ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಾವೇರಿಗೆ ತಪ್ಪಿದ ಆತಿಥ್ಯ, ರಾಣಿಬೆನ್ನೂ ರಿನಲ್ಲಿ 81ನೇ ಸಾಹಿತ್ಯ ಸಮ್ಮೇಳನ

ಹಾವೇರಿಯಲ್ಲೇ 81ನೇ ಅಖಿಲ ಭಾರತ....

Rashmi Kasaragodu
Updated On : 15 May 2014, 10:35 am

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯಲ್ಲೇ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂಬ ಒತ್ತಾಯದ ನಡುವೆಯೇ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಾರ್ಯಕಾರಿ ಸಮಿತಿ ಈಚೆಗೆ ಸಭೆ ಸೇರಿ ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸುವ ನಿರ್ಣಯ ಅಂಗೀಕರಿಸಿದೆ. ಇದರಿಂದ ಹಲವು ದಿನಗಳಿಂದ ಎದ್ದಿದ್ದ ಸ್ಥಳ ಗೊಂದಲಕ್ಕೆ ಕಸಾಪ ತೆರೆ ಎಳೆದಿದೆ.
ಏ. 25ರಂದು ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ. ಮುಂದಿನ ಸಮ್ಮೇಳನದ ವಿಚಾರವಾಗಿ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನದ ನಡಾವಳಿಯ ಪ್ರತಿ ಪತ್ರಿಕೆಗೆ ಲಭ್ಯವಾಗಿದ್ದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ 81ನೇ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂದು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಸಮ್ಮೇಳನ ಹಾವೇರಿಯಲ್ಲೋ ಅಥವಾ ರಾಣಿಬೆನ್ನೂರಿನಲ್ಲೋ ಎಂಬ ಬಗ್ಗೆ ಎದ್ದಿದ್ದ ಸ್ಥಳ ಗೊಂದಲಕ್ಕೆ ವಿರಾಮ ಬಿದ್ದಿದೆ.
 ನಡಾವಳಿಯಲ್ಲಿ ಏನಿದೆ?
ಮಡಿಕೇರಿಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಹಾವೇರಿ ಜಿಲ್ಲೆಯಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಸಮ್ಮೇಳನವನ್ನು ನಿರ್ದಿಷ್ಟ ಸ್ಥಳದಲ್ಲಿ ನಡೆಸುವ ಬಗ್ಗೆ ತೀರ್ಮಾನವಾಗಿರಲಿಲ್ಲ. ಆದ್ದರಿಂದ ಗೊಂದಲ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಅಂಗೀಕರಿಸಿದ ನಿರ್ಣಯದ ಆಧಾರದ ಮೇಲೆ ಮೇಲೆ 81ನೇ ಸಮ್ಮೇಳನ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ನಡೆಸಬೇಕು ಎಂದು ಸರ್ವಾನುಮತದಿಂದ ತೀರ್ಮಾನ ಕೈಗೊಂಡಿತು ಎಂದು ಏ. 25ರಂದು ಬೆಂಗಳೂರಿನಲ್ಲಿ ನಡೆದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯ ನಡವಳಿಕೆಯಲ್ಲಿ ತಿಳಿಸಲಾಗಿದೆ.
 ಏನಿತ್ತು ವಿವಾದ?
ಕಳೆದ ಮಡಿಕೇರಿ ಸಮ್ಮೇಳನದಲ್ಲಿ ಮುಂದಿನ ಸಮ್ಮೇಳನ ಹಾವೇರಿಯಲ್ಲಿ ಎಂದು ಘೋಷಿಸಲಾಗಿತ್ತು. ಆದರೆ, ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅವರು ರಾಣಿಬೆನ್ನೂರಿನಲ್ಲಿ ಸಮ್ಮೇಳನ ನಡೆಸಲಾಗುವುದು ಎಂದು ನೀಡಿದ ಹೇಳಿಕೆ ಗೊಂದಲ ಹುಟ್ಟುಹಾಕಿತ್ತು. ಸ್ಥಳ ವಿಚಾರವಾಗಿ ಕರೆದಿದ್ದ ಕಸಾಪ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗದ್ದರಿಂದ ಸಭೆ ಮುಂದೂಡಲಾಗಿತ್ತು. ಆದರೆ ಮತ್ತೆ ಸಭೆ ಕರೆಯದೆ ಜಿಲ್ಲಾಧ್ಯಕ್ಷರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಹಾವೇರಿಯಿಂದ ಸಮ್ಮೇಳನ ಎತ್ತಂಗಡಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಈಚೆಗೆ ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಹುಕ್ಕೇರಿ ಮಠದ ಸದಾಶಿವ ಶ್ರೀ, ಕರ್ಜಗಿ ಮಠದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಾವೇರಿಯಲ್ಲೇ ಸಮ್ಮೇಳನ ನಡೆಸಬೇಕು ಎಂಬ ಒತ್ತಾಯ ಎಲ್ಲರಿಂದ ಕೇಳಿಬಂದಿತ್ತು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದರು. ಒಂದು ವೇಳೆ ಈಗಾಗಲೇ ರಾಣಿಬೆನ್ನೂರು ಎಂದು ತೀರ್ಮಾನ ಕೈಗೊಂಡಿದ್ದರೂ ನಿರ್ಣಯ ಪುನರ್ ಪರಿಶೀಲಿಸಿ ಹಾವೇರಿಯಲ್ಲೇ ಸಮ್ಮೇಳನ ನಡೆಸಬೇಕು ಎಂದು ಆಗ್ರಹಿಸಿದ್ದರು.
 ಇನ್ನು ಒಂದಾಗಬೇಕು
ಸರ್ವಾನುಮತದಿಂದ ನಿರ್ಣಯ ಕೈಗೊಂಡಿದ್ದರಿಂದ ಇನ್ನು ಸ್ಥಳ ಗೊಂದಲ ಮುಂದುವರಿಸುವುದು ಸರಿಯಲ್ಲ. ಜಿಲ್ಲೆಯ ಸಾಹಿತ್ಯಾಭಿಮಾನಿಗಳು ಗೊಂದಲ ಹಾಗೂ ಅಭಿಪ್ರಾಯ ಭೇದ ಮರೆತು ಒಂದಾಗಿ ಸಮ್ಮೇಳನ ಯಶಸ್ಸಿಗೆ ಶ್ರಮಿಸುವುದು ಅಗತ್ಯವಿದೆ. ಈ ನಿಟ್ಟಿನಲ್ಲಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷರು ಶ್ರಮಿಸಬೇಕಿದೆ. ಹಾವೇರಿಯಲ್ಲಿ ಸಮ್ಮೇಳನ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದ ಜನಪ್ರತಿನಿಧಿಗಳ, ಮಠಾಧೀಶರ, ಸಾಹಿತ್ಯಾಸಕ್ತರ ಮನವೊಲಿಸಬೇಕಿದೆ. 81ನೇ ಸಮ್ಮೇಳನವನ್ನು ಸಂಭ್ರಮದಿಂದ ಹಾಗೂ ಅವಿಸ್ಮರಣಿಯಗೊಳಿಸಲು ಶತಮಾನೋತ್ಸವ ಸಂಭ್ರಮದಲ್ಲಿರುವ ಪರಿಷತ್ತು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ.


ಇದುವರೆಗೆ ಸ್ಥಳದ ವಿಚಾರವಾಗಿ ಆಗಿರುವ ಗೊಂದಲ ಮುಗಿದಿದೆ. ಇದಕ್ಕೆ ಪ್ರೀತಿ, ವಿಶ್ವಾಸದಿಂದಲೇ ತೆರೆ ಎಳೆಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ಸಂಪರ್ಕಿಸುವ ಕಾರ್ಯ ಮಾಡಲಾಗುತ್ತಿದೆ. ಗೆಳೆತನ, ಪ್ರೀತಿಯಿಂದಲೇ ಅವರನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದ್ದೇವೆ. ಈ ವಿಷಯವನ್ನು ರಾಜಕೀಕರಣಗೊಳಿಸುವುದು ಬೇಡ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ಯಶಸ್ಸಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ.
-ಜಿ.ಬಿ. ಮಾಸಣಗಿ, ಕಸಾಪ ಜಿಲ್ಲಾಧ್ಯಕ್ಷ

-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement