಸೇರಿದಂತೆ ಕನ್ನಡಪರ ಚಳವಳಿಗಾರರು, ಎಲ್ಲಾ ಧರ್ಮದ ಮುಖಂಡರು ಹಾಗೂ ವಿದ್ಯಾರ್ಥಿಗಳು ಹೋರಾಟದ ಶಬ್ದವೇದಿ ಮೊಳಗಿಸಿದರು.
ಸಭೆಯ ಆರಂಭದಿಂದ ಕೊನೆಯವರೆಗೂ ಸುಪ್ರೀಂ ತೀರ್ಪಿನ ವಿರುದ್ಧ ತಮ್ಮ ಅಸಹನೆ, ವಿಷಾದ ಹೊರಹಾಕಿದ ಚಿಂತಕರು, ಗೋಕಾಕ್ ಮಾದರಿಯಲ್ಲಿ ಚಳವಳಿ ರೂಪಿಸಿ ದೇಸಿ ಸಂಸ್ಕೃತಿ ಉಳಿಸಲು ಶತಾಯಗತಾಯ ಶ್ರಮಿಸುವ ಇಂಗಿತ ವ್ಯಕ್ತಪಡಿಸಿದರು. ಇದರ ಮೊದಲ ಭಾಗವಾಗಿ ಮೇ 8ರ ಬೆಳಗ್ಗೆ 11ಕ್ಕೆ ಹಲವು ಚಳವಳಿಗಳ ಕೇಂದ್ರಬಿಂದುವಾಗಿದ್ದ ಕೆ.ಆರ್. ವೃತ್ತದಲ್ಲಿ ಮಾನವ ಸರಪಳಿ ರಚಿಸಿ ತಾತ್ವಿಕ ಹೋರಾಟ ಆರಂಭಿಸಲು ಎಲ್ಲರೂ ಸಹಮತ ವ್ಯಕ್ತಪಡಿಸಿದರು.
ನಾಳಿನ ಚಳವಳಿಯನ್ನು ಕನ್ನಡ ಕ್ರಿಯಾ ಸಮಿತಿಯಡಿಯಲ್ಲೇ ನಡೆಸಿ ಮುಂದಿನ ರೂಪರೇಷೆ ರೂಪಿಸಲು ಚಾಲನಾ ಸಮಿತಿ ರಚಿಸಬೇಕೆಂಬ ಹಲವರ ಅಭಿಪ್ರಾಯಕ್ಕೆ ಸಮೂಹ ಒಪ್ಪಿಗೆ ಸೂಚಿಸಿತು. ಜತೆಗೆ ತೀರ್ಪಿನ ಪ್ರತಿಯನ್ನು ಸಂಪೂರ್ಣ ಅಧ್ಯಯನ ನಡೆಸಿ ಎಲ್ಲಿ ಲೋಪವಾಗಿದೆ, ರಾಜ್ಯ ಸರ್ಕಾರದ ಪರ ವಾದ ಮಂಡಿಸಲು ನಿಯೋಜನೆಗೊಂಡ ನ್ಯಾಯವಾದಿಗಳು ಯಾಕೆ ವಿಫಲವಾಗಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು. ಅವರಿಗೆ ಮುಂದಿನ ದಿನಗಳಲ್ಲಿ ಯಾವ ರೀತಿ ಮಾಹಿತಿ ಬೆಂಬಲ ನೀಡಬೇಕೆಂಬ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಸಭೆಯ ಅಂತ್ಯದಲ್ಲಿ ಮಾತನಾಡಿದ ಕನ್ನಡ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಪ.ಮಲ್ಲೇಶ್, ಇಷ್ಟು ದಿನಗಳ ಕಾಲ ಸಾಹಿತಿಗಳಲ್ಲಿ ಜಡತ್ವ ಆವರಿಸಿತ್ತು. ಈ ತೀರ್ಪಿನಿಂದ ಎಲ್ಲರೂ ಇಲ್ಲಿಗೆ ಆಗಮಿಸಿದ್ದಾರೆ. ಕನ್ನಡದ ಮೇಲಿರುವ ಪ್ರೀತಿ, ಅಭಿಮಾನ ತೋರ್ಪಡಿಸುತ್ತದೆ ಎಂದರು.



'ಬದಲಿಸಲು ಸಾಧ್ಯವಿಲ್ಲ'


ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಮಾತನಾಡಿ, ಸುಪ್ರೀಂ ತೀರ್ಪು ಬದಲಿಸಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ಮಸೂದೆ ಮಂಡಿಸಿ ವಿಧೇಯಕವನ್ನು ಪಾಸ್ ಮಾಡಬೇಕು. ಹಾಗೆ ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ಒಗ್ಗೂಡಿಸಿಕೊಂಡು ಹೋರಾಟ ನಡೆಸಬೇಕು. ನಮ್ಮ ಮುಖ್ಯಮಂತ್ರಿಗಳು ಇತರೆ ರಾಜ್ಯಗಳ ಸಿಎಂಗಳನ್ನು ಭೇಟಿ ಮಾಡಿ ತಮ್ಮ ಭಾಷೆಗಳಿಗೆ ಬಂದೊದಗುವ ದುಸ್ಥಿತಿ ವಿವರಿಸಬೇಕು. ಕುಸ್ಮಾದಲ್ಲಿ ಸದಸ್ಯತ್ವ ಪಡೆದಿರುವ ರಾಜಕಾರಣಿಗಳು, ಮಂತ್ರಿಗಳನ್ನು ಪತ್ತೆ ಹಚ್ಚಬೇಕು. ಸಾಹಿತಿಗಳೆಲ್ಲಾ ಒಟ್ಟಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಕರೆ ನೀಡಿದರು.
ಸಾಹಿತಿಗಳಾದ ಡಾ. ಸಿಪಿಕೆ, ಪ್ರೊ.ಜಿ.ಎಚ್.ನಾಯಕ, ಟಿ.ವಿ. ವೆಂಕಟಾಚಲಶಾಸ್ತ್ರಿ, ಪ್ರೊ.ಅರವಿಂದ ಮಾಲಗತ್ತಿ, ಪ್ರೊ.ಪಿ.ಸಿ. ಸಿದ್ದಾಶ್ರಮ, ಪ್ರೊ.ಮೈಲಹಳ್ಳಿ ರೇವಣ್ಣ, ಪ್ರೊ.ಸೋಮಶೇಖರಪ್ಪ, ಪ್ರೊ.ಶಬ್ಬೀರ್ ಮುಸ್ತಫಾ, ಪ್ರೊ.ಎಸ್. ಮಲ್ಲಣ್ಣ, ಪ್ರೊ.ಎಂ.ಎನ್. ಶ್ರೀರಾಮ್, ಪ್ರೊ.ಪಂಡಿತಾರಾಧ್ಯ, ಪ್ರೊ.ಎಚ್. ಗೋವಿಂದಯ್ಯ, ಡಾ.ಕೆ.ಎಸ್. ಭಗವಾನ್, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಕನ್ನಡ ಚಳವಳಿಗಾರರಾದ ಸ.ರ. ಸುದರ್ಶನ, ಸಂಸ್ಕೃತಿ ಸುಬ್ರಹ್ಮಣ್ಯ, ಹೊರೆಯಾಲ ದೊರೆಸ್ವಾಮಿ, ಕೊ.ಸು. ನರಸಿಂಹಮೂರ್ತಿ, ಕೆ. ಮುದ್ದುಕೃಷ್ಣ, ಮೋಹನ್ಕುಮಾರ್ಗೌಡ, ತಾಯೂರು ವಿಠಲಮೂರ್ತಿ, ಮೂಗೂರು ನಂಜುಂಡಸ್ವಾಮಿ, ಎಂ.ಬಿ. ವಿಶ್ವನಾಥ್, ಮಡ್ಡೀಕೆರೆ ಗೋಪಾಲ್, ರಂಗಭೂಮಿಯ ಸಿ.ಬಸವಲಿಂಗಯ್ಯ ಮತ್ತಿರರು ಭಾಗವಹಿಸಿದ್ದರು.



ಆಗಿರುವ ತಪ್ಪುಗಳ ಬಗ್ಗೆ ಸಭೆಯಲ್ಲಿ ಟೀಕೆ
1. ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲಿಯೇ ಆಗಬೇಕು ಎಂಬ ಸರ್ಕಾರದ ನಿಲುವನ್ನು ಸುಪ್ರೀಂ ಮುಂದೆ ಸಮರ್ಥವಾಗಿ ವಾದಿಸಲು ಅಡ್ವೋಕೇಟ್ ಜನರಲ್ ವಿಫಲ
2. ಕನ್ನಡ ವಿರೋಧಿ ತೀರ್ಪನ್ನು ಸ್ವಾಗತಿಸಿರುವ ಕುಸ್ಮಾದ ಬಗ್ಗೆ ವರ್ತನೆಗೆ ಖಂಡನೆ
3. ಭಾಷೆಗೆ ಸಂಬಂಧಪಟ್ಟ ಯಾವುದೇ ವಿಚಾರ ಬಂದರೂ ಸುಮ್ಮನಿರುವ ಕನ್ನಡ ಸಾಹಿತ್ಯ ಪರಿಷತ್ತಿನ ವರ್ತನೆಗೆ ಟೀಕೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement