ಟೀಮ್ ಸಿದ್ದುಗೆ ಡಿಗ್ಗಿ ಎಚ್ಚರಿಕೆ ಪಾಠ
ಸಮನ್ವಯ ಸಮಿತಿ ಸಭೆಯಲ್ಲಿ ಸ್ಫೋಟಗೊಳ್ಳಬೇಕಿದ್ದ ಭಿನ್ನಮತದ ಬಾಂಬ್..
ಬೆಂಗಳೂರು: ಸಮನ್ವಯ ಸಮಿತಿ ಸಭೆಯಲ್ಲಿ ಸ್ಫೋಟಗೊಳ್ಳಬೇಕಿದ್ದ ಭಿನ್ನಮತದ ಬಾಂಬ್ ಅನಿರೀಕ್ಷಿತವಾಗಿ ಠುಸ್ ಎಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸದಸ್ಯರಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ 'ಎಚ್ಚರಿಕೆ' ಪಾಠ ಮಾಡಿ ತೆರಳಿದ್ದಾರೆ.
ಯುಪಿಎ ಹಿನ್ನಡೆಗೆ ಕಾರಣ ಅಪಪ್ರಚಾರ ಮತ್ತು ಕೆಲ ಸಚಿವರ ವರ್ತನೆ. ರಾಜ್ಯ ಸರ್ಕಾರವೂ ಇದೇ ಹಾದಿಯಲ್ಲಿ ಸಾಗುತ್ತಿರುವ ಮಾಹಿತಿ ಬರುತ್ತಿದೆ. ಜಾಗೃತ ಹೆಜ್ಜೆ ಇಡಿ. ಇಲ್ಲವಾದರೆ ಕಷ್ಟ ಎಂಬ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಎಐಸಿಸಿ ಕಾರ್ಯದರ್ಶಿಗಳಾದ ಚಲ್ಲಕುಮಾರ್ ಹಾಗೂ ಶಾಂತರಾಂ ನಾಯ್ಕ್ ಸಭೆಯಲ್ಲಿ ಭಾಗವಹಿಸಿದ್ದರು. ಆದಾಗಿಯೂ ರಾಜ್ಯ ಸರ್ಕಾರದ ವರ್ಷದ ಸಾಧನೆಗೆ 'ಡಿಸ್ಟಿಂಕ್ಷನ್' ಕ್ರೆಡಿಟ್ ನೀಡಿರುವ ಡಿಗ್ಗಿ ಕೆಲ ಸಲಹೆಗಳನ್ನು ಮುಖ್ಯಮಂತ್ರಿಗೆ ನೀಡಿದ್ದಾರೆ. ಪಕ್ಷ ಹಾಗೂ ಸರ್ಕಾರದ ಸಮನ್ವಯತೆ ಬಗ್ಗೆ ಮತ್ತೆ ಪ್ರಸ್ತಾಪಿಸಿರುವಅವರು, ಹಲವು ಸಚಿವರು ಕಾಂಗ್ರೆಸ್ ಕಚೇರಿಗೆ ನಿಯಮಿತವಾಗಿ ಭೇಟಿ ನೀಡುತ್ತಿಲ್ಲ. ನಿಗದಿತ ದಿನ ಪಕ್ಷದ ಕಚೇರಿಗೆ ಬಂದು ಕಾರ್ಯಕರ್ತರ ಜತೆ ಚರ್ಚಿಸುವ ನಿಯಮ ಪಾಲಿಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ.