ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪ್ರಥಮ ರ್ಯಾಂಕ್ನ ಕನಸಿರಲಿಲ್ಲ: ವಿಶಾಲು

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬರಬಹುದು ಎಂದು ನಿರೀಕ್ಷೆ ಮಾಡಿದ್ದೆ. ಆದರೆ ರಾಜ್ಯಕ್ಕೆ ಪ್ರಥಮ...

Rashmi Kasaragodu
Updated On : 13 May 2014, 12:41 pm

ಬೆಳಗಾವಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಬರಬಹುದು ಎಂದು ನಿರೀಕ್ಷೆ ಮಾಡಿದ್ದೆ. ಆದರೆ ರಾಜ್ಯಕ್ಕೆ ಪ್ರಥಮ ಬಂದಿರುವುದು ಖುಷಿ ತಂದಿದೆ ಎಂದು ಹಾರೂಗೇರಿ ಜನತಾ ಶಿಕ್ಷಣ ಸಂಸ್ಥೆಯ ಪ್ರಗತಿ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿನಿ ವಿಶಾಲು ಸಂಗನಬಸವ ಗದಗ ಹೇಳಿದ್ದಾರೆ.
'ಪರೀಕ್ಷೆಗಾಗಿ ಆರಂಭದಿಂದಲೇ ಸಿದ್ಧತೆ ಮಾಡಿಕೊಂಡಿದ್ದೆ. ಪ್ರತಿ ದಿನ ಆರು ಗಂಟೆ ಅಭ್ಯಾಸ ಮಾಡುತ್ತಿದೆ. ಎಲ್ಲ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನವನ್ನೇ ಪಡೆಯುತ್ತಿದ್ದೆ. ಆದರೆ ರಾಜ್ಯಕ್ಕೆ ಪ್ರಥಮ ಬರುತ್ತೇನೆಂದು ಅಂದುಕೊಂಡಿರಲಿಲ್ಲ. ಫಲಿತಾಂಶ ನೋಡಿ ತುಂಬಾ ಖುಷಿಯಾಗಿದೆ. ಕನ್ನಡ ಮಾಧ್ಯಮದಲ್ಲಿ ಓದಿದರೂ ಯಾವುದೇ ತೊಂದರೆ ಇಲ್ಲ. ಉತ್ತಮ ಅಂಕ ಗಳಿಸಬಹುದು' ಎಂದರು.
ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದವಳಾದ ಅಪ್ಪಟ ಗ್ರಾಮೀಣ ಪ್ರತಿಭೆ ವಿಶಾಲು ಪ್ರಥಮ ಸ್ಥಾನ ಗಳಿಸುತ್ತಿದ್ದಂತೆಯೇ ಅವರ ಮನೆಯಲ್ಲಿ ಹಾಗೂ ಕಲಿತ ಶಾಲೆಯಲ್ಲಿ ಸಂಭ್ರಮಾಚರಣೆ ನಡೆಯಿತು. ಕುಡಚಿ ಶಾಸಕ ಪಿ. ರಾಜೀವ್ ವಿಶಾಲು ಮನೆಗೆ ಭೇಟಿ ನೀಡಿ ಮುಂದಿನ ಶೈಕ್ಷಣಿಕ ಅನುಕೂಲತೆಗಾಗಿ 25 ಸಾವಿರ ನೆರವನ್ನೂ ಸ್ಥಳದಲ್ಲಿಯೇ ನೀಡಿದರು.
ಡಾಕ್ಟರ್ ಆಗುವ ಆಸೆ: 'ಸತತವಾಗಿ ಓದಿದರೆ ಕಷ್ಟವೇನಿಲ್ಲ. ವಿಶೇಷ ತರಬೇತಿ, ಕೋಚಿಂಗ್ನ ಅಗತ್ಯವೂ ಇಲ್ಲ. ಕಷ್ಟವೆಂಬುದನ್ನು ಶಿಕ್ಷಕರನ್ನು ಕೇಳಿಯೇ ಅರಿಯಬಹುದು. ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು, ಮುಂದೆ ಮೆಡಿಕಲ್ ಓದುವ ಆಸೆ ಇದೆ' ಎಂದು ಹೇಳಿದರು.
ಬಲವಂತವಿಲ್ಲ: 'ನಾವು ಮಾಡದ ಸಾಧನೆಯನ್ನು ಮಕ್ಕಳು ಮಾಡಿದ್ದಾರೆ. ನನ್ನ ಮಗಳು ಆಸಕ್ತಿ ಇರುವ ವಿಷಯವನ್ನೇ ಓದಲಿ. ಯಾವುದಕ್ಕೂ ಬಲವಂತವಿಲ್ಲ' ಎನ್ನುತ್ತಾರೆ ವಿಶಾಲು ತಂದೆ ಸಂಗನಬಸವ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement