ಕೈ, ಕಮಲ ಗೆಲುವ ಗುಲ್ಲು, ಯಾವ ಪಕ್ಷಕ್ಕೆ ಆರ-ಭಾರ, ಎಲ್ಲೆಲ್ಲೂ ನಡೆದಿದೆ ಲೆಕ್ಕಾಚಾರ
ಲೋಕಸಭಾ ಚುನಾವಣೆ ಮತ ಎಣಿಕೆಗೆ ದಿನಗಣನೆ ಆರಂಭವಾಗಿದ್ದು ಊರು-ಕೇರಿ, ನಾಡು-ಗುಡಿಯಲ್ಲಿ ರಾಜಕೀಯ ...
ಬೆಂಗಳೂರು: ಲೋಕಸಭಾ ಚುನಾವಣೆ ಮತ ಎಣಿಕೆಗೆ ದಿನಗಣನೆ ಆರಂಭವಾಗಿದ್ದು ಊರು-ಕೇರಿ, ನಾಡು-ಗುಡಿಯಲ್ಲಿ ರಾಜಕೀಯ ವಿಶ್ಲೇಷಣೆ ಗರಿಗೆದರುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ಸ್ಥಾನಗಳು ಎಷ್ಟು? ಎಂಬುದೇ ಸದ್ಯದ ಚರ್ಚೆ ವಸ್ತು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಲೆ ರಾಜ್ಯಕ್ಕೂ ತಲುಪಿದೆಯೋ? ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಅದಕ್ಕೆ ತಡೆ ಹಾಕಿದೆಯೋ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಈ ಫಲಿತಾಂಶ ಉತ್ತರ ನೀಡಬೇಕಿದೆ. ಹೀಗಾಗಿ ಕಾಂಗ್ರೆಸ್ ಗೆಲ್ಲುವ ಸ್ಥಾನಗಳೆಷ್ಟು? ಅದರ ಆಧಾರದ ಮೇಲೆ ರಾಜ್ಯ ರಾಜಕೀಯದಲ್ಲಾಗುವ ತಲ್ಲಣಗಳೇನು? ಎಂಬ ಕುತೂಹಲದ ಸುತ್ತ ಚರ್ಚೆ ಗಿರಕಿ ಹೊಡೆಯಲಾರಂಭಿಸಿದೆ.
ರಾಜ್ಯದಲ್ಲಿ ಈ ಚರ್ಚೆ ಇಷ್ಟು ತಾರಕಕ್ಕೇರುವುದಕ್ಕೆ ಪ್ರಮುಖ ಕಾರಣ, ಕಾಂಗ್ರೆಸ್ ಗೆಲ್ಲುವ ಸ್ಥಾನಗಳು ಇಷ್ಟೇ ಎಂದು ಕೇಂದ್ರ ಹಾಗೂ ರಾಜ್ಯ ಗುಪ್ತದಳ ನೀಡಿದೆ ಎನ್ನಲಾದ ವರದಿಯ ಸೋರಿಕೆ!
ಈ ಎರಡೂ ವರದಿ ಪರಸ್ಪರ ವಿರುದ್ಧ ಅಭಿಪ್ರಾಯ ನೀಡಿರುವುದರಿಂದ ಈ ಚರ್ಚೆ ಆರಂಭವಾಗಿದೆ. ಕೇಂದ್ರ ಗುಪ್ತಚರ ಸಂಸ್ಥೆ ನೀಡಿದೆ ಎನ್ನಲಾದ ವರದಿ ಪ್ರಕಾರ ರಾಜ್ಯದಲ್ಲಿ ಮೋದಿ ಅಲೆ ಸ್ಪಷ್ಟವಾಗಿ ಕೆಲಸ ಮಾಡಿದೆಯಂತೆ. ಮೇಲು ವರ್ಗದವರ ವಿರೋಧ, ಮತದಾನದ ಕೊನೆ ದಿನಗಳಲ್ಲಿ ಅಲ್ಪಸಂಖ್ಯಾತ ಸಮುದಾಯ ಕಾಂಗ್ರೆಸ್ನತ್ತ ಬೀರಿದ ಅನುಮಾನ ದೃಷ್ಟಿಯಿಂದ ಕಾಂಗ್ರೆಸ್ ಗಣನೀಯ ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸಲಿದೆಯಂತೆ. ಈ ವರದಿ ಪ್ರಕಾರ ಕಾಂಗ್ರೆಸ್ 10ಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಗೆಲ್ಲಲಿದ್ದು, ಬಿಜೆಪಿ 15ರಿಂದ 16, ಜೆಡಿಎಸ್ 2ರಿಂದ 3 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆಯಂತೆ. ಆದರೆ ರಾಜ್ಯ ಗುಪ್ತದಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ 15ರಿಂದ 16, ಬಿಜೆಪಿ 10 ಹಾಗೂ ಜೆಡಿಎಸ್ 2 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ವರದಿ ನೀಡಿದೆ.
ಸಿಎಂ ಸಿದ್ದರಾಮಯ್ಯ ಈ ವರದಿಯನ್ನು ಬಲವಾಗಿ ನಂಬಿದ್ದು, ಮೋದಿ ಅಲೆ ಇಲ್ಲ ಎಂಬ ವಾದಕ್ಕೆ ಅಂಟಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ನ ಇನ್ನೊಂದು ವಲಯ ಕೇಂದ್ರ ಗುಪ್ತದಳ ನೀಡಿರುವ ವರದಿ ಸತ್ಯವಾಗಬಹುದು ಎನ್ನುತ್ತಿದೆ.
ಪ್ರತಿಕೂಲ ಫಲಿತಾಂಶ: ಒಂದೊಮ್ಮೆ ಕಾಂಗ್ರೆಸ್ 10ಕ್ಕೆ ಸೀಮಿತಗೊಂಡರೆ ಅದು ಎರಡು ರೀತಿಯಲ್ಲಿ ಪ್ರತಿಕೂಲ ಫಲಿತಾಂಶ. ಮೊದಲನೆಯದಾಗಿ ಸಿದ್ದರಾಮಯ್ಯನವರಿಗೆ. ಎರಡನೆಯದಾಗಿ ಅಧಿಕಾರದಲ್ಲಿದ್ದ ಪಕ್ಷಕ್ಕೆ ಹೆಚ್ಚು ಸ್ಥಾನ ಲಭಿಸುತ್ತದೆ ಎಂಬ ಮಾತಿಗೆ.
ರಾಜ್ಯದ ಮತದಾರ ಕೇಂದ್ರಕ್ಕೆ ಒಂದು ಕರ್ನಾಟಕಕ್ಕೆ ಮತ್ತೊಂದು ಪಕ್ಷವನ್ನು ತಬ್ಬಿಕೊಳ್ಳುತ್ತಾನೆ ಎಂಬ ಮಾತಿದೆ. ಆದರೆ ರಾಜ್ಯದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಅಧಿಕಾರದಲ್ಲಿದ್ದ ಪಕ್ಷವೇ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದೆ.
1983ರಲ್ಲಿ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಪ್ರಥಮ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಜನತಾ ಪರಿವಾರ ಗೆದ್ದಿದ್ದು ಕೇವಲ 4 ಸ್ಥಾನ. ನೈತಿಕತೆ ಹೊಣೆ ಹೊತ್ತು ರಾಜ್ಯ ವಿಧಾನಸಭೆ ವಿಸರ್ಜಿಸಿದ ರಾಮಕೃಷ್ಣ ಹೆಗಡೆ 1985ರಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದರು. ಇದರ ಆಧಾರದ ಮೇಲೆ ರಾಜ್ಯದ ಮತದಾರನದು ಕೇಂದ್ರಕ್ಕೊಂದು, ರಾಜ್ಯಕ್ಕೊಂದು ನಿಲುವು ಎಂಬುದು ಜನಜನಿತ. ಆದರೆ ಈ ನಿಯಮ ನಂತರದ ವರ್ಷಗಳಲ್ಲಿ ಬದಲಾಗುತ್ತಾ ಬಂದಿದೆ.
1996ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದದ್ದು ಎಚ್.ಡಿ.ದೇವೇಗೌಡರ ಸಾರಥ್ಯದ ಜನತಾ ಸರ್ಕಾರ. ಅದೇ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪರಿವಾರ 16 ಸ್ಥಾನಗಳಲ್ಲಿ ಜಯಿಸಿತು. 1999ರ ಹೊತ್ತಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ಎಸ್.ಎಂ.ಕೃಷ್ಣ. ಆಗ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 18.
2004ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿತ್ತು. 2009ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದದ್ದು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ. ಆಗ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಾಖಲೆಯ 19 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.
ಈ ಅಂಕಿ-ಸಂಖ್ಯೆಗಳ ಆಧಾರದ ಮೇಲೆ ರಾಜ್ಯದಲ್ಲಿ ಯಾವ ಸರ್ಕಾರ ಅಸ್ತಿತ್ವದಲ್ಲಿದೆಯೋ, ಆ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. 1984ರಲ್ಲಿ ಸಂಪೂರ್ಣವಾಗಿ, 1989, 1998ರಲ್ಲಿ ಭಾಗಶಃ ಈ ನಿಯಮ ನೆಲ್ಲಕಚ್ಚಿದೆ.
ಮರುಕಳಿಸೀತೆ?: ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದದ್ದು ರಾಮಕೃಷ್ಣ ಹೆಗಡೆ ನೇತೃತ್ವದ ಜನಪ್ರಿಯ ಸರ್ಕಾರ. ಆದರೆ ಬೀಸಿದ್ದು ಇಂದಿರಾ ಹತ್ಯೆ ಎಂಬ ಪ್ರತಿಕೂಲ ಗಾಳಿ. ಇಂದು ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ ಇನ್ನೊಂದು ಜನಪ್ರಿಯ ಸರ್ಕಾರ. ಆದರೆ ಬೀಸುತ್ತಿದೆ ಎಂದು ವ್ಯಾಖ್ಯಾನಿಸುತ್ತಿರುವುದು ಮೋದಿ ಅಲೆ!
ಇಂದಿರಾ ಅಲೆಯಲ್ಲಿ ಹೆಗಡೆ ಜನಪ್ರಿಯತೆ ಕೊಚ್ಚಿ ಹೋದಂತೆ, ಮೋದಿ ಅಲೆಯಲ್ಲಿ ಸಿದ್ದರಾಮಯ್ಯನವರ ಜನಪ್ರಿಯತೆ ದೃಢವಾಗಿ ನಿಲ್ಲುವುದೇ? ಅಥವಾ 30 ವರ್ಷಗಳ ನಂತರ ಮತ್ತೊಮ್ಮೆ ಇತಿಹಾಸ ಮರುಕಳಿಸುವುದೇ ? ಎಂಬುದು ಎಲ್ಲ ಕಡೆಯ ಚರ್ಚೆಯ ವಿಷಯ. ಉತ್ತರಕ್ಕೆ ಇನ್ನು ನಾಲ್ಕು ದಿನ ಮಾತ್ರ ಕಾಯಬೇಕು.
ಇತಿಹಾಸ ಮರುಕಳಿಸೀತೆ?
ಅಂದು ರಾಜ್ಯದಲ್ಲಿದ್ದದ್ದು ರಾಮಕೃಷ್ಣ ಹೆಗಡೆ ನೇತೃತ್ವದ ಜನಪ್ರಿಯ ಸರ್ಕಾರ. ಆದರೆ ಬೀಸಿದ್ದು ಇಂದಿರಾ ಹತ್ಯೆ ಎಂಬ ಪ್ರತಿಕೂಲ ಗಾಳಿ. ಸದ್ಯ ಅಧಿಕಾರದಲ್ಲಿರುವುದು ಸಿದ್ದರಾಮಯ್ಯ ನೇತೃತ್ವದ ಇನ್ನೊಂದು ಜನಪ್ರಿಯ ಸರ್ಕಾರ. ಬೀಸಲಾಗುತ್ತಿದೆ ಎಂದಿರುವುದು ಮೋದಿ ಅಲೆ! 30 ವರ್ಷಗಳ ನಂತರ ಮತ್ತೊಮ್ಮೆ ಇತಿಹಾಸ ಮರುಕಳಿಸುವುದೇ? ಎಂಬುದು ಎಲ್ಲ ಕಡೆಯ ಚರ್ಚೆಯ ವಿಷಯ. ಉತ್ತರಕ್ಕೆ ಇನ್ನು ನಾಲ್ಕು ದಿನ ಮಾತ್ರ ಕಾಯಬೇಕು.