ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್ಡಿಎ ಪಾಸು
ಹದಿನಾರನೇ ಲೋಕಸಭಾ ಚುನಾವಣೆಗೆ 9 ಹಂತಗಳಲ್ಲಿ ನಡೆದ ಮತದಾನಕ್ಕೆ....
ನವದೆಹಲಿ: ಹದಿನಾರನೇ ಲೋಕಸಭಾ ಚುನಾವಣೆಗೆ 9 ಹಂತಗಳಲ್ಲಿ ನಡೆದ ಮತದಾನಕ್ಕೆ ಸೋಮವಾರ ತೆರೆ ಬಿದ್ದಿದೆ. ಇದರೊಂದಿಗೆ ಮುಂದೆ ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೇರಬಹುದು ಎನ್ನುವ ಕುತೂಹಲವೂ ಹುಟ್ಟಿಕೊಂಡಿದೆ. ಇದೇ ಕುತೂಹಲ ಇಟ್ಟುಕೊಂಡು ಬಹುತೇಕ ಸುದ್ದಿವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳು 'ಅಬ್ ಕಿ ಬಾರ್ ಬಿಜೆಪಿ ಸರ್ಕಾರ್' ಎನ್ನುತ್ತಿವೆ.
- ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮತದಾರ ಈ ಬಾರಿ ಕೇಂದ್ರದಲ್ಲಿ ಬದಲಾವಣೆ ಪರ ಮತಚಲಾಯಿಸಿರುವುದು ಸ್ಪಷ್ಟವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಸ್ಪಷ್ಟ ಹಿನ್ನಡೆ ಸಾಧಿಸಲಿರುವುದು ಚುನಾವಣೋತ್ತರ ಸಮೀಕ್ಷೆಗಳಿಂದ ಬಹಿರಂಗವಾಗಿದೆ.
- ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 249- 290 ಸ್ಥಾನ ಗಳಿಸಬಹುದು. ಅಂದರೆ 272ಕ್ಕಿಂತಲೂ ಹೆಚ್ಚು ಅಥವಾ ಅದರ ಆಸುಪಾಸಿಗೆ ಬಂದು ತಲುಪಲಿದೆ. ಒಟ್ಟಾರೆ ಎನ್ಡಿಎ ಅತಿ ದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಲಿದೆ. ಬಿಜೆಪಿ ಏಕಾಂಗಿಯಾಗಿ 200ರ ಗಡಿ ದಾಟಲಿದೆ ಎನ್ನುವುದು ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
- ಇಂಡಿಯಾ ಟುಡೆಗಾಗಿ ಚಾಣಕ್ಯ ನಡೆಸಿದ ಸಮೀಕ್ಷೆಯಂತು ಎನ್ಡಿಎ ಮೈತ್ರಿಕೂಟ 340 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ ಎನ್ನುತ್ತಿದೆ. ಯುಪಿಎ ನೂರರ ಗಡಿ ದಾಟುವುದು ಬಿಡಿ 80 ಸ್ಥಾನ ಗೆಲ್ಲುವುದೂ ಕಷ್ಟ ಎನ್ನುತ್ತಿದೆ.
- ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಷ್ಟೇ ಕಾಂಗ್ರೆಸ್ ಮುಖ ಉಳಿಸಿಕೊಳ್ಳುವ ಸಾಧನೆ ಮಾಡಲಿದೆ ಎನ್ನುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ 16- 18 ಸ್ಥಾನಗಳನ್ನು ಗೆಲ್ಲಬಹುದುಎಂದು ಸಿಎನ್ಎನ್-ಐಬಿಎನ್, ಇಂಡಿಯಾಟುಡೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
- ಟೈಮ್ಸ್ ನೌ- ಒಆರ್ಜಿ ಹಾಗೂ ಇಂಡಿಯಾ ಟಿವಿ- ಸೀವೋಟರ್ ನಡೆಸಿದ ಸಮೀಕ್ಷೆ ಮಾತ್ರ ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು 10ರೊಳಗೆ ಕಟ್ಟಿಹಾಕುವಲ್ಲಿ ಬಿಜೆಪಿ ಯಶಸ್ವಿಯಾಗಲಿದೆ ಎಂದಿದೆ. ಜೆಡಿಎಸ್ ಒಂದು ಸ್ಥಾನ ಗೆಲ್ಲಬಹುದು. ಮತದಾರ ಕೈಹಿಡಿದರೆ ಮಾಜಿ ಪ್ರಧಾನಿ ದೇವೇಗೌಡರ ಪಕ್ಷ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬಹುದು ಅಷ್ಟೆ ಎನ್ನುತ್ತಿವೆ ಎಲ್ಲ ಸಮೀಕ್ಷೆಗಳು.
- ಬಿಹಾರದಲ್ಲಿ ಮೋದಿ ಮತ್ತು ಬಿಜೆಪಿ ಅಲೆ ಮುಂದೆ ಲಾಲೂ ಆಟ ಕೈಗೂಡದು. ಜೆಡಿಯು ಈ ಬಾರಿ ಶೂನ್ಯ ಸಂಪಾದನೆ ಮಾಡಲಿದೆ ಎನ್ನುವುದು ಟೈಮ್ಸ್ನೌ- ಒಆರ್ಜಿ ಸಮೀಕ್ಷೆ ಹೇಳುತ್ತಿದೆ.
- ಬಿಜೆಪಿ ಜತೆಗೆ ಮೈತ್ರಿ ಮುರಿದುಕೊಂಡ ನಿತೀಶ್ ಕುಮಾರ್ಗೆ ಈ ಲೋಕಸಭಾ ಚುನಾವಣೆಯಲ್ಲಿ ಭಾರಿ ಏಟು ಬೀಳಲಿದೆ ಎನ್ನುವ ವಾದಕ್ಕೆ ಇಂಡಿಯಾ ಟುಡೆ ಸಮೀಕ್ಷೆ ಕೂಡ ಒಪ್ಪಿಕೊಳ್ಳುತ್ತದೆ. ಜೆಡಿಯು ಭಾರಿ ಹಿನ್ನಡೆ ಅನುಭವಿಸಲಿದೆ. 2ರಿಂದ 10 ಸೀಟುಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಲಿದೆ
- ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿದೆ. ಬಿಜೆಪಿ ಒಟ್ಟು ಏಳು ಲೋಕಸಭಾ ಕ್ಷೇತ್ರದಲ್ಲಿ ಎಲ್ಲ ಸ್ಥಾನಗಳಲ್ಲೂ ಗೆಲವು ಸಾಧಿಸಿದರೂ ಅಚ್ಚರಿ ಇಲ್ಲ ಎನ್ನುವುದು ಬಹುತೇಕ ಸಮೀಕ್ಷೆಗಳ ಸಾರ. ವಿಧಾನಸಭಾ ಚುನಾವಣೆಯಲ್ಲಿ ಆಪ್ ಮಾಡಿದ ಮ್ಯಾಜಿಕ್ ಈ ಚುನಾವಣೆಯಲ್ಲಿ ಕೆಲಸ ಮಾಡಲಿಕ್ಕಿಲ್ಲ ಎನ್ನುವ ಮಾತುಗಳಿಗೆ ಸಮೀಕ್ಷೆಗಳೂ ಧ್ವನಿಗೂಡಿಸಿವೆ.
ಎನ್ಡಿಎ ಯುಪಿಎ ಇತರೆ