ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಾನಿನ್ನು ಮಾತನಾಡುವ ಅವಶ್ಯಕತೆ ಇಲ್ಲ

ಎಂಬತ್ತೊಂದು ವಯಸ್ಸಿನ ಹಿರಿಯ ವ್ಯಕ್ತಿ ಬಾಯ್ತಪ್ಪಿ ಆಡಿದ ಮಾತನ್ನು ಅರಗಿಸಿಕೊಳ್ಳ..

Rashmi Kasaragodu
Updated On : 13 May 2014, 5:36 am

ಕ.ಪ್ರ. ವಾರ್ತೆ ಬೆಂಗಳೂರು ಮೇ 12
ಎಂಬತ್ತೊಂದು ವಯಸ್ಸಿನ ಹಿರಿಯ ವ್ಯಕ್ತಿ ಬಾಯ್ತಪ್ಪಿ ಆಡಿದ ಮಾತನ್ನು ಅರಗಿಸಿಕೊಳ್ಳಲಾಗದಷ್ಟು ಸಮಾಜ ಬದಲಾಗಿದೆಯೆಂದರೆ ನಾನು ಮಾತನಾಡುವ ಅವಶ್ಯಕತೆ ಇಲ್ಲ.  ದಯವಿಟ್ಟು ಮುಗಿದು ಹೋದ ವಿಚಾರವದು. ಮತ್ತೆ ಚರ್ಚೆ ಬೇಡವೇ ಬೇಡ..!
ಮೈಸೂರಿನಲ್ಲಿ ಭಾನುವಾರ ಸಿಎಂ ಸಿದ್ದರಾಮಯ್ಯ ಅವರ ಕುರಿತು ತಾವು ನೀಡಿದ ಹೇಳಿಕೆಯಿಂದಾದ ವಿವಾದ ಮತ್ತು ಆನಂತರದ ಬೆಳವಣಿಗೆಗೆ ಹಿರಿಯ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಸೋಮವಾರ 'ಕನ್ನಡ ಪ್ರಭ'ಕ್ಕೆ ನೀಡಿದ ಪ್ರತಿಕ್ರಿಯೆ ಇದು.
'ತುಂಬಾ ನೋವಾಗಿದೆ. ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇಷ್ಟು ದಿನ ಬೇಕಾಯಿತೇ ಎಂದು ಬೇಸರವಾಗಿದೆ. ಮುಂಜಾನೆಯಿಂದ ಎಲ್ಲಿಗೂ ಹೋಗದೆ ಮನೆಯಲ್ಲಿದ್ದೇನೆ. ಮುಗಿದು ಹೋದ ಘಟನೆಗಳ ಬಗ್ಗೆ ಮಾತನಾಡಲಾರೆ.....'ಎಂದು ಕಡ್ಡಿ ಮುರಿದಂತೆ ಹೇಳಿ ಮಾತು ನಿಲ್ಲಿಸಲು ಹೊರಟವರು. ಹಿಂದೆ ಹೀಗಿರಲಿಲ್ಲ ಎನ್ನುತ್ತಲೇ ಘಟನೆಯಿಂದಾದ ದುಃಖ, ನೋವು ಹೊರಹಾಕಿದರು. ವಿಷಾದ ವ್ಯಕ್ತಪಡಿಸಿದರು.
'81ವಯಸ್ಸಿನ ಒಬ್ಬ ಹಿರಿಯ ವ್ಯಕ್ತಿ ಬಾಯ್ತಪ್ಪಿ ಆಡಿದ ಮಾತು ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಕೆಲವರು ಜಾತಿ ನೆಪವೊಡ್ಡಿ ಹೇಳಿಕೆಯನ್ನು ವಿವಾದವಾಗಿಸಿದ್ದರ ಹಿಂದೆ ವ್ಯವಸ್ಥಿತ ಪಿತೂರಿ ಇತ್ತು' ಎಂದು ದೂರಿದರು.
'ಇಂದು ನಿನ್ನೆಯಲ್ಲ, 68 ವರ್ಷಗಳಿಂದ ಕಲಾವಿದನಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಟೀಕೆ-ಟಿಪ್ಪಣಿ ಹೊಸದಲ್ಲ. ರಾಜಕೀಯ ವಿಡಂಬನೆಯ ಮೂಲಕವೇ ನಾನು ಜನರಿಗೆ ಪರಿಚಿತವಾಗಿದ್ದೇನೆ. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ಗುಂಡೂರಾವ್ ಅವರ ಕಾಲದಲ್ಲೂ ನಾಟಕಗಳ ಮೂಲಕ ರಾಜಕೀಯವನ್ನು ವಿಡಂಬನೆ ಮಾಡಿದ್ದೇನೆ. ಆ ದಿನಗಳಲ್ಲಿ ನನ್ನನ್ನು ಯಾರೂ ಕೂಡ ಜಾತಿಯಿಂದ ಗುರುತಿಸುವಷ್ಟು, ಸಣ್ಣ ಪುಟ್ಟ ಸಂಗತಿಗೆ ಅವಮಾನಿಸುವ ಕೆಲಸ ಮಾಡಿರಲಿಲ್ಲ. ಎಲ್ಲರಲ್ಲೂ ವಿಶಾಲವಾದ ಮನೋಭಾವವಿತ್ತು. ಕಲಾವಿದರನ್ನು ಜಾತ್ಯತೀತ ದೃಷ್ಟಿಕೋನದಿಂದಲೇ ಉಪಚರಿಸುತ್ತಿದ್ದರು. ಆದರೆ ಈಗ ಜಾತಿ ಕಾರಣಕ್ಕಾಗಿಯೇ ಕೆಲವರು ನಾನು ಬಾಯ್ತಪ್ಪಿ ಆಡಿದ ಮಾತನ್ನು ದೊಡ್ಡದಾಗಿಸಿ, ಅವಮಾನಿಸುತ್ತಾರೆಂದರೆ ನಾನು ಮಾತನಾಡುವ ಅವಶ್ಯಕತೆ ಇಲ್ಲ. ಹೀಗಾಗಿಯೇ ಇನ್ನು ಮುಂದೆ ಸಾರ್ವಜನಿಕವಾಗಿ ಮಾತನಾಡಬಾರದೆಂದು ನಿರ್ಧರಿಸಿದ್ದೇನೆಂದು ಹಿರಣ್ಣಯ್ಯ ಸಷ್ಟಪಡಿಸಿದರು. ತುಂಬಾ ನೋವಿನಿಂದಲೇ ಘಟನೆ ಕುರಿತು ಮಾತನಾಡಿದ ಅವರು,'ನಮ್ಮಂತಹ ಸೂಕ್ಷ್ಮ ಜೀವಿಗಳಿಗೆ ಇಂದಿನ ಜಾತಿ ವಿಷದ ವ್ಯವಸ್ಥೆ ಸರಿ ಹೋಗದು. ಅದು ನನಗೆ ನಿನ್ನೆ ಸರಿಯಾಗಿ ಅರ್ಥವಾಗಿದೆ. ಈಗಾಗಲೇ ಅನಾರೋಗ್ಯದಿಂದ ದೈಹಿಕವಾಗಿ ನೊಂದಿದ್ದೇನೆ. ಮತ್ತಷ್ಟು ಮಾನಸಿಕವಾಗಿ ನೋವು ಅನುಭವಿಸುವುದು ಬೇಡ. ಸಾಧ್ಯವಾದಷ್ಟು ದಿನ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿರುತ್ತೇನೆ. ಮಕ್ಕಳಿದ್ದಾರೆ. ಮೊಮ್ಮಕ್ಕಳಿದ್ದಾರೆ. ಅವರೊಂದಿಗೆ ವಿರಾಮದ ಕಾಲ ಕಳೆಯುತ್ತೇನೆಂದು' ಅವರು ಹೇಳಿದರು.
ನೀವು ಹಿರಿಯ ಕಲಾವಿದರು, ಹಲವಾರು ವರ್ಷಗಳಿಂದ ಸಾರ್ವಜನಿಕ ರಂಗದಲ್ಲಿ ರಾಜಕೀಯದ ಅಂಕುಡೊಂಕುಗಳನ್ನು ಟೀಕಿಸಿದವರು. ಈಗ ಈ ವಿವಾದದ ಕಾರಣಕ್ಕೆ ಸಾರ್ವಜನಿಕ ಕಾರ್ಯಕ್ರಮದಿಂದಲೇ ದೂರ ಇರಬೇಕೆನ್ನುವ ನಿರ್ಧಾರ ಎಷ್ಟು ಸರಿ? ಎಂಬ ಪತ್ರಿಕೆ ಪ್ರಶ್ನೆಗೆ ಒಲ್ಲದ ಮನಸ್ಸಲ್ಲಿ ಪ್ರತಿಕ್ರಿಯಿಸಿದ ಅವರು,' ಈಗ ವಯಸ್ಸಾಗಿದೆ. ಮತ್ತೆ ಮತ್ತೆ ನೋವು ಅನುಭವಿಸುವುದು ಬೇಡ. ನೋವಿಗೆ ಒಂದೇ ಮುಳ್ಳು ಸಾಕು' ಎಂದು ಮೌನವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement