ಗೆಲವಿನ ಮುಖವಾಡ, ಒಳಗೆ ಸೋಲಿನ ಭಯ
ಸೋಲಿನ ಸಂದೇಶ ನೀಡಿರುವ ಚುನಾವಣೋತ್ತರ ಸಮೀಕ್ಷೆಗಳನ್ನು ಒಪ್ಪಿಕೊಳ್ಳಲಾಗದು ಎಂದು..
ನವದೆಹಲಿ: ಸೋಲಿನ ಸಂದೇಶ ನೀಡಿರುವ ಚುನಾವಣೋತ್ತರ ಸಮೀಕ್ಷೆಗಳನ್ನು ಒಪ್ಪಿಕೊಳ್ಳಲಾಗದು ಎಂದು ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಹೇಳುತ್ತಿದ್ದರೂ, ಪರಾಜಯ ಒಪ್ಪಿಕೊಳ್ಳಲು ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ.
'80 ಕೋಟಿ ಮತದಾರರಿರುವ ದೇಶದಲ್ಲಿ ಕೆಲವೇ ಲಕ್ಷ ಜನರ ಸ್ಯಾಂಪಲ್ ಸರ್ವೆಯನ್ನು ಒಪ್ಪಿಕೊಳ್ಳುವುದಾದರೂ ಹೇಗೆ? 2004, 2009ರಲ್ಲಿಯೂ ಮತಗಟ್ಟೆ ಸಮೀಕ್ಷೆಗಳು ಹುಸಿಯಾಗಿರಲಿಲ್ಲವೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದರು. ಪಕ್ಷದ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮವಾರ ಕೊನೆಹಂತದ ಮತದಾನದ ಬಳಿಕ ಸುದ್ದಿವಾಹಿನಿಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಕುರಿತ ಚರ್ಚೆಗಳಲ್ಲಿ ಕಾಂಗ್ರೆಸ್ ಭಾಗಿಯಾಗಿರಲಿಲ್ಲ.
ಇನ್ನೊಂದೆಡೆ ಕಮಲನಾಥ್, ಜೈರಾಂ ರಮೇಶ್ ಅವರಂಥ ಹಿರಿಯ ಸಚಿವರು, 'ಪಕ್ಷ ಕಳಪೆ ಸಾಧನೆ ಮಾಡಿದರೂ ರಾಹುಲ್ ಗಾಂಧಿ ನಾಯಕತ್ವಕ್ಕೇನೂ ಧಕ್ಕೆ ಇಲ್ಲ' ಎಂದು ಹೇಳುವ ಮೂಲಕ ಪಕ್ಷ ಸೋಲು ಒಪ್ಪಿಕೊಳ್ಳಲು ಸಿದ್ಧವಾಗಿದೆ ಎನ್ನುವ ಸುಳಿವು ನೀಡಿದರು. 'ಪ್ರಚಾರ ಸಾರಥ್ಯ ವಹಿಸಿಕೊಂಡಿದ್ದ ರಾಹುಲ್ ಒಬ್ಬರನ್ನೇ ಸೋಲಿಗೆ ಹೊಣೆ ಮಾಡುವುದು ಸರಿಯಲ್ಲ. ಎಲ್ಲ ನಾಯಕರೂ ಸಾಮೂಹಿಕ ಹೊಣೆ ಹೊತ್ತುಕೊಳ್ಳಬೇಕು. ಸಿಂಗ್ ನೇತೃತ್ವದ ಸರ್ಕಾರ ತನ್ನ ಸಾಧನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲವಾದದ್ದೇ ಸೋಲಿಗೆ ಕಾರಣ' ಎನ್ನುವ ಮಾತುಗಳೂ ಕೆಲವು ನಾಯಕರಿಂದ ಬಂದವು.
ಆದರೆ ಪಕ್ಷದ ಹತಾಶ ಮನಸ್ಥಿತಿಯನ್ನು ಸ್ಪಷ್ಟವಾಗಿ ಹೊರಹಾಕಿದವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ. 'ಕಾಂಗ್ರೆಸ್ ಕಳಪೆ ಸಾಧನೆ ಮಾಡಿದರೂ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರನ್ನು ಸಮರ್ಥಿಸಿಕೊಳ್ಳಿ' ಎಂದು ಅವರು ಸಂಜೆ ನಡೆದ ಸಭೆಯಲ್ಲಿ ಹಿರಿಯ ನಾಯಕರಿಗೆ ಕಿವಿಮಾತು ಹೇಳಿದರು.
ಟಿ ಕಾಲಹರಣದ ಉಪಾಯ
ತಮ್ಮ ವಿರುದ್ಧವಾಗಿರುವ ಮತಗಟ್ಟೆ ಸಮೀಕ್ಷೆಗಳನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ಮಿತ್ರಪಕ್ಷಗಳಾಗಿರುವ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಜೆಡಿಯು ಸಹ ನಿರಾಕರಿಸಿವೆ.
ಚುನಾವಣೋತ್ತರ ಸಮೀಕ್ಷೆಗಳು ಎಂದರೆ ಕಾಲಹರಣದ ಅತ್ಯುತ್ತಮ ಉಪಾಯ' ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವಿಟರ್ನಲ್ಲಿ ಲೇವಡಿ ಮಾಡಿದ್ದಾರೆ. 'ಬೇರೆಬೇರೆ ವಾಹಿನಿಗಳ ಸಮೀಕ್ಷೆಗಳು ಬೇರೆಬೇರೆಯಾಗಿವೆ. ಉದಾಹರಣೆ ನೀಡುವುದಿದ್ದರೆ ರಾಜಸ್ತಾನದಲ್ಲಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಒಂದು ವಾಹಿನಿ, 14 ಕಡೆ ಗೆಲ್ಲಲಿದೆ ಎಂದು ಇನ್ನೊಂದು ವಾಹಿನಿ ಹೇಳಿದೆ. ಇವು ಒಂದೇ ಚುನಾವಣೆ ಕುರಿತು ಮಾತನಾಡುತ್ತಿವೆಯೆ? ಇಂಥ ಸಮೀಕ್ಷೆಗಳ ವಿಶ್ವಾಸಾರ್ಹತೆಯಾದರೂ ಏನು' ಎಂದು ಅವರು ಪ್ರಶ್ನಿಸಿದ್ದಾರೆ.
'ವಾಸ್ತವಿಕ ಫಲಿತಾಂಶ ಮತಗಟ್ಟೆ ಸಮೀಕ್ಷೆಗಿಂತ ಭಿನ್ನವಾಗಿರಲಿದೆ' ಎಂದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್, 'ಮತಗಟ್ಟೆ ಸಮೀಕ್ಷೆ ಕೇವಲ ಮಾಧ್ಯಮಗಳ ಅಭಿಪ್ರಾಯ' ಎಂದಿದ್ದಾರೆ.
ಟಿ ನೊಬೆಲ್ ಕೊಡಬೇಕು
ಸ್ಯಾಂಪಲ್ ಸರ್ವೆ ಇಡೀ ದೇಶದ ಜನರ ಅಭಿಪ್ರಾಯ ಎಂದು ಬಿಂಬಿಸುವಂತೆ ಮತಗಟ್ಟೆ ಸಮೀಕ್ಷೆ ನಡೆಸುವವರು ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ವ್ಯಂಗ್ಯವಾಡಿದ್ದಾರೆ.
ಗೆದ್ದಾಗ ಗಾಂಧಿ ಕುಟುಂಬಕ್ಕೆ ಕ್ರೆಡಿಟ್ ನೀಡುವುದು, ಸೋತಾಗ ಬೇರೆಯವರನ್ನು ಬಲಿ ಕೊಡುವುದು ಕಾಂಗ್ರೆಸ್ನ ಕೆಟ್ಟ ಸಂಪ್ರದಾಯ. ಚುನಾವಣೆಯಲ್ಲಿ ಸೋಲು ಖಚಿತವಾಗುತ್ತಿರುವಂತೆ ಸಾಮೂಹಿಕ ಹೊಣೆಗಾರಿಕೆ ಮಾತು ಕೇಳಿಬರುತ್ತಿದೆ. ಪ್ರಧಾನಿಯವರನ್ನು ಹರಕೆ ಕುರಿ ಮಾಡಲು ಸಿದ್ಧತೆಗಳು ಆರಂಭವಾಗಿವೆ.
ಟಿ ಪ್ರಕಾಶ್ ಜಾವಡೇಕರ್, ಬಿಜೆಪಿ ವಕ್ತಾರ