ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೂಸು ಹುಟ್ಟೋ ಮುನ್ನ ಕುಲಾವಿ ಹೊಲಿಯೋ ಕೆಲಸ ಶುರು

ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಅಧಿಕಾರಕ್ಕೇರುವ..

Rashmi Kasaragodu
Updated On : 15 May 2014, 4:38 am

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿರುವುದರಿಂದ ಸರ್ಕಾರ ರಚನೆಗೆ ಸಂಬಂಧಿಸಿ ಬಿಜೆಪಿ ಈಗಿನಿಂದಲೇ ಬಿರುಸಿನ ಸಮಾಲೋಚನೆ ಆರಂಭಿಸಿದೆ.
ದೆಹಲಿಯಲ್ಲಿ ಬುಧವಾರ ಸರಣಿ ಸಭೆ ನಡೆಸಿದ ಪಕ್ಷದ ಹಿರಿಯ ನಾಯಕರು ಖಾತೆ ಹಂಚಿಕೆ ಹಾಗೂ ಚುನಾವಣೋತ್ತರ ಸಮೀಕ್ಷೆಗಳ ಬಳಿಕ ಬಿಜೆಪಿಯತ್ತ ಸ್ನೇಹದ ಹಸ್ತ ಚಾಚುತ್ತಿರುವ ಹಳೆಯ ಮಿತ್ರರ ಸೇರ್ಪಡೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಿದ್ದಾರೆ.
ನಂತರ ಪಕ್ಷದ ಅಧ್ಯಕ್ಷ ರಾಜನಾಥ್‌ಸಿಂಗ್, ಅರುಣ್ ಜೇಟ್ಲಿ ಹಾಗೂ ನಿತಿನ್ ಗಡ್ಕರಿ ಸಂಜೆ ವೇಳೆಗೆ ಗುಜರಾತ್‌ಗೆ ತೆರಳಿ ನರೇಂದ್ರ ಮೋದಿ ಜತೆಗೆ ಈ ವಿಚಾರಗಳಿಗೆ ಸಂಬಂಧಿಸಿ ಮತ್ತೊಂದು ಸುತ್ತಿನ ಸಮಾಲೋಚನೆ  ನಡೆಸಿದ್ದಾರೆ.
ಸರಣಿ ಸಭೆ: ರಾಜನಾಥ್ ಸಿಂಗ್ ಹಾಗೂ ಗಡ್ಕರಿ ಅವರು ಹಿರಿಯ ನಾಯಕಿ ಸುಷ್ಮಾಸ್ವರಾಜ್‌ರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಅರುಣ್ ಜೇಟ್ಲಿ ಅವರು ಫಲಿತಾಂಶ, ಸರ್ಕಾರ ರಚನೆ ನಿಟ್ಟಿನಲ್ಲಿ ಮೋದಿ ಆಪ್ತ ಅಮಿತ್ ಶಾ ಜತೆಗೆ ಗಂಭೀರ ಚರ್ಚೆ ನಡೆಸಿದರು.



ಗೃಹ ರಾಜನಾಥ್, ಗಡ್ಕರಿಗೆ ರೇಲ್ವೆ
ಮೋದಿ ಸರ್ಕಾರದಲ್ಲಿ ರಾಜನಾಥ್ ಸಿಂಗ್ ಅವರು ಗೃಹ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷದ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರಿಗೆ ಹಣಕಾಸು ಖಾತೆ ಹಾಗೂ ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಅವರಿಗೆ ರಕ್ಷಣಾ ಖಾತೆ ರಾಜ್ಯ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಗಡ್ಕರಿಗೆ ರೇಲ್ವೆ ಅಥವಾ ಮೂಲ ಸೌಕರ್ಯ ಸಚಿವ ಸ್ಥಾನ ನೀಡುವ ನಿರೀಕ್ಷೆ ಇದೆ. ಎಲ್‌ಜೆಪಿ  ಪಕ್ಷಕ್ಕೆ ಆರೋಗ್ಯ ಅಥವಾ ಕೃಷಿ ಖಾತೆ ಬಿಟ್ಟುಕೊಡಲಾಗುವುದು ಎಂದು ಮೂಲಗಳು ತಿಳಿಸಿವೆ. ಖಾತೆ ಹಂಚಿಕೆ ಪ್ರಕ್ರಿಯೆ ಆರೆಸ್ಸೆಸ್ ಮೇಲ್ವಿಚಾರಣೆಯಡಿಯೇ ನಡೆಯಲಿದೆ.


ಸಭೆಯಲ್ಲಿ ಚರ್ಚೆಗೆ ಬಂದ ಪ್ರಮುಖ ವಿಚಾರಗಳು

ಮೋದಿ ಜತೆಗೆ ಹಾಗೂ ದೆಹಲಿಯಲ್ಲಿ ನಡೆದ ಸಭೆಯಲ್ಲಿ 3 ಪ್ರಮುಖ ವಿಚಾರಗಳು ಚರ್ಚೆಗೆ ಬಂದವು.


ಆಡ್ವಾಣಿ, ಸುಷ್ಮಾ


ನೂತನ ಸರ್ಕಾರದಲ್ಲಿ ಆಡ್ವಾಣಿ ಹಾಗೂ ಸುಷ್ಮಾ ಸ್ಥಾನಮಾನಗಳೇನು? ಬಹುತೇಕರು ಆಡ್ವಾಣಿ ಅವರಿಗೆ ಎನ್‌ಡಿಎ ಅಧ್ಯಕ್ಷ ಸ್ಥಾನ ನೀಡುವುದೇ ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇನ್ನು ಆಡ್ವಾಣಿ ಬಣದಲ್ಲಿ ಗುರುತಿಸಿಕೊಂಡಿರುವ ಸುಷ್ಮಾ ಅವರಿಗೆ ವಿದೇಶಾಂಗ ಅಥವಾ ರಕ್ಷಣಾ ಖಾತೆಯ ಆಯ್ಕೆಗಳನ್ನು ನೀಡುವ ಸಾಧ್ಯತೆಗಳಿವೆ. ಈ ಕುರಿತು ಸುಷ್ಮಾ ಅವರ ಅಭಿಪ್ರಾಯವನ್ನೂ ಪಡೆಯಲಾಗಿದೆ.


ರಾಜನಾಥ್ ಸಿಂಗ್


ಬಿಜೆಪಿ ಅಧ್ಯಕ್ಷ ರಾಜನಾಥ್‌ಸಿಂಗ್ ಅವರಿಗೆ ಸರ್ಕಾರದಲ್ಲಿ ಸ್ಥಾನ ನೀಡಬೇಕೇ? ಒಂದು ವೇಳೆ ಅವರಿಗೆ ಸಚಿವ ಸ್ಥಾನ ನೀಡಿದರೆ ಅಧ್ಯಕ್ಷ ಸ್ಥಾನದಲ್ಲಿ ಯಾರನ್ನು ತಂದು ಕೂರಿಸಬೇಕು? ಮತ್ತೆ ನಿತಿನ್ ಗಡ್ಕರಿ ಅವರನ್ನು ಈ ಸ್ಥಾನಕ್ಕೆ ತರಬಹುದೇ? ಅಥವಾ ರಾಜ್‌ನಾಥ್ ಅವರನ್ನೇ ಮುಂದುವರಿಸುವುದೇ?


ಜಯಾ, ಪಟ್ನಾಯಕ್

ಚುನಾವಣೆಗೂ ಮೊದಲು ನಾಲ್ಕನೇ ರಂಗದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಹಳೆಯ ಮಿತ್ರರಾದ ಜಯಲಲಿತಾ ಹಾಗೂ ನವೀನ್ ಪಟ್ನಾಯಕ್ ಈಗ ಎನ್‌ಡಿಎನತ್ತ ಸ್ನೇಹ ಹಸ್ತ ಚಾಚಿದ್ದಾರೆ. ಎನ್‌ಡಿಎಗೆ ಬಹುಮತ ಸಿಕ್ಕರೆ ಇವರಿಬ್ಬರ ಬೆಂಬಲ ಸ್ವೀಕರಿಸಬೇಕೇ?




ಕೆಲವು ವಿಚಾರಗಳಿಗೆ ಸಂಬಂಧಿಸಿ ಪಕ್ಷದ ಮುಖಂಡರು ನನ್ನನ್ನು ಮೂಲೆಗುಂಪು ಮಾಡುತ್ತಿದ್ದಾರೆ, ನಾನು ಪಕ್ಷದಿಂದ ಅಸಮಾಧಾನಗೊಂಡಿದ್ದೇನೆ ಎನ್ನುವುದು ಸುಳ್ಳು. ಗಡ್ಕರಿ ಹಾಗೂ ನನ್ನ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಅದು ಮಾಮೂಲಿ ಭೇಟಿ.
ಸುಷ್ಮಾಸ್ವರಾಜ್, ಬಿಜೆಪಿ ನಾಯಕಿ



ನೂತನ ಸರ್ಕಾರದಲ್ಲಿ ಆಡ್ವಾಣಿ ಪಾತ್ರ ಕುರಿತು ಚರ್ಚಿಸಲು ಪಕ್ಷದ ಸಭೆ ಕರೆಯಲಾಗುವುದು. ಪ್ರಮುಖ ನಾಯಕರೊಂದಿಗೆ ಚರ್ಚಿಸಿದ ಬಳಿಕ ಆ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು.
 ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement