ರೈಲು ಹಳಿ ಸ್ಫೋಟ ಸಂಚು
ಚಿತ್ತಾಪುರ- ಮಳಖೇಡ ರೈಲು ಹಳಿ ಸ್ಫೋಟ ಯತ್ನ ಪ್ರಕರಣ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ...
ಚಿತ್ತಾಪುರ: ಚಿತ್ತಾಪುರ- ಮಳಖೇಡ ರೈಲು ಹಳಿ ಸ್ಫೋಟ ಯತ್ನ ಪ್ರಕರಣ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭಾನುವಾರ ಪರಿಶೀಲಿಸಿದರು. ಇಲ್ಲಿನ ಮೊಗಲಾ ಗ್ರಾಮದ ಬಳಿ ರೈಲು ಸೇತುವೆ ಹಾಗೂ ಮಳಖೇಡ ಬಳಿ ಪತ್ತೆಯಾಗಿರುವ ಸ್ಫೋಟಕಗಳ ಬಗ್ಗೆ ಸ್ಥಳೀಯರು, ಕೀ ಮ್ಯಾನ್ ತುಳಜಾರಾಂ ಜೊತೆಗೂ ಚರ್ಚಿಸಿ ಮಾಹಿತಿ ಪಡೆದರು. ಇದು ನಕ್ಸಲರ ಕೆಲಸವೇ, ಉಗ್ರರ ಸಂಚೇ ಎನ್ನುವ ತನಿಖೆ ನಡೆಯುತ್ತಿದೆ.
ದುಷ್ಕರ್ಮಿಗಳು ಕಪ್ಪು ಟಾಟಾ ಸುಮೋದಲ್ಲಿ ಪರಾರಿಯಾಗಿದ್ದಾರೆ ಎಂದು ತುಳಜಾರಾಂ ಮಾಹಿತಿ ನೀಡಿದ್ದಾನೆ. ಇದನ್ನಾಧರಿಸಿ ಜಾಡು ಹಿಡಿಯುವ ಪ್ರಯತ್ನ ಸಾಗಿದೆ. ಈ ಹಿನ್ನೆಲೆಯಲ್ಲಿ ಟೋಲ್‌ಗೇಟ್ ಹಾಗೂ ಸಮೀಪದ ಪೆಟ್ರೋಲ್ ಬಂಕ್‌ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಪರಿಶೀಲಿಸಲಾಗುವ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ.