ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ವಿದ್ಯುತ್ ಯೂನಿಟ್ಗೆ 32 ಪೈಸೆ ಏರಿಕೆ

ನಿರೀಕ್ಷೆಯಂತೆ ರಾಜ್ಯದಲ್ಲಿ 'ಕರೆಂಟ್ ಬಾಂಬ್' ಸ್ಫೋಟಗೊಂಡಿದ್ದು, ವಿದ್ಯುತ್ ದರ ಯೂನಿಟ್ಗೆ 32ಪೈಸೆ ಏರಿಕೆಯಾಗಿದೆ...

Rashmi Kasaragodu
Updated On : 13 May 2014, 12:59 pm

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯದಲ್ಲಿ 'ಕರೆಂಟ್ ಬಾಂಬ್' ಸ್ಫೋಟಗೊಂಡಿದ್ದು, ವಿದ್ಯುತ್ ದರ ಯೂನಿಟ್ಗೆ 32ಪೈಸೆ ಏರಿಕೆಯಾಗಿದೆ. ಕೆಇಆರ್ಸಿ (ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ) ಸೋಮವಾರ ಪರಿಷ್ಕೃತ ದರ ಪ್ರಕಟಿಸಿದ್ದು,  ರೈತರಿಗೆ ಮತ್ತು ಬಡವರಿಗೆಂದು ಸರ್ಕಾರ ಖರೀದಿಸುವ ವಿದ್ಯುತ್ ಹೊರತು ಪಡಿಸಿ ಉಳಿದೆಲ್ಲಾ ರೀತಿಯ  ವಿದ್ಯುತ್ ಬಳಕೆ ಮೇಲೆ ಸರಾಸರಿ 32ಪೈಸೆ ಏರಿಕೆ ಮಾಡಲಾಗಿದೆ. ಕಳೆದ ವರ್ಷ 23 ಪೈಸೆ ಏರಿಕೆ ಮಾಡಿದ್ದ ಆಯೋಗ ಈ ಬಾರಿ ಅದನ್ನೇ ತಿರುಗಿಸಿ 32ಪೈಸೆಗೂ ಹೆಚ್ಚಿನ ಏರಿಕೆ ಮಾಡಿದೆ. ಗೃಹ ಬಳಕೆ ವಿದ್ಯುತ್ ಗ್ರಾಹಕರಿಗೆ 30 ಯೂನಿಟ್ಗಳ ವರೆಗೂ 20ಪೈಸೆ ಏರಿಕೆ ಹಾಗೂ 30 ಯೂನಿಟ್ಗಿಂತ ಹೆಚ್ಚು ಬಳಸಿದರೆ ಯೂನಿಟ್ಗೆ 30ಪೈಸೆ ಏರಿಕೆ ಮಾಡಲಾಗಿದೆ. ದರ ಪರಿಷ್ಕರಣೆ ಚಿಂತನೆ ಹಿಂದೆಯೇ ಆಗಿತ್ತಾದರೂ ಕೆಇಆರ್ಸಿ ಕೂಡ ಚುನಾವಣೆ ನಂತರದಲ್ಲೇ ದರ ಪರಿಷ್ಕರಿಸಿ ಬಿಎಂಟಿಸಿ, ಕೆಎಸ್ಆರ್ಟಿಸಿ ಗುಂಪಿಗೇ ಸೇರಿದೆ. ಕಳೆದ ವರ್ಷ ಮೇ 6ರಂದು ಅಂದರೆ ವಿಧಾನಸಭಾ ಚುನಾವಣೆ ಮುಗಿದ ಮರದಿನವೇ ದರ ಏರಿಸಿದ್ದ ಆಯೋಗ ಈ ಬಾರಿ ಕೂಡ ಚುನಾವಣೆ ನಂತರ ದರ ಏರಿಸಿದೆ. ಈ ಹೊಸ ದರ ಮೇ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಯಾಗಲಿದೆ.





ಯಾರಿಗೆ ಎಷ್ಟು ಬಿಸಿ?
ನಗರ ಪ್ರದೇಶಗಳ ಗೃಹ ಬಳಕೆಗೆ 30 ಯೂನಿಟ್ಗೆ ವರೆಗೆ ವಿಧಿಸುತ್ತಿದ್ದ ದರ 2.50 ಬದಲು 2.70ಕ್ಕೆ ಏರಲಿದೆ. ಆದೇ ರೀತಿ ಪ್ರತಿ ಸ್ಲ್ಯಾಬ್ನಲ್ಲೂ ಹೆಚ್ಚಾಗಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಗೃಹ ಬಳಕೆಗೆ 30 ಯೂನಿಟ್ಗೆ ವರೆಗೆ 2.40 ಇದ್ದ ದರ ಈಗ 2.60ಕ್ಕೆ ಹೆಚ್ಚಾಗಲಿದೆ ಎಂದು ಕೆಇಆರ್ಸಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಸತಿ ಸಂಕೀರ್ಣಗಳ ಬಳಕೆದಾರರಿಗೆ ಪ್ರತಿ ಯೂನಿಟ್ಗೆ 40ಪೈಸೆ ಹೆಚ್ಚಾಗಿದೆ. ಇದೇ ದರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಗಳಿಗೆ ಹೆಚ್ಚು ಮಾಡಲಾಗಿದೆ. ಇದಲ್ಲದೆ ರೈತರ ಕೃಷಿ ಪಂಪ್ಸೆಟ್, ಬಡವರಿಗೆ ನೀಡುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸಂಪರ್ಕಗಳಿಗೆ ಸರ್ಕಾರ ನೀಡಬೇಕಿದ್ದ ಸಹಾಯ ಧನವನ್ನೂ ಹೆಚ್ಚಿಸಲಾಗಿದೆ. ಹೀಗಾಗಿ ಈತನಕ 5,381ಕೋಟಿ ನೀಡುತ್ತಿದ್ದ ಸರ್ಕಾರ ಈಗ 6,308ಕೋಟಿಗೆ ಒದಗಿಸಬೇಕಿದೆ. ಇದರೊಂದಿಗೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸಲು ಬಳಸುವ ವಿದ್ಯುತ್ ದರದಲ್ಲಿ 20ಪೈಸೆ ಏರಿಕೆ ಮಾಡಲಾಗಿದೆ. ಜತೆಗೆ ಬೀದಿ ದೀಪ ಬಳಕೆ ದರದಲ್ಲಿ 4.85ರ ವರೆಗೂ ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದರು. ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶದ ಗ್ರಾಹಕರಿಗೆ ಯೂನಿಟ್ಗೆ 30ರಿಂದ 40ಪೈಸೆವರೆಗೂ ಏರಿಕೆ ಮಾಡಲಾಗಿದೆ ಎಂದು ಶ್ರೀನಿವಾಸಮೂರ್ತಿ ವಿವರಿಸಿದರು.



ಚುನಾವಣೆ ನಂತರವೇ ಏಕೆ?
ಎಸ್ಕಾಂಗಳು ದರ ಏರಿಕೆ ಬಗ್ಗೆ ಡಿಸೆಂಬರ್ನಲ್ಲಿ ಮನವಿ ಸಲ್ಲಿಸಿದ್ದರಿಂದ ಆಯೋಗ ಮಾರ್ಚ್ನಲ್ಲಿ ದರ ಪರಿಷ್ಕರಿಸಬೇಕಿತ್ತು. ಇದರಲ್ಲಿ ಕೊಂಚ ವಿಳಂಬವಾಗಿ ಅಷ್ಟೋತ್ತಿಗೆ ಚುನಾವಣೆ ಘೋಷಣೆಯಾಯಿತು. ನಂತರ ಚುನಾವಣಾ ಆಯೋಗ ಅನುಮತಿ ನೀಡಲು ವಿಳಂಬ ಮಾಡಿತು. ಹೀಗಾಗಿ ಚುನಾವಣಾ ನಂತರ ದರ ಪರಿಷ್ಕರಣೆ ಮಾಡಬೇಕಾಯಿತು ಎಂದು ಅವರು ಸಮರ್ಥಿಸಿದರು. ವಿದ್ಯುತ್ ಬಳಕೆ ಪ್ರಮಾಣ ಕಳೆದ ವರ್ಷಕ್ಕಿಂತ ಶೇ.8ರಷ್ಟು ಹೆಚ್ಚಾಗಿದ್ದು, ಇದರಿಂದ ಎಸ್ಕಾಂಗಳು ಸುಮಾರು 61,000 ಮಿಲಿಯನ್ ಯೂನಿಟ್ಗಳಷ್ಟು ವಿದ್ಯುತ್ ಖರೀದಿಸಬೇಕಿದೆ. ಆದ್ದರಿಂದ ದರ ಏರಿಕೆ ಅಗತ್ಯವಾಗುತ್ತದೆ ಎಂದರು.





ಬೆಲೆ ಏರಿಕೆ ನ್ಯಾಯಬದ್ಧ ...
ಎಸ್ಕಾಂಗಳು ದರ ಏರಿಕೆಗೆ ವಿನಂತಿಸಿದಾಗ ಆಯೋಗ 120 ದಿನಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ನಂತರ ದರ ಪರಿಷ್ಕರಣೆ ಮಾಡಬೇಕು. ಆದರೆ ಎಸ್ಕಾಂಗಳು ಕೇಳಿದಷ್ಟು ದರ ಆಯೋಗ ಎಂದಿಗೂ ಏರಿಕೆ ಮಾಡುವುದಿಲ್ಲ. ಆದ್ದರಿಂದ ಈಗಿನ ದರ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದ್ದರೂ ನ್ಯಾಯಬದ್ದವಾಗಿದೆ ಎಂದು ಶ್ರೀನಿವಾಸಮೂರ್ತಿ ಸಮರ್ಥಿಸಿದರು.
2012-13ರ ಅವಧಿಯಲ್ಲಿ ವಿದ್ಯುತ್ ಸಂಕಷ್ಟ ಹೆಚ್ಚಾಗಿದ್ದರಿಂದ ಎಸ್ಕಾಂಗಳು ಗ್ರಾಹಕರಿಗೆ ತೊಂದರೆಯಾಗಬಾರದು ಎಂದು ವಿದ್ಯುತ್ ಖರೀದಿಸಿವೆ. ಅಂದು ಲೋಡ್ಶೆಡ್ಡಿಂಗ್ ತಡೆಯಲು ಹೊರಗಿನಿಂದ ವಿದ್ಯುತ್ ಖರೀದಿಸಿವೆ. ಇದರಿಂದ ಎಸ್ಕಾಂಗಳು ಸುಮಾರು 230ಕೋಟಿಗಳಷ್ಟು ಕೊರತೆ ಅನುಭವಿಸುಂತಾಗಿವೆ. ಇದು ಅವುಗಳ ಲೆಕ್ಕಪರಿಶೋಧನೆಯಿಂದ ವ್ಯಕ್ತವಾಗಿದೆ. ಇದನ್ನಾಧರಿಸಿ ಆಯೋಗ ದರ ಏರಿಕೆ ಮಾಡಿದೆ ಎಂದು ಅವರು ಪ್ರತಿಕ್ರಿಯಿಸಿದರು. ಪದೇಪದೇ ದರ ಏರಿಕೆ ಮಾಡುವುದನ್ನು ತಪ್ಪಿಸಲು ಆಯೋಗ ಇಂಧನ ಇಲಾಖೆಗೆ ಕೆಲವು ಸಲಹೆ ಸೂಚನೆಗಳನ್ನೂ ನೀಡಿದೆ. ಅದರಲ್ಲೂ ಮುಖ್ಯವಾಗಿ ಸೋರಿಕೆ ತಡೆಗಟ್ಟುವುದು ಮತ್ತು ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಿಸಬೇಕೆಂದು ಹೇಳಿದೆ. ವಿಶೇಷವಾಗಿ ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ವಿದ್ಯುತ್ ಕಡಿತ ಮಾಡುವುದನ್ನು ನಿಲ್ಲಿಸಬೇಕೆಂದು ಶಿಫಾರಸು ಮಾಡಲಾಗಿದೆ ಎಂದು ಶ್ರೀನಿವಾಸಮೂರ್ತಿ ತಿಳಿಸಿದರು. ಆಯೋಗದ ಸದಸ್ಯರಾದ ಅರುಣ್ಕುಮಾರ್ ಮತ್ತು ಮನಿವೆಲ್ ರಾಜು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement