ಕಾರವಾರ ಕಡಲತೀರಕ್ಕೆ ಮತ್ತೆ ಕುತ್ತು?
ಸ್ಥಳೀಯರ ಪ್ರತಿರೋಧದ ನಡುವೆಯೂ ಕರಾವಳಿ ಕಾವಲು ಪಡೆ ಕಾರವಾರ ಕಡಲತೀರದಲ್ಲಿ ಭೂಮಿ ಪಡೆಯಲು...
ಕಾರವಾರ: ಸ್ಥಳೀಯರ ಪ್ರತಿರೋಧದ ನಡುವೆಯೂ ಕರಾವಳಿ ಕಾವಲು ಪಡೆ ಕಾರವಾರ ಕಡಲತೀರದಲ್ಲಿ ಭೂಮಿ ಪಡೆಯಲು ಕಸರತ್ತು ನಡೆಸುತ್ತಿದೆ. ಹಾವರ್ ಕ್ರಾಫ್ಟ್ ನಿಲುಗಡೆಗೆ ಭೂಮಿಗೆ ಬೇಡಿಕೆ ಮುಂದಿಟ್ಟಿದೆ.
ಈಚೆಗೆ ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ನೀಡಿದ ಕರಾವಳಿ ಕಾವಲು ಪಡೆಯ ಕಮಾಂಡರ್ ರಾಜೇಂದ್ರ ಸಿಂಗ್ ಸಪಾಲ್, ಕಾರವಾರದ ಕೋಡಿಬಾಗದಲ್ಲಿ ಹಾವರ್ ಕ್ರಾಫ್ಟ್ ನೆಲೆ ಕಲ್ಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದೆ ಎಂದಿದ್ದಾರೆ.
ಕರಾವಳಿ ಕಾವಲು ಪಡೆ ಭೂಮಿಗೆ ಬೇಡಿಕೆ ಇಟ್ಟು 3-4 ವರ್ಷಗಳೇ ಆಗಿವೆ. ಈ ಹಿಂದೆ ಕಡಲತೀರದಲ್ಲಿ ಕೋಸ್ಟ್‌ಗಾರ್ಡ್‌ನ ಬೋರ್ಡ್ ಕಂಡುಬಂದಾಗ ಜನತೆ, ಮೀನುಗಾರರು ಉಗ್ರ ಪ್ರತಿಭಟನೆ ನಡೆಸಿದ್ದರು.
ಸ್ಥಳೀಯರು ಏನಂತಾರೆ?
ದೇಶದ ಭದ್ರತೆಗಾಗಿ ಇಲ್ಲಿನ 6 ಪ್ರಮುಖ ಕಡಲತೀರವನ್ನು ಮೀನುಗಾರರು ಕಳೆದುಕೊಂಡಿದ್ದಾರೆ. ಕಡಲತೀರದಲ್ಲಿದ್ದ ಮೀನುಗಾರರನ್ನು ಸೀಬರ್ಡ್ ನೌಕಾನೆಲೆಗಾಗಿ ಒಕ್ಕಲೆಬ್ಬಿಸಲಾಗಿದೆ. ಈಗ ಮೀನುಗಾರಿಕೆಗಿರುವ ಒಂದೇ ಒಂದು ಕಡಲತೀರದಲ್ಲಿ ಮತ್ತೆ ಕರಾವಳಿ ಕಾವಲು ಪಡೆಗೆ ನೀಡಿದಲ್ಲಿ ಮೀನುಗಾರರ ಬದುಕು ದುಸ್ತರವಾಗಲಿದೆ. ಜತೆಗೆ, ಟಾಗೋರ್ ಕಡಲತೀರ ಪ್ರವಾಸಿ ಕೇಂದ್ರ. ಇದಕ್ಕೂ ತೊಂದರೆಯಾಗಲಿದೆ.
ಯಾಕೆ ಭೂಮಿ ಬೇಕು?
ಮುಂಬೈ ದಾಳಿ ಬಳಿಕ ಕರಾವಳಿ ತೀರ ಸೂಕ್ಷ್ಮವಾಗಿದೆ. ಭಯೋತ್ಪಾದಕ ದಾಳಿ ಹಿಮ್ಮೆಟ್ಟಿಸಲು ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಬೇಕಾಗಿದೆ. ಇದಕ್ಕಾಗಿ ಸಮುದ್ರ ಹಾಗೂ ಭೂಮಿಯ ಮೇಲೂ ಸಂಚರಿಸುವ ಹಾವರ್ ಕ್ರಾಫ್ಟ್‌ನ್ನು ಕರಾವಳಿ ಕಾವಲು ಪಡೆ ಈಗಾಗಲೆ ಹೊಂದಿದೆ. ಹಾವರ್ ಕ್ರಾಫ್ಟ್‌ಗೆ ಮಂಗಳೂರಿನಲ್ಲಿ ನೆಲೆ ಇದ್ದು, ಕಾರವಾರದ ತನಕ ಕಾರ್ಯಾಚರಣೆ ನಡೆಸಲಿದೆ. ಆದರೆ ಕಾರವಾರದಲ್ಲಿ ತಂಗಲು ಸೂಕ್ತ ಸ್ಥಳ ಇಲ್ಲ.
ಎಷ್ಟು ಭೂಮಿ?
13 ಎಕರೆ
ಕರಾವಳಿ ಕಾವಲು ಪಡೆಗಾಗಿ ಅಗತ್ಯ ಭೂಮಿ
11,400
ಎಕರೆ ಸೀಬರ್ಡ್ ನೌಕಾನೆಲೆಗಾಗಿ ಸ್ವಾಧೀನ
100 ಹೆಕ್ಟೇರ್‌ಕೊಂಕಣ ರೇಲ್ವೆಗಾಗಿ ಕಾರವಾರವೊಂದರಲ್ಲೇ ವಶಪಡಿಸಿಕೊಳ್ಳಲಾಗಿರುವ ಭೂಮಿ
6
ಪ್ರಮುಖ ಬೀಚುಗಳು ಈಗಾಗಲೇ ಸ್ವಾಧೀನ
-ವಸಂತಕುಮಾರ ಕತಗಾಲ